ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಪಾತಾಳಕ್ಕೆ ಕುಸಿದ ಕಾಂಗ್ರೆಸ್‌; ಪರ್ಯಾಯದ ಹುಡುಕಾಟ ಅನಿವಾರ್ಯ

Last Updated 14 ಮಾರ್ಚ್ 2022, 20:07 IST
ಅಕ್ಷರ ಗಾತ್ರ

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುವ ಪ್ರಬಲ ವಿರೋಧ ಪಕ್ಷವು ಆಡಳಿತ ಪಕ್ಷದಷ್ಟೇ ಮುಖ್ಯ. ವಿರೋಧ ಪಕ್ಷ ಪ್ರಬಲವಾಗಿದ್ದಾಗ ಆಡಳಿತ ಪಕ್ಷವು ಸರ್ವಾಧಿಕಾರಿ ಆಗದಂತೆ ತಡೆಯಬಹುದು. ಆದರೆ, ಭಾರತದಲ್ಲಿ ಈಗ ಅತಿ ಪ್ರಬಲವಾದ ಆಡಳಿತ ಪಕ್ಷ ಮತ್ತು ವಿಪರೀತ ದುರ್ಬಲವಾಗಿರುವ ವಿರೋಧ ಪಕ್ಷ ಇದೆ. ಇಂತಹ ಸ್ಥಿತಿಯು ಪ್ರಜಾಪ್ರಭುತ್ವವನ್ನು ಅತ್ಯಂತ ಅಪಾಯದ ಸ್ಥಿತಿಗೆ ತಳ್ಳಬಹುದು.

ಅತಿ ದೀರ್ಘಕಾಲ ದೇಶವನ್ನು ಆಳಿರುವ ಕಾಂಗ್ರೆಸ್‌ ಪಕ್ಷಕ್ಕೆ ಲೋಕಸಭೆಯಲ್ಲಿ ಈಗ ಅಧಿಕೃತ ವಿರೋಧ ಪಕ್ಷದ ಸ್ಥಾನವನ್ನು ಪಡೆಯುವಷ್ಟು ಸದಸ್ಯ ಬಲವೂ ಇಲ್ಲ. ಸೋಲಿನ ಸುಳಿಯಲ್ಲಿ ಸುತ್ತುತ್ತಿರುವ ಕಾಂಗ್ರೆಸ್‌ ಪಕ್ಷಕ್ಕೆ ಐದು ರಾಜ್ಯಗಳಲ್ಲಿ ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯ ಫಲಿತಾಂಶವು ಬಹುದೊಡ್ಡ ಪ್ರಹಾರ. ಸುಮಾರು 25 ಕೋಟಿ ಜನಸಂಖ್ಯೆ ಇರುವ, 80 ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ಉತ್ತರಪ್ರದೇಶದಲ್ಲಿ ಕಾಂಗ್ರೆಸ್‌ ನಗಣ್ಯವಾಗಿದೆ. 403 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಆ ರಾಜ್ಯದಲ್ಲಿ ಕಾಂಗ್ರೆಸ್‌ಗೆ ಗೆಲ್ಲಲು ಸಾಧ್ಯವಾಗಿರುವುದು ಎರಡು ಕ್ಷೇತ್ರಗಳನ್ನು ಮಾತ್ರ. ಪಂಜಾಬ್‌ನಲ್ಲಿ ಪಕ್ಷವು ಅತಿ ಹೀನಾಯವಾಗಿ ಅಧಿಕಾರ ಕಳೆದುಕೊಂಡಿತು.

ಗೋವಾ, ಉತ್ತರಾ ಖಂಡ ಮತ್ತು ಮಣಿಪುರ ರಾಜ್ಯಗಳಲ್ಲಿ ಗೆಲ್ಲುವ ಅವಕಾಶಗಳನ್ನು ಕೈಚೆಲ್ಲಿತು. 40 ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ಪಶ್ಚಿಮ ಬಂಗಾಳ ಸೇರಿದಂತೆ ಕೆಲವು ರಾಜ್ಯಗಳ ವಿಧಾನಸಭೆಯಲ್ಲಿ ಕಾಂಗ್ರೆಸ್‌ಗೆ ಪ್ರಾತಿನಿಧ್ಯವೇ ಇಲ್ಲ. ಮಧ್ಯಪ್ರದೇಶ, ಕರ್ನಾಟಕದಲ್ಲಿ ಇದ್ದ ಸರ್ಕಾರವನ್ನು ಬಿಜೆಪಿ ಉರುಳಿಸಿದಾಗ ಕಾಂಗ್ರೆಸ್‌ ಅಸಹಾಯಕವಾಗಿತ್ತು. ಜ್ಯೋತಿರಾದಿತ್ಯ ಸಿಂಧಿಯಾ ಅವರಂತಹ ಜನಬೆಂಬಲ ಇರುವ ನಾಯಕರು, ಜಿತಿನ್‌ ಪ್ರಸಾದ ಅವರಂತಹ ಸಮುದಾಯದ ನಾಯಕರು ಪಕ್ಷ ತೊರೆದಾಗಲೂ ಕಾಂಗ್ರೆಸ್‌ ನಾಯಕತ್ವವು ಅಸಡ್ಡೆಯಿಂದಲೇ ಇತ್ತು.

ಪ್ರಭಾವ, ಜನಬೆಂಬಲದಲ್ಲಿ ಹಿಂದೆಂದೂ ಇಲ್ಲದ ರೀತಿಯಲ್ಲಿ ಕಾಂಗ್ರೆಸ್ ಪಕ್ಷ ಪಾತಾಳಕ್ಕೆ ಕುಸಿದಿದೆ. ಪ್ರತೀ ಚುನಾವಣೆಯಲ್ಲಿ ಸೋತಾಗಲೂ ಕಾಂಗ್ರೆಸ್‌ ಪಕ್ಷದೊಳಗೆ ಮತ್ತು ಹೊರಗೆ ಕೇಳುವ ಪಲ್ಲವಿ ಒಂದೇ– ಪಕ್ಷದ ನಾಯಕತ್ವ ಬದಲಾಗಬೇಕು. ನೆಹರೂ– ಗಾಂಧಿ ಕುಟುಂಬದ ನಾಯಕತ್ವವು ಪಕ್ಷಕ್ಕೆ ಒಂದು ರೀತಿಯಲ್ಲಿ ಹೊರೆಯಾಗಿರುವುದು ಹೌದು.

ಬಿಜೆಪಿಗೆ ಈ ಕುಟುಂಬವು ಸುಲಭದ ಗುರಿ. ಈ ದೇಶದ ಎಲ್ಲ ಸಮಸ್ಯೆಗಳಿಗೆ ದೇಶದ ಮೊದಲ ಪ್ರಧಾನಿ ಜವಾಹರಲಾಲ್‌ ನೆಹರೂ ಅವರಿಂದ ರಾಹುಲ್‌ ಗಾಂಧಿವರೆಗಿನ ಕಾಂಗ್ರೆಸ್‌ ನಾಯಕರೇ ಕಾರಣ ಎಂದು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿಯ ಹಲವು ಮುಖಂಡರು ಹೇಳುತ್ತಲೇ ಬಂದಿದ್ದಾರೆ. ಕಾಂಗ್ರೆಸ್‌ ನಾಯಕತ್ವಕ್ಕೆ ನೆಹರೂ– ಗಾಂಧಿ ಕುಟುಂಬದ ಹೊರಗಿನವರು ಬಂದರೆ ಈ ಆಪಾದನೆಯಿಂದ ತಪ್ಪಿಸಿಕೊಳ್ಳುವ ಸಾಧ್ಯತೆ ಇದೆ. ಆದರೆ, ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗಿಂತ ಹೆಚ್ಚು ಜನಪ್ರಿಯತೆ ಇರುವ ನಾಯಕರು ಕಾಂಗ್ರೆಸ್‌ ಪಕ್ಷದಲ್ಲಿ ಇದ್ದಾರೆಯೇ? ಇದು ಕಾಂಗ್ರೆಸ್‌ನ ಮುಖ್ಯ ದ್ವಂದ್ವಗಳಲ್ಲಿ ಒಂದು. ರಾಜೀವ್‌ ಗಾಂಧಿ ಹತ್ಯೆಯಾದ ಬಳಿಕ 1991ರಿಂದ 1997ರ ವರೆಗೆ ಕಾಂಗ್ರೆಸ್‌ ಪಕ್ಷದ ನಾಯಕತ್ವವು ನೆಹರೂ– ಗಾಂಧಿ ಕುಟುಂಬದ ಕೈಯಲ್ಲಿ ಇರಲಿಲ್ಲ. 1996ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಹಿನ್ನಡೆಯಾದ ಬಳಿಕ ಕಾಂಗ್ರೆಸ್‌ನ ಒಂದು ವರ್ಗವು ಅತ್ತೂ ಕರೆದು ಸೋನಿಯಾ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡು ನಾಯಕತ್ವವನ್ನು ಅವರಿಗೆ ವಹಿಸಿದ್ದು ಈಗ ಇತಿಹಾಸ.

ಐದು ರಾಜ್ಯಗಳ ಚುನಾವಣಾ ಸೋಲಿನ ಬಳಿಕವೂ ನಾಯಕತ್ವದ ಪ್ರಶ್ನೆ ಮುನ್ನೆಲೆಗೆ ಬಂದಿದೆ. ಎಂದಿನಂತೆ, ಕಾಂಗ್ರೆಸ್ ಕಾರ್ಯಕಾರಿಣಿ (ಸಿಡಬ್ಲ್ಯುಸಿ) ಸಭೆ ನಡೆದಿದೆ. ಸೋನಿಯಾ ರಾಜೀನಾಮೆ ಕೊಡಲು ಮುಂದಾದರೂ ಸಿಡಬ್ಲ್ಯುಸಿ ಅದನ್ನು ತಿರಸ್ಕರಿಸಿದೆ. ಯಥಾಸ್ಥಿತಿ ಮುಂದುವರಿಯಲಿದೆ ಎಂಬುದಕ್ಕೆ ಇದಕ್ಕಿಂತ ದೊಡ್ಡ ಪುರಾವೆ ಬೇಕಿಲ್ಲ.

ಕಾಂಗ್ರೆಸ್‌ ಪಕ್ಷದ ಈಗಿನ ಸ್ಥಿತಿಗೆ ನೆಹರೂ– ಗಾಂಧಿ ಕುಟುಂಬ ಮಾತ್ರ ಕಾರಣ ಎಂದು ಹೇಳಲಾಗದು. ಈ ಕುಟುಂಬದ ಸುತ್ತ ಗಿರಕಿ ಹೊಡೆಯುವ ಭಟ್ಟಂಗಿ ಮುಖಂಡರೂ ಕಾರಣ. ನೆಲವಾಸ್ತವ ಏನು ಎಂಬುದು ಆ ಕುಟುಂಬಕ್ಕೆ ತಿಳಿಯದಂತೆ ಈ ಮುಖಂಡರು ನೋಡಿಕೊಂಡಿದ್ದಾರೆ. ಇಂತಹ ಬಹುತೇಕ ಮುಖಂಡರು ಜನರ ಜತೆಗೆ ಯಾವ ಸಂಬಂಧವನ್ನೂ ಹೊಂದಿರುವುದಿಲ್ಲ. ಕಾಂಗ್ರೆಸ್‌ನ ನಿರ್ಧಾರ ಗಳನ್ನು ಕೈಗೊಳ್ಳುವ ಪ್ರಮುಖರಲ್ಲಿ ಹೆಚ್ಚಿನವರಿಗೆ ಚುನಾವಣೆಗೆ ನಿಲ್ಲುವ ಉಮೇದು ಕೂಡ ಇಲ್ಲ. ಇದು ಪಕ್ಷದಲ್ಲಿಯೂ ಪ್ರತಿಫಲನಗೊಂಡಿದೆ.

ಗೆಲ್ಲಬೇಕು, ಅಧಿಕಾರ ಹಿಡಿಯಬೇಕು ಎಂಬ ಹುರುಪು ಪಕ್ಷದಲ್ಲಿ ಕಾಣಿಸುತ್ತಲೇ ಇಲ್ಲ. ರಾಜ್ಯಗಳಲ್ಲಿ ಗೆದ್ದರೂ ಶಾಸಕರನ್ನು ಹಿಡಿದಿಟ್ಟುಕೊಂಡು ಸರ್ಕಾರ ಉಳಿಸಿಕೊಳ್ಳಬೇಕು ಎಂಬ ಛಲವೂ ಇಲ್ಲ. ಗೆಲ್ಲುವುದೇ ಬೇಕಿಲ್ಲದ ಪಕ್ಷಕ್ಕೆ ಮತದಾರ ಮತ ಹಾಕುವುದಾದರೂ ಏಕೆ? ಬಿಜೆಪಿಯ ನಂತರ ಕಾಂಗ್ರೆಸ್‌ ಈ ದೇಶದ ಅತ್ಯಂತ ದೊಡ್ಡ ಪಕ್ಷ ಎಂಬುದು ವಾಸ್ತವ. ರಾಷ್ಟ್ರಮಟ್ಟದಲ್ಲಿಶೇ 20ರಷ್ಟು ಮತ ಗಳಿಕೆಯೂ ಇದೆ. ಆದರೆ, ಸತತ ಸೋಲಿನ ಹೊಡೆತ ಪಕ್ಷವನ್ನು ಕುಗ್ಗಿಸಿದೆ. ಭೂತ ಕಾಲದ ಹೊರೆ, ವರ್ತಮಾನದ ಕುಸಿತವು ಕಾಂಗ್ರೆಸ್‌ ಪಕ್ಷದ ಭವಿಷ್ಯವನ್ನು ಮಂಕಾಗಿಸಿವೆ. ಮತದಾರರ ಮನಗೆಲ್ಲುವ ಚಾಕಚಕ್ಯತೆ ಕಾಣಿಸುತ್ತಿಲ್ಲ. ಒಳಜಗಳಕ್ಕೆ ಪರ್ಯಾಯ ಪದವೇ ಕಾಂಗ್ರೆಸ್‌ ಎಂಬ ಸ್ಥಿತಿಯೂ ಇದೆ. ಇಂತಹ ಸ್ಥಿತಿಯಲ್ಲಿ ಪ್ರಬಲ ವಿರೋಧ ಪಕ್ಷವಾಗಿ ಕಾಂಗ್ರೆಸ್‌ ಅನ್ನು ದೇಶವು ನೆಚ್ಚಿಕೊಳ್ಳಲು ಸಾಧ್ಯವಿಲ್ಲ. ಪರ್ಯಾಯವೊಂದರ ಸೃಷ್ಟಿ ಅನಿವಾರ್ಯವೇ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT