ಮಂಗಳವಾರ, ಜೂಲೈ 7, 2020
28 °C

ಸಂಪಾದಕೀಯ | ಕೈಗಾರಿಕೆ ಸ್ಥಾಪನೆ; ತೊಡಕು ನಿವಾರಣೆಯ ಕ್ರಮ ಸ್ವಾಗತಾರ್ಹ

ಸಂಪಾದಕೀಯ Updated:

ಅಕ್ಷರ ಗಾತ್ರ : | |

Prajavani

ಕೋವಿಡ್ ಪಿಡುಗಿನಿಂದ ನಲುಗಿರುವ ರಾಜ್ಯದ ಆರ್ಥಿಕತೆಯನ್ನು ಪ್ರಗತಿಯ ಹಳಿಗೆ ತರಲು ರಾಜ್ಯ ಸರ್ಕಾರ ಹಲವು ಪ್ರಯತ್ನಗಳನ್ನು ನಡೆಸಿದೆ. ಕೃಷಿ ಮಾರುಕಟ್ಟೆ ಮತ್ತು ಕೃಷಿ ಜಮೀನು ಮಾರಾಟಕ್ಕೆ ಸಂಬಂಧಿಸಿದ ಸುಧಾರಣಾ ಕ್ರಮಗಳಿಗೆ ಮುಂದಾಗಿರುವ ಬೆನ್ನಲ್ಲೇ, ಕೈಗಾರಿಕೆಗಳನ್ನು ತ್ವರಿತವಾಗಿ ಆರಂಭಿಸಲು ಪೂರಕ ಆಗಬಹುದಾದ ಉಪಕ್ರಮಗಳನ್ನು ಜಾರಿಗೆ ತರಲು ತೀರ್ಮಾನಿಸಿದೆ. 2002ರ ಕರ್ನಾಟಕ ಕೈಗಾರಿಕಾ (ಸೌಲಭ್ಯಗಳ) ಕಾಯ್ದೆಗೆ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ತರಲು ನಿರ್ಧರಿಸಿರುವುದು ಸ್ವಾಗತಾರ್ಹ.

ನಿಯಮಗಳನ್ನು ಸರಳಗೊಳಿಸಿ ಕೈಗಾರಿಕೆಗಳ ಸ್ಥಾಪನೆಗೆ ಉತ್ತೇಜನ ನೀಡುವುದು ಇದರ ಉದ್ದೇಶ. ಸಣ್ಣ, ಮಧ್ಯಮ ಮತ್ತು ದೊಡ್ಡ ಕೈಗಾರಿಕೆಗಳಿಗೂ ಇದರ ಪ್ರಯೋಜನ ಸಿಗಲಿದೆ. ಕೈಗಾರಿಕೆಗಳ ನಿರ್ಮಾಣ ಕಾರ್ಯವನ್ನು ವಿಳಂಬವಿಲ್ಲದೆ ತಕ್ಷಣ ಆರಂಭಿಸಲು ದಾರಿ ಸುಗಮ ಗೊಳಿಸುವುದು ಈ ತಿದ್ದುಪಡಿಯ ಉದ್ದೇಶ. ರಾಜ್ಯವನ್ನು ಬಂಡವಾಳ ಹೂಡಿಕೆಯ ಆಕರ್ಷಕ ತಾಣವನ್ನಾಗಿಸಲು ಇಂತಹ ಉಪಕ್ರಮಗಳು ಬೇಕಾಗಿದ್ದವು. ಹತ್ತಾರು ನಿಯಮಗಳ ಪಾಲನೆ ಮತ್ತು ವಿವಿಧ ಇಲಾಖೆಗಳಿಂದ ಪೂರ್ವಾನುಮತಿ ಪಡೆಯುವ ತಾಪತ್ರಯವನ್ನು ಈ ತಿದ್ದುಪಡಿಯು ನಿವಾರಿಸಲಿದೆ ಎಂಬುದು ಸರ್ಕಾರದ ಪ್ರತಿಪಾದನೆ.

ಜಿಲ್ಲಾ ಸಮಿತಿ ಮತ್ತು ರಾಜ್ಯ ಮಟ್ಟದ ಉನ್ನತಾಧಿಕಾರ ಸಮಿತಿಯು ಒಪ್ಪಿಗೆ ನೀಡಿದ ಬಳಿಕ, ಭೂ ಲೆಕ್ಕಪರಿ ಶೋಧನಾ ಸಮಿತಿಯು ಅರ್ಜಿದಾರ ಕೋರಿದ ಜಮೀನಿನ ಮಾಹಿತಿ ಪರಿಶೀಲಿಸುತ್ತದೆ. ಆ ಬಳಿಕ, ಉದ್ಯಮಿಯು ಕೂಡಲೇ ಕೈಗಾರಿಕೆ ಸ್ಥಾಪನೆಗೆ ಕೆಲಸ ಆರಂಭಿಸಲು ಈ ತಿದ್ದುಪಡಿಯು ಅನುವಾಗಿಸುತ್ತದೆ. ಪೂರ್ವಾನುಮತಿಗೆ ಸಂಬಂಧಿಸಿದ ಹಲವು ನಿಯಮಗಳಲ್ಲಿನ ಉದ್ದೇಶಿತ ಸಡಿಲಿಕೆಯು ಕೈಗಾರಿಕೆ ಆರಂಭಿಸಲು ಇದ್ದ ಕೆಲವು ತೊಡಕುಗಳನ್ನು ನಿವಾರಿಸಲಿದೆ.

ಹೊಸ ಹೂಡಿಕೆದಾರರಿಗೆ ಕೆಲವು ರಿಯಾಯಿತಿಗಳೂ ಸಿಗಲಿವೆ. ಕಟ್ಟಡ ನಕ್ಷೆ, ಪರಿಸರ ಅನುಮತಿ ಮತ್ತಿತರ ಶಾಸನಬದ್ಧ ಅನುಮೋದನೆ ಹಾಗೂ ನಿರಾಕ್ಷೇಪಣಾ ಪ್ರಮಾಣಪತ್ರವನ್ನು ಪಡೆಯಲು ಮೂರು ವರ್ಷಗಳ ಕಾಲಾವಕಾಶ ನೀಡಲಾಗಿದೆ. ಸರ್ಕಾರ ನೀಡುವ ಕಾಲಾವಕಾಶವನ್ನು ಸದುಪಯೋಗಪಡಿಸಿಕೊಂಡು, ನಿಯಮ ಉಲ್ಲಂಘನೆ ಆಗದ ರೀತಿಯಲ್ಲಿ ಉದ್ಯಮ ಸ್ಥಾಪಿಸುವುದು ಹೂಡಿಕೆದಾರರ ಹೊಣೆಗಾರಿಕೆಯಾಗಿರುತ್ತದೆ.  

ಹೂಡಿಕೆ ಆಕರ್ಷಿಸುವ ಈ ಹಿಂದಿನ ಹಲವು ಪ್ರಯತ್ನಗಳು ಕಾರ್ಯಗತ ಆಗದಿರುವ ನಿದರ್ಶನಗಳು ನಮ್ಮ ಮುಂದಿವೆ. ಅಧಿಕಾರಶಾಹಿಯ ವಿಳಂಬ ಧೋರಣೆ, ಕಿರುಕುಳದಿಂದಾಗಿ ಕೈಗಾರಿಕೆ ಸ್ಥಾಪನೆಗೆ ಪೂರಕವಾದ ಉಪಕ್ರಮಗಳು ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳಲು ಅಡ್ಡಿಯಾಗಿವೆ ಎಂಬ ಆರೋಪ ಇದೆ. ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಮಾಡಿಕೊಂಡ ಹೂಡಿಕೆಯ ಹಲವಾರು ಒಪ್ಪಂದಗಳು ಇದುವರೆಗೂ ಕಾರ್ಯಗತಗೊಂಡಿಲ್ಲ. ಇದಕ್ಕೆ ಅಧಿಕಾರಶಾಹಿಯ ಅಸಹಕಾರ ಕೂಡ ಒಂದು ಕಾರಣ ಎಂಬ ಅಭಿಪ್ರಾಯ ಇದೆ.

ಸರ್ಕಾರದ ಪಾಲುದಾರಿಕೆಯ ಯೋಜನೆಗಳಿಗೂ ವಿಳಂಬ ವ್ಯಾಧಿ ಅಂಟಿಕೊಂಡಿರುವುದು ಆಡಳಿತಯಂತ್ರದ ಕಾರ್ಯವೈಖರಿಗೆ ನಿದರ್ಶನ. ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಯೋಜನೆಯು 1990ರ ದಶಕದ ಆರಂಭದಲ್ಲೇ ಕುಡಿಯೊಡೆದರೂ ಅದು ಕಾರ್ಯಾರಂಭ ಮಾಡಿದ್ದು 2008ರಲ್ಲಿ. ಬೆಂಗಳೂರು ಮೆಟ್ರೊ ಯೋಜನೆಯು ವಿಳಂಬಕ್ಕೆ ಮತ್ತೊಂದು ಪುರಾವೆಯಾಗಿ ನಮ್ಮ ಮುಂದೆ ಇದೆ. ಈ ಬಗೆಯ ವಿಳಂಬ ನಮಗೆ ಪಾಠವಾಗಬೇಕು. 

ಕೈಗಾರಿಕಾಸ್ನೇಹಿ ನಿಯಮಗಳು ಮತ್ತು ಅದಕ್ಕೆ ಪೂರಕವಾಗುವಂತಹ ಪರಿಸರ ಅಗತ್ಯ. ಜೊತೆಗೆ ಎಚ್ಚರವೂ ಇರಬೇಕು. ಮಾಲಿನ್ಯ ನಿಯಂತ್ರಣ, ಪರಿಸರ ಸಂರಕ್ಷಣೆ ಮತ್ತು ಭೂಮಿಯ ಬಳಕೆ ವಿಷಯದಲ್ಲಿ ನಿಯಮ ಉಲ್ಲಂಘನೆಯ ಸಾಧ್ಯತೆಗಳನ್ನು ತಪ್ಪಿಸಬೇಕು. ನಿಯಮಗಳನ್ನು ರೂಪಿಸುವ ಸಂದರ್ಭದಲ್ಲಿ ಇಂತಹ ಸೂಕ್ಷ್ಮ ವಿಷಯಗಳ ಬಗ್ಗೆ ಸರ್ಕಾರ ಎಚ್ಚರ ವಹಿಸಬೇಕು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು