ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲೆಗಳು ಲಿಂಗತಾರತಮ್ಯದ ಪ್ರದರ್ಶನ ಕೇಂದ್ರಗಳಾಗಬಾರದು

Last Updated 15 ಅಕ್ಟೋಬರ್ 2018, 19:22 IST
ಅಕ್ಷರ ಗಾತ್ರ

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಶಾಲೆಗಳಲ್ಲಿ ಹುಡುಗರಿಗಿಂತ ಹುಡುಗಿಯರ ಸಂಖ್ಯೆಯೇ ಹೆಚ್ಚಿನ ಪ್ರಮಾಣದಲ್ಲಿರುವುದು ನಮ್ಮ ಸಮಾಜವಿನ್ನೂ ಗಂಡುಮಕ್ಕಳ ಶ್ರೇಷ್ಠತೆಯ ವ್ಯಸನದಿಂದ ಮುಕ್ತವಾಗಿಲ್ಲ ಎನ್ನುವುದಕ್ಕೆ ಸ್ಪಷ್ಟ ಉದಾಹರಣೆ. ಲಿಂಗತಾರತಮ್ಯದ ಪ್ರದರ್ಶನ ಕೇಂದ್ರಗಳಂತೆ ಕಾಣಿಸುವ ಈ ಶಾಲೆಗಳು ಕಡಿಮೆ ಗುಣಮಟ್ಟದ ಶಿಕ್ಷಣ ಕೇಂದ್ರಗಳೂ ಆಗಿರುವುದನ್ನು ಗಮನಿಸಬೇಕು. ಪ್ರಾಥಮಿಕ ಶಿಕ್ಷಣದ ಹಂತದಲ್ಲೇ ಲಿಂಗತಾರತಮ್ಯದ ಬೀಜಗಳಿರುವುದು ಬೆಂಗಳೂರಿನ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಪ್ರಭಾವಳಿಗೆ ತಗುಲಿರುವ ಮಸಿಯಂತಿದೆ. ಗಂಡುಮಕ್ಕಳಿಗೆ ಖಾಸಗಿ ಶಾಲೆ, ಹೆಣ್ಣಾದರೆ ಸರ್ಕಾರಿ ಶಾಲೆ ಎನ್ನುವ ಮನೋಭಾವ ಇಂದಿನ ಪಾಲಕರಲ್ಲೂ ಜಾಗೃತಾವಸ್ಥೆಯಲ್ಲಿರುವುದನ್ನು, ಪಾಲಿಕೆಯ ಶಿಕ್ಷಣ ಸಂಸ್ಥೆಗಳಿಗೆ ಸಂಬಂಧಿಸಿದ 2018ರ ಮಾರ್ಗಸೂಚಿ ಪುಸ್ತಕದ ‍ವಿವರಗಳು ಸ್ಪಷ್ಟಪಡಿಸುತ್ತವೆ. ಈ ವಿವರಗಳ ಪ್ರಕಾರ, ಬಿಬಿಎಂಪಿ ಶಾಲೆಗಳಿಗೆ 2018ರಲ್ಲಿ ದಾಖಲಾದವರಲ್ಲಿ ಶೇ 64.15ರಷ್ಟು ವಿದ್ಯಾರ್ಥಿನಿಯರಾದರೆ, ಉಳಿದ ಶೇ 35.85ರಷ್ಟು ಮಂದಿ ಹುಡುಗರು. 2017ರಲ್ಲಿ ಕೂಡ ಈ ಪ್ರಮಾಣದಲ್ಲಿ ಹೆಚ್ಚಿನ ವ್ಯತ್ಯಾಸವೇನೂ ಇರಲಿಲ್ಲ. ಪ್ರಾಥಮಿಕ ತರಗತಿಗಳಿಂದ ಉನ್ನತ ದರ್ಜೆಗೆ ಹೋದಂತೆಲ್ಲ ಮಗಳು– ಮಗನ ನಡುವಿನ ತಾರತಮ್ಯದ ಈ ಅಂಕಿಅಂಶ ಇನ್ನಷ್ಟು ಢಾಳಾಗಿ ಕಾಣಿಸುತ್ತಿದೆ. ಪಾಲಿಕೆ ಅಧೀನದ ಪದವಿಪೂರ್ವ ಕಾಲೇಜುಗಳಲ್ಲಿ ಶೇ 81ರಷ್ಟು ಹುಡುಗಿಯರು ಇದ್ದರೆ, ಪದವಿ ಹಂತದಲ್ಲಿ ಈ ಪ್ರಮಾಣ ಶೇ 91ರಷ್ಟು!

ಹೆಣ್ಣುಮಕ್ಕಳಿಗಿಂತ ಗಂಡುಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಹಣ ಖರ್ಚು ಮಾಡಲು ಪೋಷಕರು ಸಿದ್ಧವಾಗಿದ್ದಾರೆ. ಹೆಣ್ಣನ್ನು ಮದುವೆ ಮಾಡಿ ಬೇರೆಯ ಮನೆಗೆ ಕಳಿಸುವುದರಿಂದ ಅವಳ ಭವಿಷ್ಯಕ್ಕಾಗಿ ಹೆಚ್ಚಿನ ಹಣ ಖರ್ಚು ಮಾಡುವುದು ಅನಗತ್ಯ ಎನ್ನುವ ಧೋರಣೆ ಸಮಾಜದಲ್ಲಿದೆ. ಗಂಡುಮಕ್ಕಳಿಗೆ ಪೌಷ್ಟಿಕ ಆಹಾರ ಹಾಗೂ ಉತ್ತಮ ಶಿಕ್ಷಣ ಎನ್ನುವ ಗ್ರಾಮೀಣ ಭಾರತದಲ್ಲಿನ ಜನಸಾಮಾನ್ಯರ ನಂಬಿಕೆ ನಗರಪ್ರದೇಶದಲ್ಲೂ ಬೇರೂರಿದೆ. ಮಗ ಪುಸ್ತಕ ಹಿಡಿದು ಕೂರುವುದನ್ನು ಇಷ್ಟಪಡುವ ಪೋಷಕರು, ಮಗಳು ಮನೆಕೆಲಸದಲ್ಲಿ ನೆರವಾಗಬೇಕೆಂದು ಬಯಸುತ್ತಾರೆ. ವಿಪರ್ಯಾಸವೆಂದರೆ ಎಲ್ಲ ಅನುಕೂಲಗಳ ನಡುವೆಯೂ ಪರೀಕ್ಷೆಗಳ ಫಲಿತಾಂಶದಲ್ಲಿ ಬಾಲಕರು ಸದಾ ಹಿಂದುಳಿದಿದ್ದರೆ, ಅನನುಕೂಲಗಳ ನಡುವೆಯೂ ಬಾಲಕಿಯರ ಪ್ರತಿವರ್ಷದ ಸಾಧನೆ ಗಮನಸೆಳೆಯುವಂತಿರುತ್ತದೆ. ಇದಕ್ಕೆ ಅವರ ಕಠಿಣಶ್ರಮ ಹಾಗೂ ಬದ್ಧತೆಯೇ ಕಾರಣ.

ಭ್ರೂಣದಿಂದ ಸಾವಿನವರೆಗೆ ಮಹಿಳಾ ವಿರೋಧಿ ಧೋರಣೆ ಸಮಾಜದ ಎಲ್ಲ ಹಂತಗಳಲ್ಲೂ ಬೇರೂರಿರುವುದಕ್ಕೆ ಪಾಲಿಕೆಯ ಶಾಲೆಗಳು ಇನ್ನೊಂದು ಉದಾಹರಣೆಯಷ್ಟೇ. ಮಕ್ಕಳ ನಡುವೆ ಲಿಂಗತಾರತಮ್ಯ ಮಾಡದಿರುವಂತೆ ಸರ್ಕಾರ ಕೈಗೊಂಡಿರುವ ಜಾಗೃತಿ ಅಭಿಯಾನಗಳು ಯಶಸ್ಸು ಸಾಧಿಸಿರುವುದು ಅಷ್ಟಕ್ಕಷ್ಟೆ ಎನ್ನುವ ಕಹಿ ಸತ್ಯಕ್ಕೂ ಪಾಲಿಕೆಯ ವಿದ್ಯಾಸಂಸ್ಥೆಗಳಲ್ಲಿನ ದಾಖಲಾತಿ ಅಂಕಿಅಂಶಗಳು ಕನ್ನಡಿ ಹಿಡಿದಿವೆ. ಬಾಲಕಿ– ಬಾಲಕರ ನಡುವೆ ತರತಮ ಎಣಿಸದಂತೆ ಪೋಷಕರ ಮನಸ್ಸುಗಳನ್ನು ತಿಳಿಗೊಳಿಸುವ ನಿಟ್ಟಿನಲ್ಲಿ ಸರ್ಕಾರಿ ಸಂಸ್ಥೆಗಳು ಹಾಗೂ ಸ್ವಯಂ ಸೇವಾ ಸಂಸ್ಥೆಗಳು ತಮ್ಮ ಕಾರ್ಯಕ್ರಮಗಳನ್ನು ಪುನರ್‌ ವಿಮರ್ಶೆಗೆ ಒಡ್ಡುವುದು ಸದ್ಯದ ತುರ್ತು. ಈ ನಿಟ್ಟಿನಲ್ಲಿ ಜನಪ್ರಿಯ ತಾರೆಗಳು ಹಾಗೂ ವಿವಿಧ ಕ್ಷೇತ್ರಗಳ ಸಾಧಕರನ್ನು ರಾಯಭಾರಿಗಳ ರೂಪದಲ್ಲಿ ಬಳಸಿಕೊಳ್ಳಬಹುದು. ಇದೆಲ್ಲಕ್ಕೂ ಮೊದಲು ಪಾಲಿಕೆಯ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಉತ್ತಮಗೊಳ್ಳಬೇಕು. ಮೂಲ ಸೌಕರ್ಯಗಳ ಕೊರತೆಯ ಜೊತೆಗೆ ಕಲಿಕೆಯ ಗುಣಮಟ್ಟವೂ ಕಳಪೆಯಾಗಿರುವ ಶಾಲೆಗಳಿಗೆ ತಮ್ಮ ಮಕ್ಕಳನ್ನು ಕಳುಹಿಸಲು ಯಾರು ತಾನೆ ಬಯಸುತ್ತಾರೆ? ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶಗಳನ್ನು ಒದಗಿಸುವ ನಿಟ್ಟಿನಲ್ಲಿ ಶಾಲೆಗಳು ಪುನರ್‌ ರಚನೆಗೊಂಡರೆ ಪಾಲಿಕೆಯ ಶಾಲೆಗಳಲ್ಲಿನ ವಿದ್ಯಾರ್ಥಿಗಳ ಸಂಖ್ಯೆ ತಂತಾನೇ ಹೆಚ್ಚಾದೀತು. ಪೋಷಕರ ಮನೋಭಾವ ಏನೇ ಇದ್ದರೂ ಗುಣಮಟ್ಟದ ಶಿಕ್ಷಣ ನೀಡುವ ನಿಟ್ಟಿನಲ್ಲಿ ಪಾಲಿಕೆ ನೆಪಗಳನ್ನು ಹೇಳದೆ ತನ್ನ ನಿರ್ವಹಣೆಯ ಶಾಲೆಗಳಲ್ಲಿನ ಕಲಿಕೆಯ ಗುಣಮಟ್ಟ ಹೆಚ್ಚಿಸಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT