7

ಜಿಎಸ್‌ಟಿಗೆ ಒಂದು ವರ್ಷ ಪೂರ್ಣಸಾಗಬೇಕಾದ ಪಥ ಇನ್ನೂ ದೂರ

Published:
Updated:
GST

ದೇಶಿ ಆರ್ಥಿಕತೆಯ ಚಿತ್ರಣವನ್ನೇ ಆಮೂಲಾಗ್ರವಾಗಿ ಬದಲಿಸಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಯು ದೇಶದಾದ್ಯಂತ ಜಾರಿಗೆ ಬಂದು ಈಗ ಒಂದು ವರ್ಷ ಪೂರ್ಣಗೊಂಡಿದೆ. ಸ್ವಾತಂತ್ರ್ಯಾನಂತರದ ಅತಿ ದೊಡ್ಡ ತೆರಿಗೆ ಸುಧಾರಣಾ ಕ್ರಮವು ಇಡೀ ದೇಶವನ್ನು ಏಕೀಕೃತ ಮಾರುಕಟ್ಟೆಯನ್ನಾಗಿ ಪರಿವರ್ತಿಸುವಲ್ಲಿ ಸಫಲವಾಗಿದೆ. ತೆರಿಗೆ ಪಾವತಿಯ ನೆಲೆ ವಿಸ್ತರಿಸಿ, ದಕ್ಷತೆ ಹೆಚ್ಚಿಸಿ, ವೆಚ್ಚಕ್ಕೆ ಕಡಿವಾಣ ವಿಧಿಸಿ, ಸರಕು ಮತ್ತು ಸೇವೆಗಳ ಬಳಕೆ ಹೆಚ್ಚಿಸಿ ಆರ್ಥಿಕತೆಗೆ ಚೇತರಿಕೆ ನೀಡಲಿದೆ ಎಂದು ವರ್ಷದ ಹಿಂದೆ ಬಹುವಾಗಿ ನಿರೀಕ್ಷಿಸಲಾಗಿತ್ತು. ಇದುವರೆಗೆ ಈ ವ್ಯವಸ್ಥೆ ಸಾಗಿಬಂದಿರುವ ಹಾದಿಯಲ್ಲಿ ಹಲವಾರು ಏರಿಳಿತಗಳಿವೆ.

ಅನೇಕ ಅಡಚಣೆಗಳ ನಡುವೆ, ಈ ಕ್ರಾಂತಿಕಾರಿ ವ್ಯವಸ್ಥೆಯು ಈಗ ಸ್ಥಿರತೆಯೆಡೆಗೆ ಸಾಗುತ್ತಿದೆ. ಆದರೆ ದೇಶದ ಆರ್ಥಿಕ ಪ್ರಗತಿಯ ಪಥವನ್ನೇ ಬದಲಿಸುವ ಬ್ರಹ್ಮಾಸ್ತ್ರ ಎಂದೇ ಪರಿಗಣಿಸಲಾಗಿದ್ದ ಹೊಸ ವ್ಯವಸ್ಥೆ ಕುರಿತ ನಿರೀಕ್ಷೆಗಳೆಲ್ಲ ಸಂಪೂರ್ಣವಾಗಿ ಕಾರ್ಯಗತಗೊಂಡಿಲ್ಲ. ಸಾಫ್ಟ್‌ವೇರ್ ಬಳಕೆ, ರಿಟರ್ನ್‌ ಸಲ್ಲಿಕೆ, ತೆರಿಗೆ ಮರುಪಾವತಿ ಮತ್ತಿತರ ಗೊಂದಲಗಳೆಲ್ಲ ಇನ್ನೂ ಬಗೆಹರಿದಿಲ್ಲ. ಸಹಕಾರ ತತ್ವದಡಿ ಏಕರೂಪ ವ್ಯವಸ್ಥೆ ಸಾಧ್ಯ ಎನ್ನುವುದನ್ನು ಸಾಬೀತುಪಡಿಸಿರುವುದಕ್ಕೆ ಇದೊಂದು ಉತ್ತಮ ಉದಾಹರಣೆ, ‘ಇನ್‌ಸ್ಪೆಕ್ಟರ್ ರಾಜ್’ ವ್ಯವಸ್ಥೆಯ ಭೀತಿಯನ್ನು ಸಂಪೂರ್ಣವಾಗಿ ನಿವಾರಿಸಿದೆ ಎಂದು ಖಚಿತವಾಗಿ ಇನ್ನೂ ಹೇಳಲಿಕ್ಕಾಗದು.

ಮುಂದಿನ ವರ್ಷದ ಜನವರಿಯಿಂದ ಹೊಸ ಜಿಎಸ್‌ಟಿ ರಿಟರ್ನ್‌ ಜಾರಿಗೆ ತರಲು ಸರ್ಕಾರ ಸಿದ್ಧತೆ ನಡೆಸಿದೆ. ತೆರಿಗೆ ಲೆಕ್ಕಪತ್ರ ಸಲ್ಲಿಕೆಯಲ್ಲಿ (ರಿಟರ್ನ್‌) ಇರುವ ಹಲವಾರು ಗೋಜಲುಗಳ ನಿವಾರಣೆ ಇದರ ಉದ್ದೇಶ. ಏಕೆಂದರೆ ರಿಟರ್ನ್‌ ಸಲ್ಲಿಕೆಯ ತಂತ್ರಜ್ಞಾನ ಮತ್ತು ಜಾರಿ ಸಂದರ್ಭದಲ್ಲಿನ ಅಡಚಣೆಗಳ ಬಗೆಗಿನ ದೂರುಗಳು ಇನ್ನೂ ಕೊನೆಗೊಂಡಿಲ್ಲ. ವಹಿವಾಟುದಾರರು ಈಗಲೂ ಈ ಕುರಿತು ಆಕ್ಷೇಪಿಸುತ್ತಿದ್ದಾರೆ.

ಈಚಿನ ಎರಡು ತಿಂಗಳಲ್ಲಿ ₹ 2 ಸಾವಿರ ಕೋಟಿಗಳಷ್ಟು ತೆರಿಗೆ ವಂಚನೆ ಪತ್ತೆಯಾಗಿದೆ. ಜಿಎಸ್‌ಟಿ ನೋಂದಾಯಿತ 1.11 ಕೋಟಿ ವಹಿವಾಟುದಾರರ ಪೈಕಿ ಶೇ 1ರಷ್ಟು ಜನರು ಮಾತ್ರ ಒಟ್ಟು ಸಂಗ್ರಹವಾಗುವ ತೆರಿಗೆಯಲ್ಲಿ ಶೇ 80ರಷ್ಟು ಪಾವತಿಸುತ್ತಿದ್ದಾರೆ. ಈ ವ್ಯವಸ್ಥೆಯಲ್ಲಿನ ತೆರಿಗೆ ತಪ್ಪಿಸುವ ಪ್ರವೃತ್ತಿಯ ಅಗಾಧತೆಗೆ ಇದು ಕನ್ನಡಿ ಹಿಡಿಯುತ್ತದೆ. ಪಾರದರ್ಶಕ ತೆರಿಗೆ ವ್ಯವಸ್ಥೆಯ ವೈಫಲ್ಯವೂ ಇದಾಗಿದೆ.

ರಿಟರ್ನ್‌ ಸಲ್ಲಿಕೆಯಲ್ಲಿನ ಲೋಪಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಹೀಗಾಗಿ ತೆರಿಗೆ ಸಂಗ್ರಹ ನಿರೀಕ್ಷಿತ ಮಟ್ಟದಲ್ಲಿ ಇಲ್ಲ. ಸಣ್ಣ ವಹಿವಾಟುದಾರರು ಮಾಡುವ ತಪ್ಪುಗಳನ್ನು ದೊಡ್ಡ ಉದ್ದಿಮೆಗಳು, ಬಹುರಾಷ್ಟ್ರೀಯ ಸಂಸ್ಥೆಗಳೂ ಎಸಗುತ್ತಿವೆ. ರಫ್ತು ವಹಿವಾಟೂ ಸೇರಿದಂತೆ ನಕಲಿ ಬೆಲೆಪಟ್ಟಿ ಸೃಷ್ಟಿಸಿ ಇನ್‌ಪುಟ್‌ ಟ್ಯಾಕ್ಸ್‌ ಕ್ರೆಡಿಟ್‌ಗೆ ಬೇಡಿಕೆ ಮಂಡಿಸಲಾಗುತ್ತಿದೆ.

ಇವೆಲ್ಲವೂ ಈ ವ್ಯವಸ್ಥೆಯಲ್ಲಿನ ಲೋಪಗಳಿಗೆ ಸಾಕ್ಷಿ. ಈ ದೋಷಗಳನ್ನು ಸರಿಪಡಿಸುವ ದೊಡ್ಡ ಸವಾಲು ಜಿಎಸ್‌ಟಿ ಮಂಡಳಿ ಮುಂದೆ ಇದೆ. ಪ್ರತಿಯೊಬ್ಬ ವಹಿವಾಟುದಾರನ ಬೆಲೆ ಪಟ್ಟಿಗಳನ್ನು ಹೋಲಿಕೆ ಮಾಡುವುದರಿಂದ ತೆರಿಗೆ ತಪ್ಪಿಸುವುದಕ್ಕೆ ಕಡಿವಾಣ ಹಾಕಲು ಸಾಧ್ಯವಿದೆ. ಹೊಸ ವ್ಯವಸ್ಥೆಯಲ್ಲಿನ ಲೋಪಗಳನ್ನು ಸರಿಪಡಿಸಿದರೆ ಮತ್ತು ನಕಲಿ ಇನ್‌ಪುಟ್‌ ಟ್ಯಾಕ್ಸ್ ಕ್ರೆಡಿಟ್‌ ಕೋರಿಕೆಗಳಿಗೆ ತಡೆ ಒಡ್ಡಿದರೆ ತೆರಿಗೆ ವರಮಾನವು ಖಂಡಿತವಾಗಿಯೂ ಗಮನಾರ್ಹವಾಗಿ ಹೆಚ್ಚಲಿದೆ. ಮುಂದಿನ ವರ್ಷದ ಜನವರಿಯಿಂದ ಹೊಸ ಜಿಎಸ್‌ಟಿ ರಿಟರ್ನ್‌ ಜಾರಿಗೆ ತರಲು ಕೇಂದ್ರ ಸರ್ಕಾರ ಕಾರ್ಯೋನ್ಮುಖವಾಗಿರುವುದು ಶುಭಸೂಚನೆಯಾಗಿದೆ.

ಗರಿಷ್ಠ ತೆರಿಗೆ ದರವಾಗಿರುವ ಶೇ 28ರ ವ್ಯಾಪ್ತಿಯಲ್ಲಿರುವ ಸರಕು ಮತ್ತು ಸೇವೆಗಳನ್ನು ಕಡಿಮೆ ಮಾಡಬೇಕಾಗಿದೆ. ಕೈ ಉತ್ಪನ್ನಗಳಿಗೆ ಕಡಿಮೆ ತೆರಿಗೆ ವಿಧಿಸುವ ಭರವಸೆಯು ಆದ್ಯತೆ ಮೇರೆಗೆ ಜಾರಿಗೆ ಬರಬೇಕಾಗಿದೆ. ಈ ವ್ಯವಸ್ಥೆಯು ವ್ಯಾಪಾರ ಮತ್ತು ವಹಿವಾಟನ್ನು ಸುಗಮಗೊಳಿಸಿದೆ ಎನ್ನುವುದು ಇನ್ನೂ ವಹಿವಾಟುದಾರರ ಮತ್ತು ಗ್ರಾಹಕರ ಅನುಭವಕ್ಕೆ ಬರಬೇಕಾಗಿದೆ. ಈ ವ್ಯವಸ್ಥೆಯು ಸಾರ್ಥಕತೆ ಕಾಣಲು ಇನ್ನೂ ಬಹುದೂರ ಕ್ರಮಿಸಬೇಕಾಗಿದೆ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !