ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಮಶಾನಕ್ಕೆ ಭೂಮಿ ಕಾಯ್ದಿರಿಸುವಿಕೆವಿಳಂಬವಾದರೂ ಸ್ವಾಗತಾರ್ಹ

Last Updated 30 ಅಕ್ಟೋಬರ್ 2019, 20:19 IST
ಅಕ್ಷರ ಗಾತ್ರ

ಸ್ಮಶಾನದ ಭೂಮಿ ಕೊರತೆ ಇರುವ ಗ್ರಾಮ ಮತ್ತು ನಗರಗಳಲ್ಲಿ ಅಗತ್ಯ ಪ್ರಮಾಣದ ಭೂಮಿ ಕಾಯ್ದಿರಿಸುವಂತೆ ಜಿಲ್ಲಾಧಿಕಾರಿಗಳಿಗೆ ಕಂದಾಯ ಇಲಾಖೆ ನೀಡಿರುವ ಆದೇಶ ಸ್ವಾಗತಾರ್ಹ. ಯಾವುದೇ ವ್ಯಕ್ತಿಯ ಅಂತ್ಯಕ್ರಿಯೆ ಗೌರವದಿಂದ ನಡೆಯುವುದಕ್ಕೆ ನಾಗರಿಕ ಸಮಾಜದಲ್ಲಿ ಅವಕಾಶ ಇರಬೇಕು. ವಿಪರ್ಯಾಸವೆಂದರೆ, ರಾಜ್ಯದ ಅನೇಕ ಗ್ರಾಮಗಳಲ್ಲಿ ಶವಸಂಸ್ಕಾರಕ್ಕೆ ನಿಗದಿತ ಸ್ಥಳಗಳೇ ಇಲ್ಲ. ರಾಜ್ಯ ಸರ್ಕಾರವು 2014ರಲ್ಲಿ ಹೊರಡಿಸಿದ ಅಧಿಸೂಚನೆ ಪ್ರಕಾರ, ವ್ಯಕ್ತಿಯೊಬ್ಬನ ಅಂತ್ಯಕ್ರಿಯೆಗೆ 60 ಚದರ ಅಡಿ ಜಾಗವನ್ನು ಕಾಯ್ದಿರಿಸಬೇಕಾದುದು ತಾಲ್ಲೂಕು ಅಥವಾ ಜಿಲ್ಲಾಡಳಿತದ ಕರ್ತವ್ಯ. ಆದರೆ, ರಾಜ್ಯದ 6,053 ಗ್ರಾಮಗಳಲ್ಲಿ ಮತ್ತು ಹಲವು ನಗರ– ಪಟ್ಟಣಗಳಲ್ಲಿ ಸ್ಮಶಾನದ ಸಮರ್ಪಕ ವ್ಯವಸ್ಥೆಯೇ ಇಲ್ಲ. ಈ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ, ಸ್ಮಶಾನಕ್ಕೆ ಜಾಗವನ್ನು ಕಾಯ್ದಿರಿಸಲು ಕಂದಾಯ ಇಲಾಖೆ ಮುಂದಾಗಿದೆ. ಜನಸಂಖ್ಯೆಗೆ ಅನುಗುಣವಾಗಿ ಅಗತ್ಯವಿರುವಷ್ಟು ಭೂಮಿಯನ್ನು ಸ್ಮಶಾನಕ್ಕಾಗಿ ಕಾಯ್ದಿರಿಸಲು ಹಾಗೂ ಜಮೀನು ಲಭ್ಯವಿಲ್ಲದ ಕಡೆಗಳಲ್ಲಿ ಭೂ ಮಾಲೀಕರಿಂದ ಖುಷ್ಕಿ ಭೂಮಿಯನ್ನು ಮಾರ್ಗಸೂಚಿ ಬೆಲೆಯ ಮೂರು ಪಟ್ಟು ಹೆಚ್ಚು ಬೆಲೆ ನೀಡಿ ಖರೀದಿಸಲು ತಿಳಿಸಲಾಗಿದೆ. ಅನಿವಾರ್ಯ ಸಂದರ್ಭಗಳಲ್ಲಿ ಧರ್ಮಾಧಾರಿತ ಸ್ಮಶಾನಗಳನ್ನು ಒದಗಿಸುವಂತೆಯೂ ಸೂಚಿಸಲಾಗಿದೆ.

ಸ್ಮಶಾನದ ಕೊರತೆಯು ಗ್ರಾಮಾಂತರ ಪ್ರದೇಶಗಳಲ್ಲಿನ ಬಹುದೊಡ್ಡ ಸಮಸ್ಯೆಗಳಲ್ಲೊಂದು. ಸ್ಮಶಾನ ಭೂಮಿ ಗೊತ್ತುಪಡಿಸಿಕೊಡುವಂತೆ ಆಗ್ರಹಿಸಿ ತಾಲ್ಲೂಕು ಹಾಗೂ ಜಿಲ್ಲಾಧಿಕಾರಿ ಕಚೇರಿಗಳೆದುರು ಗ್ರಾಮೀಣ ಜನರು ಧರಣಿ ನಡೆಸಿದ ನಿದರ್ಶನಗಳಿಗೆ ಕೊರತೆ ಇಲ್ಲ. ಊರಿಗೊಂದು ಸ್ಮಶಾನ ಇಲ್ಲ ಎನ್ನುವ ಕಾರಣಕ್ಕಾಗಿಯೇ, ಚುನಾವಣೆ ಸಂದರ್ಭದಲ್ಲಿ ವೋಟು ಕೇಳಲು ಬಂದ ರಾಜಕಾರಣಿ
ಗಳಿಗೆ ಘೇರಾವ್‌ ಮಾಡಿರುವ ಉದಾಹರಣೆಗಳು ಬಹಳಷ್ಟಿವೆ. ಆದರೆ, ಇಂಥ ಧರಣಿ, ಘೇರಾವ್‌ಗೆ ಫಲ ಸಿಕ್ಕಿರುವ ಪ್ರಸಂಗಗಳು ತೀರಾ ಕಡಿಮೆ. ಜೀವಂತ ಮನುಷ್ಯರ ಸಮಸ್ಯೆಗಳ ಬಗ್ಗೆಯೇ ಜಡವಾಗಿರುವ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸತ್ತವರ ಅಂತಿಮಸಂಸ್ಕಾರದ ವಿಷಯವನ್ನು ಗಂಭೀರವಾಗಿ ಪರಿಗಣಿಸುವಷ್ಟು ಸಂವೇದನಾಶೀಲತೆ ಉಳಿಸಿಕೊಂಡಿರುವ ಉದಾಹರಣೆಗಳು ವಿರಳ. ಅಂತ್ಯಸಂಸ್ಕಾರದ ವಿಷಯ ಕೆಲವು ಊರುಗಳಲ್ಲಿ ಸಂಘರ್ಷಕ್ಕೆ ಕಾರಣವಾಗಿರುವುದೂ ಇದೆ.

ಅಂತ್ಯಸಂಸ್ಕಾರಕ್ಕೆ ಜಾಗವಿಲ್ಲ ಎನ್ನುವ ಕಾರಣಕ್ಕಾಗಿ ಮೃತದೇಹವನ್ನು ತಹಶೀಲ್ದಾರ್‌ ಕಚೇರಿಯ ಆವರಣ
ದಲ್ಲಿಟ್ಟು ಪ್ರತಿಭಟನೆ ನಡೆಸಿದ ಘಟನೆ ಕಳೆದ ಸೆಪ್ಟೆಂಬರ್‌ನಲ್ಲಿ ಗದಗ ಜಿಲ್ಲೆಯ ಹರಿ‍ಪುರದಿಂದ ವರದಿಯಾಗಿತ್ತು. ಸ್ವಂತ ಭೂಮಿ ಹೊಂದಿರುವವರೇನೋ ತಮ್ಮ ಹೊಲಗಳಲ್ಲಿ ಅಂತ್ಯಸಂಸ್ಕಾರ ನಡೆಸುತ್ತಾರೆ. ಭೂಮಿಯಿಲ್ಲದ ಜನರ ಮನೆಗಳಲ್ಲಿ ಸಾವು ಸಂಭವಿಸಿದಾಗ ಆ ಕುಟುಂಬದವರು ಅನುಭವಿಸಬೇಕಾದ ಪಡಿಪಾಟಲು ಒಂದೆರಡಲ್ಲ. ಕೆಲವು ಊರುಗಳಲ್ಲಿ ಸಾರ್ವಜನಿಕ ಸ್ಮಶಾನ
ಗಳು ಇರುವುದೇನೋ ನಿಜ. ಅಂಥ ಕಡೆಗಳಲ್ಲಿ ಅಗೆದಲ್ಲೆಲ್ಲ ಬರೀ ಮೂಳೆಗಳೇ ದೊರೆಯುವ ಸ್ಥಿತಿಯಿದ್ದು, ಸಾವಿನ ದುಃಖ ಮತ್ತಷ್ಟು ದಾರುಣವಾಗಿಬಿಡುತ್ತದೆ. ದಲಿತರ ಮನೆಗಳಲ್ಲಿ ಸಾವು ಸಂಭವಿಸಿದರಂತೂ ಪರಿಸ್ಥಿತಿ ಇನ್ನಷ್ಟು ಘೋರ. ಬಹುತೇಕ ಊರುಗಳಲ್ಲಿ ಧರ್ಮ–ಜಾತಿ ಆಧಾರಿತ ಸ್ಮಶಾನಗಳು ಬಳಕೆಯಲ್ಲಿದ್ದು, ಆ ಭೂಮಿ ಆಯಾ ಸಮುದಾಯದ ಸ್ಥಿತಿವಂತರಿಗೆ ಸೇರಿದುದಾಗಿರು
ತ್ತದೆ. ಹೀಗೆ ಸ್ಮಶಾನಕ್ಕಾಗಿ ದಾನದ ರೂಪದಲ್ಲಿ ಬಿಟ್ಟ ಜಾಗಗಳು ಕಾಲಾಂತರದಲ್ಲಿ ಒತ್ತುವರಿಯಾಗಿವೆ. ಭೂಮಿಗೆ ಚಿನ್ನದ ಬೆಲೆ ಬಂದಿರುವ ಹಿನ್ನೆಲೆಯಲ್ಲಿ, ಶವಸಂಸ್ಕಾರಕ್ಕಾಗಿ ಭೂಮಿ ನೀಡಿದ ಕುಟುಂಬಗಳು ಆ ಜಾಗವನ್ನು ವಾಪಸು ಪಡೆದು ನಿವೇಶನಗಳನ್ನಾಗಿಯೋ ಕೃಷಿಭೂಮಿಯನ್ನಾಗಿಯೋ ಪರಿವರ್ತಿಸಿರುವ ಉದಾಹರಣೆಗಳೂ ಇವೆ.

ಹೀಗಾಗಿಯೇ ಗ್ರಾಮೀಣ ಪ್ರದೇಶ ಹಾಗೂ ಪಟ್ಟಣಗಳಲ್ಲಿನ ಸ್ಮಶಾನಗಳೆಲ್ಲ ವಿಳಾಸವಿಲ್ಲದಂತಾಗಿ, ಶ್ರೀಸಾಮಾನ್ಯರ ಅಂತ್ಯಸಂಸ್ಕಾರವು ಕಗ್ಗಂಟಾಗಿ ಪರಿಣಮಿಸಿದೆ. ಮರಣ ಹೊಂದಿದ ವ್ಯಕ್ತಿಗೆ ಗೌರವಪೂರ್ಣ ವಿದಾಯ ಹೇಳಲು ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ, ಕಂದಾಯ ಇಲಾಖೆ ವಿಳಂಬವಾದರೂ ಮನಸ್ಸು ಮಾಡಿದೆ. ಸ್ಮಶಾನ ಇಲ್ಲದ ಕಡೆಗಳಲ್ಲಿ ಭೂಮಿಯನ್ನು ಗುರುತಿಸುವ ಕೆಲಸ ತ್ವರಿತವಾಗಿ ನಡೆಯಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT