ಮೀನುಗಾರರ ಕಣ್ಮರೆ: ಸಂಘಟಿತ ಕಾರ್ಯಾಚರಣೆಗೆ ಒತ್ತು ಕೊಡಿ

7

ಮೀನುಗಾರರ ಕಣ್ಮರೆ: ಸಂಘಟಿತ ಕಾರ್ಯಾಚರಣೆಗೆ ಒತ್ತು ಕೊಡಿ

Published:
Updated:
Prajavani

ಮಲ್ಪೆ ಬಂದರಿನಿಂದ ಸಮುದ್ರದಲ್ಲಿ ಮೀನುಗಾರಿಕೆಗೆ ಹೊರಟ ಕರ್ನಾಟಕದ ಏಳು ಮಂದಿ ಮೀನುಗಾರರು ನಾಪತ್ತೆಯಾಗಿ ತಿಂಗಳಾಗಿದೆ. ಕಣ್ಮರೆಯಾದವರು ಎಲ್ಲಿದ್ದಾರೆ ಎನ್ನುವುದು ಇನ್ನೂ ಗೊತ್ತಾಗದಿರುವುದು ತೀವ್ರ ಆತಂಕದ ಸಂಗತಿ. ಡಿ.13ರಂದು ಸಮುದ್ರಕ್ಕೆ ಹೊರಟ ಈ ಮೀನುಗಾರರು ಡಿ.16ರಿಂದ ಯಾರ ಸಂಪರ್ಕಕ್ಕೂ ಸಿಕ್ಕಿಲ್ಲ. ಡಿ. 15ರ ಮಧ್ಯರಾತ್ರಿ ಒಂದು ಗಂಟೆಯ ವೇಳೆಗೆ ಇವರಿಂದ ಕೊನೆಯ ಸಂದೇಶ ಬಂದಿದೆ. ಇವರನ್ನು ಯಾರಾದರೂ ಅಪಹರಿಸಿದ್ದಾರೆಯೇ, ಹಾಗೆ ಅಪಹರಿಸಿದವರು ದರೋಡೆಕೋರರೋ, ಪಾಕಿಸ್ತಾನದ ಉಗ್ರರೋ ಅಥವಾ ಮೀನುಗಾರಿಕೆಗೆ ಒಯ್ದ ‘ಸುವರ್ಣ ತ್ರಿಭುಜ’ ಎನ್ನುವ ಯಾಂತ್ರೀಕೃತ ದೋಣಿ ದುರಂತ ಸಂಭವಿಸಿ ಮುಳುಗಿರಬಹುದೇ ಎನ್ನುವ ಪ್ರಶ್ನೆಗಳು ಸಹಜವಾಗಿಯೇ ಹುಟ್ಟಿಕೊಂಡಿವೆ. ಕಣ್ಮರೆಯಾದವರಿಂದ ಕೊನೆಯ ಸಂದೇಶ ಸಿಕ್ಕಿದ್ದು ಮಹಾರಾಷ್ಟ್ರದ ಸಿಂಧುದುರ್ಗದ ಸಮೀಪದಿಂದ. ಈ ಹಿನ್ನೆಲೆಯಲ್ಲಿ ಎರಡೂ ರಾಜ್ಯ ಸರ್ಕಾರಗಳು ಇದನ್ನು ತುರ್ತು ಹಾಗೂ ಗಂಭೀರ ವಿಷಯವೆಂದು ಪರಿಗಣಿಸಿ, ಕಾರ್ಯಾಚರಣೆ ನಡೆಸಬೇಕಾದ ಅಗತ್ಯವಿದೆ. ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಯವರು ನೆರೆರಾಜ್ಯಗಳಾದ ಮಹಾರಾಷ್ಟ್ರ ಮತ್ತು ಗೋವಾ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆದು ತನಿಖೆ ನಡೆಸಲು ಕೋರಿದ್ದಾರೆ. ಕರ್ನಾಟಕದ ಮೀನುಗಾರಿಕಾ ಸಚಿವ ವೆಂಕಟರಾವ್‌ ನಾಡಗೌಡ ಅವರು ಸ್ವಲ್ಪ ತಡವಾಗಿಯಾದರೂ ಸಂತ್ರಸ್ತ ಮೀನುಗಾರರ ಮನೆಗಳಿಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ಮೀನುಗಾರರ ಪತ್ತೆಗೆ ಇಸ್ರೊ ನೆರವು ಪಡೆಯುವುದಾಗಿಯೂ ಸರ್ಕಾರ ಹೇಳಿದೆ. ಉಡುಪಿಯಲ್ಲಿ ಸಾವಿರಾರು ಮೀನುಗಾರರು ಮತ್ತು ನಾಗರಿಕರು ಬೃಹತ್‌ ಪ್ರತಿಭಟನಾ ಸಭೆ ನಡೆಸಿ ಹೆದ್ದಾರಿ ತಡೆದದ್ದಲ್ಲದೆ, ರಾಜ್ಯದ ವಿವಿಧೆಡೆ ಮೀನುಗಾರರ ನಿರಂತರ ಪ್ರತಿಭಟನೆಗಳು ನಡೆದಿವೆ. ಇಷ್ಟಾಗಿಯೂ ಮೀನುಗಾರರ ಪತ್ತೆ ಸಾಧ್ಯವಾಗಿಲ್ಲವೆಂದರೆ, ರಾಜ್ಯ ಸರ್ಕಾರಗಳು ಮತ್ತು ಕೇಂದ್ರ ಸರ್ಕಾರವು ಸಂಘಟಿತವಾಗಿ ಪತ್ತೆ ಕಾರ್ಯಾಚರಣೆಯನ್ನು ತೀವ್ರಗೊಳಿಸಬೇಕಾದ ಅಗತ್ಯವಿದೆ.

ಸಾಮಾನ್ಯವಾಗಿ ಆಳ ಸಮುದ್ರದಲ್ಲಿ ಮೀನುಗಾರಿಕೆಯ ದೋಣಿ ಮುಳುಗಡೆಯಾದರೆ ಸುತ್ತಮುತ್ತ ಮೀನುಗಾರಿಕೆ ನಡೆಸುವ ಇತರ ದೋಣಿಗಳವರಿಗೆ ಗೊತ್ತಾಗುತ್ತದೆ. ಮುಳುಗಿದ ದೋಣಿಯ ಡೀಸೆಲ್‌ ಮತ್ತು ಇತರ ಪ್ಲಾಸ್ಟಿಕ್‌ ಡಬ್ಬಗಳು ನೀರಿನಲ್ಲಿ ತೇಲುವುದರಿಂದ ಶೋಧ ನಡೆಸುವವರಿಗೆ ಅವಘಡದ ಸುಳಿವು ಸಿಗುತ್ತದೆ. ಆದರೆ ಈ ಪ್ರಕರಣದಲ್ಲಿ ಅಂತಹ ಸುಳಿವುಗಳು ಸಿಕ್ಕಿಲ್ಲ. ಪಾಕಿಸ್ತಾನದ ರಕ್ಷಣಾ ಪಡೆ ಅಥವಾ ಉಗ್ರಗಾಮಿಗಳ ಕೈಗೆ ಸಿಕ್ಕಿರಬಹುದು ಎನ್ನುವ ಸಂಶಯ ಬರಬೇಕೆಂದರೆ, ಇವರು ಗುಜರಾತ್‌ನ ಸಮುದ್ರ ಗಡಿ ದಾಟಿ ಹೋಗಿರಬೇಕು. ಸಿಂಧುದುರ್ಗದಿಂದ ಕೊನೆಯ ಸಂದೇಶ ಬಂದಿರುವುದು ನೋಡಿದರೆ ಆ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ. ಆದರೂ ಅಂತಹ ಸಾಧ್ಯತೆಯನ್ನು ತಳ್ಳಿಹಾಕಲಾಗದು. ಇತ್ತೀಚಿನ ದಿನಗಳಲ್ಲಿ ಕರ್ನಾಟಕ ಮತ್ತು ಗೋವಾ ಮೀನುಗಾರರ ಮಧ್ಯೆ ಮೀನುಗಾರಿಕೆಗೆ ಸಂಬಂಧಿಸಿ ವಿರಸ ಮೂಡಿದ್ದು, ಪರಸ್ಪರ ರಾಜ್ಯಗಳಲ್ಲಿ ಮೀನು ಸಾಗಾಣಿಕೆಗೆ ಅಡ್ಡಿಪಡಿಸಿದ ಪ್ರಕರಣಗಳು ನಡೆದಿವೆ. ಕರಾವಳಿ ರಕ್ಷಣಾ ಪಡೆಯ ಸಿಬ್ಬಂದಿ ಈ ಎಲ್ಲ ಹಿನ್ನೆಲೆಗಳನ್ನು ಗಮನದಲ್ಲಿ ಇಟ್ಟುಕೊಂಡು ಶೋಧವನ್ನು ತೀವ್ರಗೊಳಿಸಬೇಕಿದೆ. ಸಿಂಧುದುರ್ಗದಲ್ಲಿ ರಾಜ್ಯದ ಕೆಲವು ಮೀನುಗಾರರನ್ನು ಅಪಹರಿಸಿದ್ದ ಪ್ರಕರಣಗಳು ಈ ಹಿಂದೆಯೂ ನಡೆದಿರುವುದರಿಂದ ಅಂತಹ ಸಾಧ್ಯತೆಗಳಿವೆಯೇ ಎನ್ನುವುದನ್ನೂ ಪರಾಂಬರಿಸಬೇಕು. ರಾಜ್ಯದ ಸಂಸದರು ಈಗಾಗಲೇ ಕೇಂದ್ರ ಸರ್ಕಾರದ ಗಮನ ಸೆಳೆದಿದ್ದರೂ ತನಿಖೆಯ ವಿಷಯದಲ್ಲಿ ಅಂತಹ ಪ್ರಗತಿಯಾಗಿಲ್ಲ. ಇದು ಕೆಲವು ಮೀನುಗಾರರ ಕಣ್ಮರೆಯ ಪ್ರಶ್ನೆ ಮಾತ್ರವಲ್ಲ, ದೇಶದ ಕರಾವಳಿಯ ಭದ್ರತೆಯ ಪ್ರಶ್ನೆಯೂ ಇದರಲ್ಲಿ ಅಡಗಿದೆ. ಹಿಂದೆ ಮುಂಬೈ ಸ್ಫೋಟದ ಸಂಚುಕೋರರು ನಮ್ಮವರ ಮೀನುಗಾರಿಕೆಯ ಬೋಟ್‌ ಅನ್ನೇ ಅಪಹರಿಸಿ ಮುಂಬೈ ತಲುಪಿದ್ದರು ಎನ್ನುವುದನ್ನು ಮರೆಯಲಾಗದು. ಕೇಂದ್ರ ಸರ್ಕಾರವು ಈ ವಿಷಯದ ಕುರಿತು ತಕ್ಷಣ ಗಮನ ಹರಿಸಿ ಸಂಘಟಿತ ಕಾರ್ಯಾಚರಣೆಗೆ ಸೂಕ್ತ ದಿಕ್ಕು ತೋರಿಸಬೇಕಾಗಿದೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !