ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಕರ ಚಕ್ಕರ್: ಸಮಗ್ರ ಬದಲಾವಣೆ ಅಗತ್ಯ

Last Updated 13 ಫೆಬ್ರುವರಿ 2019, 20:04 IST
ಅಕ್ಷರ ಗಾತ್ರ

ರಾಜ್ಯದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಮೂರನೇ ಒಂದು ಭಾಗದಷ್ಟು (ಶೇ 33) ಶಿಕ್ಷಕರು ಕೆಲಸಕ್ಕೆ ಚಕ್ಕರ್ ಹೊಡೆಯುತ್ತಿದ್ದಾರೆ ಎನ್ನುವುದು ಶಿಕ್ಷಣ ಇಲಾಖೆಯ ಸಹಯೋಗದಲ್ಲೇ ನಡೆದಿರುವ ಸಮೀಕ್ಷೆಯ ಮುಖ್ಯಾಂಶ. ಈ ಸಮೀಕ್ಷೆಯ ಹೂರಣ ಅನಿರೀಕ್ಷಿತವೇನಲ್ಲ. ಯಾವ ಕೋನದಿಂದ ನೋಡಿದರೂ ಸರ್ಕಾರಿ ಶಾಲೆಗಳಲ್ಲಿನ ಅವ್ಯವಸ್ಥೆ ಕಣ್ಣಿಗೆ ರಾಚುವಂತೆಯೇ ಇದೆ.

ಅವುಗಳ ದುಃಸ್ಥಿತಿಯನ್ನು ಹೇಳಲಿಕ್ಕೆ ಸಮೀಕ್ಷೆಗಳ ಅಗತ್ಯವೇನೂ ಇಲ್ಲ. ಗ್ರಾಮೀಣ ಪ್ರದೇಶಗಳಲ್ಲಿನ ಅನೇಕ ಸರ್ಕಾರಿ ಶಾಲೆಗಳ ಕಟ್ಟಡಗಳು ಶಿಥಿಲಾವಸ್ಥೆಯಲ್ಲಿವೆ. ಕೆಲವು ಶಾಲೆಗಳು ಏಕೋಪಾಧ್ಯಾಯರನ್ನು ನೆಚ್ಚಿಕೊಂಡು ಉಸಿರಾಡುತ್ತಿವೆ. ಬಿಸಿಯೂಟ, ಸಮವಸ್ತ್ರ–ಸೈಕಲ್‌ ವಿತರಣೆ, ಎಸ್‌ಡಿಎಂಸಿ ನಿರ್ವಹಣೆ, ಶಾಲೆಯಿಂದ ಹೊರಗುಳಿದ ಮಕ್ಕಳ ಪತ್ತೆದಾರಿಕೆಯಂತಹ ಹಲವು ಪಠ್ಯೇತರ ಚಟುವಟಿಕೆಗಳ ಜೊತೆಗೆ ಜನಗಣತಿ, ಜಾತಿಗಣತಿ, ಚುನಾವಣಾ ಕಾರ್ಯದಂತಹ ಯಾವ ರೂಪದಲ್ಲೂ ಶಿಕ್ಷಣಕ್ಕೆ ಸಂಬಂಧಪಡದ ಚಟುವಟಿಕೆಗಳ ಜವಾಬ್ದಾರಿಯನ್ನೂ ಶಿಕ್ಷಕವೃಂದದ ಮೇಲೆ ಹೊರಿಸಲಾಗಿದೆ.

ಅವರ ಪ್ರತಿಭೆ-ಶ್ರಮವನ್ನು ಹಲವು ಕೆಲಸಗಳಲ್ಲಿ ಹರಿದು ಹಂಚಿದರೆ, ಬೋಧನೆ ಎನ್ನುವುದು ಕಾಟಾಚಾರವಾಗುವುದರಲ್ಲಿ ಆಶ್ಚರ್ಯವೇನೂ ಇಲ್ಲ (ಅತೀವ ಒತ್ತಡದ ನಡುವೆಯೂ ತಂತಮ್ಮ ತರಗತಿ–ಶಾಲೆಗಳನ್ನು ಅಚ್ಚುಕಟ್ಟಾಗಿ ರೂಪಿಸಿಕೊಂಡಿರುವ ಆದರ್ಶ ಶಿಕ್ಷಕರೂ ಇದ್ದಾರೆ. ಆದರೆ, ತಂಡವೊಂದರ ಎಲ್ಲ ಸದಸ್ಯರೂ ಚಾಂಪಿಯನ್‌ಗಳಾಗುವುದು ಅಸಾಧ್ಯ). ಎಲ್ಲ ದಿಕ್ಕುಗಳಿಂದ ಉಸಿರುಗಟ್ಟುತ್ತಿರುವ ಶಿಕ್ಷಕವೃಂದದಲ್ಲಿ ಕೆಲವು ಮೈಗಳ್ಳರೂ ಇರುವುದು ನಿಜ. ಅವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು. ಆದರೆ, ಕೆಲವರನ್ನು ನೆಪವಾಗಿಟ್ಟುಕೊಂಡು ಇಡೀ ಶಿಕ್ಷಣ ಕ್ಷೇತ್ರದ ವೈಫಲ್ಯಕ್ಕೆ ಶಿಕ್ಷಕರನ್ನು ಗುರಿಯಾಗಿಸುವುದು ಸರಿಯಲ್ಲ.

ಶಿಕ್ಷಣದ ಗುಣಮಟ್ಟ ಕುಸಿಯುತ್ತಿರುವ ಬಗ್ಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ವ್ಯಕ್ತಪಡಿಸಿರುವ ಆತಂಕ ಹಾಗೂ ಮೈಗಳ್ಳ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿರುವುದು ವ್ಯಂಗ್ಯದಂತೆ ಕಾಣಿಸುತ್ತದೆ. ಯಾವ ವ್ಯವಸ್ಥೆಯು ಶಿಕ್ಷಕರು ತಮ್ಮ ಕರ್ತವ್ಯದಲ್ಲಿ ನಿರತರಾಗಲು ಅಡೆತಡೆಗಳನ್ನು ಉಂಟುಮಾಡಿದೆಯೋ ಈಗ ಅದೇ ವ್ಯವಸ್ಥೆ ಶಿಕ್ಷಕರ ಮೇಲೆ ಗೂಬೆ ಕೂರಿಸುತ್ತಿದೆ. ಶಿಕ್ಷಣ ಇಲಾಖೆಯ ವೈಫಲ್ಯವನ್ನು ಶಿಕ್ಷಕರಿಗೆ ವರ್ಗಾಯಿಸುವುದರಿಂದ ಶೈಕ್ಷಣಿಕ ಗುಣಮಟ್ಟ ಹೆಚ್ಚುವುದಿಲ್ಲ, ಬೋಧನೆಯ ಗುಣಮಟ್ಟವೂ ಹೆಚ್ಚುವುದಿಲ್ಲ.

ಖಾಸಗಿ ಶಾಲೆಗಳಲ್ಲಿನ ಶಿಕ್ಷಕರು ಸಮರ್ಥರು ಎನ್ನುವ ನಂಬಿಕೆಯೊಂದು ಜನಮನದಲ್ಲಿದೆ. ಆದರೆ, ಖಾಸಗಿ ಶಾಲೆಗಳ ದೊಡ್ಡ ದೊಡ್ಡ ಕಟ್ಟಡಗಳಿಗೂ ಬೋಧನೆಯ ಗುಣಮಟ್ಟಕ್ಕೂ ತಳಕು ಹಾಕುವುದು ಸರಿಯಲ್ಲ. ಕೆಲವು ಶಾಲೆಗಳನ್ನು ಹೊರತುಪಡಿಸಿದರೆ, ಅನೇಕ ಖಾಸಗಿ ಶಾಲೆಗಳ ಶಿಕ್ಷಕರು ಮಕ್ಕಳಿಗೆ ಬೋಧಿಸುವ ತರಬೇತಿಯನ್ನೇ ಹೊಂದಿರುವುದಿಲ್ಲ. ಸರ್ಕಾರಿ ಶಾಲೆಗಳ ಶಿಕ್ಷಕರು ತರಬೇತಿಯ ಜೊತೆಗೆ ಮೆರಿಟ್‌ ಕೂಡ ಹೊಂದಿದವರು.

ಈ ಪ್ರತಿಭಾವಂತ ಶಿಕ್ಷಕರು ಪಾಠ ಮಾಡಲು ಸಮರ್ಪಕ ಅನುಕೂಲ, ಅವಕಾಶವನ್ನೇ ಶಿಕ್ಷಣ ಇಲಾಖೆ ಒದಗಿಸಿಕೊಡುತ್ತಿಲ್ಲ. ಮಕ್ಕಳಿಗೆ ಬೋಧಿಸುವುದಷ್ಟೇ ಕೆಲಸವಾದರೆ, ಸರ್ಕಾರಿ ಶಾಲೆಗಳಲ್ಲಿನ ಶೈಕ್ಷಣಿಕ ಗುಣಮಟ್ಟ ಖಾಸಗಿ ಶಾಲೆಗಳಿಗೆ ಸವಾಲು ಒಡ್ಡುವುದು ಖಂಡಿತ. ಪ್ರಸಕ್ತ ಸಮೀಕ್ಷೆ ಶಿಕ್ಷಕರ ಮೈಗಳ್ಳತನದ ಬಗ್ಗೆಯಷ್ಟೇ ಹೇಳಿದೆ. ಪ್ರಾಥಮಿಕ, ಪ್ರೌಢ ಶಿಕ್ಷಣಕ್ಕೆ ಹೋಲಿಸಿದರೆ ಉನ್ನತ ಶಿಕ್ಷಣದ ಗುಣಮಟ್ಟ ಮತ್ತಷ್ಟು ನಿರಾಶಾದಾಯಕ.

ವಿಶ್ವವಿದ್ಯಾಲಯಗಳಲ್ಲಿನ ಪ್ರಾಧ್ಯಾಪಕರ ಕ್ರಿಯಾಶೀಲತೆಯ ಬಗ್ಗೆ ಹೇಳಲು ಯಾವ ವರದಿಯೂ ಬೇಕಿಲ್ಲ. ಬೋಧನೆಗೆ ಹೆಸರಾದ ಶಿಷ್ಯವತ್ಸಲ ಆಚಾರ್ಯ ಪರಂಪರೆ ಇರುವಂತೆಯೇ, ಪಾಠ ಹೇಳದಿರುವ ಪ್ರಾಧ್ಯಾಪಕರ ಪರಂಪರೆಯೂ ಕರ್ನಾಟಕದಲ್ಲಿದೆ. ಕೆಲವು ಪ್ರಾಧ್ಯಾಪಕರ ಸಾಧನೆಯ ರೂಪದಲ್ಲಿ ಅವರು ತರಗತಿಗಳಿಗೆ ಹೋಗದಿರುವುದನ್ನೇ ಬಣ್ಣಿಸಲಾಗುತ್ತದೆ. ಬೋಧನೆ, ಸಂಶೋಧನೆ ಹಿಂದಾಗಿ ಕ್ಷುಲ್ಲಕ ರಾಜಕೀಯ ಚಟುವಟಿಕೆಗಳು ಯೂನಿವರ್ಸಿಟಿಗಳ ಕ್ಯಾಂಪಸ್‌ಗಳಲ್ಲಿ ಹೆಚ್ಚುತ್ತಿವೆ. ಪ್ರಾಥಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣದವರೆಗಿನ ಆಮೂಲಾಗ್ರ ಬದಲಾವಣೆ ಇಂದಿನ ಅಗತ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT