ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಜಿಎಸ್‌ಟಿ ನೋಂದಣಿ ಅಮಾನತು; ಉದ್ದೇಶ ಒಳ್ಳೆಯದು, ಪರಿಣಾಮ ಕೆಟ್ಟದ್ದು

Last Updated 16 ಫೆಬ್ರುವರಿ 2021, 19:30 IST
ಅಕ್ಷರ ಗಾತ್ರ

ಸರಕುಗಳ ಪೂರೈಕೆದಾರ ಸಲ್ಲಿಸಿದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವಿವರ ಹಾಗೂ ಆ ಸರಕುಗಳನ್ನು ಖರೀದಿ ಮಾಡಿದ ವರ್ತಕ ಸಲ್ಲಿಸಿದ ಜಿಎಸ್‌ಟಿ ವಿವರಗಳಲ್ಲಿ ಗಣನೀಯ ವ್ಯತ್ಯಾಸಗಳು ಕಂಡುಬಂದಲ್ಲಿ, ಅಂತಹ ವರ್ತಕನ ಜಿಎಸ್‌ಟಿ ಪರವಾನಗಿಯನ್ನು ತಕ್ಷಣವೇ ಅಮಾನತು ಮಾಡಲಾಗುವುದು ಎಂದು ಜಿಎಸ್‌ಟಿ ಅಧಿಕಾರಿಗಳು ಹೇಳಿದ್ದಾರೆ. ಜಿಎಸ್‌ಟಿ ವ್ಯವಸ್ಥೆಯಲ್ಲಿ ತೆರಿಗೆ ವಂಚನೆ ತಡೆಯುವ ಉದ್ದೇಶದಿಂದ ಈ ಕ್ರಮಕ್ಕೆ ಮುಂದಾಗಿರುವುದಾಗಿಯೂ ಅವರು ಹೇಳಿಕೊಂಡಿದ್ದಾರೆ. ತೆರಿಗೆ ವಂಚನೆ ತಡೆಯುವುದು ಅಂದರೆ ಸರ್ಕಾರಕ್ಕೆ ಕಾನೂನಿನ ಪ್ರಕಾರ ಬರಬೇಕಿರುವ ವರಮಾನ ಸೋರಿಕೆಯಾಗದಂತೆ ನೋಡಿಕೊಳ್ಳುವುದು ಎಂದು ಅರ್ಥ.

ಮೇಲ್ನೋಟಕ್ಕೆ ಇದು ಬಹಳ ಒಳ್ಳೆಯ, ಅಗತ್ಯವಾಗಿದ್ದ ಕಠಿಣ ಕ್ರಮ ಎಂದು ಅನ್ನಿಸಬಹುದು. ಆದರೆ, ಈ ಕ್ರಮವು ಒಳ್ಳೆಯ ಉದ್ದೇಶ ಹೊಂದಿದ್ದರೂ ಪರಿಣಾಮವು ಕೆಟ್ಟದ್ದಾಗುವ ಸಾಧ್ಯತೆ ಇದೆ. ವರದಿಗಳ ಅನ್ವಯ, ಜಿಎಸ್‌ಟಿ ವಿವರಗಳಲ್ಲಿ ಗಣನೀಯ ವ್ಯತ್ಯಾಸ ಕಂಡುಬಂದಾಗ ಜಿಎಸ್‌ಟಿ ಅಧಿಕಾರಿಗಳು, ಸಂಬಂಧಪಟ್ಟ ತೆರಿಗೆದಾರರ ಜಿಎಸ್‌ಟಿ ನೋಂದಣಿಯನ್ನು ಅಮಾನತಿನಲ್ಲಿ ಇರಿಸುತ್ತಾರೆ. ನಂತರ, ಅಮಾನತಿನ ವಿಚಾರವನ್ನು ತೆರಿಗೆದಾರರಿಗೆ ತಿಳಿಸಲಾಗುತ್ತದೆ. ಅಮಾನತಿಗೆ ಕಾರಣ ವಿವರಿಸಿ ಹಾಗೂ ನೋಂದಣಿಯನ್ನು ಏಕೆ ರದ್ದು ಮಾಡಬಾರದು ಎಂಬುದಕ್ಕೆ ಕಾರಣ ಕೇಳಿ ನೋಟಿಸ್ ‌ಅನ್ನು ತೆರಿಗೆದಾರರಿಗೆ ಕಳುಹಿಸ ಲಾಗುತ್ತದೆ. ನೋಟಿಸ್‌ ಜಾರಿಯಾಗುವುದು ನೋಂದಣಿ ಅಮಾನತು ಆದ ನಂತರ ಎಂಬುದನ್ನು ಗಮನಿಸಬೇಕು.

ಜನವರಿ ತಿಂಗಳಲ್ಲಿ ದೇಶವು ಸಾರ್ವಕಾಲಿಕ ದಾಖಲೆಯಾದ ₹ 1.2 ಲಕ್ಷ ಕೋಟಿ ವರಮಾನವನ್ನು ಜಿಎಸ್‌ಟಿ ಮೂಲಕ ಸಂಗ್ರಹಿಸಿದೆ ಎಂಬುದನ್ನು ಇಲ್ಲಿ ನೆನಪಿನಲ್ಲಿ ಇರಿಸಿಕೊಳ್ಳಬೇಕು. ಕೋವಿಡ್‌–19ರಿಂದ ಬಸವಳಿದಿದ್ದ ಅರ್ಥವ್ಯವಸ್ಥೆ ಹಾಗೂ ಅದರ ಅವಿಭಾಜ್ಯ ಭಾಗವಾಗಿರುವ ವಾಣಿಜ್ಯ ವಹಿವಾಟುಗಳು ಈಗಷ್ಟೇ ಚೇತರಿಕೆಯ ಹಾದಿಗೆ ಮರಳುತ್ತಿವೆ. ವರಮಾನ ಸಂಗ್ರಹವೂ ಏರುಗತಿಯಲ್ಲಿ ಸಾಗಿದೆ. ಇಂತಹ ಸಂದರ್ಭದಲ್ಲಿ, ವಾಣಿಜ್ಯ ವಹಿವಾಟಿಗೆ ತೊಡಕು ಉಂಟುಮಾಡುವ ಇಂತಹ ಕ್ರಮ ಅಗತ್ಯವಿದೆಯೇ ಎಂಬುದರ ಬಗ್ಗೆ ಅಧಿಕಾರಿಗಳು ಆತ್ಮಾವಲೋಕನ ಮಾಡಿಕೊಳ್ಳಬೇಕು.

ನೋಂದಣಿ ಅಮಾನತು ಮಾಡಿದ ಕ್ಷಣದಿಂದ ವರ್ತಕರಿಗೆ ವಹಿವಾಟು ನಡೆಸಲು ಆಗುವುದಿಲ್ಲ. ಇದು ಅವರ ವಹಿವಾಟುಗಳಿಗೆ ಭಾರಿ ಏಟು ನೀಡುತ್ತದೆ. ವ್ಯಕ್ತಿ ತಪ್ಪು ಮಾಡಿದ್ದಾನೆ ಎಂದು ಕಾನೂನು ಜಾರಿ ಸಂಸ್ಥೆಗಳಿಗೆ ಅನಿಸಿದರೆ, ಆ ವ್ಯಕ್ತಿಗೆ ನೋಟಿಸ್ ನೀಡಿ, ತಪ್ಪಿನ ಬಗ್ಗೆ ವಿವರಣೆ ಕೇಳಿದ ನಂತರ ಮುಂದಿನ ಕ್ರಮ ಜರುಗಿಸುವುದು ಸಹಜ ನ್ಯಾಯ ಪ್ರಕ್ರಿಯೆ. ಆದರೆ, ತಪ್ಪು ಮಾಡಿದ್ದಾರೆ ಎಂದು ಭಾವಿಸಲಾದ ವರ್ತಕರ ಜಿಎಸ್‌ಟಿ ನೋಂದಣಿ ಅಮಾನತು ಮಾಡಿದ ನಂತರ ಅವರಿಗೆ ಅದಕ್ಕೆ ಸಂಬಂಧಿಸಿದ ನೋಟಿಸ್– ಮಾಹಿತಿ ನೀಡುವುದು ಸಹಜ ನ್ಯಾಯ ತತ್ವದ ಉಲ್ಲಂಘನೆಯಂತೆ ಮೇಲ್ನೋಟಕ್ಕೆ ಕಾಣುತ್ತಿದೆ.

ನೋಂದಣಿಯನ್ನು ತಕ್ಷಣಕ್ಕೆ ಅಮಾನತು ಮಾಡುವ ಬದಲು, ಮೊದಲು ನೋಟಿಸ್ ಜಾರಿಗೊಳಿಸಿ, ವರ್ತಕರಿಗೆ ಸೂಕ್ತ ಕಾಲಾವಕಾಶ ನೀಡಿ, ಅವರಿಂದ ವಿವರಣೆಗಳನ್ನು ಪಡೆದು, ಆ ನಂತರ ಮುಂದಿನ ಕ್ರಮ ಜರುಗಿಸುವುದು ಹೆಚ್ಚು ನ್ಯಾಯಸಮ್ಮತ ಆಗಬಹುದು. ವರ್ತಕರು ತೆರಿಗೆ ವಂಚಿಸಬಾರದು ಎಂಬುದರಲ್ಲಿ ಎರಡು ಮಾತಿಲ್ಲವಾದರೂ, ತೆರಿಗೆ ವಂಚನೆಯನ್ನು ತಡೆಯುವ ಉದ್ದೇಶದಿಂದ ವರ್ತಕರ ಜೊತೆ ತೀರಾ ಕಠಿಣವಾಗಿ ವರ್ತಿಸುವುದರಿಂದ ಯಾರಿಗೂಒಳಿತಾಗುವುದಿಲ್ಲ. ತಪ್ಪುಗಳಲ್ಲಿ ಎರಡು ವಿಧ– ಉದ್ದೇಶಪೂರ್ವಕ ಹಾಗೂ ಉದ್ದೇಶರಹಿತ. ಎರಡನೆಯ ಬಗೆಯ ತಪ್ಪುಗಳ ವಿಚಾರದಲ್ಲಿ ‘ವಜ್ರಾದಪಿ ಕಠೋರಾಣಿ’ ಎಂಬಂತೆ ವರ್ತಿಸಬೇಕಾಗಿಲ್ಲ. ತೆರಿಗೆ ವಿವರ ಸಲ್ಲಿಕೆಯ ಸಂದರ್ಭದಲ್ಲಿ ಮನುಷ್ಯಸಹಜವಾದ ಕೆಲವು ತಪ್ಪುಗಳು ಆಗಬಹುದು.

ಯಾವ ಕೆಟ್ಟ ಉದ್ದೇಶವೂ ಇಲ್ಲದೆ ಆಗುವ ತಪ್ಪಿಗೆ ನೋಂದಣಿ ಅಮಾನತಿನ ಶಿಕ್ಷೆ ವಿಧಿಸುವುದು ವಾಣಿಜ್ಯ ವಹಿವಾಟುಗಳಿಗೆ ಪ್ರೋತ್ಸಾಹ ನೀಡಬೇಕಾದವರು ಮಾಡುವ ಕೆಲಸ ಅಲ್ಲ. ವರ್ತಕರಿಗೆ ಮುಕ್ತವಾಗಿ ವಾಣಿಜ್ಯ ಚಟುವಟಿಕೆಗಳನ್ನು ನಡೆಸುವ ವಾತಾವರಣವನ್ನು ಸರ್ಕಾರ ಸೃಷ್ಟಿಸಿಕೊಡಬೇಕು. ತೆರಿಗೆ ವಂಚನೆಯ ಉದ್ದೇಶವಿಲ್ಲದೆ ತಪ್ಪುಗಳಾದರೆ ಅವನ್ನು ತಿದ್ದಿಕೊಳ್ಳಲು ಅವಕಾಶವನ್ನೂ ನೀಡಬೇಕು. ಆಗ ವರ್ತಕರು ಹೆಚ್ಚು ವಿಶ್ವಾಸದಿಂದ ವಹಿವಾಟಿನಲ್ಲಿ ತೊಡಗಿಕೊಳ್ಳುತ್ತಾರೆ. ವಹಿವಾಟು ಹೆಚ್ಚೆಚ್ಚು ನಡೆದಂತೆಲ್ಲ ಸಂಪತ್ತು ವೃದ್ಧಿಯಾಗುತ್ತದೆ. ನಿರ್ಭೀತಿಯಿಂದ, ಮುಕ್ತವಾಗಿ ವಾಣಿಜ್ಯ ವಹಿವಾಟು ನಡೆಸುವಂತಹ ಸಂದರ್ಭ ಇರಬೇಕಿರುವುದು ಮಾರುಕಟ್ಟೆ ಅರ್ಥವ್ಯವಸ್ಥೆಯ ಮೂಲಭೂತ ಅಗತ್ಯಗಳಲ್ಲಿ ಒಂದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT