ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ| ಅತಿಥಿ ಉಪನ್ಯಾಸಕರ ನೋವಿಗೆ ಕಿವಿಗೊಡಿ, ಕಲಿಕೆಯ ನಷ್ಟ ತಪ್ಪಿಸಿ

Last Updated 29 ಡಿಸೆಂಬರ್ 2021, 19:30 IST
ಅಕ್ಷರ ಗಾತ್ರ

ಕೋವಿಡ್–19‌ ಕಾರಣದಿಂದ ಸ್ಥಗಿತಗೊಂಡಿದ್ದ ನೇರ ತರಗತಿಗಳು ಕೊನೆಗೂ ಶುರುವಾಗಿ ಕಾಲೇಜುಗಳಲ್ಲಿ ಶೈಕ್ಷಣಿಕ ಚಟುವಟಿಕೆಗಳು ಪುನಃ ಸಹಜ ಲಯ ಕಂಡುಕೊಳ್ಳುತ್ತಿರುವ ಹೊತ್ತಿನಲ್ಲೇ ಮತ್ತೊಂದು ಅಡ್ಡಿ ಎದುರಾಗಿದೆ. ಸೇವಾ ಭದ್ರತೆ ಒದಗಿಸಬೇಕು ಹಾಗೂ ವೇತನದಲ್ಲಿ ಹೆಚ್ಚಳ ಮಾಡಬೇಕು ಎಂಬ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ 14 ಸಾವಿರಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ಪಾಠವನ್ನು ಬಹಿಷ್ಕರಿಸಿ, ಬೀದಿಗೆ ಇಳಿದಿದ್ದಾರೆ. ಕಾಲೇಜುಗಳಲ್ಲಿನ ಕಾರ್ಯಭಾರಕ್ಕೆ ತಕ್ಕಂತೆ ಬೋಧಕರನ್ನು ನೇಮಿಸಿಕೊಳ್ಳುವ ಅಗತ್ಯವನ್ನು ಸರ್ಕಾರ ಮರೆತು ಎಷ್ಟೋ ವರ್ಷಗಳಾಗಿವೆ. ದೈನಂದಿನ ಬೋಧನೆಗೆ ಹೆಚ್ಚಿನ ಕಾಲೇಜುಗಳು ಅತಿಥಿ ಉಪನ್ಯಾಸಕರನ್ನೇ ಅವಲಂಬಿಸಿವೆ. ಅವರ ಸೇವೆ ಇಲ್ಲವೆಂದರೆ ಅದರಿಂದ ಪಾಠ–ಕಲಿಕೆಗೆ ಬಲುದೊಡ್ಡ ಪೆಟ್ಟು. ಅತಿಥಿ ಉಪನ್ಯಾಸಕರ ಸಂಕಷ್ಟವನ್ನು ಪರಿಹರಿಸುವುದು ಎಷ್ಟು ಮುಖ್ಯವೋ ವಿದ್ಯಾರ್ಥಿಗಳ ಕಲಿಕೆಯ ನಷ್ಟವನ್ನು ತಪ್ಪಿಸುವುದು ಕೂಡ ಅಷ್ಟೇ ಮುಖ್ಯ. ಅತಿಥಿ ಉಪನ್ಯಾಸಕರಿಗೆ ತಿಂಗಳಿಗೆ ಸದ್ಯ ತಲಾ ₹ 11 ಸಾವಿರದಿಂದ ₹ 13 ಸಾವಿರದಷ್ಟು ವೇತನ ಸಿಗುತ್ತಿದೆ. ಬೆಲೆ ಏರಿಕೆಯ ಈ ಯುಗದಲ್ಲಿ ಇಷ್ಟೊಂದು ಕಡಿಮೆ ವರಮಾನದಿಂದ ಕುಟುಂಬ ನಿರ್ವಹಣೆಯನ್ನು ಮಾಡಲು ಸಾಧ್ಯವಿದೆಯೇ? ಆಡಳಿತದ ಹೊಣೆ ಹೊತ್ತವರು ಗಂಭೀರವಾಗಿ ಯೋಚಿಸಬೇಕಾದ ವಿಷಯ ಇದು. ಕೊರೊನಾ ಕಾರಣದಿಂದ ಕಾಲೇಜುಗಳ ಬಾಗಿಲು ಬಂದ್ ಆದಾಗ ಅತಿಥಿ ಉಪನ್ಯಾಸಕರು ತರಕಾರಿ ಮಾರಿ, ಕೂಲಿ ಕೆಲಸ ಮಾಡಿ ಹೊಟ್ಟೆಹೊರೆದುಕೊಳ್ಳಬೇಕಾದ ಸ್ಥಿತಿ ಎದುರಾಗಿದ್ದನ್ನೂ ಮರೆಯುವ ಹಾಗಿಲ್ಲ. ಅಲ್ಲದೆ, ಅವರಿಗೆ ವರ್ಷದಲ್ಲಿ ಮೂರು ತಿಂಗಳು ಸಂಬಳವೇ ಸಿಗುವುದಿಲ್ಲ. ಉಳಿದ ಅವಧಿಯ ಸಂಬಳವನ್ನು ಸಹ ಕಂತಿನಲ್ಲಿ ಕೊಡಲಾಗುತ್ತದೆ. ಗರಿಷ್ಠ ದುಡಿಮೆ, ಕನಿಷ್ಠ ವೇತನದಿಂದ ಶೋಷಣೆಗೆ ಒಳಗಾದ ವರ್ಗ. ಅವರ ಸಂಕಷ್ಟವನ್ನು ಬಗೆಹರಿಸುವುದು ಆದ್ಯತೆ ಮೇಲೆ ಆಗಬೇಕಿರುವ ಕೆಲಸ.

ಕಳೆದ ಶೈಕ್ಷಣಿಕ ವರ್ಷದಲ್ಲಿ ನೇರ ತರಗತಿಗಳು ಬಹುಮಟ್ಟಿಗೆ ನಡೆದಿರಲಿಲ್ಲ. ಈ ವರ್ಷ ಕೂಡ ತುಂಬಾ ವಿಳಂಬವಾಗಿ ಆರಂಭವಾಗಿದ್ದು, 2022ರ ಫೆಬ್ರುವರಿ 11ರೊಳಗೆ ಎಲ್ಲ ಪಾಠಗಳನ್ನು ಪೂರ್ಣಗೊಳಿಸುವ ಗುರಿ ಹಾಕಿಕೊಳ್ಳಲಾಗಿದೆ. ವಸ್ತುಸ್ಥಿತಿ ಹೀಗಿರುವಾಗ ಬೋಧಕರೇ ಇಲ್ಲದೆ ಕಾಲೇಜುಗಳಲ್ಲಿ ಪಾಠ–ಕಲಿಕೆ ಸುಗಮವಾಗಿ ನಡೆಯುವ ಮಾರ್ಗ ಯಾವುದು? ಎರಡು ವರ್ಷಗಳಿಂದ ಒಂದಿಲ್ಲೊಂದು ಕಾರಣದಿಂದ ಬೋಧನೆಯು ಸಹಜ ಲಯ ಕಂಡುಕೊಳ್ಳಲು
ಸಾಧ್ಯವಾಗಿರಲಿಲ್ಲ. ನೂತನ ಶಿಕ್ಷಣ ನೀತಿಯ ಜಾರಿಯ ಗೋಜಲುಗಳು ಬೇರೆ. ಉಳಿದಿರುವ ಅವಧಿ ಅತ್ಯಲ್ಪ. ಅಸ್ತವ್ಯಸ್ತಗೊಂಡಿರುವ ಶೈಕ್ಷಣಿಕ ಚಟುವಟಿಕೆಗಳನ್ನು ಪುನಃ ಹಳಿಗೆ ತರುವ ಕೆಲಸ ಬಿರುಸು ಪಡೆಯುವಂತೆ ನೋಡಿಕೊಳ್ಳಬೇಕಿದ್ದ ಶಿಕ್ಷಣ ಇಲಾಖೆಯು ಅಸಹಾಯಕತೆಯಿಂದ ಕೈಚೆಲ್ಲಿ ಕುಳಿತಿರುವುದು ಸರಿಯಲ್ಲ. ಅತಿಥಿ ಉಪನ್ಯಾಸಕರ ವಿಷಯವಾಗಿ ವಿಧಾನ ಮಂಡಲದಲ್ಲಿ ಹಲವು ಬಾರಿ ಸುದೀರ್ಘ ಚರ್ಚೆಗಳು ನಡೆದಿವೆ. ಆದರೆ, ಅವರ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವಇಚ್ಛಾಶಕ್ತಿಯನ್ನು ಇದುವರೆಗಿನ ಯಾವ ಸರ್ಕಾರವೂ ಪ್ರದರ್ಶಿಸಿಲ್ಲ. ಆದರೆ, ತಮ್ಮ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತರುವ ಯತ್ನವನ್ನು ಅತಿಥಿ ಉಪನ್ಯಾಸಕರಂತೂ ಮಾಡುತ್ತಲೇ ಇದ್ದಾರೆ. ಸರ್ಕಾರಿ ಕಾಲೇಜು ಅತಿಥಿ ಉಪನ್ಯಾಸಕರ ಸಂಘಗಳ ಒಕ್ಕೂಟ ಈಗ ತೀರ್ಥಹಳ್ಳಿಯಿಂದ ಪಾದಯಾತ್ರೆಯನ್ನು ಬೇರೆ ಆರಂಭಿಸಿದೆ. ‘ಸಮಸ್ಯೆಯ ಇತ್ಯರ್ಥಕ್ಕೆ ಸಮಿತಿಯನ್ನು ರಚಿಸಲಾಗಿದೆ’ ಎಂದು ಸಬೂಬು ಹೇಳಿ, ಕಾಲ ತಳ್ಳುವ ಉನ್ನತ ಶಿಕ್ಷಣ ಇಲಾಖೆಯ ಪ್ರವೃತ್ತಿ ಸರ್ವಥಾ ಒಪ್ಪುವಂಥದ್ದಲ್ಲ. ಅತಿಥಿ ಉಪನ್ಯಾಸಕರು 20 ದಿನಗಳಿಂದಲೂ ಮುಷ್ಕರದಲ್ಲಿ ನಿರತರಾಗಿದ್ದಾರೆ. ಅಧಿಕಾರಿಗಳು ಮೂಕಪ್ರೇಕ್ಷಕರಾಗಿ ಕೂರದೆ ಅವರನ್ನು ಕರೆದು ಮೊದಲು ಮಾತನಾಡಿಸಬೇಕು. ಅವರ ಬೇಡಿಕೆಗಳನ್ನು ಅತ್ಯಂತ ಸಹಾನುಭೂತಿಯಿಂದ ಪರಿಶೀಲಿಸಬೇಕು. ಈ ನಿಟ್ಟಿನಲ್ಲಿ ಯುಜಿಸಿ ನಿಗದಿ ಮಾಡಿರುವಮಾನದಂಡಗಳನ್ನೂ ಗಮನದಲ್ಲಿ ಇರಿಸಿಕೊಳ್ಳಬೇಕು. ಪಶ್ಚಿಮ ಬಂಗಾಳ, ದೆಹಲಿ, ಪಂಜಾಬ್‌ ಸರ್ಕಾರಗಳು ಅತಿಥಿ ಉಪನ್ಯಾಸಕರಿಗೆ ಒದಗಿಸಿರುವ ಸೇವಾ ಭದ್ರತೆಯ ಕುರಿತು ಮುಷ್ಕರನಿರತ ಅತಿಥಿ ಉಪನ್ಯಾಸಕರು ಪ್ರಸ್ತಾಪಿಸಿದ್ದಾರೆ. ಆ ಮಾದರಿಗಳನ್ನೂ ಅಧ್ಯಯನ ಮಾಡಬೇಕು. ಅತಿಥಿ ಉಪನ್ಯಾಸಕರು ನೆಮ್ಮದಿಯಿಂದ ಬದುಕು ಸಾಗಿಸುವಂತಹ ವ್ಯವಸ್ಥೆಯನ್ನು ಕಲ್ಪಿಸಬೇಕು. ಓಮೈಕ್ರಾನ್‌ ಗುಮ್ಮ ಕಾಡುತ್ತಿರುವ ಈ ಹೊತ್ತಿನಲ್ಲಿ ವಿದ್ಯಾರ್ಥಿಗಳ ಕಲಿಕೆಯ ನಷ್ಟವನ್ನೂ ತಪ್ಪಿಸಬೇಕು. ಬೋಧಕ ಹುದ್ದೆಗಳನ್ನು ಅಗತ್ಯಾನುಸಾರ ಕಾಲಕಾಲಕ್ಕೆ ಭರ್ತಿ ಮಾಡಿದರೆ ‘ಅತಿಥಿ’ ಸೇವೆಯ ಅಗತ್ಯವೇ ಬೀಳುವುದಿಲ್ಲ ಎಂಬುದನ್ನೂ ಶಿಕ್ಷಣ ಇಲಾಖೆಯು ಅರಿಯಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT