ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಜರಾತ್: ವಲಸಿಗ ‘ಅನ್ಯ’ರ ವಿರುದ್ಧದ ಅಸಹನೆ ಆತಂಕಕಾರಿ

Last Updated 16 ಅಕ್ಟೋಬರ್ 2018, 20:20 IST
ಅಕ್ಷರ ಗಾತ್ರ

ಬಿಹಾರ ಹಾಗೂ ಉತ್ತರ ಪ್ರದೇಶ ಕಾರ್ಮಿಕರು ಕಳೆದ ಎರಡು ವಾರಗಳಿಂದ ಗುಂಪು ಗುಂಪಾಗಿ ಗುಜರಾತ್‌ ತೊರೆದು ಹೋಗುತ್ತಿದ್ದಾರೆ. ಗುಜರಾತ್‌ನಲ್ಲಿ ಕೆಲಸ ಮಾಡುತ್ತಿದ್ದ ಈ ವಲಸೆ ಕಾರ್ಮಿಕರ ಮೇಲೆ ನಡೆದ ಹಲ್ಲೆ ಹಾಗೂ ಆಕ್ರಮಣ ಪ್ರಕರಣಗಳಿಂದಾಗಿ ಅವರು ಭೀತಿಗೊಂಡಿದ್ದಾರೆ.

ಭೀತಿಗೊಂಡಿರುವ ವಲಸಿಗ ಕಾರ್ಮಿಕರಿಗೆ ಸುರಕ್ಷತೆಯ ಭರವಸೆಯನ್ನು ನೀಡಲಾಗುತ್ತಿದ್ದರೂ ಪ್ರಯೋಜನವಾಗಿಲ್ಲ. ಗುಜರಾತ್‍ನ ಸಬರ್‌ಕಾಂತಾ ಪಟ್ಟಣದಲ್ಲಿ 14 ತಿಂಗಳ ಮಗುವಿನ ಮೇಲೆ ಸೆಪ್ಟೆಂಬರ್ 28ರಂದು ಅತ್ಯಾಚಾರ ನಡೆಸಿದ ಆರೋಪದಲ್ಲಿ ಬಿಹಾರ ಮೂಲದ ಕಾರ್ಮಿಕನೊಬ್ಬನನ್ನು ಈಚೆಗೆ ಪೊಲೀಸರು ಬಂಧಿಸಿದ್ದರು. ನಂತರದ ದಿನಗಳಲ್ಲಿ, ವಲಸೆ ಕಾರ್ಮಿಕರ ವಿರುದ್ಧದ ಪ್ರತಿಭಟನೆ ಹಾಗೂ ಹಲ್ಲೆ ಪ್ರಕರಣಗಳು ಹೆಚ್ಚಾಗಿವೆ.

ಹೊರಗಿನವರು ಅಥವಾ ಬೇರೆ ರಾಜ್ಯಗಳಿಗೆ ಸೇರಿದ ‘ಅನ್ಯರ’ ಕುರಿತಾದ ಅಸಹನೆ ಆಕ್ರೋಶವಾಗಿ ಭುಗಿಲೇಳಲು ಮಗುವಿನ ಮೇಲಿನ ಅತ್ಯಾಚಾರ ಪ್ರಕರಣ ನೆಪವಾದದ್ದು ವಿಷಾದನೀಯ.

ಹೊರಗಿನವರು ಅಥವಾ ಅನ್ಯರ ವಿರುದ್ಧದ ಅಸಹನೆಪ್ರದರ್ಶನಕ್ಕೆ ಕಾಂಗ್ರೆಸ್ ಶಾಸಕ ಅಲ್ಪೇಶ್ ಠಾಕೂರ್ ನೇತೃತ್ವದ ಠಾಕೂರ್ ಸೇನಾ ಸಂಘಟನೆ ನೇತೃತ್ವ ವಹಿಸಿದೆ. ಅತ್ಯಾಚಾರಕ್ಕೊಳಗಾದ ಶಿಶು, ಅಲ್ಪೇಶ್ ಠಾಕೂರ್ ಸಮುದಾಯಕ್ಕೆ ಸೇರಿದೆ. ಸಮುದಾಯಗಳ ನಡುವೆ ದ್ವೇಷ ಬಿತ್ತುವ ಪ್ರಚೋದನಕಾರಿ ಭಾಷಣಗಳನ್ನು ಮಾಡಿದ ಆರೋಪ ಅಲ್ಪೇಶ್ ಠಾಕೂರ್ ಮೇಲಿದೆ. ಆದರೆ, ‘ಉದ್ಯೋಗಾವಕಾಶಗಳು ಇಲ್ಲದ ಕಾರಣದಿಂದ ಯುವಜನರಲ್ಲಿ ಅಶಾಂತಿ, ತಳಮಳ ಮನೆ ಮಾಡಿದೆ. ಈ ಅಶಾಂತಿ ಇಂತಹ ಹಿಂಸಾಚಾರಗಳಲ್ಲಿ ಅಭಿವ್ಯಕ್ತಿ ಪಡೆಯುತ್ತಿದೆ’ ಎಂದು ಅಲ್ಪೇಶ್ ಠಾಕೂರ್ ವಿವರಿಸಿದ್ದಾರೆ.

ಉದ್ಯೋಗ ಇಲ್ಲ ಎಂಬುದು ಒಂದು ವಿವರಣೆ. ಆದರೆ ಹಿಂಸಾಚಾರಗಳಿಗೆ ಇದು ಸಮರ್ಥನೆಯಾಗುವುದು ಎಂದಿಗೂ ಸಾಧ್ಯವಿಲ್ಲ ಎಂಬುದನ್ನು ರಾಜಕಾರಣಿಗಳು ನೆನಪಿನಲ್ಲಿಟ್ಟುಕೊಳ್ಳಬೇಕು. ರಾಷ್ಟ್ರದ ಇತರ ಭಾಗಗಳಲ್ಲಿ ಇರುವಂತೆ ಗುಜರಾತ್‍ನಲ್ಲೂ ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗಗಳು ಸೃಷ್ಟಿಯಾಗಿಲ್ಲ ಎಂಬುದು ನಿಜ.ಗುಜರಾತ್‌ನಲ್ಲಿ ನಿರುದ್ಯೋಗ ಪ್ರಮಾಣ ಹೆಚ್ಚಾಗುತ್ತಿದೆ ಎಂಬುದನ್ನು ಸಮೀಕ್ಷೆಗಳೂ ದೃಢಪಡಿಸುತ್ತಿವೆ. ಗುಜರಾತ್‍ನಲ್ಲಿ ಕುಡಿಯೊಡೆದ ಪಾಟಿದಾರ್ ಚಳವಳಿಗೂ ನಿರುದ್ಯೋಗ ಸಮಸ್ಯೆಯೇ ಮೂಲ ಕಾರಣವಾಗಿತ್ತು ಎಂಬುದನ್ನೂ ಇಲ್ಲಿ ನೆನಪಿಸಿಕೊಳ್ಳಬಹುದು.

ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್‍ ಮುಖ್ಯಮಂತ್ರಿಯಾಗಿದ್ದಾಗ, ಗುಜರಾತ್‍ನ ಅಭಿವೃದ್ಧಿಯನ್ನು ‘ದೊಡ್ಡ ಮಾದರಿ’ ಎಂದು ಬಣ್ಣಿಸಲಾಗುತ್ತಿತ್ತು. ಆದರೆ, ಗುಜರಾತ್‍ ಆರ್ಥಿಕ ಅಭಿವೃದ್ಧಿಯನ್ನು ಹೆಚ್ಚಿಸುವಲ್ಲಿ ವಲಸಿಗ ಕಾರ್ಮಿಕ ಶಕ್ತಿಯ ಕೊಡುಗೆ ಅಪಾರವಾಗಿದೆ ಎಂಬುದನ್ನು ಹೇಗೆ ಮರೆಯುವುದು ಸಾಧ್ಯ? ಗುಜರಾತ್‌ನಲ್ಲಿ ಬಹುಮುಖ್ಯವಾಗಿ ಜವಳಿ, ಆಭರಣ, ಸೆರಾಮಿಕ್ಸ್‌ನಂತಹ ವಲಯಗಳಿಗೆ ಕಾರ್ಮಿಕ ಬಲ ಬೇಕು.

ವಲಸಿಗ ಕಾರ್ಮಿಕರನ್ನು ಹೊರಹಾಕಿದಲ್ಲಿ ಅದು ರಾಜ್ಯದ ಆರ್ಥಿಕತೆಯ ಮೇಲೆ ಬೀರುವ ಕೆಟ್ಟ ಪರಿಣಾಮ ಬೃಹತ್ತಾದುದು. ವಲಸಿಗ ಕಾರ್ಮಿಕಶಕ್ತಿ ಲಭ್ಯವಾಗದಿದ್ದಲ್ಲಿ, ಶ್ರಮಶಕ್ತಿಯ ಮೇಲೆ ವಿನಿಯೋಗಿಸಬೇಕಾದ ವೆಚ್ಚ ದುಬಾರಿಯದಾಗುತ್ತದೆ.ಅಷ್ಟೇ ಅಲ್ಲ, ಪ್ರತೀ ನಾಗರಿಕನಿಗೂ ರಾಷ್ಟ್ರದ ಯಾವುದೇ ಭಾಗದಲ್ಲಾದರೂ ಬದುಕುವ ಹಾಗೂ ಕೆಲಸ ಮಾಡುವ ಹಕ್ಕಿದೆ. ಈ ಹಕ್ಕಿಗೆ ಚ್ಯುತಿ ಬಾರದಂತೆ ರಕ್ಷಿಸುವ ಹೊಣೆಗಾರಿಕೆ ಸರ್ಕಾರದ್ದು.

ವಲಸಿಗ ಕಾರ್ಮಿಕರ ವಿರುದ್ಧ ದ್ವೇಷ ಭಾವನೆ ಬಿತ್ತುವ ಯತ್ನ ಕೆಟ್ಟ ರಾಜಕಾರಣ ಹಾಗೂ ಕೆಟ್ಟ ಆರ್ಥಿಕ ನೀತಿಗಳಿಗೆ ಉದಾಹರಣೆಯಾಗುತ್ತದೆ ಎಂಬುದು ರಾಜಕಾರಣಿಗಳಿಗೆ ನೆನ‍ಪಿರಬೇಕು. ಹಲ್ಲೆ ಭೀತಿಯಿಂದ ಈವರೆಗೆ 50 ಸಾವಿರ ವಲಸಿಗರು ಗುಜರಾತ್‌ ತೊರೆದಿದ್ದಾರೆ ಎಂಬುದು ಆತಂಕಕಾರಿ. ವೈವಿಧ್ಯ ಹಾಗೂ ವಿವಿಧ ಸಮುದಾಯಗಳ ಮಧ್ಯದ ಮುಕ್ತ ಸಂವಹನ ಸಕಾರಾತ್ಮಕವಾದದ್ದು ಎಂಬ ಭಾವನೆ ಜನಸಮುದಾಯದ ನಡುವೆ ಬಲಗೊಳ್ಳಬೇಕಿದೆ. ರಾಜ್ಯಗಳು ಹಾಗೂ ರಾಷ್ಟ್ರವನ್ನು ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಹಾಗೂ ಆರ್ಥಿಕವಾಗಿ ಹೆಚ್ಚು ಬಲಗೊಳಿಸಲು ಇಂತಹ ಭಾವನೆ ಜನಸಮುದಾಯದ ಆಳಕ್ಕಿಳಿಯಬೇಕಾದದ್ದು ಅಗತ್ಯ.

ನಮ್ಮ ರಾಷ್ಟ್ರದಲ್ಲಷ್ಟೇ ಅಲ್ಲ, ವಲಸಿಗ ಉದ್ಯೋಗಿಗಳು ಹಾಗೂ ಕಾರ್ಮಿಕರಿಗೆ ಹಲವು ನೆಲೆಗಳಲ್ಲಿ ಅನಿಶ್ಚಯದ ಸ್ಥಿತಿ ಸೃಷ್ಟಿಯಾಗುತ್ತಿರುವುದು ಇತ್ತೀಚಿನ ದಿನಗಳಲ್ಲಿ ವಿಶ್ವದ ವಿವಿಧ ಭಾಗಗಳಿಂದ ವರದಿಯಾಗುತ್ತಿರುವುದು ದುರದೃಷ್ಟಕರ ಬೆಳವಣಿಗೆ. ಜಾಗತೀಕರಣಕ್ಕೆ ಪ್ರತಿರೋಧ ತೋರುವಂತಹ ರಾಜಕಾರಣದಲ್ಲಿ, ವಲಸಿಗರ ವಿರುದ್ಧ ರೂಪುಗೊಳ್ಳುತ್ತಿರುವಂತಹ ಆಕ್ರಮಣಕಾರಿ ಧೋರಣೆಗಳಲ್ಲಿ ಮಾನವೀಯತೆ ಮರೆಯಾಗದಿರಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT