ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀವಂತ ‘ರತಿ– ಮನ್ಮಥ’ರ ನಗಿಸುವ ಸವಾಲು

ಹೋಳಿ ಹಬ್ಬದ ವಿಶೇಷ ಕಾರ್ಯಕ್ರಮ; ನಗಿಸಿದವರಿಗೆ ₹ 2 ಲಕ್ಷ ಬಹುಮಾನ; ರಾಜ್ಯದಾದ್ಯಂತ ಬರುವ ಜನ
Last Updated 4 ಮಾರ್ಚ್ 2018, 10:39 IST
ಅಕ್ಷರ ಗಾತ್ರ

ರಾಣೆಬೆನ್ನೂರಿ:  ಇಲ್ಲಿ ಹೋಳಿ ಹಬ್ಬಕ್ಕೆ ತನ್ನದೇ ಆದ ವಿಶೇಷತೆ ಇದೆ. ಇಲ್ಲಿನ ದೊಡ್ಡಪೇಟೆ ರಾಮಲಿಂಗೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಜೀವಂತ ‘ರತಿ– ಮನ್ಮಥ’ರನ್ನು ಕೂರಿಸಿ, ಅವರನ್ನು ನಗಿಸುವ ಸ್ಪರ್ಧೆ ಆಯೋಜಿಸಲಾಗುತ್ತದೆ. ಅದಕ್ಕಾಗಿ ಆಯೋಜಕರು ಸೇರಿದಂತೆ, ವಿವಿಧ ಸಂಘ–ಸಂಸ್ಥೆಗಳಿಂದ ₹ 2 ಲಕ್ಷ ನಗದು ಬಹುಮಾನ ಇರುತ್ತದೆ.

ಈ ಬಾರಿ ಮಾ. 2ರಂದು ರಾತ್ರಿ 8 ಗಂಟೆಯಿಂದ ರಾತ್ರಿ 1ರವರೆಗೆ ಹೋಳಿ ಹಿಂದಿನ ದಿನ ಪ್ರದರ್ಶನ ಏರ್ಪಡಿಸಲಾಗಿತ್ತು. ವೇದಿಕೆಯ ಸಮೀಪದಲ್ಲಿ ನಿಂತು ರತಿ ಕಾಮಣ್ಣನನ್ನು ಮುಟ್ಟದೇ ನಗಿಸಲು ಅವಕಾಶ ಮಾಡಲಾಗಿತ್ತು. ರತಿ– ಮನ್ಮಥರನ್ನು ನಗಿಸಲು ಮಹಿಳೆಯರು ಮತ್ತು ಪುರಷರಿಗೆ ಪ್ರತ್ಯೇಕ ವ್ಯವಸ್ಥೆ ಇತ್ತು. ಆದರೆ, ಯಾರಿಗೂ ಅವರನ್ನು ನಗಿಸಲಾಗಲಿಲ್ಲ.

ಛೀ,, ಕಾಮಣ್ಣ ನಿನ್ನ ರತಿಗೆ ಪಪ್ಪಿ ಕೊಡ್ಲಾ, ಎಂತ ಫಿಗರು ಕಾಮಣ್ಣಂದು, ಕಾಮಣ್ಣ ನಿನ್ನ ಮೀಸೆಯ ಎರಡು ಕಡೆ ಜೋತು ಬೀಳಲಿ ಏನ, ಛೀ ಕಳ್ಳಿ, ಹನಿಮೂನ್ ದೊಡ್ಡ ಕೆರ್‍ಯಾಗ, ಊಟಿಯೊಳಗ, ಬಾರಪ್ಪಾ... ಕಾಮಣ್ಣಂದು ದೊಡ್ಡ ಧಿಮಾಕಾತಪಾ ಒಂದ ಸ್ವಲ್ಪ ನಗಾಕ ಹೆಂಗ ಮಾಡತೀಯಪಾ, ಒಂದು ಚೂರ ನಗು, ನಿನಗ ಬರ ಬಹುಮಾನದಾಗ ಇಬ್ಬರು ಬೈಟು ಮಾಡನ, ಹೀಗೆ ಹತ್ತು ಹಲವು ದ್ವಂದ್ವಾರ್ಥ ಸಂಭಾಷಣೆಗಳಿಗೆ ರತಿ– ಮನ್ಮಥರು ತುಟಿ ಬಿಚ್ಚದೆ ಅಚ್ಚರಿಯುಂಟು ಮಾಡಿದರು.

ಇಲ್ಲಿ ನಗಿಸಲು ಹೋಗಿ ಜಿದ್ದ ಕಟ್ಟಿ ಸೋತ ಪ್ರಸಂಗಗಳಿವೆ. ದೂರದಿಂದ ಬಂದವರು ಜೀವಂತ ರತಿ– ಮನ್ಮಥನ ಗಟ್ಟಿತನಕ್ಕೆ ಮೆಚ್ಚಿ ಇಬ್ಬರಿಗೂ ನಗದು ನೀಡಿ ಹೊಗಳುತ್ತಾರೆ.

ಭಾವೈಕ್ಯದ ಹಬ್ಬ: ‘ಜನರಲ್ಲಿ ಹಾಸ್ಯ ಪ್ರಜ್ಞೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಭಾಗವಾಗಿ ಈ ಆಚರಣೆ ನಡೆದುಕೊಂಡು ಬಂದಿದೆ. ರತಿ ಮನ್ಮಥರನ್ನು ನಗಿಸಲು ರಾಜ್ಯದ ವಿವಿಧ ಭಾಗಗಳಿಂದ ಜನರು ಇಲ್ಲಿಗೆ ಬಂದು, ಬರಿಗೈಲಿ ವಾಪಸಾಗುತ್ತಾರೆ. ಸರ್ವಧರ್ಮೀಯರು ಪಾಲ್ಗೊಳ್ಳುವ ಹಬ್ಬ ಇದಾಗಿದೆ’ ಎಂದು ನಗರಸಭೆ ಸದಸ್ಯ ಪ್ರಭುಸ್ವಾಮಿ ಕರ್ಜಗಿಮಠ ಬಣ್ಣಿಸಿದರು.

ಪ್ರದರ್ಶನಕ್ಕೆ ಬಂದಿದ್ದ ತಿಪಟೂರು ತಾಲ್ಲೂಕಿನ ನೊಣವಿನಕೆರೆಯ ಎನ್. ಚಂದ್ರಶೇಖರಯ್ಯ ‘ತಿಪಟೂರಿನಲ್ಲಿ ಇಂತಹ ಒಂದು ಪ್ರದರ್ಶನ ಮಾಡಿ ಕೊಡಿ’ ಎಂದು ಆಯೋಜಕರಿಗೆ ಮನವಿ ಮಾಡಿದರು.

ಕನ್ನಡ ಅಭಿವೃದ್ದಿ ಪ್ರಾಧಿಕಾರದ ಸದಸ್ಯ ಪ್ರಕಾಶ ಜೈನ್‌ ನಗಿಸಲು ಮುಂದಾಗಿ, ‘ಲಬ್‌ಲಬ್‌ ಬಾಯಿ ಬಡಕೊಂಡು, ಸ್ಪೀಕರ್‌ ಸಾಹೆಬ್ರು ಕೂಡ ಸಾಕಷ್ಟು ಅನುದಾನ ಕೊಡಿಸುತ್ತೇನೆ, ಸ್ವಲ್ಲ ನಗಪಾ’ ಎಂದರು.

ಅಚ್ಚರಿ ಮೂಡಿಸುವ ನೋಟ: ‘ಬಣ್ಣ ಹಚ್ಚುವಾಗ ಕೀಟಲೆ ಮಾಡುತ್ತ ಬಾರಿ ನಗುತ್ತಾರೆ. ಜೀವಂತ ರತಿ– ಮನ್ಮಥರಾಗಿ ಕುಳಿತ ಮೇಲೆ ತುಟಿ ಬಿಚ್ಚದಿರುವುದು ಇವರ ವಿಶೇಷ. ಹೋಳಿ ದಿನ ಹೊರತುಪಡಿಸಿ, ಬೇರೆ ದಿನ ಇಬ್ಬರೂ ಹಾಸ್ಯ ಮಾಡುತ್ತಲೇ ಇರುತ್ತಾರೆ. ಆದರೆ, ಜೀವಂತ ರತಿ– ಮನ್ಮಥರಾಗಿ ಕೂಡುವಾಗ ಇವರ ಶಿಸ್ತು, ಸಂಯಮ, ಗಾಂಭೀರ್ಯತೆ, ಕಣ್ಣು ಪಿಳುಕಿಸುವ ನೋಟ, ಕುಳಿತುಕೊಳ್ಳುವ ಭಂಗಿ, ಜನರಿಗೆ ಅಚ್ಚರಿಯುಂಟು ಮೂಡಿಸುತ್ತದೆ’ ಎನ್ನುತ್ತಾರೆ ದೊಡ್ಡಪೇಟೆಯ ಲೆಕ್ಕದಪ್ಪ ಜಂಬಿಗಿ.

‘ಈವರೆಗೂ ಯಾರೂ ನಗಿಸಿಲ್ಲ. ಬಹುಮಾನ ಪಡೆದಿಲ್ಲ. ಅನೇಕ ಕಡೆ ಪ್ರದರ್ಶನ ಮಾಡಿದ್ದೇವೆ. ಬೆಂಗಳೂರಿನಲ್ಲಿ ಪ್ರದರ್ಶನ ಮಾಡಿದಾಗ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಮತ್ತು ಕೆಲಸಚಿವರು ನಗಿಸಲು ಮುಂದಾಗಿ ಸುಸ್ತಾದ ಪ್ರಸಂಗ ನಡೆದಿತ್ತು’ ಎಂದು ಜಗಜ್ಯೋತಿ ಬಸವೇಶ್ವರ ಕ್ರಿಕೆಟ್ ಕ್ಲಬ್‌ ಮತ್ತು ಶಕ್ತಿ ಯುವಕ ಮಂಡಳದ ಅಧ್ಯಕ್ಷ ಶಿವರಾಜ ಬ್ಯಾಡಗಿ ಮೆಲುಕು ಹಾಕಿದರು.
***
58 ವರ್ಷದಿಂದ ಆಚರಣೆ

ರಾಣೆಬೆನ್ನೂರಿನಲ್ಲಿ ಹೋಳಿ ಹಬ್ಬದಂದು ಜೀವಂತ ರತಿ– ಮನ್ಮಥರನ್ನು 1958ರಿಂದ ನಡೆದುಕೊಂಡು ಬರುತ್ತಿದೆ. ಈವರೆಗೂ ಯಾರೂ ಇವರನ್ನು ನಗಿಸಿದ ಉದಾಹರಣೆಗಳಿಲ್ಲ. 25 ವರ್ಷಗಳಿಂದ ಮನ್ಮಥನ ವೇಷವನ್ನು 46 ವರ್ಷದ ಯುವಕ ಗದಿಗೆಪ್ಪ ರೊಡ್ಡನವರ ಹಾಗೂ ರತಿ ವೇಷವನ್ನು 35 ವರ್ಷದ ಯುವಕ ಕುಮಾರ ಹಡಪದ ಧರಿಸುತ್ತಾರೆ.

‘ಜೀವಂತ ರತಿ– ಮನ್ಮಥ ಪ್ರಸಂಗ ಮುಗಿದ ಬಳಿಕ ಗೆಳೆಯರು, ಮಹಿಳೆಯರು ಹಾಗೂ ನಮ್ಮ ಪತ್ನಿಯರೇ ಹೆಂಗ ಮನಸ್ಸು ಗಟ್ಟಿ ಮಾಡಿ ಕೂಡುತ್ತೀರಿ ಎಂದು ಪ್ರಶ್ನಿಸುತ್ತಾರೆ. ನಿರಂತರ ಸಾಧನೆ, ಆತ್ಮವಿಶ್ವಾಸ, ಗುರು ಹಿರಿಯರ ಮಾರ್ಗದರ್ಶನ ಹಾಗೂ ದೇವರ ದಯೆಯಿಂದ ನಾವು ಆ ರೀತಿ ಕೂರಲು ಸಾಧ್ಯವಾಗುತ್ತದೆ’  ಎಂದು ಜೀವಂತ ರತಿ– ಮನ್ಮಥರಾಗಿ ಕೂರುವ ಗದಿಗೆಪ್ಪ ರೊಡ್ಡನವರ ಮತ್ತು ಕುಮಾರ ಹಡಪದ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
**
ವಿಧಾನಸೌಧದಲ್ಲಿ ಜೀವಂತ ರತಿ– ಮನ್ಮಥನನ್ನು ನಗಿಸುವ ಕಾರ್ಯಕ್ರಮ ಏರ್ಪಡಿಸಿ, ಅವರಿಗೂ ನಮ್ಮ ಭಾಗದ ಆಚರಣೆಯನ್ನು ಪರಿಚಯಿಲಾಗುವುದು
– ಕೆ.ಬಿ. ಕೋಳಿವಾಡ, ವಿಧಾನಸಭಾಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT