ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಗೋವಾ ವಿದ್ಯಮಾನ ಪ್ರಜಾಪ್ರಭುತ್ವದ ಅಣಕ

Last Updated 15 ಸೆಪ್ಟೆಂಬರ್ 2022, 19:31 IST
ಅಕ್ಷರ ಗಾತ್ರ

ಗೋವಾದಲ್ಲಿ ಅಲ್ಲಿನ ರಾಜಕೀಯ ಪರಂಪರೆಗೆ ಅನುಗುಣವಾಗಿ ಮತ್ತೊಮ್ಮೆ ಪಕ್ಷಾಂತರ ನಡೆದಿದೆ. ಎಂಟು ಮಂದಿ ಕಾಂಗ್ರೆಸ್ ಶಾಸಕರು ಬಿಜೆಪಿ ಸೇರಿದ್ದಾರೆ. ಶಾಸಕರು ಹೀಗೆ ಒಟ್ಟಾಗಿ ಪಕ್ಷಾಂತರ ಮಾಡಿರುವುದಕ್ಕೆ ಯಾವುದೇ ಒಂದು ಕಾರಣವನ್ನು ಗುರುತಿಸುವುದು ಕಷ್ಟ. ರಾಜ್ಯದಲ್ಲಿ ಹಲವಾರು ವರ್ಷಗಳಿಂದ ಬೇರುಬಿಟ್ಟಿರುವ ಶಿಸ್ತುರಹಿತ ರಾಜಕಾರಣ, ಕಾಂಗ್ರೆಸ್ ಪಕ್ಷದ ದೌರ್ಬಲ್ಯ, ಬಿಜೆಪಿಯ ಬೇಟೆಯಾಡುವ ಪ್ರವೃತ್ತಿ ಇವೆಲ್ಲವೂ ಶಾಸಕರ ಪಕ್ಷಾಂತರದ ನಿರ್ಧಾರದಲ್ಲಿ ಪಾತ್ರ ವಹಿಸಿವೆ. ಇಂತಹ ಸನ್ನಿವೇಶವನ್ನು ತಡೆಯಲು ಮುಂಜಾಗ್ರತಾ ಕ್ರಮವಾಗಿ ಕಾಂಗ್ರೆಸ್ ನಡೆಸಿದ್ದ ವಿನೂತನ ಪ್ರಯತ್ನ ಕೂಡ ಕೈಕೊಟ್ಟಿದೆ. ಚುನಾವಣೆಯಲ್ಲಿ ಗೆದ್ದ ಬಳಿಕ ಪಕ್ಷಾಂತರ ಮಾಡುವುದಿಲ್ಲ ಎಂದು ಪ್ರಮಾಣ ಮಾಡಿಸುವ ಸಲುವಾಗಿ ಪಕ್ಷವು ವಿಧಾನಸಭೆ ಚುನಾವಣೆಯಲ್ಲಿ ಕಣಕ್ಕೆ ಇಳಿದಿದ್ದ ತನ್ನ ಅಭ್ಯರ್ಥಿಗಳನ್ನು ದೇವಸ್ಥಾನ, ಚರ್ಚ್ ಮತ್ತು ದರ್ಗಾಕ್ಕೆ ಕರೆದೊಯ್ದಿತ್ತು. ಆದರೆ ಈ ಪ್ರಮಾಣವು ಯಾವುದೇ ಫಲ ನೀಡಿಲ್ಲ. ಒಬ್ಬ ಶಾಸಕರಂತೂ ಪಕ್ಷನಿಷ್ಠೆ ಬದಲಾಯಿಸಲು ತಾನು ದೇವರ ಅನುಮತಿ ಪಡೆದಿರುವುದಾಗಿ ಹೇಳಿಕೆ ಕೊಟ್ಟಿದ್ದಾರೆ. ಇಲ್ಲಿ ಪಕ್ಷಾಂತರ ತಡೆಯುವಲ್ಲಿ ನೈತಿಕತೆ ಸೋತಿದೆ. ಕಾನೂನು ಸೋತಿದೆ. ಕೊನೆಯಲ್ಲಿ ದೈವವೂ ಸೋಲು ಕಂಡಿದೆ.

ಫೆಬ್ರುವರಿಯಲ್ಲಿ ಚುನಾವಣೆ ನಡೆದ ನಂತರ 11 ಶಾಸಕರನ್ನು ಹೊಂದಿದ್ದ ಕಾಂಗ್ರೆಸ್ ಪಕ್ಷದಲ್ಲಿ ಈಗ ಈ ಸಂಖ್ಯೆ ಕೇವಲ ಮೂರಕ್ಕೆ ಕುಸಿದಿದೆ. ಮಾಜಿ ಮುಖ್ಯಮಂತ್ರಿ ದಿಗಂಬರ ಕಾಮತ್ ಹಾಗೂ ವಿರೋಧ ಪಕ್ಷದ ನಾಯಕ ಮೈಕೆಲ್‌ ಲೋಬೊ ಅವರಂತಹ ಕಾಂಗ್ರೆಸ್ ಪಕ್ಷದ ಕೆಲವು ಹಿರಿಯ ನಾಯಕರು ಪಕ್ಷಾಂತರ ಮಾಡಿದ ಮೇಲೆ ಆ ಪಕ್ಷದಲ್ಲಿ ನಾಯಕತ್ವವೇ ನಾಮಾವಶೇಷವಾಗಿದೆ. ಪಕ್ಷವು ನಾವಿಕನಿಲ್ಲದ ನೌಕೆಯಂತಾಗಿದೆ. ಇಂತಹ ವಲಸೆಯು ಬೇರೆ ರಾಜ್ಯಗಳಲ್ಲಿ ನಡೆದಿದ್ದ ನಿದರ್ಶನಗಳಿದ್ದರೂ ಅಂತಹ ವಿದ್ಯಮಾನವನ್ನು ತಡೆಯಲು ಸಾಧ್ಯವಾಗಿಲ್ಲ. ಅರುಣಾಚಲ ಪ್ರದೇಶದಲ್ಲಿ 2018ರಲ್ಲಿ, ಗುಜರಾತ್ ಮತ್ತು ಕರ್ನಾಟಕದಲ್ಲಿ 2019ರಲ್ಲಿ, ಮಧ್ಯಪ್ರದೇಶದಲ್ಲಿ 2020ರಲ್ಲಿ ಹಾಗೂ ಪಶ್ಚಿಮ ಬಂಗಾಳದಲ್ಲಿ 2021ರಲ್ಲಿ ಆ ಪಕ್ಷದ ಹಲವು ಶಾಸಕರು ಒಟ್ಟುಗೂಡಿ ವಲಸೆ ಹೋದ ಪ್ರಕರಣಗಳು ಘಟಿಸಿದವು. ಉಳಿದಂತೆ ಶಾಸಕರು ಬಿಡಿ ಬಿಡಿಯಾಗಿ ಪಕ್ಷಾಂತರ ಮಾಡುವುದು ಎಲ್ಲೆಡೆ ವರ್ಷದುದ್ದಕ್ಕೂ ನಡೆಯುತ್ತಲೇ ಇರುತ್ತದೆ. ಇದಕ್ಕೆ ಹಲವಾರು ಕಾರಣಗಳಿವೆ. ಪಕ್ಷದ ಕೇಂದ್ರ ನಾಯಕತ್ವದ ಬಗ್ಗೆ ಅನಿಶ್ಚಿತತೆ, ಸೈದ್ಧಾಂತಿಕ ಸ್ಪಷ್ಟತೆ ಇಲ್ಲದಿರುವುದು, ಸಂಘಟನೆ ದುರ್ಬಲವಾಗಿರುವುದು, ಹತಾಶೆ, ಕೆಳಹಂತದ ಮುಖಂಡರು ಹಾಗೂ ಕಾರ್ಯಕರ್ತರಿಗೆ ಮಾರ್ಗದರ್ಶನದ ಕೊರತೆಯು ವಲಸೆಗೆ ಪ್ರಚೋದಿಸುವ ಕೆಲವು ಅಂಶಗಳಾಗಿವೆ. ಗೋವಾದಲ್ಲಿ ಕೆಲವು ವಾರಗಳಿಂದಲೇ ರಾಜಕೀಯ ಬೇಗುದಿ ಆರಂಭವಾಗಿತ್ತು. ಇದನ್ನು ತಡೆಯಲು ಪಕ್ಷವು ಪ್ರಯತ್ನವನ್ನೇ ನಡೆಸಲಿಲ್ಲ ಎಂದು ಹೇಳಲಾಗದು. ಆದರೆ ಪಕ್ಷದ ನಾಯಕತ್ವವು ಈ ಸಾಮೂಹಿಕ ವಲಸೆಯನ್ನು ತಡೆಯಲು ಸಫಲವಾಗಲಿಲ್ಲ.

ವಿರೋಧ ಪಕ್ಷದವರನ್ನು ಹೀಗೆ ತನ್ನ ತೆಕ್ಕೆಗೆ ಸೆಳೆದುಕೊಂಡು ಯಾವುದೇ ಎಗ್ಗಿಲ್ಲದೆ ಪಕ್ಷವನ್ನು ಬೆಳೆಸುವ ತಂತ್ರವನ್ನು ಬಿಜೆಪಿ ಕರಗತ ಮಾಡಿಕೊಂಡಿದೆ. ಈ ಮೂಲಕ ರಾಜಕೀಯ ಸ್ಪರ್ಧೆಯನ್ನೇ ನಿರ್ನಾಮ ಮಾಡುವ ಏಕಸ್ವಾಮ್ಯದ ಸ್ಥಿತಿಯನ್ನು ಅದು ಸೃಷ್ಟಿಸುತ್ತಿದೆ. ವಿವಿಧ ಪಕ್ಷಗಳ ನಡುವೆ ಸ್ಪರ್ಧೆ ಹಾಗೂ ಚುನಾವಣಾ ಹೋರಾಟಗಳು ಪ್ರಜಾಪ್ರಭುತ್ವದ ಅತ್ಯಗತ್ಯ ಲಕ್ಷಣಗಳು. ಶಾಸಕರನ್ನು ಖರೀದಿ ಮಾಡುವ ಮೂಲಕ ಚುನಾವಣಾ ಫಲಿತಾಂಶಗಳನ್ನು ಯಾವಾಗ ಅಪ್ರಸ್ತುತ ಮಾಡಲಾಗುತ್ತದೆಯೋ ಮತ್ತು ಸರ್ಕಾರಗಳನ್ನು ಬುಡಮೇಲು ಮಾಡಲಾಗುತ್ತದೆಯೋ ಹಾಗೂ ಪಕ್ಷಾಂತರಗಳ ನೆರವಿನಿಂದ ಬೇರೊಂದು ರೀತಿಯ ಬಹುಮತದ ಸ್ಥಿತಿಯನ್ನು ಸೃಷ್ಟಿಸಲಾಗುತ್ತದೆಯೋ ಆಗ ಪ್ರಜಾಪ್ರಭುತ್ವದ ಪ್ರಾಮುಖ್ಯ ಕುಸಿಯುತ್ತದೆ. ಇದು ವಿರೋಧ ಪಕ್ಷದ ಅಸ್ತಿತ್ವವೇ ಇಲ್ಲದಂತಹ ಸಂದರ್ಭಕ್ಕೆ ಎಡೆಮಾಡಿಕೊಡುತ್ತದೆ. ವಿರೋಧ ಪಕ್ಷದ ಶಾಸಕರು ಸ್ವತಃ ತಮ್ಮ ಪಕ್ಷವನ್ನು ತ್ಯಜಿಸುತ್ತಿದ್ದಾರೆ, ಆಡಳಿತ ಮತ್ತು ತತ್ವ–ಸಿದ್ಧಾಂತಕ್ಕೆ ಸಂಬಂಧಿಸಿದ ಕಾರಣಗಳಿಗಾಗಿ ಬಿಜೆಪಿಯತ್ತ ಬರುತ್ತಿದ್ದಾರೆ ಎಂಬ ವಾದವು ಸುಳ್ಳಿನಿಂದ ಹಾಗೂ ಸ್ವಹಿತಾಸಕ್ತಿಯಿಂದ ಕೂಡಿದ್ದಾಗಿದೆ. ಈ ಎಲ್ಲಾ ಪಕ್ಷಾಂತರಗಳಲ್ಲಿಯೂ ಬಿಜೆಪಿಯು ಸಕ್ರಿಯವಾಗಿ ಭಾಗಿಯಾಗಿದೆ ಎಂಬುದು ವಾಸ್ತವ. ಆದರೆ ಹೀಗೆ ಪಕ್ಷಾಂತರ ಮಾಡಿದವರು ಹೊಸ ಚಿಹ್ನೆಯಡಿ ಚುನಾವಣೆಗೆ ಸ್ಪರ್ಧಿಸಿದಾಗ ಅವರಲ್ಲಿ ಬಹುತೇಕರನ್ನು ಮತದಾರರು ಪುನರಾಯ್ಕೆ ಮಾಡುತ್ತಿರುವುದು ದುರದೃಷ್ಟಕರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT