ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್‌1ಎನ್‌1: ಶೇಕ್‌ಹ್ಯಾಂಡ್‌ ಬೇಡ, ನಮಸ್ತೆ ಹೇಳಿ

Last Updated 20 ಅಕ್ಟೋಬರ್ 2018, 19:59 IST
ಅಕ್ಷರ ಗಾತ್ರ

ರಾಜ್ಯದ ತುಂಬಾ ಈಗ ಎಚ್‌1ಎನ್‌1 ಹಾವಳಿ ಹೆಚ್ಚಾಗಿದೆ. ಇದರಿಂದ ಹಲವು ಸಾವುಗಳೂ ಸಂಭವಿಸಿವೆ. ಕಾಯಿಲೆ ಸ್ವರೂಪ, ಅದಕ್ಕೆ ಇರುವ ಚಿಕಿತ್ಸಾ ಸೌಲಭ್ಯ ಹಾಗೂ ವಹಿಸಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ್ದಾರೆ ರಾಜೀವ್‌ ಗಾಂಧಿ ಎದೆರೋಗಗಳ ಆಸ್ಪತ್ರೆಯ ನಿರ್ದೇಶಕ ಡಾ. ಸಿ.ನಾಗರಾಜ. ಸಂದರ್ಶನದ ಆಯ್ದಭಾಗ ಇಲ್ಲಿದೆ...

ಏನ್‌ ಸರ್‌ ಇದು ಕಾಯಿಲೆ ಎಚ್‌1ಎನ್‌1, 2009ರಿಂದಲೂ ಕಾಡುತ್ತಲೇ ಇದೆಯಲ್ಲ?

ಋತುಮಾನಕ್ಕೆ ತಕ್ಕಂತೆ ಜ್ವರ ತರುವ ಉಳಿದ ರೋಗಾಣುಗಳಿಗಿಂತ ಭಿನ್ನವಾದ ರೋಗಾಣು ಇದು. ಹಂದಿ, ಹಕ್ಕಿ ಹಾಗೂ ಮಾನವ ರೋಗಾಣುಗಳ ಕೂಡಿಕೆಯಿಂದ (marriage of three diseases) ಉದ್ಭವವಾದ ಈ ಹೊಸ ರೋಗಾಣು ಮನುಷ್ಯರಲ್ಲಿ ಪತ್ತೆಯಾಗಿದ್ದು 2009ರಲ್ಲಿ. ಎಚ್‌1ಎನ್‌1 ದಾಳಿಯನ್ನು ಹಿಮ್ಮೆಟ್ಟಿಸಲು ಈಗ ಔಷಧಿ ಕೂಡ ಲಭ್ಯವಿದೆ. ಇದರಿಂದ ಹರಡುವ ಕಾಯಿಲೆ ಕುರಿತು ಜನ ಯಾವುದೇ ರೀತಿಯಲ್ಲೂ ಆತಂಕಪಡುವ ಅಗತ್ಯವಿಲ್ಲ. ಆದರೆ, ಮುಂಜಾಗ್ರತೆ ಅತ್ಯವಶ್ಯ.

ಸೋಂಕು ಅಂಟಿದ ವ್ಯಕ್ತಿಯಲ್ಲಿ ಏನೆಲ್ಲ ಲಕ್ಷಣಗಳು ಗೋಚರವಾಗುತ್ತವೆ?

ವಿಪರೀತ ಜ್ವರ, ಕೆಮ್ಮು, ಗಂಟಲು ಉರಿತ, ವಾಂತಿ, ಭೇದಿ, ಮೈ–ಕೈ ನೋವು, ಸುಸ್ತು – ಈ ಲಕ್ಷಣಗಳು ಗೋಚರಿಸುತ್ತವೆ. ಮಾಮೂಲಿ ಜ್ವರದಿಂದ ಬಳಲಿದಂತೆ ಕಂಡುಬಂದರೂ ಅದು ತೀವ್ರವಾಗಿ ಪಸರಿಸುತ್ತದೆ. ಯಾವುದೇ ಲಕ್ಷಣ ಕಂಡುಬಂದ ತಕ್ಷಣ ತಡಮಾಡದೆ ವೈದ್ಯರ ಸಲಹೆ ಪಡೆಯುವುದು ತುಂಬಾ ಮುಖ್ಯ.

ಎಚ್‌1ಎನ್‌1 ಜ್ವರ ಹೇಗೆ ಹರಡುತ್ತದೆ?

ಗಾಳಿಯಿಂದ ಹರಡುವಂತಹ ಕಾಯಿಲೆ ಇದು. ಸೋಂಕುಪೀಡಿತ ವ್ಯಕ್ತಿಯು ಕೆಮ್ಮಿದಾಗ ರೋಗಾಣುಗಳು ಗಾಳಿಯ ಸಂಪರ್ಕಕ್ಕೆ ಬಂದು ಸಾಂಕ್ರಾಮಿಕವಾಗಿ ಹರಡುತ್ತಾ ಹೋಗುತ್ತವೆ. ನಮ್ಮ ದೇಶದಲ್ಲಿ ಮಳೆಗಾಲ ಮತ್ತು ಚಳಿಗಾಲದಲ್ಲಿಯೇ ಈ ರೋಗಾಣುಗಳ ಹಾವಳಿ ಜಾಸ್ತಿಯಾಗಿರುವುದು ಕಂಡು ಬಂದಿದೆ. ಜನದಟ್ಟಣೆ ಇರುವಂತಹ ತಾಣಗಳಾದ ರೈಲು, ಬಸ್‌ಗಳಲ್ಲಿ ಈ ಸೋಂಕು ಹರಡುವ ಸಾಧ್ಯತೆ ಹೆಚ್ಚಾಗಿದೆ.

ಸೋಂಕುಪೀಡಿತ ವ್ಯಕ್ತಿಯು ಬಾಯಿಗೆ ಕೈಯಿಟ್ಟು ಕೆಮ್ಮಿ, ಅದೇ ಕೈಯಿಂದ ಬೇರೆಯವರಿಗೆ ಹಸ್ತಲಾಘವ ಮಾಡಿದರೆ, ರೋಗಾಣುವುಳ್ಳ ಕೈಯಿಂದ ಬಾಗಿಲಿನ ಹ್ಯಾಂಡಲ್‌ ಮುಟ್ಟಿದರೆ ಅದರ ಸಂಪರ್ಕಕ್ಕೆ ಬರುವ ಇತರರಿಗೂ ಸೋಂಕು ಹರಡುವ ಸಾಧ್ಯತೆ ಹೆಚ್ಚಾಗಿದೆ. ಸೋಂಕುಪೀಡಿತರು ಶೇಕ್‌ಹ್ಯಾಂಡ್‌ ಮಾಡದೆ ನಮಸ್ತೆ ಹೇಳಬೇಕು.

ಈ ಕಾಯಿಲೆಯೇನು ಮಾರಣಾಂತಿಕವೇ? ಎಚ್‌1ಎನ್‌1 ಅಂದರೆ ಜನಕ್ಕೇಕೆ ಅಷ್ಟೊಂದು ಭಯ?

ರೋಗಾಣು ಅಂಟಿದ 1ರಿಂದ 4 ದಿನಗಳಲ್ಲಿ ಸೂಕ್ತ ಚಿಕಿತ್ಸೆ ನೀಡುವುದು ತುಂಬಾ ಮುಖ್ಯ. ಅದರಲ್ಲೂ ಎರಡನೇ ದಿನವನ್ನು ಸುವರ್ಣ ಅವಧಿ ಎಂದೇ ವೈದ್ಯಲೋಕ ಪರಿಗಣಿಸುತ್ತದೆ. ಆ ಸಂದರ್ಭದಲ್ಲಿ ತಕ್ಕ ಚಿಕಿತ್ಸೆ ನೀಡಿದರೆ ಕಾಯಿಲೆ ತಕ್ಷಣ ತಹಬದಿಗೆ ಬರುತ್ತದೆ. ಆದರೆ, ನಮ್ಮ ಜನ ಜ್ವರ ಬಂದಾಗ ಮೊದಮೊದಲು ನಿರ್ಲಕ್ಷ್ಯ ಮಾಡುತ್ತಾರೆ. ಜ್ವರದ ತೀವ್ರತೆ ಹೆಚ್ಚಾದಾಗ ಆಸ್ಪತ್ರೆಗೆ ತೆರಳುತ್ತಾರೆ.

ಆ ವೇಳೆಗಾಗಲೇ 3–4 ದಿನಗಳು ಕಳೆದಿರುತ್ತವೆ. ತಾಲ್ಲೂಕು ಆಸ್ಪತ್ರೆಗಳಲ್ಲಿ ರೋಗಪತ್ತೆ ಪರೀಕ್ಷಾ ಸೌಲಭ್ಯಗಳು ಇನ್ನೂ ಪೂರ್ಣಪ್ರಮಾಣದಲ್ಲಿ ಲಭ್ಯವಿಲ್ಲ. ಅಲ್ಲಿ ವಿಳಂಬವಾದಷ್ಟೂ ಚಿಕಿತ್ಸೆಗೆ ಇರುವ ಅವಕಾಶ ಕಡಿಮೆಯಾಗಿ ಅಲ್ಲೊಂದು, ಇಲ್ಲೊಂದು ಸಾವು ಸಂಭವಿಸುತ್ತಿವೆ. ಈ ಸಾವುಗಳೇ ಜನರಲ್ಲಿ ಎಚ್‌1ಎನ್‌1 ಬಗೆಗೆ ಭಯ ತರಿಸಿವೆ. ವಾಸ್ತವವಾಗಿ ಇದೇನು ಮಾರಣಾಂತಿಕ ಕಾಯಿಲೆ ಅಲ್ಲ. ಆದರೆ, ಕ್ಷಿಪ್ರವಾಗಿ ಹರಡುವುದರಿಂದ ಉದಾಸೀನ ಸಲ್ಲ.

ಸ್ಟೆರಾಯ್ಡ್‌ಗಳನ್ನು ಬಳಕೆ ಮಾಡುತ್ತಿರುವ ರೋಗಿಗಳ (ಆಸ್ತಮಾ, ಎಚ್‌ಐವಿ ಇತ್ಯಾದಿ) ಮೇಲೆ ಈ ರೋಗಾಣು ಬಹುಬೇಗ ದಾಳಿ ಇಡುತ್ತದೆ. ಹಾಗೆಯೇ ರೋಗನಿರೋಧಕ ಶಕ್ತಿ ಕಡಿಮೆ ಇರುವಂತಹ ಗರ್ಭಿಣಿಯರು, ಮಕ್ಕಳು ಮತ್ತು ವೃದ್ಧರಲ್ಲೂ ಕ್ಷಿಪ್ರವಾಗಿ ಹರಡುತ್ತದೆ. ಹೀಗಾಗಿ ಇಂಥವರಲ್ಲಿ ಎಚ್‌1ಎನ್‌1 ಬಹುಬೇಗ ನಿಯಂತ್ರಣಕ್ಕೆ ಬರುವುದಿಲ್ಲ. ಅಲ್ಲಲ್ಲಿ ನಿರಂತರವಾಗಿ ಸಂಭವಿಸುತ್ತಿರುವ ಸಾವುಗಳು ಹಾಗೂ ಕಾಯಿಲೆಪೀಡಿತರು ಚೇತರಿಸಿಕೊಳ್ಳಲು ಆಗುತ್ತಿರುವ ವಿಳಂಬ ಎರಡೂ ಈ ರೋಗಾಣುವಿನ ಕುರಿತು ಹೆಚ್ಚಿನ ಭಯ ಹುಟ್ಟಿಸಿವೆ.

ನಿಮ್ಮ ಸಂಸ್ಥೆಗೆ ಪ್ರತಿನಿತ್ಯ ಎಷ್ಟು ಪ್ರಕರಣಗಳು ಬರುತ್ತಿವೆ? ಕಾಯಿಲೆಯ ತೀವ್ರತೆ ಹೆಚ್ಚಾಗಿದ್ದು ಯಾವಾಗ?

ನಮ್ಮ ಸಂಸ್ಥೆಗೆ ಪ್ರತಿನಿತ್ಯ ರಾಜ್ಯದ ವಿವಿಧ ಭಾಗಗಳಿಂದ ಸರಾಸರಿ 20 ರೋಗಿಗಳು ಎಚ್‌1ಎನ್‌1 ಚಿಕಿತ್ಸೆಗಾಗಿ ಬರುತ್ತಿದ್ದಾರೆ. ಆದರೆ, ಸ್ಥಳೀಯವಾಗಿ ನೀಡಿದ ಚಿಕಿತ್ಸೆಯಿಂದ ಕಾಯಿಲೆ ನಿಯಂತ್ರಣಕ್ಕೆ ಬಾರದಿದ್ದಾಗ ರೋಗಿಗಳನ್ನು ಇಲ್ಲಿಗೆ ಕಳುಹಿಸಿ ಕೊಡಲಾಗುತ್ತಿದೆ.

ಒಮ್ಮೆ ರೋಗಿಗಳಿಗೆ ಕೃತಕ ಉಸಿರಾಟ ವ್ಯವಸ್ಥೆ ಮಾಡಿದ ಮೇಲೆ ಅವರನ್ನು ಆಸ್ಪತ್ರೆಯಿಂದ ಆಸ್ಪತ್ರೆಗೆ ಸಾಗಿಸಬಾರದು. ಎಚ್‌1ಎನ್‌1ಗೆ ನಮ್ಮ ಸಂಸ್ಥೆಯಲ್ಲಿ ನೀಡಲಾಗುವ ಲಸಿಕೆ ಮತ್ತು ಮಾತ್ರೆ ಎಲ್ಲೆಡೆ ಲಭ್ಯವಿವೆ. ಕೃತಕ ಉಸಿರಾಟ ವ್ಯವಸ್ಥೆಯಲ್ಲಿರುವ ರೋಗಿಗಳನ್ನು ಬೇರೆ ಆಸ್ಪತ್ರೆಗೆ ಕಳುಹಿಸಿದರೆ ಅಮೂಲ್ಯ ಸಮಯ ವ್ಯರ್ಥವಾಗಿ ಅವರ ಸಾವು ಸಂಭವಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ. ತಡವಾಗಿ ಬಂದಿದ್ದರಿಂದಲೇ ನಮ್ಮ ಸಂಸ್ಥೆಯಲ್ಲಿ ಹತ್ತು ಜನ ಸೋಂಕುಪೀಡಿತರು ಸಾವನ್ನಪ್ಪಿದ್ದಾರೆ.

ಸೋಂಕಿನ ತೀವ್ರತೆಗೆ ಅನುಗುಣವಾಗಿ ರೋಗಿಗಳನ್ನು ಎ, ಬಿ, ಸಿ ಎಂದು ಮೂರು ವಿಧದಲ್ಲಿ ವಿಂಗಡಿಸಿ ನಮ್ಮಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಎಚ್‌1ಎನ್‌1 ಲಕ್ಷಣ ಕಂಡೊಡನೆ ಅದರ ಮಾತ್ರೆಗಳನ್ನು ಕೊಡಲು ಆರಂಭಿಸಬೇಕು. ಪರೀಕ್ಷಾ ವರದಿಗಾಗಿ ಕಾಯುತ್ತಾ ಕೂರಬಾರದು. ಈ ಮಾತ್ರೆಗಳಿಂದ ಯಾವುದೇ ಅಡ್ಡ ಪರಿಣಾಮ ಇಲ್ಲ. ಅಲ್ಲದೆ, ಜೀವ ಉಳಿಸುವುದು ಮುಖ್ಯವಾಗಿರುತ್ತದೆ. ಸೆಪ್ಟೆಂಬರ್‌ ಹಾಗೂ ಅಕ್ಟೋಬರ್‌ ತಿಂಗಳುಗಳಲ್ಲಿ ರೋಗದ ತೀವ್ರತೆ ಹೆಚ್ಚಾಗಿರುವುದು ಕಂಡುಬಂದಿದೆ.

ಸೋಂಕುಪೀಡಿತರಿಗೆ ಮನೆಯಲ್ಲಿ ಏನು ಉಪಚಾರ ಮಾಡಬೇಕು?

ಸೋಂಕುಪೀಡಿತರು ಕೋಣೆಯಲ್ಲಿ ವಿಶ್ರಾಂತಿ ಪಡೆಯುವಂತೆ ನೋಡಿಕೊಳ್ಳಬೇಕು. ವೈದ್ಯರ ಸಲಹೆಯಂತೆ ಕಾಲಕಾಲಕ್ಕೆ ಔಷಧಿ–ಮಾತ್ರೆ ಕೊಡಬೇಕು. ಅವರು ಬಳಸಿದ ಬಟ್ಟೆ ಹಾಗೂ ಇತರ ಸಾಮಗ್ರಿಗಳನ್ನು ನೀರಲ್ಲಿ ತೊಳೆಯದೆ ಬಳಕೆ ಮಾಡಬಾರದು. ರಕ್ತದೊತ್ತಡ ಕಡಿಮೆಯಾದರೆ, ರಕ್ತದ ವಾಂತಿಯಾದರೆ ಆಸ್ಪತ್ರೆಗೆ ದಾಖಲಿಸಬೇಕು.

ರಾಜ್ಯದ ಎಲ್ಲೆಡೆ ಸೋಂಕು ಪರೀಕ್ಷಾ ಕೇಂದ್ರಗಳು ಸಮರ್ಪಕವಾಗಿವೆಯೇ? ಔಷಧಿ ಕೊರತೆ ಇಲ್ಲ ಎನ್ನುವ ಆರೋಗ್ಯ ಇಲಾಖೆಯ ಅಧಿಕಾರಿಗಳ ಹೇಳಿಕೆ ನಿಜವೇ?

ಸೋಂಕು ಪರೀಕ್ಷಾ ಕೇಂದ್ರಗಳು ರಾಜ್ಯದ ಎಲ್ಲೆಡೆ ಸಮರ್ಪಕ ಪ್ರಮಾಣದಲ್ಲಿ ಇಲ್ಲ. ವಿಶೇಷವಾಗಿ ಉತ್ತರ ಕರ್ನಾಟಕದಲ್ಲಿ ಅವುಗಳ ಕೊರತೆ ಹೆಚ್ಚಾಗಿದೆ. ಆರೋಗ್ಯ ಸಚಿವರು ಕರೆದಿದ್ದ ಉನ್ನತ ಮಟ್ಟದ ಸಭೆಯಲ್ಲಿ ಈ ಸಂಬಂಧ ವ್ಯಾಪಕ ಚರ್ಚೆಯಾಗಿದೆ. ಒಂದೊಂದು ಕೇಂದ್ರ ತೆರೆಯಲು ಸರಾಸರಿ ₹ 25 ಲಕ್ಷ ಬೇಕಾಗುತ್ತದೆ. ಅಗತ್ಯವಿದ್ದ ಕಡೆಗಳಲ್ಲಿ ತೆರೆಯುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಸೂಚನೆಯನ್ನೂ ನೀಡಿದ್ದಾರೆ. ಔಷಧಿ ಕೊರತೆ ಕುರಿತು ಪತ್ರಿಕಾ ವರದಿಗಳನ್ನು ನಾನೂ ಗಮನಿಸಿದ್ದೇನೆ. ಅಗತ್ಯ ಪ್ರಮಾಣದ ಲಸಿಕೆ ಒದಗಿಸುವಂತೆ ನಾನೂ ಸಭೆಯಲ್ಲಿ ಕೋರಿದ್ದೆ. ಎಲ್ಲಿಯೂ ಔಷಧಿಯ ಕೊರತೆ ಇಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕಾಯಿಲೆ ತಡೆಗಟ್ಟುವ ನಿಟ್ಟಿನಲ್ಲಿ ಈಗ ಆಗಬೇಕಾದುದು ಏನು?

ಎಚ್‌1ಎನ್‌1 ರೋಗಾಣು ಬೆಳಕಿಗೆ ಬಂದು ಹತ್ತು ವರ್ಷಗಳು ಆಗುತ್ತಾ ಬಂದಿದ್ದರೂ ಜನಜಾಗೃತಿ ಸಂಪೂರ್ಣವಾಗಿ ಮೂಡಿಲ್ಲ. ಈ ನಿಟ್ಟಿನಲ್ಲಿ ಸರ್ಕಾರ ಹಾಗೂ ಸಂಘ–ಸಂಸ್ಥೆಗಳು ಪ್ರಚಾರ ಕಾರ್ಯ ಕೈಗೊಂಡಿವೆ. ಆ ಯತ್ನಗಳು ಇನ್ನಷ್ಟು ಹೆಚ್ಚಬೇಕಿವೆ. ಆರೋಗ್ಯ ಕಾರ್ಯಕರ್ತರಲ್ಲೂ ಮಾಹಿತಿ ಕೊರತೆ ಇದೆ. ಎಲ್ಲ ಹಂತಗಳಲ್ಲೂ ಅರಿವು ಮೂಡಿಸುವ ಕಾರ್ಯ ಆಗಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT