ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಸುದ್ದಿವಾಹಿನಿಗಳಲ್ಲಿ ದ್ವೇಷದ ಮಾತು.. ಹತ್ತಿಕ್ಕಬೇಕಾದ ಪ್ರವೃತ್ತಿ

Last Updated 7 ಅಕ್ಟೋಬರ್ 2022, 0:00 IST
ಅಕ್ಷರ ಗಾತ್ರ

ದೇಶದ ಕೆಲವು ಟಿ.ವಿ. ಸುದ್ದಿವಾಹಿನಿಗಳ ಮೂಲಕ ದ್ವೇಷದ ಮಾತುಗಳನ್ನು ಪ್ರಸಾರ ಮಾಡುವುದರ ವಿಚಾರವಾಗಿ ಸುಪ್ರೀಂ ಕೋರ್ಟ್ ತೀವ್ರ ಕಳವಳ ವ್ಯಕ್ತಪಡಿಸಿರುವುದು ಸರಿಯಾಗಿಯೇ ಇದೆ. ಇಂತಹ ಮಾತುಗಳನ್ನು ಪ್ರಸಾರ ಮಾಡುತ್ತಿರುವ ಕಾರಣದಿಂದಾಗಿ ದೇಶದ ಸಾಮಾಜಿಕ ಹಾಗೂ ರಾಜಕೀಯ ಸಂವಾದಗಳ ಮೇಲೆ ಆಗುತ್ತಿರುವ ದುಷ್ಪರಿಣಾಮ ಕಡಿಮೆಯೇನೂ ಅಲ್ಲ. ವಾಸ್ತವದಲ್ಲಿ ಇಂತಹ ಮಾತುಗಳು ಧರ್ಮ, ಸಮುದಾಯ, ಜಾತಿ ಮತ್ತು ಇತರ ವರ್ಗಗಳ ಆಧಾರದಲ್ಲಿ ಸಮಾಜವನ್ನು ಒಡೆಯುತ್ತಿವೆ, ಇರುವ ಕಂದಕವನ್ನು ಹೆಚ್ಚಿಸುತ್ತಿವೆ, ಬಿಕ್ಕಟ್ಟು ಹಾಗೂ ಸಂಘರ್ಷಗಳನ್ನು ಜಾಸ್ತಿ ಮಾಡುತ್ತಿವೆ. ಆ ಮೂಲಕ ದೇಶದ ಸಾಮಾಜಿಕ ಬೆಸುಗೆಯನ್ನು ಹಾಳು ಮಾಡುತ್ತಿವೆ. ಟಿ.ವಿ. ಸುದ್ದಿವಾಹಿನಿಗಳು ದ್ವೇಷದ ಮಾತುಗಳನ್ನು ಹರಡುವ ಪ್ರಧಾನ ಮಾಧ್ಯಮ ಆಗುತ್ತಿವೆ ಎಂದು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾದ ಕೆ.ಎಂ. ಜೋಸೆಫ್ ಹಾಗೂ ಹೃಷಿಕೇಶ್ ರಾಯ್ ಅವರಿದ್ದ ಪೀಠ ಹೇಳಿದೆ. ಅಲ್ಲದೆ, ‘ಇಂಥವೆಲ್ಲ ನಡೆಯುತ್ತಿದ್ದರೂ ಕೇಂದ್ರ ಸರ್ಕಾರವು ಮೌನವಾಗಿ ನೋಡುತ್ತಿರುವುದು ಏಕೆ’ ಎಂದು ಪ್ರಶ್ನಿಸಿದೆ. ದ್ವೇಷದ ಮಾತುಗಳ ಪ್ರಸಾರದ ವಿಚಾರವಾಗಿ ಸುಪ್ರೀಂ ಕೋರ್ಟ್‌ ಕಳವಳ ವ್ಯಕ್ತಪಡಿಸಿರುವುದು ಇದು ಮೊದಲೇನೂ ಅಲ್ಲ. ದ್ವೇಷ ಭಾಷಣವನ್ನು ಹತ್ತಿಕ್ಕಲು ಕೈಗೊಂಡ ಕ್ರಮಗಳು ಯಾವುವು ಎಂಬುದನ್ನು ವಿವರಿಸುವಂತೆ ಸುಪ್ರೀಂ ಕೋರ್ಟ್ ಕೆಲವು ವಾರಗಳ ಹಿಂದೆ ರಾಜ್ಯ ಸರ್ಕಾರಗಳಿಗೆ ಸೂಚಿಸಿತ್ತು. ಈಗ, ರಾಜ್ಯಗಳಿಂದ ದೊರೆತಿರುವ ಪ್ರತಿಕ್ರಿಯೆ ಆಧರಿಸಿ ವರದಿಯೊಂದನ್ನು ಸಿದ್ಧಪಡಿಸುವಂತೆ ಅದು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಹಲವು ಟಿ.ವಿ. ಸುದ್ದಿವಾಹಿನಿಗಳಲ್ಲಿ ದ್ವೇಷ ಭಾಷಣವು ಈಗ ಮಾಮೂಲು ಎಂಬಂತಾಗಿದೆ. ಹಿಂದೆ ಮಾತಿನ ಮೇಲೆ ನಿಯಂತ್ರಣ ಇತ್ತು. ಈಗ ಅದು ಇಲ್ಲವಾಗಿದೆ. ಅಂತಹ ಮಾತುಗಳು ಈಗ ಯಾವ ತಡೆ ಇಲ್ಲದೆ ಪ್ರಸಾರ ಆಗುತ್ತಿವೆ. ಘಟನೆಗಳ ವರದಿಗಾರಿಕೆಯು ಎಲ್ಲ ಸಂದರ್ಭಗಳಲ್ಲಿಯೂ ವಾಸ್ತವ ಆಧರಿಸಿ ಇರುವುದಿಲ್ಲ. ಹಲವು ಸಂದರ್ಭಗಳಲ್ಲಿ ವರದಿಗಾರಿಕೆಯು ಪಕ್ಷಪಾತಿಯಾಗಿ ಇರುತ್ತದೆ. ಕೆಲವು ಸುದ್ದಿವಾಹಿನಿಗಳ ನಿರೂಪಕರು ನಿಷ್ಪಕ್ಷಪಾತ ಧೋರಣೆಯಿಂದ, ನ್ಯಾಯಸಮ್ಮತವಾಗಿ ವರ್ತಿಸುವುದಿಲ್ಲ. ಟಿ.ವಿ. ಸುದ್ದಿವಾಹಿನಿಗಳ ಮೂಲಕ ಪ್ರಸಾರವಾಗುವ ಚರ್ಚೆಗಳು ಭಾವನಾತ್ಮಕವಾಗಿಯೂ ಪ್ರಚೋದನಕಾರಿ ಆಗಿಯೂ ಇರುತ್ತವೆ. ನಿರೂಪಕರು ಇಂಥವುಗಳಲ್ಲಿ ತಾವೂ ಭಾಗಿಯಾಗಿರುತ್ತಾರೆ. ದ್ವೇಷದ ಮಾತುಗಳ ಪ್ರಸಾರದಿಂದ ಲಾಭ ಪಡೆದುಕೊಳ್ಳುವ, ಸಮಾಜದ ಧ್ರುವೀಕರಣದಿಂದ ಪ್ರಯೋಜನ ಪಡೆದುಕೊಳ್ಳುವ ಹಿತಾಸಕ್ತ ಗುಂಪುಗಳ ನಿಯಂತ್ರಣದಲ್ಲಿ ಹಲವು ವಾಹಿನಿಗಳು ಇವೆ. ಇವೆಲ್ಲವುಗಳ ಹಿಂದೆ ವಾಣಿಜ್ಯಿಕ ಆಯಾಮವೂ ಇದೆ. ಟಿಆರ್‌ಪಿ ಲೆಕ್ಕಾಚಾರ ಇಲ್ಲಿದೆ. ಭಾವನೆಗಳು ಅತಿಯಾದಾಗ ಅವು ಕೂಡ ಸರಕಿನಂತೆ ಬಿಕರಿಯಾಗುತ್ತವೆ. ನ್ಯಾಯಮೂರ್ತಿ ರಾಯ್ ಅವರು ಹೇಳಿದಂತೆ, ‘ದ್ವೇಷವು ಲಾಭ ತಂದುಕೊಡುತ್ತದೆ’. ಈ ಬಗೆಯ ಕಾರ್ಯಕ್ರಮಗಳು ವೀಕ್ಷಕರನ್ನು ಸೆಳೆಯುತ್ತವೆ, ವಾಹಿನಿಗಳ ನಡುವೆ ಇಂತಹ ಕಾರ್ಯಕ್ರಮಗಳ ವಿಚಾರವಾಗಿಯೇ ಸ್ಪರ್ಧೆ ಏರ್ಪಡುತ್ತದೆ. ಹೆಚ್ಚಿನ ವೀಕ್ಷಕರನ್ನು ಸೆಳೆಯುವ ಉದ್ದೇಶದಿಂದ ಹಲವು ವಾಹಿನಿಗಳು ‘ಇಂದಿಗಿಂತ ನಾಳೆ ಹೆಚ್ಚು ಗದ್ದಲ ಉಂಟುಮಾಡಬೇಕು, ಇಂದಿಗಿಂತ ನಾಳೆ ಹೆಚ್ಚು ಅತಿರೇಕದಿಂದ ವರ್ತಿಸಬೇಕು, ಇತರ ವಾಹಿನಿಗಳಿಗಿಂತ ತಾನು ಹೆಚ್ಚು ಕೆಟ್ಟದ್ದಾಗಿರಬೇಕು’ ಎಂಬಂತೆ ವರ್ತಿಸುತ್ತಿವೆ.

ದ್ವೇಷದ ಮಾತುಗಳ ಪ್ರಸಾರದ ವಿಚಾರವಾಗಿ ಸರ್ಕಾರ ಮೌನವಾಗಿ ಇರುವುದು ಏಕೆ ಎಂದು ಕೋರ್ಟ್‌ ಕೇಳಿರುವ ಪ್ರಶ್ನೆಗೆ ಉತ್ತರ ಸರಳವಾಗಿದೆ. ಆಡಳಿತಾರೂಢ ಪಕ್ಷವು ದ್ವೇಷದ ಮಾತುಗಳಿಂದ ಪ್ರಯೋಜನ ಪಡೆದುಕೊಂಡಿದೆ. ಪಕ್ಷದ ನೇತೃತ್ವದ ಸರ್ಕಾರದಿಂದಲೇ ಆ ಮಾತುಗಳು ಪೋಷಣೆ ಪಡೆದಿವೆ. ಭಾಷಣಕ್ಕೆ ಉತ್ತೇಜನ ನೀಡುವ ಹಾಗೂ ದ್ವೇಷದ ಭಾಷಣಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ತಂತ್ರಗಾರಿಕೆಯನ್ನು ಕರಗತ ಮಾಡಿಕೊಳ್ಳುವ ವ್ಯವಸ್ಥೆಯನ್ನು ಕಟ್ಟುವಲ್ಲಿ ಪಕ್ಷ ಮತ್ತು ಸರ್ಕಾರದ ಪಾತ್ರ ಇದೆ. ದ್ವೇಷದ ಭಾಷಣಗಳನ್ನು ನಿಯಂತ್ರಿಸಲು ಸರ್ಕಾರವು ಮಾರ್ಗಸೂಚಿಗಳನ್ನು ರೂಪಿಸುವವರೆಗೆ ತಾನೇ ಕೆಲವು ಮಾರ್ಗಸೂಚಿಗಳನ್ನು ರೂಪಿಸುವ ಬಗ್ಗೆ ಪರಿಶೀಲನೆ ನಡೆಸುವ ಸಾಧ್ಯತೆ ಇದೆ ಎಂದು ಕೋರ್ಟ್ ಹೇಳಿದೆ. ಕೆಲಸದ ಸ್ಥಳಗಳಲ್ಲಿ ಲೈಂಗಿಕ ಕಿರುಕುಳ ತಡೆಯಲು ವಿಶಾಖ ಮಾರ್ಗಸೂಚಿಯನ್ನು ಕೋರ್ಟ್ ಹೊರಡಿಸಿದ್ದು ಕೂಡ ಇದೇ ಮಾದರಿಯಲ್ಲಿಯೇ. ಕೋರ್ಟ್‌ನ ನಡೆ ಸ್ವಾಗತಾರ್ಹ. ಆದರೆ ದ್ವೇಷದ ಮಾತುಗಳು, ಭಾಷಣದ ವಿಚಾರವಾಗಿ ಸರ್ಕಾರವು ಕಾನೂನು ರೂಪಿಸುತ್ತದೆ ಎಂದು ನಿರೀಕ್ಷಿಸಲು ಆಗದು. ಒಂದು ವೇಳೆ ಸರ್ಕಾರ ಕಾನೂನು ರೂಪಿಸಿದರೂ ಅದು ಪರಿಣಾಮಕಾರಿ ಆಗಿರುತ್ತದೆ ಎಂದು ಬಯಸಲು ಆಗದು. ಈಗಾಗಲೇ ಜಾರಿಯಲ್ಲಿ ಇರುವ ಕಾನೂನುಗಳನ್ನು ಬಳಸಿಯೂ ದ್ವೇಷದ ಭಾಷಣಗಳನ್ನು ನಿಯಂತ್ರಿಸಲು ಸಾಧ್ಯವಿದೆ. ಆದರೆ, ಅವುಗಳ ಬಳಕೆ ಆಗುತ್ತಿಲ್ಲ ಎಂಬುದು ಇಲ್ಲಿ ಗಮನಿಸಬೇಕಾದ ಅಂಶ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT