ಹಾಶಿಂಪುರದ ನರಮೇಧಕ್ಕೆ ಕೊನೆಗೂ ತಾರ್ಕಿಕ ಅಂತ್ಯ

7

ಹಾಶಿಂಪುರದ ನರಮೇಧಕ್ಕೆ ಕೊನೆಗೂ ತಾರ್ಕಿಕ ಅಂತ್ಯ

Published:
Updated:
Deccan Herald

ಹಾಶಿಂಪುರ ನರಮೇಧ ಪ್ರಕರಣ ಕೊನೆಗೂ ಒಂದು ತಾರ್ಕಿಕ ಅಂತ್ಯ ಮುಟ್ಟಿದೆ. ನರಮೇಧ ನಡೆಸಿದ ಪ್ರಾಂತೀಯ ಸಶಸ್ತ್ರ ಪಡೆಯ (ಪಿಎಸಿ) 16 ಮಂದಿಗೆ ದೆಹಲಿ ಹೈಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ. ಮೂವತ್ತೊಂದು ವರ್ಷಗಳ ನಂತರ ದೊರೆತಿರುವ ಈ ನ್ಯಾಯ ನಮ್ಮ ನ್ಯಾಯದಾನ ವ್ಯವಸ್ಥೆಯ ಮಟ್ಟಿಗೆ ಕೆಲ ಮಟ್ಟಿಗಿನ ಭರವಸೆಯನ್ನು ಮೂಡಿಸಿರುವುದರ ಜೊತೆಗೆ ವ್ಯವಸ್ಥಿತ ನರಮೇಧಗಳ ತನಿಖೆ ಮತ್ತು ಅದರ ನಂತರ ಕೈಗೊಳ್ಳಲಾಗುವ ಕ್ರಮಗಳ ಕುರಿತ ಹಲವು ಪ್ರಶ್ನೆಗಳನ್ನೂ ಎತ್ತಿದೆ. 1987ರ ಮಾರ್ಚ್‌ನಿಂದ ಜೂನ್‌ತನಕ ಮೀರಠ್‌ನಲ್ಲೇ ನಡೆದ ಕೋಮುಗಲಭೆಗಳಲ್ಲಿ 350 ಮಂದಿ ಪ್ರಾಣ ಕಳೆದುಕೊಂಡರು. ಗಲಭೆಯ ನಿಯಂತ್ರಣಕ್ಕಾಗಿ ಪ್ರಾಂತೀಯ ಸಶಸ್ತ್ರ ಪಡೆಗಳನ್ನು ಕರೆಯಿಸಲಾಗಿತ್ತು.

1987ರ ಮೇ 22ರ ಸಂಜೆ ಹಾಶಿಂಪುರ ಮೊಹಲ್ಲಾದ ಮೇಲೆ ದಾಳಿ ಮಾಡಿದ ಪಿಎಸಿಯ ತುಕಡಿಯೊಂದು ಗ್ರಾಮದ 45 ಮಂದಿ ಮುಸ್ಲಿಮರನ್ನು ಅಪಹರಿಸಿತ್ತು. ಇವರಲ್ಲಿ ಹೆಚ್ಚಿನವರನ್ನು ಗುಂಡು ಹಾರಿಸಿ ಕೊಂದು ಶವಗಳನ್ನು ಗಂಗಾ ಮೇಲ್ದಂಡೆ ನಾಲೆಗೆ ಎಸೆಯಲಾಗಿತ್ತು. ಪೊಲೀಸರ ಗುಂಡೇಟು ತಿಂದರೂ ಐದು ಮಂದಿ ಪ್ರಾಣ ಉಳಿಸಿಕೊಂಡಿದ್ದರು. ಸಶಸ್ತ್ರ ಪಡೆಗಳು ನಡೆಸಿದ ಈ ನರಮೇಧ ಬೆಳಕಿಗೆ ಬಂದ ಮೇಲೆ ನಡೆದ ತನಿಖೆಯಲ್ಲಿ 38 ಮಂದಿಯ ಸಾವನ್ನು ಖಚಿತಪಡಿಸಲಾಯಿತು.

22 ಮಂದಿಯ ಮೃತದೇಹ ಸಿಗಲೇ ಇಲ್ಲ. ಈ ಸಂಗತಿ ಮಾಧ್ಯಮಗಳಲ್ಲಿ ಬಯಲಾಯಿತು. ಈ ಪ್ರಕರಣದ ಕುರಿತು ತನಿಖೆಯನ್ನು ಆರಂಭಿಸುವುದಕ್ಕೆ ಮತ್ತೊಂದು ವರ್ಷ ಬೇಕಾಯಿತು. 1988ರಲ್ಲಿ ಉತ್ತರಪ್ರದೇಶ ಸರ್ಕಾರ ತನಿಖಾ ಸಮಿತಿಯೊಂದನ್ನು ನೇಮಿಸಿ 1994ರಲ್ಲಿ ವಿವರವಾದ ವರದಿಯನ್ನು ಪಡೆಯಿತಾದರೂ ಅದನ್ನು ಬಹಿರಂಗಪಡಿಸುವುದಕ್ಕಾಗಲೀ ಅದನ್ನು ಆಧಾರವಾಗಿಟ್ಟುಕೊಂಡು ತಪ್ಪಿತಸ್ಥರ ಮೇಲೆ ಕ್ರಮಕೈಗೊಳ್ಳುವುದಕ್ಕಾಗಲೀ ಮುಂದಾಗಲಿಲ್ಲ.

ಹತ್ಯೆಗೀಡಾದವರ ಕುಟುಂಬಗಳು ಮತ್ತು ಮಾನವ ಹಕ್ಕು ಸಂಘಟನೆಗಳು ನ್ಯಾಯಾಲಯಕ್ಕೆ ಹೋದ ಮೇಲೆ 1996ರಲ್ಲಿ ಆರೋಪಪಟ್ಟಿಯನ್ನು ಸಲ್ಲಿಸಲಾಯಿತು. ಅಲ್ಲಿಂದ ಮುಂದಕ್ಕೆ ನಡೆದದ್ದು ಆರೋಪಿಗಳನ್ನು ರಕ್ಷಿಸುವ ಒಂದು ದೊಡ್ಡ ನಾಟಕ. ಎಷ್ಟೋ ಸಾಕ್ಷ್ಯಗಳು ನ್ಯಾಯಾಲಯವನ್ನೇ ತಲುಪಲಿಲ್ಲ. ಗುಂಡೇಟು ತಿಂದು ಬದುಕುಳಿದಿದ್ದ ಐವರ ಹೇಳಿಕೆಗಳೂ ಉಪಯೋಗಕ್ಕೆ ಬರಲಿಲ್ಲ.

2015ರಲ್ಲಿ ಗಾಜಿಯಾಬಾದ್‌ನ ವಿಚಾರಣಾ ನ್ಯಾಯಾಲಯ ಎಲ್ಲಾ ಆರೋಪಿಗಳನ್ನೂ ಖುಲಾಸೆಗೊಳಿಸಿದಾಗ ಸಶಸ್ತ್ರಪಡೆಗಳು, ಪೊಲೀಸ್ ವ್ಯವಸ್ಥೆ ನಡೆಸುವ ನರಮೇಧಗಳ ಆರೋಪಿಗಳಿಗೆ ಶಿಕ್ಷೆಯಾಗುವುದೇ ಇಲ್ಲ ಎಂಬ ನಿರಾಸೆ ಎಲ್ಲರಲ್ಲೂ ಮನೆ ಮಾಡಿತ್ತು. ಆದರೆ ನ್ಯಾಯದಾನ ವ್ಯವಸ್ಥೆಯ ಬಗ್ಗೆ ಭರವಸೆ ಹುಟ್ಟಿಸುವಂತೆ ಹೊಸ ಸಾಕ್ಷ್ಯಗಳನ್ನು ಮಂಡಿಸಲು ದೆಹಲಿ ಹೈಕೋರ್ಟ್ ಅವಕಾಶ ನೀಡಿತು.

ಪಿಎಸಿಯ ವಾಹನಗಳ ಸಂಚಾರವನ್ನು ದಾಖಲು ಮಾಡುವ ಡೈರಿ ಇತ್ಯಾದಿ ಹೊಸ ಸಾಕ್ಷ್ಯಗಳು ಸ್ಥಾನ ಪಡೆದುಕೊಳ್ಳುವುದರೊಂದಿಗೆ ಆರೋಪ ಸಾಬೀತಾಗುವ ಸಾಧ್ಯತೆಗಳು ಹೆಚ್ಚಾದವು. ಕೊನೆಗೂ 16 ಮಂದಿಗೆ ಜೀವಾವಧಿ ಶಿಕ್ಷೆಯಾಗಿದೆ. ಹೈಕೋರ್ಟ್‌ನ ಕ್ರಮ ಶ್ಲಾಘನಾರ್ಹ ಎಂದು ಹೇಳುವಾಗಲೇ ಪ್ರಕರಣದ ತನಿಖೆ ಮತ್ತು ವಿಚಾರಣೆಯಲ್ಲಿ 31 ವರ್ಷಗಳೇ ಉರುಳಿ ಹೋಗಿವೆ ಎಂಬುದನ್ನೂ ನೆನಪಿಸಿಕೊಳ್ಳಬೇಕಾಗಿದೆ. ಇದು ಒಂದು ಪ್ರಕರಣಕ್ಕೆ ಸಂಬಂಧಿಸಿದ ವಿಚಾರವಷ್ಟೇ ಅಲ್ಲ.

1984ರ ಸಿಖ್ ನರಮೇಧ, 1983ರ ನೆಲ್ಲಿ ನರಮೇಧ, 1992-93ರ ಮುಂಬೈ ಗಲಭೆ, 2002ರ ಗುಜರಾತ್ ನರಮೇಧಗಳೆಲ್ಲವೂ ಈ ಪಟ್ಟಿಯಲ್ಲೇ ಬರುತ್ತವೆ. ಈ ಬಗೆಯ ದೊಡ್ಡ ಪ್ರಮಾಣದ ವ್ಯವಸ್ಥಿತ ಕೊಲೆಗಳಲ್ಲಿ ಪಾಲ್ಗೊಳ್ಳುವವರು ಕಾನೂನಿನ ಕರಗಳಿಂದ ಸುಲಭದಲ್ಲಿ ತಪ್ಪಿಸಿಕೊಳ್ಳುವಂಥ ಸ್ಥಿತಿ ನಮ್ಮಲ್ಲಿದೆ ಎಂಬುದನ್ನು ಒಪ್ಪಲೇಬೇಕಾಗುತ್ತದೆ. ಕೆಳಹಂತದ ನ್ಯಾಯಾಲಯಗಳು ಪ್ರಕರಣವನ್ನು ನೋಡುವ ಮತ್ತು ಸಾಕ್ಷ್ಯಗಳನ್ನು ಪರಿಗಣಿಸುವ ವಿಧಾನದಲ್ಲಿರುವ ತಪ್ಪುಗಳೂ ಈ ಸ್ಥಿತಿಗೆ ಕಾರಣ ಎಂಬುದನ್ನು ಪ್ರಸಕ್ತ ಪ್ರಕರಣವೇ ಹೇಳುತ್ತಿದೆ. ಹಾಶಿಂಪುರ ನರಮೇಧ ಪ್ರಕರಣ ಒಂದು ಹಂತದಲ್ಲಿ ಸಂಪೂರ್ಣ ನಿರಾಶಾದಾಯಕವಾದ ಅಂತ್ಯಕ್ಕೆ ತಲುಪಿತ್ತು.

ಆದರೆ ನ್ಯಾಯಾಂಗ, ಮಾನವ ಹಕ್ಕುಗಳ ಆಯೋಗ ಮತ್ತು ಮಾಧ್ಯಮಗಳು ತಮ್ಮ ಕರ್ತವ್ಯಗಳನ್ನು ಸರಿಯಾಗಿ ನಿರ್ವಹಿಸಿದ್ದರ ಪರಿಣಾಮವಾಗಿ ಈ ಪ್ರಕರಣದಲ್ಲಿ ತಡವಾಗಿಯಾದರೂ ನ್ಯಾಯ ದೊರೆತಿದೆ. ಪೊಲೀಸರೂ ಸೇರಿದಂತೆ ಭದ್ರತಾ ಪಡೆಗಳು ನಡೆಸುವ ದೌರ್ಜನ್ಯಗಳ ವಿಷಯದಲ್ಲಿ ಆಡಳಿತ ವ್ಯವಸ್ಥೆ ಹೆಚ್ಚು ಸಂವೇದನಾಶೀಲವಾಗಬೇಕಾದ ಅಗತ್ಯವಿದೆ. ಇಂಥ ಪ್ರಕರಣಗಳ ತುರ್ತು ವಿಚಾರಣೆ ಮತ್ತು ಶಿಕ್ಷೆ ಕೂಡಾ ದೌರ್ಜನ್ಯವನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂಬುದನ್ನು ಮರೆಯಬಾರದು.

ಬರಹ ಇಷ್ಟವಾಯಿತೆ?

 • 10

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !