ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಂಜಾಗದಿರಲಿ ಕುಡಿಯುವ ನೀರು ಶುದ್ಧತೆ ಕಾಪಾಡಲು ಆದ್ಯತೆ ನೀಡಿ

Last Updated 19 ನವೆಂಬರ್ 2019, 20:15 IST
ಅಕ್ಷರ ಗಾತ್ರ

ದೇಶದ ಹದಿಮೂರು ರಾಜ್ಯಗಳ ರಾಜಧಾನಿಗಳಲ್ಲಿ ಪೈಪ್‌ ಮೂಲಕ ಮನೆ–ಮನೆಗೆ ಪೂರೈಕೆ ಮಾಡುವ ನೀರು ಕುಡಿಯಲು ಯೋಗ್ಯವಲ್ಲ ಎನ್ನುವ ವರ್ತಮಾನ ಮಹಾನಗರಗಳ ನಿವಾಸಿಗಳಲ್ಲಿ ಸಹಜವಾಗಿಯೇ ಆತಂಕವನ್ನು ಉಂಟುಮಾಡಿದೆ. ಈ ನಗರಗಳ ಪಟ್ಟಿಯಲ್ಲಿ ಬೆಂಗಳೂರಿನ ಹೆಸರೂ ಇರುವುದು, ಲಾಗಾಯ್ತಿನಿಂದ ಜಲಮಂಡಳಿಯ ಕಾರ್ಯಕ್ಷಮತೆ ವಿರುದ್ಧ ಕೇಳಿ ಬರುತ್ತಿರುವ ದೂರುಗಳನ್ನೆಲ್ಲ ಪುಷ್ಟೀಕರಿಸುವಂತಿದೆ. ಭಾರತೀಯ ಗುಣಮಟ್ಟ ಮಾಪನ ಸಂಸ್ಥೆಯು (ಬಿಐಎಸ್‌) ಹಲವು ಮಾನದಂಡಗಳ ಆಧಾರದ ಮೇಲೆ ನಡೆಸಿದ ಅಧ್ಯಯನ ವರದಿಯು, ದೇಶದಲ್ಲಿ ಪೂರೈಕೆ ಮಾಡಲಾಗುತ್ತಿರುವ ಕುಡಿಯುವ ನೀರಿನ ಗುಣಮಟ್ಟಕ್ಕೆ ಹಿಡಿದ ಕನ್ನಡಿ.

ಈ ವರದಿಯ ಪ್ರಕಾರ, ನವದೆಹಲಿಯಲ್ಲಿ ಪೂರೈಕೆ ಮಾಡುತ್ತಿರುವ ನಲ್ಲಿ ನೀರು ಅತ್ಯಂತ ಹೆಚ್ಚು ಕಲುಷಿತವಾಗಿದೆ. ರಾಷ್ಟ್ರದ ರಾಜಧಾನಿಯಲ್ಲೇ ಪರಿಸ್ಥಿತಿ ಹೀಗಿರಬೇಕಾದರೆ ಮಿಕ್ಕ ಸಣ್ಣ ನಗರಗಳ ಸ್ಥಿತಿ ಹೇಗಿದ್ದೀತು? ನಲ್ಲಿ ನೀರಿನಲ್ಲಿ ಅಲ್ಯೂಮಿನಿಯಂ, ಮ್ಯಾಂಗನೀಸ್‌, ನೈಟ್ರೇಟ್‌, ಕ್ಯಾಲ್ಸಿಯಂ, ಕ್ಲೋರೈಡ್‌, ಫ್ಲೋರೈಡ್‌ ಮೊದಲಾದ ಅಂಶಗಳು ಇರುವುದು ಪತ್ತೆಯಾಗಿದೆ. ಕುಡಿಯುವ ನೀರೇ ನಂಜಾದರೆ ಹೇಗೆ? ನೀರಿನಲ್ಲಿ ಹೀಗೆ ಬೆರೆತು ಹೋಗಿರುವ ಲೋಹಗಳು, ರಾಸಾಯನಿಕಗಳು ಹಾಗೂ ವಿಷಕಾರಿ ಅಂಶಗಳು ಆರೋಗ್ಯಕ್ಕೆ ಗಂಭೀರ ಸವಾಲಾಗಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಹೀಗಿದ್ದೂ ಸಂಬಂಧಿಸಿದ ರಾಜ್ಯ ಸರ್ಕಾರಗಳು ಶುದ್ಧ ನೀರು ಪೂರೈಕೆಯನ್ನು ಆದ್ಯತೆಯಾಗಿ ಪರಿಗಣಿಸದಿರುವುದು ಅಕ್ಷಮ್ಯ.

ದೇಶದ ಅಭಿವೃದ್ಧಿಗೆ ಮಾರಕ ಎನಿಸಿರುವ ಸಂಗತಿಗಳಲ್ಲಿ ನಾಗರಿಕರನ್ನು ಬಾಧಿಸುವ ಅನಾರೋಗ್ಯಕ್ಕೇ ಮೊದಲ ಸ್ಥಾನ. ಒಂದೆಡೆ ಅಶುದ್ಧ ಕುಡಿಯುವ ನೀರು ಪೂರೈಕೆಯ ಮೂಲಕ ಕಾಯಿಲೆ ಹೆಚ್ಚಳಕ್ಕೆ ಕಾರಣವಾಗುವ ಸರ್ಕಾರಗಳು, ಇನ್ನೊಂದೆಡೆ ರೋಗ ನಿಯಂತ್ರಣಕ್ಕೆ ಸಾವಿರಾರು ಕೋಟಿ ರೂಪಾಯಿ ವೆಚ್ಚದ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿರುವುದು ಕುಚೋದ್ಯ. ನೀರಿನ ಶುದ್ಧತೆ ಕಾಪಾಡಿದರೆ ಸಾಕು, ಜನಸಮುದಾಯದ ಆರೋಗ್ಯವನ್ನು ಬಹುಮಟ್ಟಿಗೆ ಕಾಪಾಡಲು ಸಾಧ್ಯ. ಬೆಂಗಳೂರಿನ ಉದಾಹರಣೆಯನ್ನೇ ತೆಗೆದುಕೊಂಡರೆ, ಇಲ್ಲಿ ನೀರು ಪೂರೈಕೆಗೆ ಅಳವಡಿಸಿದ ಪೈಪುಗಳು ನೂರಾರು ವರ್ಷಗಳಷ್ಟು ಹಳೆಯವು. ತುಕ್ಕು ಹಿಡಿದಿರುವ ಅವು, ಅಲ್ಲಲ್ಲಿ ಒಡೆದು ಹೋಗಿದ್ದರಿಂದ ನೀರು ಪೋಲಾಗುತ್ತಿದೆ.

ಅಲ್ಲದೆ, ಚರಂಡಿ ನೀರು, ಪೈಪುಗಳ ಮೂಲಕ ಪೂರೈಸುವ ಶುದ್ಧ ನೀರಿನೊಂದಿಗೆ ಮಿಶ್ರಣವೂ ಆಗುತ್ತಿದೆ. ನಲ್ಲಿ ನೀರಿನಲ್ಲಿ ಕಲ್ಮಷ ಕಂಡು ಬರುವುದು ಹಾಗೂ ಅದು ದುರ್ನಾತ ಬೀರುವುದು ಇದೇ ಕಾರಣಕ್ಕೆ ಎನ್ನುವುದು ಎದ್ದು ಕಾಣುವ ಸತ್ಯ. ‘ಪೈಪ್‌ ಮೂಲಕ ಸರಬರಾಜು ಮಾಡುವ ನೀರಿನ ಗುಣಮಟ್ಟ ಕಾಪಾಡುವುದು ಈಗಿನ ನಿಯಮದ ಪ್ರಕಾರ ಕಡ್ಡಾಯವಲ್ಲ. ಯಾರ ವಿರುದ್ಧವೂ ಕ್ರಮ ಸಾಧ್ಯವಿಲ್ಲ’ ಎಂದು ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವರು ಹೇಳಿರುವುದನ್ನು ಒಪ್ಪಲಾಗದು. ಈ ಪ್ರಮಾದಕ್ಕೆ ಯಾರು ಕಾರಣರೋ ಅವರನ್ನು ಹೊಣೆಗಾರರನ್ನಾಗಿ ಮಾಡಲೇಬೇಕು. ಅದಕ್ಕಿಂತ ಮುಖ್ಯವಾಗಿ ನೀರನ್ನು ಅತ್ಯಂತ ಸಮರ್ಪಕವಾಗಿ ಸಂಸ್ಕರಿಸುವುದು, ತುಕ್ಕು ಹಿಡಿದ ಪೈಪುಗಳನ್ನು ಬದಲಾಯಿಸುವುದು, ಮಾರ್ಗ ಮಧ್ಯೆ ಕಲ್ಮಷ ಸೇರದಂತೆ ಎಚ್ಚರ ವಹಿಸುವುದು– ಈ ಮೂರು ಕೆಲಸಗಳನ್ನು ಬಲು ತುರ್ತಾಗಿಕೈಗೆತ್ತಿಕೊಳ್ಳಬೇಕು.

ಅದಕ್ಕೆ ಹಣಕಾಸಿನ ಅಡಚಣೆ ಆಗದಂತೆಯೂ ನೋಡಿಕೊಳ್ಳಬೇಕು. ಏಕೆಂದರೆ, ಜನರ ಆರೋಗ್ಯಕ್ಕಿಂತ ಆದ್ಯತೆಯ ವಿಷಯ ಮತ್ತೊಂದು ಇರಲಾರದು. ಶುದ್ಧ ಕುಡಿಯುವ ನೀರು ಜನರ ಹಕ್ಕು. ಅದಕ್ಕೆ ಬಾಧಕ ಆಗದಂತೆ ಸರ್ಕಾರ ಎಲ್ಲ ಬಗೆಯ ಕ್ರಮಗಳನ್ನೂ ಕೈಗೊಳ್ಳಬೇಕು. ಬಾಟಲಿ ನೀರು ಪಡೆಯುವಷ್ಟು ಹಾಗೂ ಮನೆಗೆ ಫಿಲ್ಟರ್‌ ಅಳವಡಿಸಿಕೊಳ್ಳುವಷ್ಟು ಆರ್ಥಿಕ ಸಾಮರ್ಥ್ಯ ಎಲ್ಲರಿಗೂ ಇಲ್ಲ ಎಂಬುದು ಸರ್ಕಾರಗಳಿಗೆ ಗೊತ್ತಿರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT