ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಜಾತಿವಾರು ಮೀಸಲಾತಿ ಹೋರಾಟ; ಸಚಿವರ ಪಾಲ್ಗೊಳ್ಳುವಿಕೆ ಅನೈತಿಕ

Last Updated 15 ಫೆಬ್ರುವರಿ 2021, 19:30 IST
ಅಕ್ಷರ ಗಾತ್ರ

ರಾಜ್ಯದಲ್ಲಿ ವಿವಿಧ ಸಮುದಾಯಗಳು ಮೀಸಲಾತಿಗಾಗಿ ನಡೆಸುತ್ತಿರುವ ಹೋರಾಟಗಳಲ್ಲಿ ಕರ್ನಾಟಕ ಸರ್ಕಾರದ ಸಚಿವರು ನೇರವಾಗಿ ಗುರುತಿಸಿಕೊಂಡಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯ ಜಾತ್ಯತೀತ ಸರ್ಕಾರದ ಪರಿಕಲ್ಪನೆ ಹಾಗೂ ಸಾಮಾಜಿಕ ನ್ಯಾಯದ ಆಶಯಗಳಿಗೆ ವಿರುದ್ಧವಾದುದು. ಕುರುಬ,ಪಂಚಮಸಾಲಿ, ವಾಲ್ಮೀಕಿ ಸಮುದಾಯಗಳು ನಡೆಸುತ್ತಿರುವ ಹೋರಾಟಗಳಲ್ಲಿ ಕೆಲವು ಸಚಿವರು ಮತ್ತು ಆಡಳಿತಾರೂಢ ಪಕ್ಷದ ಶಾಸಕರು ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ.

ಸಾಂವಿಧಾನಿಕ ಹುದ್ದೆಗಳನ್ನು ಅಲಂಕರಿಸಿರುವವರು ನಿರ್ದಿಷ್ಟ ಜಾತಿಯ ಪರ ಬಹಿರಂಗವಾಗಿ ವಕಾಲತ್ತು ವಹಿಸಬಾರದು ಎನ್ನುವ ಸಾಮಾನ್ಯಜ್ಞಾನವೂ ಇವರಿಗೆ ಇದ್ದಂತಿಲ್ಲ.ರಾಜಕೀಯವಾಗಿ ಪ್ರಾಬಲ್ಯ ಹೊಂದಿರುವ ಜಾತಿಗಳು ಮೀಸಲಾತಿ ದೊರಕಿಸಿಕೊಳ್ಳಲು ನಡೆಸುತ್ತಿರುವ ಹೋರಾಟಗಳಲ್ಲಿ ಸರ್ಕಾರದ ಭಾಗವಾಗಿ ಇರುವವರು ತೊಡಗಿಕೊಂಡಿದ್ದಾರೆ.ಧ್ವನಿ ಇಲ್ಲದ ಸಣ್ಣಪುಟ್ಟ ಜಾತಿ ಗಳಲ್ಲಿ ಇದು ಆತಂಕ ಹುಟ್ಟಿಸುವಂತಿದೆ. ಸಚಿವರ ಭಾಗವಹಿಸುವಿಕೆಯು ರಾಜ್ಯ ಸರ್ಕಾರವು ಸಾಮಾಜಿಕ ನ್ಯಾಯದ ವಿರುದ್ಧವಿದೆಯೇ ಎನ್ನುವ ಅನುಮಾನ ಮೂಡಿಸುವಂತಿದೆ. ಸ್ವಜಾತಿ ಜನರನ್ನು ಸಂಘಟಿಸುವ ಕೆಲಸಗಳಲ್ಲಿ ತೊಡಗಿಕೊಳ್ಳಲೇಬೇಕು ಎಂದಿದ್ದರೆ ಹಾಗೆ ಪಾಲ್ಗೊಳ್ಳುವ ಮುನ್ನ ತಾವು ಪ್ರತಿನಿಧಿಸುವ ಸಾಂವಿಧಾನಿಕ ಸ್ಥಾನಗಳಿಗೆ ರಾಜೀನಾಮೆ ನೀಡುವುದು ಅಗತ್ಯ.

ಜಾತ್ಯತೀತ ಹುದ್ದೆ ಹಾಗೂ ಜಾತಿ ಸಂಘಟನೆ, ಎರಡರಲ್ಲೂ ಏಕಕಾಲದಲ್ಲಿ ಗುರುತಿಸಿಕೊಳ್ಳುವುದು ಅನೈತಿಕ ಹಾಗೂ ಸಂವಿಧಾನದ ಆಶಯಗಳಿಗೆ ವಿರುದ್ಧ. ಎಲ್ಲ ಸಮುದಾಯಗಳನ್ನು ಪ್ರತಿನಿಧಿಸಬೇಕಾದ ಸಚಿವರು ನಿರ್ದಿಷ್ಟ ಜಾತಿಯೊಂದರ ಹಿತಾಸಕ್ತಿ ರಕ್ಷಣೆಗೆ ನಿಲ್ಲುವುದು ಯಾವ ದೃಷ್ಟಿಯಿಂದಲೂ ಸಮರ್ಥನೀಯವಲ್ಲ. ಕೊರೊನಾ ಸೋಂಕಿನ ಆತಂಕ ಇನ್ನೂ ಬೂದಿ ಮುಚ್ಚಿದ ಕೆಂಡದಂತಿರುವಾಗ, ಜನರಲ್ಲಿ ಸಾಮಾಜಿಕ ಜಾಗೃತಿ ಮೂಡಿಸಬೇಕಾಗಿದ್ದ ಹಾಗೂ ಜನಪರ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ತೊಡಗಿಕೊಳ್ಳಬೇಕಾಗಿದ್ದ ಸಚಿವರು ಹಾಗೂ ಶಾಸಕರು ಜಾತಿ ರಾಜಕಾರಣದಲ್ಲಿ ಸಕ್ರಿಯರಾಗಿದ್ದಾರೆ.

ಇದು, ಜನಪರ ರಾಜಕಾರಣದ ಲಕ್ಷಣವಲ್ಲ; ಸರ್ಕಾರಕ್ಕೆ ಶೋಭೆ ತರುವಂತಹ ನಡವಳಿಕೆಯೂ ಅಲ್ಲ. ಕೇಂದ್ರ ಹಾಗೂ ರಾಜ್ಯ ಎರಡರಲ್ಲೂ ತಮ್ಮ ಪಕ್ಷದ್ದೇ ಸರ್ಕಾರ ಇರುವಾಗ, ಇವರು ನಡೆಸುತ್ತಿರುವ ಹೋರಾಟ ಯಾರ ವಿರುದ್ಧ ಎನ್ನುವುದೂಅಸ್ಪಷ್ಟವಾಗಿದೆ.

ಶಿಸ್ತಿನ ಪಕ್ಷವೆಂದು ಹೇಳಿಕೊಳ್ಳುವ ಬಿಜೆಪಿಯ ಪ್ರತಿನಿಧಿಗಳು ಸಮಾಜವನ್ನು ಜಾತಿ ಗುಂಪುಗಳಾಗಿ ವಿಭಜಿಸುವ ರಾಜಕಾರಣದಲ್ಲಿ ತೊಡಗಿಕೊಂಡಿದ್ದಾರೆ. ಜಾತಿಗಳ ಓಲೈಕೆಯ ರಾಜಕಾರಣವನ್ನು ವಿರೋಧಿಸುತ್ತ, ಧರ್ಮದ ಹೆಸರಿನಲ್ಲಿ ಧ್ರುವೀಕರಣ ರಾಜಕಾರಣದಲ್ಲಿ ತೊಡಗಿಕೊಂಡಿದ್ದ ಪಕ್ಷ ಇದೀಗ ತಾನೇ ಜಾತಿಗಳನ್ನು ಓಲೈಸುವ ರಾಜಕಾರಣದಲ್ಲಿ ಭಾಗಿಯಾಗಿದೆ; ‘ಹಿಂದುತ್ವದ ಮಂತ್ರ’ಕ್ಕೆ ವಿರುದ್ಧವಾಗಿ ಜಾತಿ ಸಂಘಟನೆಗಳನ್ನು ಬಲಪಡಿಸುವ ಪ್ರಯತ್ನಗಳಲ್ಲಿ ತೊಡಗಿದೆ. ಈವರೆಗೆ ಪಕ್ಷ ಪ್ರತಿಪಾದಿಸಿಕೊಂಡು ಬಂದ ನಿಲುವುಗಳಿಗೆ ವ್ಯತಿರಿಕ್ತವಾಗಿ ನಡೆದುಕೊಳ್ಳುವ ಮೂಲಕ, ಜಾತಿ ರಾಜಕಾರಣದಲ್ಲಿ ತಾವು ಭಿನ್ನವೇನಲ್ಲ ಎನ್ನುವುದನ್ನು ಬಿಜೆಪಿ ನಾಯಕರು ಸಾಬೀತುಪಡಿಸಲು ಹೊರಟಂತಿದೆ.

ಜಾತಿವಾರು ಮೀಸಲಾತಿ ಹೋರಾಟಗಳಲ್ಲಿ ತೊಡಗಿಕೊಂಡಿರುವ ಸಚಿವರಿಗೆ ಪಕ್ಷದ ವರಿಷ್ಠರು ಎಚ್ಚರಿಕೆ ನೀಡಿದ್ದು, ಸಂಪುಟ ಸದಸ್ಯರು ಬೀದಿಗಿಳಿಯುವ ಪ್ರಯತ್ನವನ್ನು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ತಡೆಯಬೇಕಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ ಎನ್ನಲಾಗಿದೆ. ಮಗುವನ್ನು ಚಿವುಟುತ್ತಲೇ ತೊಟ್ಟಿಲು ತೂಗುವ ಇಂಥ ಸೂಚನೆ ಮತ್ತು ಎಚ್ಚರಿಕೆಗಳಿಂದ ಯಾವ ಉಪಯೋಗವೂ ಇಲ್ಲ. ಜಾತಿ ಆಧಾರಿತ ಹೋರಾಟಗಳಲ್ಲಿ ಭಾಗಿಯಾಗುವ ಸಚಿವರಿಗೆ ತಮ್ಮ ಸ್ಥಾನ ತ್ಯಜಿಸುವಂತೆ ಸ್ಪಷ್ಟವಾಗಿ ಹೇಳಬೇಕು. ಜಾತಿ ಸಂಘಟನೆ ಅಥವಾ ಹೋರಾಟದ ಚಟುವಟಿಕೆಗಳಿಂದ ಸರ್ಕಾರ ಅಂತರ ಕಾಪಾಡಿಕೊಳ್ಳಬೇಕು. ಸಮಾಜದ ಸರ್ವಾಂಗೀಣ ಅಭಿವೃದ್ಧಿಯು ಸರ್ಕಾರದ ಆದ್ಯತೆ ಆಗಿರಬೇಕೇ ವಿನಾ ಜಾತಿ ಆಧಾರಿತ ಕಾರ್ಯಕ್ರಮಗಳಲ್ಲ.

ಇನ್ನು ಮುಂದಾದರೂ ಜಾತಿ ಆಧಾರಿತ ಹೋರಾಟಗಳಿಂದ ಸರ್ಕಾರದ ಪ್ರತಿನಿಧಿಗಳು ದೂರವಿರಬೇಕು. ಅದು ಸಾಧ್ಯವಾಗದೇ ಹೋದಲ್ಲಿ ಅಧಿಕಾರದಿಂದ ದೂರವಿರಬೇಕು. ‘ಅಕ್ಕಿಯ ಮೇಲೆ ಆಸೆ, ನೆಂಟರ ಮೇಲೆ ಪ್ರೀತಿ’ ಎನ್ನುವ ದ್ವಂದ್ವಕ್ಕೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅವಕಾಶ ಇರಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT