ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಜರಾತಿನ ಉಗ್ರನಿಗ್ರಹ ಮಸೂದೆ ಭರವಸೆಗಿಂತ ಆತಂಕವೇ ಹೆಚ್ಚು

Last Updated 10 ನವೆಂಬರ್ 2019, 20:04 IST
ಅಕ್ಷರ ಗಾತ್ರ

ಗುಜರಾತ್ ವಿಧಾನಸಭೆ ಅನುಮೋದನೆ ನೀಡಿದ್ದ ‘ಗುಜರಾತ್ ಸಂಘಟಿತ ಅಪರಾಧ ಮತ್ತು ಭಯೋತ್ಪಾದನೆ ನಿಯಂತ್ರಣ ಮಸೂದೆ’ಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಅಂಕಿತ ಹಾಕಿದ್ದಾರೆ. ಈ ಮೂಲಕ ಈ ಮಸೂದೆಯು ಕಾನೂನಾಗಿ ಗುಜರಾತ್ ರಾಜ್ಯದಲ್ಲಿ ಜಾರಿಯಾಗಲು ಹಾದಿ ಸುಗಮವಾದಂತೆ ಆಗಿದೆ. ಅದರ ಜೊತೆಯಲ್ಲೇ, ಇದು ಕಾನೂನಾಗಿ ಬಂದ ನಂತರದಲ್ಲಿ ಮಾನವ ಹಕ್ಕುಗಳು ಹಾಗೂ ಮೂಲಭೂತ ಹಕ್ಕುಗಳ ಉಲ್ಲಂಘನೆ ಆಗಬಹುದಾದ ಭೀತಿಯೂ ಸೃಷ್ಟಿಯಾಗಿದೆ.ಈ ಭೀತಿಗೆ ನಿರ್ದಿಷ್ಟ ಕಾರಣಗಳೂ ಇವೆ. ಆ ಕಾರಣಗಳನ್ನು ಗುರುತಿಸುವ ಮೊದಲು, ಈ ಮಸೂದೆಯ ಹಿನ್ನೆಲೆಯನ್ನು ಒಮ್ಮೆ ಪರಿಶೀಲಿಸಬಹುದು.

ಈ ಮಸೂದೆಯು ಮೊದಲ ಬಾರಿಗೆ ರೂಪ ಪಡೆದುಕೊಂಡಿದ್ದು 2002ರಲ್ಲಿ. ಪ್ರಥಮ ಬಾರಿಗೆ ವಿಧಾನಸಭೆಯ ಅನುಮೋದನೆ ಪಡೆದು, ರಾಷ್ಟ್ರಪತಿ ಭವನದ ಅಂಗಳ ತಲುಪಿದ ಈ ಮಸೂದೆಗೆ ಅಂದಿನ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಅಂಕಿತ ಹಾಕಲು ಒಪ್ಪಲಿಲ್ಲ. 2008ರಲ್ಲಿ ಈ ಮಸೂದೆಗೆ ಮತ್ತೆ ರಾಷ್ಟ್ರಪತಿಯವರ ಅಂಕಿತ ಪಡೆಯುವ ಯತ್ನ ಮಾಡಲಾಯಿತು. ಆಗ ರಾಷ್ಟ್ರಪತಿ ಆಗಿದ್ದ ಪ್ರತಿಭಾ ಪಾಟೀಲ್ ಅವರು, ಮಸೂದೆಯಲ್ಲಿ ಇರುವ ‘ತಪ್ಪೊಪ್ಪಿಗೆ’ ವಿಚಾರವನ್ನು ಉಲ್ಲೇಖಿಸಿ ಅಂಕಿತ ಹಾಕಲು ನಿರಾಕರಿಸಿದರು. 2015ರಲ್ಲಿ ಈ ಮಸೂದೆಯು ಅಂದಿನ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರ ಮುಂದೆ ಬಂತು. ಆಗ ಅವರು ಕೂಡ ಮಸೂದೆಯ ಕೆಲವು ಅಂಶಗಳನ್ನು ಉಲ್ಲೇಖಿಸಿ, ಸಹಿ ಹಾಕಲು ಒಪ್ಪಲಿಲ್ಲ. ಹಿಂದಿನ ಮೂವರು ರಾಷ್ಟ್ರಪತಿಗಳಿಂದ ಅನುಮೋದನೆ ಪಡೆದುಕೊಳ್ಳದಿದ್ದ ಮಸೂದೆಯು ಈಗ ರಾಮನಾಥ ಕೋವಿಂದ್ ಅವರಿಂದ ಅನುಮೋದನೆ ಪಡೆದಿರುವುದು ದುರದೃಷ್ಟಕರ.

ಪ್ರಜಾತಂತ್ರ ವ್ಯವಸ್ಥೆಯು ವ್ಯಕ್ತಿ ಸ್ವಾತಂತ್ರ್ಯಕ್ಕೆ ನೀಡುವ ಗೌರವಕ್ಕೆ ಚ್ಯುತಿ ತರಬಹುದಾದ ಕೆಲವು ಅಂಶಗಳು ಈ ಮಸೂದೆಯಲ್ಲಿ ಇರುವುದು ಆಘಾತ ಮೂಡಿಸುವಂಥದ್ದು. ಆರೋಪಿ ಸ್ಥಾನದಲ್ಲಿರುವ ವ್ಯಕ್ತಿಯು ಪೊಲೀಸ್ ಅಧಿಕಾರಿಗಳ ಎದುರು ನೀಡುವ ತಪ್ಪೊಪ್ಪಿಗೆ ಹೇಳಿಕೆಗಳನ್ನು ನ್ಯಾಯಾಲಯವು ಪುರಾವೆಯಾಗಿ ಪರಿಗಣಿಸಬೇಕು ಎಂದು ಈ ಮಸೂದೆ ಹೇಳುತ್ತದೆ. ಇದು ಭಾರತದಲ್ಲಿನ ಕ್ರಿಮಿನಲ್ ಅಪರಾಧಗಳ ತನಿಖಾ ವ್ಯವಸ್ಥೆಯಲ್ಲಿ ಜಾರಿಯಲ್ಲಿರುವ ಕಾನೂನಿನ ಆಶಯಕ್ಕೆ ವಿರುದ್ಧ. ಭಾರತೀಯ ಸಾಕ್ಷ್ಯ ಕಾಯ್ದೆಯ ಸೆಕ್ಷನ್ 24 ಮತ್ತು 25ರ ಅನ್ವಯ, ಪೊಲೀಸ್ ಅಧಿಕಾರಿಗಳ ಎದುರು ಆರೋಪಿ ತಪ್ಪೊಪ್ಪಿಕೊಳ್ಳುವುದು ಅಥವಾ ಪೊಲೀಸರ ವಶದಲ್ಲಿ ಇದ್ದಾಗ ಆರೋಪಿಯು ತಪ್ಪೊಪ್ಪಿಕೊಳ್ಳುವುದು ಸಾಕ್ಷ್ಯವಾಗಿ ಪರಿಗಣಿತ ಆಗುವುದಿಲ್ಲ.

ಆರೋಪಿಯು ತಾನು ತಪ್ಪು ಮಾಡಿದ್ದೇನೆ ಎಂಬ ಮಾತನ್ನು ನ್ಯಾಯಾಧೀಶರ ಎದುರು ಹೇಳಿದಾಗ ಮಾತ್ರ ಅದು ಸಾಕ್ಷ್ಯವಾಗಿ ಪರಿಗಣಿತ ಆಗುತ್ತದೆ. ಕ್ರಿಮಿನಲ್ ಅಪರಾಧ ಪ್ರಕರಣಗಳಲ್ಲಿ ಪೊಲೀಸರ ತನಿಖಾ ಸ್ವರೂಪ ಹೇಗಿರುತ್ತದೆ ಎಂಬುದನ್ನು ತಿಳಿದಿರುವವರಿಗೆ, ಪೊಲೀಸರ ಎದುರು ನೀಡುವ ತಪ್ಪೊಪ್ಪಿಗೆ ಹೇಳಿಕೆಯನ್ನು ಸಾಕ್ಷ್ಯವಾಗಿ ಪರಿಗಣಿಸುವುದರ ಅಪಾಯ ತಕ್ಷಣಕ್ಕೆ ಅರ್ಥವಾಗುತ್ತದೆ. ಪೊಲೀಸರು ನಿರ್ದಿಷ್ಟ ಅಪರಾಧ ಪ್ರಕರಣದಲ್ಲಿ, ಈ ಕಾಯ್ದೆಯ ಅಡಿ ಒಬ್ಬನನ್ನು ಆರೋಪಿ ಎಂದು ಬಂಧಿಸಿ, ತಮ್ಮ ವಶದಲ್ಲಿ ಇದ್ದಾಗ ಅವನಿಂದ ತಪ್ಪೊಪ್ಪಿಗೆ ಹೇಳಿಕೆ ಪಡೆದು, ಅದನ್ನೇ ಸಾಕ್ಷ್ಯವಾಗಿ ನ್ಯಾಯಾಲಯಕ್ಕೆ ಸಲ್ಲಿಸಬಹುದು. ಗುಜರಾತಿನ ಈ ಮಸೂದೆಯು ಇಂಥದ್ದೊಂದು ಅಪಾಯಕ್ಕೆ ಅವಕಾಶ ಕಲ್ಪಿಸಿದೆ.

ಒಂದರ್ಥದಲ್ಲಿ, ನ್ಯಾಯಾಧೀಶರ ಬಳಿಯಲ್ಲಿ ಮಾತ್ರ ಇರಬೇಕಾಗಿದ್ದ ಅಧಿಕಾರವನ್ನು ಪೊಲೀಸರ ಕೈಗೆ ನೀಡಿದೆ. ಇದು ಮಾನವ ಹಕ್ಕುಗಳ ದಮನಕ್ಕೆ ಕೂಡ ದಾರಿ ಮಾಡಿಕೊಡಬಹುದು. ಮಸೂದೆಯಲ್ಲಿ ಮೇಲ್ನೋಟಕ್ಕೇ ಎದ್ದು ಕಾಣುವ ಇನ್ನೊಂದು ಅಪಾಯಕಾರಿ ಅಂಶ, ಕದ್ದಾಲಿಸಿದ ದೂರವಾಣಿ ಸಂಭಾಷಣೆಯನ್ನು ಕಾನೂನುಬದ್ಧ ಸಾಕ್ಷ್ಯವಾಗಿ ಪರಿಗಣಿಸುವುದು. ಖಾಸಗಿತನವು ವ್ಯಕ್ತಿಯ ಮೂಲಭೂತ ಹಕ್ಕು ಎಂದು ಈಗಾಗಲೇ ಪರಿಗಣಿತ ಆಗಿರುವಾಗ, ಕದ್ದಾಲಿಸಿದ ಸಂಭಾಷಣೆಯನ್ನು ಸಾಕ್ಷ್ಯವಾಗಿ ಪರಿಗಣಿಸುವುದರಿಂದ ವ್ಯಕ್ತಿಯ ಮೂಲಭೂತ ಹಕ್ಕಿಗೆ ಧಕ್ಕೆ ಎದುರಾಗುತ್ತದೆ ಎಂಬುದನ್ನು ಬಿಡಿಸಿ ಹೇಳಬೇಕಾಗಿಲ್ಲ. ಭಯೋತ್ಪಾದನೆ ಯನ್ನು ಉಕ್ಕಿನ ಮುಷ್ಟಿಯಿಂದ ನಿಗ್ರಹಿಸಬೇಕು ಎಂಬುದು ನಿಜ. ಆದರೆ ಉಗ್ರವಾದದ ದಮನದ ಹೆಸರಿನಲ್ಲಿ ವ್ಯಕ್ತಿಸ್ವಾತಂತ್ರ್ಯದ ಮೊಟಕು ಪ್ರಜಾತಂತ್ರ ವ್ಯವಸ್ಥೆಗೆ ಭೂಷಣವಲ್ಲ.

ಉಗ್ರವಾದವನ್ನು ಸದೆಬಡಿಯಲು ಪೊಲೀಸರನ್ನು ಇನ್ನಷ್ಟು ಸಶಕ್ತಗೊಳಿಸಬೇಕು ಎಂಬುದೂ ನಿಜ. ಅದಕ್ಕೆ ಅವರಿಗೆ ಕೊಡಬೇಕಿರುವುದು ಆಧುನಿಕ ತರಬೇತಿ, ಅಗತ್ಯ ಶಸ್ತ್ರಾಸ್ತ್ರ ಹಾಗೂ ಅಗತ್ಯ ಮಾನವ ಸಂಪನ್ಮೂಲ ವನ್ನು. ಪ್ರಜೆಯ ಮೂಲಭೂತ ಹಕ್ಕನ್ನು ಮೊಟಕುಗೊಳಿಸಬಲ್ಲ ಕಾನೂನನ್ನು ಪೊಲೀಸರ ಕೈಗೆ ಕೊಡುವುದು ಯುಕ್ತವಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT