ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಕಿ ಅವಘಡ: ಕಾರುಗಳು ಭಸ್ಮಮುನ್ನೆಚ್ಚರಿಕೆಯ ಕೊರತೆಗೆ ಹೊಣೆ ಯಾರು?

Last Updated 24 ಫೆಬ್ರುವರಿ 2019, 20:15 IST
ಅಕ್ಷರ ಗಾತ್ರ

ಏಷ್ಯಾದ ಅತ್ಯಂತ ದೊಡ್ಡ ಮತ್ತು ಭಾರತದ ಪ್ರತಿಷ್ಠೆಯ ‘ಏರೋ ಇಂಡಿಯಾ’ ವೈಮಾನಿಕ ಪ್ರದರ್ಶನದ ಈ ವರ್ಷದ ಆವೃತ್ತಿಯು ಅಹಿತಕರ ಘಟನೆಗಳಿಂದ ಸುದ್ದಿಯಾದದ್ದೇ ಹೆಚ್ಚು. ಬೆಂಗಳೂರಿನ ಹೆಗ್ಗುರುತುಗಳಲ್ಲಿ ಒಂದಾಗಿರುವ ಏರೋ ಇಂಡಿಯಾ ಪ್ರದರ್ಶನವನ್ನು ಲಖನೌಗೆ ಸ್ಥಳಾಂತರಿಸಲಾಗುವುದು ಎಂಬ ವದಂತಿಯು ಪ್ರದರ್ಶನ ಆರಂಭಕ್ಕೆ ಕೆಲ ತಿಂಗಳ ಹಿಂದೆ ರಾಜಕೀಯ ಪಕ್ಷಗಳ ನಡುವೆ ವಾಕ್ಸಮರಕ್ಕೆ ಕಾರಣವಾಗಿತ್ತು.

ವೈಮಾನಿಕ ಪ್ರದರ್ಶನ ಆರಂಭಕ್ಕೆ ಒಂದು ದಿನ ಮೊದಲು ತಾಲೀಮಿನ ವೇಳೆ ಸೂರ್ಯಕಿರಣ್‌ ತರಬೇತಿ ವಿಮಾನಗಳೆರಡು ಪರಸ್ಪರ ರೆಕ್ಕೆ ತಾಗಿ ಪತನಗೊಂಡು ಪೈಲಟ್‌ ಒಬ್ಬರು ಬಲಿಯಾಗಿದ್ದರು. ವಿಮಾನಗಳ ಮೈನವಿರೇಳಿಸುವ ಪ್ರದರ್ಶನವನ್ನು ವಾರಾಂತ್ಯದ ರಜೆಯಂದು ಕಣ್ತುಂಬಿಕೊಳ್ಳಲು ಶನಿವಾರ ‘ಏರೋ ಇಂಡಿಯಾ’ ಪ್ರದರ್ಶನಕ್ಕೆ ಬಂದ ಜನರ ಸುಮಾರು 300 ಕಾರುಗಳು ನಿಲುಗಡೆ ಪ್ರದೇಶದಲ್ಲಿ ಉಂಟಾದ ಬೆಂಕಿ ಆಕಸ್ಮಿಕಕ್ಕೆ ತುತ್ತಾಗಿ ಸುಟ್ಟು ಕರಕಲಾಗಿದ್ದು ಈ ಪ್ರದರ್ಶನಕ್ಕೆ ಸಂಬಂಧಿಸಿದ ತೀರಾ ಇತ್ತೀಚಿನ ಕಹಿ ಘಟನೆ. ಏರೋ ಇಂಡಿಯಾ ಎಂಬುದು ವೈಮಾನಿಕ ಕ್ಷೇತ್ರದ ಬಹುದೊಡ್ಡ ಕಾರ್ಯಕ್ರಮ. ಈ ವಲಯದ ದೇಶ–ವಿದೇಶದ ದಿಗ್ಗಜರು ಕಾರ್ಯಕ್ರಮಕ್ಕೆ ಭೇಟಿ ನೀಡುತ್ತಾರೆ.

ದೇಶದ ರಕ್ಷಣಾ ಸಚಿವರು, ಸೇನೆ, ವಾಯುಪಡೆಯ ಮುಖ್ಯಸ್ಥರು, ವಿವಿಧ ಕ್ಷೇತ್ರಗಳ ಗಣ್ಯರು ಇಲ್ಲಿಗೆ ಬರುತ್ತಾರೆ. ರಕ್ಷಣಾ ಸಚಿವಾಲಯವೇ ಮುಂದೆ ನಿಂತು ಈ ಕಾರ್ಯಕ್ರಮವನ್ನು ಸಂಘಟಿಸುತ್ತದೆ. ಇಂತಹ ಬಹುಭದ್ರತೆಯ ಕಾರ್ಯಕ್ರಮದಲ್ಲಿ ಇಷ್ಟೊಂದು ತೀವ್ರ ಪ್ರಮಾಣದ ಬೆಂಕಿ ಅವಘಡ ಸಂಭವಿಸುತ್ತದೆ ಎಂಬುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ರಕ್ಷಣಾ ಸಚಿವಾಲಯದ ಜತೆಗೆ ದೇಶದ ಪ್ರತಿಷ್ಠಿತ ಸಂಸ್ಥೆ ಎಚ್‌ಎಎಲ್‌ ಮತ್ತು ರಕ್ಷಣಾ ಪ್ರದರ್ಶನ ಸಂಸ್ಥೆ ಹೆಗಲು ಕೊಟ್ಟಿವೆ. ಪ್ರದರ್ಶನದ ಸುರಕ್ಷತೆಗೆ ಬೇಕಾದ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳಬೇಕು ಎಂಬ ಬದ್ಧತೆ ಈ ಸಂಸ್ಥೆಗಳಿಗೆ ಇಲ್ಲವೇ? ಈ ಕಾರ್ಯಕ್ರಮಕ್ಕೆ ಬರುವ ಜನರಲ್ಲಿ ಬೆಲೆ ಬಾಳುವ ವಸ್ತು, ಒಡವೆಗಳಿರುತ್ತವೆ, ಅವರು ವಾಹನಗಳಲ್ಲಿ ಬರುತ್ತಾರೆ. ಇವುಗಳಿಗೆಲ್ಲ ಸುರಕ್ಷತೆಯ ಭರವಸೆ ಬೇಡವೇ? ಇಂತಹ ಕಾರ್ಯಕ್ರಮ ಸಂಘಟಿಸುವಾಗ ಸಾರ್ವಜನಿಕ ಹೊಣೆಗಾರಿಕೆ ವಿಮೆ ಮಾಡಿಸಲೇಬೇಕು. ಆದರೆ, ಈ ವಿಮೆ ಮಾಡಿಸಲಾಗಿದೆಯೇ ಎಂಬ ಬಗ್ಗೆ ಏರೋ ಇಂಡಿಯಾ ಸಂಯೋಜನೆ ಮಾಡಿರುವ ಮೂರೂ ಸಂಸ್ಥೆಗಳ ವಕ್ತಾರರಿಗೆ ಅರಿವೇ ಇಲ್ಲದಿರುವುದು ಜನರ ಸುರಕ್ಷತೆಯ ಬಗ್ಗೆ ಅಧಿಕಾರಿ ವರ್ಗಕ್ಕೆ ಇರುವ ಅಸಡ್ಡೆಯಲ್ಲದೆ ಬೇರೇನೂ ಅಲ್ಲ.

ಸಾವಿರಾರು ಕಾರುಗಳನ್ನು ನಿಲ್ಲಿಸುವ ಸ್ಥಳದಲ್ಲಿ ಸುರಕ್ಷತೆಯ ಸಾಕಷ್ಟು ವ್ಯವಸ್ಥೆಗಳನ್ನು ಮಾಡಬೇಕು. ನಿಲುಗಡೆ ಸ್ಥಳದಲ್ಲಿರುವ ಹುಲ್ಲು, ಗಿಡಗಂಟಿಗಳನ್ನು ಕತ್ತರಿಸಬೇಕು, ನಿಲುಗಡೆ ಸ್ಥಳವನ್ನು ಕಾರ್ಯಕ್ರಮ ಆರಂಭಕ್ಕೆ 20 ದಿನಗಳ ಮೊದಲೇ ಸಿದ್ಧಪಡಿಸಬೇಕು ಮತ್ತು ದಿನವೂ ಇಲ್ಲಿಗೆ ನೀರು ಸಿಂಪಡಿಸಬೇಕು ಎಂಬ ನಿಯಮಗಳು ಇವೆ. ಖಾಸಗಿ ಸಂಸ್ಥೆಯೊಂದಕ್ಕೆ ನಿರ್ವಹಣೆಯ ಗುತ್ತಿಗೆ ನೀಡಲಾಗಿದೆ. ಗುತ್ತಿಗೆ ನೀಡುವ ವೇಳೆ ವಿಧಿಸಿದ್ದ ಕರಾರುಗಳನ್ನು ಆ ಸಂಸ್ಥೆಯು ಪಾಲಿಸಿದೆಯೇ ಎಂಬುದರ ಬಗ್ಗೆ ತನಿಖೆ ಮಾಡುವುದು ಅಗತ್ಯ. ಬೆಂಕಿ ಅವಘಡ ಸಂಭವಿಸಿದ ಸ್ಥಳದಲ್ಲಿ 3500 ಕಾರುಗಳನ್ನು ನಿಲ್ಲಿಸಲಾಗಿತ್ತು. ಅಲ್ಲಿ ಬೆಂಕಿ ನಂದಿಸುವ ವಾಹನಗಳೂ ಇದ್ದವು. ಆದರೆ, ಬೆಂಕಿ ಹೊತ್ತಿದ್ದಲ್ಲಿಗೆ ಈ ವಾಹನಗಳು ಬರುವುದಕ್ಕೆ ಬೇಕಾದ ವ್ಯವಸ್ಥೆ ಇರಲಿಲ್ಲ, ಹಾಗಾಗಿ ಬೆಂಕಿಯನ್ನು ತ್ವರಿತವಾಗಿ ನಿಯಂತ್ರಣಕ್ಕೆ ತರುವುದು ಸಾಧ್ಯವಾಗಲಿಲ್ಲ ಎಂಬುದು ಕೂಡ ಮುನ್ನೆಚ್ಚರಿಕೆಯ ಕೊರತೆ ಇತ್ತು ಎಂಬುದನ್ನೇ ಸೂಚಿಸುತ್ತದೆ. ಆದಾಗ್ಯೂ, ಅಗ್ನಿಶಾಮಕ ಸಿಬ್ಬಂದಿ ಮತ್ತು ಇತರ ರಕ್ಷಣಾ ಕಾರ್ಯಕರ್ತರು ಸಾವಿರಾರು ಕಾರುಗಳನ್ನು ರಕ್ಷಿಸಿರುವುದು ಶ್ಲಾಘನೀಯ.

ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಮತ್ತು ರಾಜ್ಯದ ಆಡಳಿತ ನಡೆಸುತ್ತಿರುವ ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿ ಸರ್ಕಾರದ ಮುಖಂಡರು ಪರಸ್ಪರರ ಮೇಲೆ ದೋಷ ಹೊರಿಸುವ ಧಾವಂತ ತೋರಿದ್ದಾರೆ. ಇದು ಹಾಸ್ಯಾಸ್ಪದ. ಅವಘಡಗಳು ನಡೆದಾಗ ಮತ್ತೆ ಅಂಥವು ನಡೆಯದಂತೆ ಏನು ಮಾಡಬೇಕು ಎಂಬ ಆತ್ಮಾವಲೋಕನ ಅಗತ್ಯವೇ ಹೊರತು ರಾಜಕೀಯ ಮೇಲಾಟ ಅಲ್ಲ. ನಗರಗಳು ಬೆಳೆದಂತೆ ಅಲ್ಲಿ ಸಾವಿರಾರು ವಾಹನಗಳು ಅನಿವಾರ್ಯ. ಆದರೆ, ವಾಹನಗಳ ನಿಲುಗಡೆ ಮತ್ತು ಇತರ ಸುರಕ್ಷತೆ ವಿಚಾರಗಳಲ್ಲಿ ಸ್ಪಷ್ಟವಾದ ಒಂದು ನೀತಿಯೂ ಇಲ್ಲ ಎಂಬುದು ನಮ್ಮನ್ನು ಆಳುವವರ ಹೊಣೆಗೇಡಿತನಕ್ಕೆ ಹಿಡಿದ ಕನ್ನಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT