ಲಿಂಗಾನುಪಾತದಲ್ಲಿ ಏರುಪೇರು ಕಳವಳಕಾರಿ ಬೆಳವಣಿಗೆ

ಶುಕ್ರವಾರ, ಮಾರ್ಚ್ 22, 2019
21 °C

ಲಿಂಗಾನುಪಾತದಲ್ಲಿ ಏರುಪೇರು ಕಳವಳಕಾರಿ ಬೆಳವಣಿಗೆ

Published:
Updated:

ಲಿಂಗಾನುಪಾತದ ಪ್ರಮಾಣ ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ದಕ್ಷಿಣ ಭಾರತದಲ್ಲಿ ಗಣನೀಯ ಪ್ರಮಾಣದಲ್ಲಿ ಕುಸಿದಿದೆ. ಪಂಜಾಬ್‌, ಹರಿಯಾಣದಂಥ ರಾಜ್ಯಗಳಿಗೆ ಸೀಮಿತವಾಗಿದ್ದ ಈ ವಿದ್ಯಮಾನ ಪ್ರಸ್ತುತ ದಕ್ಷಿಣ ಭಾರತದಲ್ಲೂ ಕಾಣಿಸಿಕೊಂಡಿರುವುದು ಕಳವಳಕಾರಿ. ನಾಗರಿಕ ನೋಂದಣಿ ವ್ಯವಸ್ಥೆಯಲ್ಲಿನ (ಸಿಆರ್‌ಎಸ್) 2007ರಿಂದ 2016ರವರೆಗಿನ ಮಾಹಿತಿಯನ್ನು ಆಧರಿಸಿ ಭಾರತದ ರಿಜಿಸ್ಟ್ರಾರ್‌ ಜನರಲ್‌ ಸಿದ್ಧಪಡಿಸಿರುವ ಅಂಕಿಅಂಶಗಳು, ದಕ್ಷಿಣ ಭಾರತದಲ್ಲಿ ಹೆಣ್ಣುಮಕ್ಕಳ ಪ್ರಮಾಣ ಇಳಿಮುಖವಾಗಿರುವುದನ್ನು ಸ್ಪಷ್ಟವಾಗಿ ಹೇಳುತ್ತಿವೆ. ಹೆಣ್ಣು–ಗಂಡಿನ ಅನುಪಾತದಲ್ಲಿ ತೀವ್ರ ಅಸಮತೋಲನ ಕಂಡುಬಂದಿರುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ಕೂಡ ಸ್ಥಾನ ಪಡೆದಿದೆ. 2007ರಲ್ಲಿ ಕರ್ನಾಟಕದಲ್ಲಿ ಪ್ರತೀ ಒಂದು ಸಾವಿರ ಗಂಡು ಮಕ್ಕಳಿಗೆ 1004ರಷ್ಟಿದ್ದ ಹೆಣ್ಣುಮಕ್ಕಳ ಅನುಪಾತವು 2016ರಲ್ಲಿ 896ಕ್ಕೆ ಕುಸಿದಿದೆ. ನೆರೆಯ ತಮಿಳುನಾಡು ಪಟ್ಟಿಯಲ್ಲಿ ಕೊನೆಯಿಂದ 6ನೇ ಸ್ಥಾನ ಪಡೆದಿದ್ದು, ಅಲ್ಲಿ ಹೆಣ್ಣುಮಕ್ಕಳ ಸಂಖ್ಯೆ 935ರಿಂದ 840ಕ್ಕೆ ಕುಸಿದಿದೆ. ರಾಜಸ್ಥಾನದೊಂದಿಗೆ ಕೊನೆಯ ಸ್ಥಾನದಲ್ಲಿರುವ ಆಂಧ್ರಪ್ರದೇಶದಲ್ಲಿ 974ರಿಂದ 806ಕ್ಕೆ ಇಳಿದಿದೆ. ಕಳೆದ ಹತ್ತು ವರ್ಷಗಳಲ್ಲಿ ದೇಶದಲ್ಲಿ ಒಟ್ಟಾರೆ ಲಿಂಗಾನುಪಾತದ ಪ್ರಮಾಣ 903ರಿಂದ 877ಕ್ಕೆ ಬಂದುನಿಂತಿದೆ. ಕೇಂದ್ರ ಸರ್ಕಾರ ‘ಬೇಟಿ ಬಚಾವೊ ಬೇಟಿ ಪಢಾವೊ’ದಂಥ ಜನಪ್ರಿಯ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಆರಂಭಿಸಿದ ‘ಸೆಲ್ಫಿ ವಿತ್‌ ಡಾಟರ್‌’ ಆಂದೋಲನ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯವಾಗಿತ್ತು. ಹೆಣ್ಣುಮಕ್ಕಳಿಗೆ ಉತ್ತೇಜನ ನೀಡುವಂತಹ ಹಲವು ಕಾರ್ಯಕ್ರಮಗಳನ್ನು ರಾಜ್ಯ ಸರ್ಕಾರಗಳು ಕೂಡ ಹಮ್ಮಿಕೊಂಡಿವೆ. ಆದರೆ, ಇವೆಲ್ಲ ಕಾರ್ಯಕ್ರಮಗಳು ಲಿಂಗಾನುಪಾತದ ಮೇಲೆ ಯಾವುದೇ ಸಕಾರಾತ್ಮಕ ಪರಿಣಾಮ ಬೀರಿದಂತೆ ಕಾಣಿಸುತ್ತಿಲ್ಲ. ಸಮಾಧಾನಕರ ಸಂಗತಿಯೆಂದರೆ, ಲಿಂಗಾನುಪಾತದಲ್ಲಿ ಸದಾ ಕೆಳಹಂತದಲ್ಲೇ ಇರುತ್ತಿದ್ದ ಪಂಜಾಬ್‌, ಹರಿಯಾಣದಂಥ ರಾಜ್ಯಗಳು ಈ ಬಾರಿ ಕೊಂಚ ಉತ್ತಮ ಸ್ಥಿತಿಯಲ್ಲಿ ಇರುವುದು.

ದಕ್ಷಿಣ ಭಾರತದ ರಾಜ್ಯಗಳು ಜನನ ನೋಂದಣಿ ಪ್ರಮಾಣವನ್ನು ಹೆಚ್ಚೂಕಡಿಮೆ ನೂರಕ್ಕೆ ನೂರರಷ್ಟು ಸಾಧಿಸಿವೆ. ಕರ್ನಾಟಕದಲ್ಲೂ ಜನನ ನೋಂದಣಿ ಪ್ರಮಾಣ ಶೇ 98ರಷ್ಟಿದೆ. ದಕ್ಷಿಣಕ್ಕೆ ಹೋಲಿಸಿದರೆ ಉತ್ತರ ಭಾರತದ ರಾಜ್ಯಗಳಲ್ಲಿ ಜನನ ನೋಂದಣಿ ಪ್ರಮಾಣ ತೃಪ್ತಿಕರವಾಗಿಲ್ಲ. ಆ ಕಾರಣದಿಂದಾಗಿ ಲಿಂಗಾನುಪಾತಕ್ಕೆ ಸಂಬಂಧಿಸಿದ ಆ ರಾಜ್ಯಗಳ ಅಂಕಿಅಂಶಗಳು ಕರಾರುವಾಕ್ಕಾಗಿವೆಯೆಂದು ನಂಬುವುದು ಕಷ್ಟ ಎನ್ನುವ ತರ್ಕವೂ ಇದೆ. ಆ ವ್ಯತ್ಯಾಸವೇನೇ ಇರಲಿ, ದಕ್ಷಿಣ ಭಾರತದ ರಾಜ್ಯಗಳಲ್ಲಿನ ಹೆಣ್ಣುಮಕ್ಕಳ ಸರಾಸರಿ ಪ್ರಮಾಣ ಕಡಿಮೆಯಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಈ ವ್ಯತ್ಯಾಸದ ಹಿನ್ನೆಲೆಯಲ್ಲಿ ಸಮಾಜದಲ್ಲಿನ ಪುರುಷ ಪಕ್ಷಪಾತ ಧೋರಣೆಯನ್ನು ಸ್ಪಷ್ಟವಾಗಿ ಗುರುತಿಸಬಹುದು. ಸಮಾಜದ ಎಲ್ಲ ಕ್ಷೇತ್ರಗಳಲ್ಲಿ ಹೆಣ್ಣುಮಕ್ಕಳು ತಮ್ಮ ಛಾಪು ಮೂಡಿಸಿದ್ದರೂ, ಪಾಲಕರ ಮನಸ್ಸಿನಲ್ಲಿ ಗಂಡುಮಕ್ಕಳಿಗೆ ಈಗಲೂ ಮೊದಲ ಆದ್ಯತೆಯಿರುವುದು ಗುಟ್ಟೇನಲ್ಲ. ಭ್ರೂಣದ ಹಂತದಲ್ಲೇ ಹೆಣ್ಣನ್ನು ಹೊಸಕಿಹಾಕುವ ನಿರ್ದಯಿಗಳಿಗೆ ಕೊರತೆಯೇನಿಲ್ಲ. ಭ್ರೂಣಪತ್ತೆ ಮತ್ತು ಹತ್ಯೆ ಎರಡನ್ನೂ ಶಿಕ್ಷಾರ್ಹ ಅಪರಾಧಗಳನ್ನಾಗಿಸಿದ್ದರೂ ಕಾನೂನು ಉಲ್ಲಂಘಿಸುವ ಭೂಪರು ಇದ್ದೇಇದ್ದಾರೆ, ಅವರಿಗೆ ಸಹಕರಿಸುವ ವೈದ್ಯರೂ ಇದ್ದಾರೆ. ದೇಶದಲ್ಲಿನ ಲಿಂಗಾನುಪಾತವನ್ನು ಆರೋಗ್ಯಕರ ಮಟ್ಟಕ್ಕೆ ಏರಿಸುವ ನಿಟ್ಟಿನಲ್ಲಿ, ಗರ್ಭಧಾರಣೆಪೂರ್ವ ಹಾಗೂ ಪ್ರಸವಪೂರ್ವ ಪತ್ತೆ ತಂತ್ರಜ್ಞಾನ (ಲಿಂಗ ಆಯ್ಕೆ ನಿಷೇಧ) ಕಾಯ್ದೆಯನ್ನು ‍ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದು, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗುವಂತೆ ನೋಡಿಕೊಳ್ಳುವುದು ಸರ್ಕಾರದ ಕರ್ತವ್ಯ. ಜನಸಾಮಾನ್ಯರಲ್ಲಿ ಅರಿವು ಮೂಡಿಸುವ ಕೆಲಸ ಕೂಡ ದೊಡ್ಡ ಪ್ರಮಾಣದಲ್ಲಿ ನಡೆಯಬೇಕಾಗಿದೆ. ಲಿಂಗಾನುಪಾತದ ಏರುಪೇರು ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಗಂಭೀರ ಸಮಸ್ಯೆಗಳನ್ನು ಉಂಟುಮಾಡಲಿದೆ.

Tags: 

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !