ಬುಧವಾರ, ನವೆಂಬರ್ 13, 2019
24 °C

ಜಿಡಿಪಿ: ವಿಶ್ವಬ್ಯಾಂಕ್‌, ಐಎಂಎಫ್‌ ಮುನ್ನೋಟ ಗಂಭೀರವಾಗಿ ಪರಿಗಣಿಸಿ

Published:
Updated:
Prajavani

ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕತೆಯು ಚೇತರಿಸಿಕೊಳ್ಳುವ ಸೂಚನೆ ಕಾಣಿಸುತ್ತಿಲ್ಲ. ದೇಶದ ಜಿಡಿಪಿ ಬೆಳವಣಿಗೆ ದರ, ಈ ಹಿಂದಿನ ಅಂದಾಜಿಗಿಂತ ಕಡಿಮೆ ಆಗಲಿದೆ ಎಂದು ಜಾಗತಿಕ ಹಣಕಾಸು ಸಂಸ್ಥೆಗಳಾದ ವಿಶ್ವಬ್ಯಾಂಕ್‌ ಮತ್ತು ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) ಹೇಳಿವೆ. ಇದು, ದೇಶಿ ಅರ್ಥ ವ್ಯವಸ್ಥೆಯ ಪುನಶ್ಚೇತನ ಸಾಧ್ಯತೆ ಕುರಿತ ಕಳವಳವನ್ನು ಇನ್ನಷ್ಟು ಹೆಚ್ಚಿಸಿದೆ. ಜಿಡಿಪಿ ಬೆಳವಣಿಗೆ ದರ ಶೇ 6ರಷ್ಟನ್ನು ಮೀರಲಾರದು ಎಂದು ವಿಶ್ವಬ್ಯಾಂಕ್‌ ಹೇಳಿದ್ದರೆ, ಶೇ 6.1ರಷ್ಟು ಇರಲಿದೆ ಎಂದು ಐಎಂಎಫ್‌ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್‌ ಅಂದಾಜಿಸಿವೆ.

ದೇಶದ ಹಲವು ಆರ್ಥಿಕ ತಜ್ಞರ ಪ್ರಕಾರ ವೃದ್ಧಿ ದರ ಶೇ 5.7ರಷ್ಟು ಇರಲಿದೆ. ಈ ಎಲ್ಲ ಅಂಕಿಅಂಶಗಳು ದೇಶಿ ಆರ್ಥಿಕತೆಯ ವಾರ್ಷಿಕ ಪ್ರಗತಿ ದರವು ಕುಂಠಿತಗೊಂಡಿರುವುದರ ದ್ಯೋತಕ. ವಿವಿಧ ವಲಯಗಳ ಬೆಳವಣಿಗೆಯೂ ಮಂದಗತಿಯಲ್ಲಿದೆ ಎಂಬುದನ್ನು ಈ ಅಂಕಿಅಂಶಗಳು ಸೂಚಿಸುತ್ತವೆ. ‘ಭಾರತದ ಆರ್ಥಿಕತೆಯು ಗಿರಕಿ ಹೊಡೆಯುತ್ತಿದೆ. ಬೇಡಿಕೆ ಕುಸಿತವೇ ಅತಿದೊಡ್ಡ ಸಮಸ್ಯೆಯಾಗಿದೆ’ ಎಂದು ಅರ್ಥಶಾಸ್ತ್ರಕ್ಕಾಗಿ ನೊಬೆಲ್‌ ಪ್ರಶಸ್ತಿ ಪಡೆದಿರುವ ಭಾರತ ಸಂಜಾತ ಅಭಿಜಿತ್‌ ಬ್ಯಾನರ್ಜಿ ಅವರೂ ಹೇಳಿದ್ದಾರೆ. ಆದರೆ, ಆರ್ಥಿಕ ಹಿನ್ನಡೆಗೆ ಸಂಬಂಧಿಸಿದ ಪ್ರತಿಪಾದನೆಗಳನ್ನು ಕೇಂದ್ರ ಸರ್ಕಾರ ಅಲ್ಲಗಳೆಯುತ್ತಿದೆ. ‘ಇವೆಲ್ಲವೂ ಆರ್ಥಿಕ ಚಟುವಟಿಕೆಗಳಲ್ಲಿನ ಏರಿಳಿತದ ಸಹಜ ವಿದ್ಯಮಾನ. ಜಾಗತಿಕ ವಿದ್ಯಮಾನಗಳ ಪ್ರಭಾವದಿಂದಾಗಿ ಆರ್ಥಿಕ ವಿಶ್ಲೇಷಣೆಗಳು ಉತ್ಪ್ರೇಕ್ಷೆಗೊಂಡಿವೆ’ ಎನ್ನುವುದು ಸರ್ಕಾರದ ಆರ್ಥಿಕ ಪಂಡಿತರ ಪ್ರತಿಪಾದನೆ. ಆದರೆ, ವಸ್ತುಸ್ಥಿತಿ ಏನು ಎಂಬುದು ಜನಸಾಮಾನ್ಯರ ಗ್ರಹಿಕೆಗೂ ನಿಲುಕುವಂತಿದೆ. ಸಾಲ ನೀಡಿಕೆ, ಬಂಡವಾಳ ಹೂಡಿಕೆ, ಗ್ರಾಹಕರ ಖರೀದಿ ಸಾಮರ್ಥ್ಯ ಹಾಗೂ ಬೇಡಿಕೆ ಸೇರಿದಂತೆ ಅರ್ಥ ವ್ಯವಸ್ಥೆಯ ಹಲವು ಆಧಾರಸ್ತಂಭಗಳು ದುರ್ಬಲಗೊಂಡಿವೆ. 

ದೇಶಿ ಹಣಕಾಸು ವ್ಯವಸ್ಥೆಯು ಅದರಲ್ಲೂ ಬ್ಯಾಂಕಿಂಗ್‌ ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳು ವಸೂಲಾಗದ ಸಾಲದ ಸಮಸ್ಯೆ ಹಾಗೂ ನಗದು ಬಿಕ್ಕಟ್ಟನ್ನು ಎದುರಿಸುತ್ತಿವೆ. ಇದಕ್ಕೆ ಪರಿಹಾರೋಪಾಯವಾಗಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಿಗೆ ಪುನರ್ಧನ ಒದಗಿಸಲಾಗಿದೆ. ಹೀಗಿದ್ದರೂ ಬ್ಯಾಂಕ್‌ಗಳ ಸ್ಥಿತಿಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಸುಧಾರಣೆ ಆಗಿಲ್ಲ. ಸರಕು ಮತ್ತು ಸೇವೆಗಳ ಬೇಡಿಕೆ ಕುಸಿದಿರುವುದರಿಂದ ತಯಾರಿಕಾ ಚಟುವಟಿಕೆಗಳಲ್ಲಿ ಹಣ ಹೂಡಲು ಉದ್ಯಮಿಗಳು ಉತ್ಸಾಹ ತೋರುತ್ತಿಲ್ಲ. ಕೈಗಾರಿಕೆ ಅಷ್ಟೇ ಅಲ್ಲದೆ ಸೇವಾ ವಲಯದ ಬೆಳವಣಿಗೆ ದರ ಕೂಡ ಕುಂಠಿತಗೊಂಡಿದೆ. ನಗರ ಮತ್ತು ಗ್ರಾಮೀಣ ಜನರ ಸರಾಸರಿ ಖರೀದಿ ಸಾಮರ್ಥ್ಯ ಕುಸಿದಿರುವುದನ್ನು ನ್ಯಾಷನಲ್‌ ಸ್ಯಾಂಪಲ್‌ ಸರ್ವೆ ಅಂಕಿಅಂಶಗಳೇ ಸ್ಪಷ್ಟವಾಗಿ ಹೇಳುತ್ತಿವೆ. ಅವನ್ನು ಉಪೇಕ್ಷಿಸುವುದು ತರವಲ್ಲ.

ವಾಹನ ಉದ್ಯಮವಂತೂ ಸತತವಾಗಿ ಮಾರಾಟ ಕುಸಿತ ಎದುರಿಸುತ್ತಿದೆ. ಇದರ ಪರಿಣಾಮವಾಗಿ ತಯಾರಿಕೆ ಮತ್ತು ಉದ್ಯೋಗ ಕಡಿತ ಉಂಟಾಗಿದೆ. ಆಟೊಮೊಬೈಲ್‌ ಕ್ಷೇತ್ರದ ಚೇತರಿಕೆಗೆ ಪೂರಕ ಕ್ರಮಗಳನ್ನು ಕೈಗೊಳ್ಳುವ ಮೂಲಕ ಉದ್ಯೋಗ ನಷ್ಟ ತಪ್ಪಿಸಬೇಕು. ಆರ್ಥಿಕ ಚಟುವಟಿಕೆಗಳು ಗರಿಗೆದರಬೇಕಾದರೆ, ಗ್ರಾಹಕರ ಖರೀದಿ ಸಾಮರ್ಥ್ಯ ಹೆಚ್ಚಿಸುವುದು ಅಗತ್ಯ. ಅದರಲ್ಲೂ ಮುಖ್ಯವಾಗಿ ಗ್ರಾಮೀಣ ಆರ್ಥಿಕತೆಗೆ ಶಕ್ತಿ ತುಂಬುವ ಕೆಲಸ ಆಗಬೇಕು. ಅದರ ಜತೆಗೇ ಬಂಡವಾಳ ಹೂಡಿಕೆಗೂ ಇನ್ನಷ್ಟು ಉತ್ತೇಜನ ಬೇಕಾಗಿದೆ. ಮೂಲ ಸೌಕರ್ಯ ವಲಯದಲ್ಲಿ ಸರ್ಕಾರದ ವೆಚ್ಚ ಹೆಚ್ಚಿಸುವುದರಿಂದ ಉದ್ಯೋಗ ಸೃಷ್ಟಿ ಸಾಧ್ಯತೆಯನ್ನು ಹಿಗ್ಗಿಸಬಹುದು. ಏನೂ ಆಗಿಲ್ಲ ಎಂದು ಮೊಂಡು ವಾದ ಮಾಡುವುದನ್ನು ಬಿಟ್ಟು, ವಸ್ತುಸ್ಥಿತಿ ಅರಿತು ಪರಿಹಾರೋಪಾಯಗಳ ಕುರಿತು ಗಂಭೀರವಾಗಿ ಚಿಂತಿಸುವುದು ತುರ್ತು ಅಗತ್ಯ.

ಪ್ರತಿಕ್ರಿಯಿಸಿ (+)