ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಐದು ನಗರಪಾಲಿಕೆಗಳಿಗೆ ನಡೆಯಬೇಕಾದ ಚುನಾವಣೆಯು ಕಣ್ಣಿಗೆ ಕಂಡರೂ ಕೈಗೆ ನಿಲುಕದ ಮರೀಚಿಕೆಯಂತಾಗಿದೆ. 5 ವರ್ಷಗಳಿಗೂ ಹೆಚ್ಚು ಅವಧಿಯಿಂದ ಮುಂದಕ್ಕೆ ಹೋಗುತ್ತಲೇ ಇರುವ ಚುನಾವಣೆಯು, ಪ್ರಸ್ತುತ ಇನ್ನೇನು ದಿನ ನಿಗದಿಯಾಯಿತು ಎಂದು ಸಾರ್ವಜನಿಕರು ನಿರೀಕ್ಷಿಸುತ್ತಿದ್ದ ಸಂದರ್ಭದಲ್ಲಿ ಮತ್ತೆ ಮುಂದಕ್ಕೆ ಹೋಗುವ ಎಲ್ಲ ಸಾಧ್ಯತೆಗಳು ದಟ್ಟವಾಗಿದೆ. ಇದು ಗಂಭೀರ ಚುನಾವಣಾ ವೈಫಲ್ಯವಾಗಿದ್ದು, ಅದರ ಹೊಣೆಯನ್ನು ರಾಜ್ಯ ಚುನಾವಣಾ ಆಯೋಗವೇ (ಎಸ್ಇಸಿ) ಹೊರಬೇಕಾಗಿದೆ. ಆಯೋಗವೇ ನೀಡಿದ್ದ ಭರವಸೆಯನ್ನು ಆಧರಿಸಿ, ಪಾಲಿಕೆ ಚುನಾವಣೆ ನಡೆಸಲು ಅನೇಕ ಬಾರಿ ಕಾಲಾವಕಾಶ ನೀಡಿದ್ದ ಸುಪ್ರೀಂ ಕೋರ್ಟ್, ಜೂನ್ ತಿಂಗಳೊಳಗೆ ಚುನಾವಣೆ ನಡೆಸುವಂತೆ ಅಂತಿಮ ಗಡುವು ಗೊತ್ತುಪಡಿಸಿತ್ತು. ಇತ್ತೀಚಿನ ಪ್ರಮಾಣಪತ್ರದಲ್ಲಿ ಆಯೋಗವು, ಚುನಾವಣೆ ನಡೆಸಲು ತಾನು ಸಿದ್ಧವಾಗಿದ್ದು, ರಾಜ್ಯ ಸರ್ಕಾರವೇ ಹೆಚ್ಚಿನ ಕಾಲಾವಕಾಶ ಕೇಳುತ್ತಿದೆ ಎಂದು ಕೋರ್ಟ್ಗೆ ತಿಳಿಸಿತ್ತು. ಆದರೂ, ಜೂನ್ ಕೊನೆಯ ವೇಳೆಗೆ ಚುನಾವಣೆ ನಡೆಸುವುದಾಗಿ ಹೇಳಿತ್ತು. ಮತದಾರರ ಅಂತಿಮಪಟ್ಟಿ ಪ್ರಕಟಗೊಂಡಿದ್ದು, ವಾರ್ಡ್ಗಳ ಮರುವಿಂಗಡಣೆಯೂ ಪೂರ್ಣಗೊಂಡಿರುವುದರಿಂದ ಚುನಾವಣೆ ನಡೆಸಲು ಯಾವ ಗಂಭೀರ ಅಡೆತಡೆಯೂ ಇಲ್ಲ ಎಂದು ಸಾರ್ವಜನಿಕರು ಭಾವಿಸಿದ್ದರು. ಆದರೆ, ಆತಂಕಕಾರಿ ಹಾಗೂ ಅಚ್ಚರಿಯ ಬೆಳವಣಿಗೆಯಲ್ಲಿ ರಾಜ್ಯ ಸರ್ಕಾರದೊಂದಿಗೆ ‘ಎಸ್ಸಿಎ’ ಕೂಡ ಚುನಾವಣೆಗಾಗಿ ಹೆಚ್ಚುವರಿ ಸಮಯ ನೀಡುವಂತೆ ನ್ಯಾಯಾಲಯವನ್ನು ಕೇಳುತ್ತಿದೆ. ಜನಗಣತಿ, ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಮತ್ತು ಸಿಬ್ಬಂದಿಯ ಕೊರತೆಯನ್ನು ವಿಳಂಬಕ್ಕೆ ಕಾರಣಗಳನ್ನಾಗಿ ನೀಡಲಾಗಿದೆ.

ಚುನಾವಣೆ ನಡೆಸುವ ಬದ್ಧತೆಗೆ ವಿರುದ್ಧವಾದ ಹಿಮ್ಮುಖ ಚಲನೆಯು, ಸ್ವಾಯತ್ತತೆ ಹಾಗೂ ನಿಷ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸುವುದಕ್ಕಾಗಿ ಸಂವಿಧಾನದಿಂದ ನಿರ್ದೇಶನಗೊಂಡ ಸಂಸ್ಥೆಯ ವಿಶ್ವಾಸಾರ್ಹತೆಗೆ ತೀವ್ರ ಧಕ್ಕೆ ತರುವಂತಿದೆ. ಸರ್ಕಾರದ ಒತ್ತಡಕ್ಕೆ ಮಣಿಯುವಂತೆ ಕಾಣಿಸುವ ಆಯೋಗ ಸ್ವಾಯತ್ತ ಸಂಸ್ಥೆಯಂತೆಯೂ ಭಾಸವಾಗುತ್ತಿಲ್ಲ. ಚುನಾವಣೆ ನಡೆಸಲು ಸಿದ್ಧತೆ ಆಗಿದೆಯೋ ಇಲ್ಲವೋ ಎಂದು ನ್ಯಾಯಾಲಯಕ್ಕೆ ತಿಳಿಸುವುದು ಆಯೋಗದ ಕರ್ತವ್ಯವಾಗಿದೆಯೇ ಹೊರತು, ಸರ್ಕಾರದ ಅನುಕೂಲ ಅನನುಕೂಲದೊಂದಿಗೆ ಅದಕ್ಕೆ ಯಾವುದೇ ಸಂಬಂಧವಿಲ್ಲ. ಸರ್ಕಾರದ ನಿಲುವನ್ನು ಗಿಳಿಪಾಠದಂತೆ ಒಪ್ಪಿಸುವುದು ಆಯೋಗದ ನೈತಿಕತೆ ಮತ್ತು ಪ್ರಾಮಾಣಿಕತೆಯನ್ನು ಅನುಮಾನದಿಂದ ನೋಡಲು ಆಸ್ಪದ ಕಲ್ಪಿಸುತ್ತದೆ. ರಾಜ್ಯದಲ್ಲಿ ಮೇ 20ರಿಂದ ‘ಎಸ್ಐಆರ್’ ಆರಂಭಗೊಳ್ಳುತ್ತಿರುವುದು, ಸರ್ಕಾರ ಹಾಗೂ ಆಯೋಗಕ್ಕೆ ಚುನಾವಣೆ ಮುಂದೂಡಲು ದೊರಕಿರುವ ನೆಪವಾಗಿದೆ. ಆದರೆ, ಜಿಬಿಎ ಚುನಾವಣೆ ಮುಂದೂಡಿಕೆಗೆ ‘ಎಸ್ಐಆರ್’ ಪ್ರಕ್ರಿಯೆಯನ್ನು ಕಾರಣವಾಗಿ ನೀಡುವುದು ಸಮರ್ಥನೀಯವಲ್ಲ. ಮತದಾರರ ಪಟ್ಟಿ ಪರಿಷ್ಕರಣೆ ಎನ್ನುವುದು ನಿರಂತರವಾದ ಆಡಳಿತಾತ್ಮಕ ಪ್ರಕ್ರಿಯೆಯಾಗಿದ್ದು, ಅದು ಪೂರ್ಣಗೊಳ್ಳುವುದನ್ನು ಚುನಾವಣೆ ನಡೆಸಲು ಪೂರ್ವ ಷರತ್ತನ್ನಾಗಿ ವಿಧಿಸಿದರೆ, ಜಿಬಿಎ ಚುನಾವಣೆ ಅನಿರ್ದಿಷ್ಟಾವಧಿಗೆ ಮುಂದಕ್ಕೆ ಹೋಗುತ್ತದೆ.

ದೀರ್ಘ ಕಾಲದಿಂದ ಪಾಲಿಕೆಗಳಿಗೆ ಚುನಾವಣೆ ನಡೆಯದಿರುವುದರ ಪರಿಣಾಮವನ್ನು ಬೆಂಗಳೂರು ಅನುಭವಿಸುತ್ತಿದೆ. ಚುನಾಯಿತ ಸ್ಥಳೀಯ ಪ್ರತಿನಿಧಿಗಳಿಲ್ಲದೆ ‘ಅಧಿಕಾರಿಗಳ ಆಡಳಿತ’ (ಆಫೀಸರ್ ರಾಜ್) ಮುಂದುವರಿದಿದೆ. ಜನರಿಗೆ ಉತ್ತರದಾಯಿಯಾದ ಸ್ಥಳೀಯ ಆಡಳಿತ ಇಲ್ಲದ ಪರಿಸ್ಥಿತಿ, ಬೇಜವಾಬ್ದಾರಿತನದ ಹಾಗೂ ಪಾರದರ್ಶಕತೆಯ ಕೊರತೆಯಿಂದ ಕೂಡಿದ ಆಡಳಿತಕ್ಕೆ ಹಾಗೂ ನಾಗರಿಕರ ಸಮಸ್ಯೆಗಳು ಉಲ್ಬಣಗೊಳ್ಳಲು ಕಾರಣವಾಗಿದೆ. ರಸ್ತೆ–ಒಳಚರಂಡಿ ನಿರ್ವಹಣೆ, ಕಸ ವಿಲೇವಾರಿ, ನಗರ ಯೋಜನೆ ಮುಂತಾದ ದೈನಂದಿನ ಜೀವನಕ್ಕೆ ಸಂಬಂಧಿಸಿದ ನಿರ್ಧಾರಗಳಲ್ಲಿ ನಾಗರಿಕರ ಪ್ರಜಾಸತ್ತಾತ್ಮಕ ಧ್ವನಿಯೇ ಇಲ್ಲದಂತಾಗಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಅವಧಿಗೆ ಸರಿಯಾಗಿ ನಡೆಸುವುದು ಚುನಾವಣಾ ಆಯೋಗದ ಕರ್ತವ್ಯವೆಂದು ಸುಪ್ರೀಂ ಕೋರ್ಟ್ ಮತ್ತೆ ಮತ್ತೆ ಸ್ಪಷ್ಟಪಡಿಸಿದೆ. ತನ್ನ ಕರ್ತವ್ಯ ನಿರ್ವಹಿಸುವಲ್ಲಿ ಆಯೋಗ ವಿಫಲವಾದಲ್ಲಿ, ಪ್ರಜಾಪ್ರಭುತ್ವದ ಬೇರುಗಳು ದುರ್ಬಲಗೊಳ್ಳುತ್ತವೆ. ಆಯೋಗದ ಹೊಂದಾಣಿಕೆ ಮನೋಭಾವವನ್ನು ಕೋರ್ಟ್ ಗಂಭೀರವಾಗಿ ಪರಿಗಣಿಸಬೇಕು. ಆಡಳಿತದ ಅನುಕೂಲ ಅಥವಾ ರಾಜಕೀಯ ಲೆಕ್ಕಾಚಾರಗಳಿಗೆ ಸಂವಿಧಾನಾತ್ಮಕ ಬದ್ಧತೆಗಳು ಬಲಿಯಾಗಲು ಅವಕಾಶ ನೀಡಬಾರದು. ಚುನಾವಣಾ ಪ್ರಜಾಪ್ರಭುತ್ವವನ್ನು ಬಲಪಡಿಸಬೇಕಾದ ಸಂಸ್ಥೆಯೇ ಅದು ದುರ್ಬಲಗೊಳ್ಳಲು ಕಾರಣ ಆಗುತ್ತಿರುವುದು ಹೆಚ್ಚು ಆತಂಕ ಹುಟ್ಟಿಸುವ ಸಂಗತಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.