ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಹಿಜಾಬ್ ಮೇಲಿನ ನಿರ್ಬಂಧ; ಹೆಣ್ಣುಮಕ್ಕಳ ಶಿಕ್ಷಣಕ್ಕೆ ಅಡ್ಡಿಯಾಗದಿರಲಿ

Last Updated 16 ಮಾರ್ಚ್ 2022, 22:50 IST
ಅಕ್ಷರ ಗಾತ್ರ

ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಹಿಜಾಬ್ ಧರಿಸುವುದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ನೀಡಿರುವ ಆದೇಶವು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಆದೇಶವು ನಿರಾಶಾದಾಯಕವಾಗಿದೆ. ‘ಸಕಾರಣವಾದ ಅವಕಾಶ’ಗಳು ಹಾಗೂ ‘ಸಕಾರಣವಾದ ನಿರ್ಬಂಧ’ಗಳ ನಡುವೆ ಹೈಕೋರ್ಟ್‌, ತನ್ನ ಅರಿವನ್ನು ಬಳಸಿ ಎರಡನೆಯದನ್ನು ಆಯ್ಕೆ ಮಾಡಿಕೊಂಡಿದೆ.

ದೇಶದ ಸಂವಿಧಾನ ರೂಪಿಸಿದವರು ವೈಯಕ್ತಿಕ ಹಕ್ಕುಗಳಿಗೆ ಹೆಚ್ಚಿನ ಪ್ರಾಧಾನ್ಯ ನೀಡುವ ಮನಸ್ಸು ಹೊಂದಿದ್ದರು. ಅವುಗಳನ್ನು ಹತ್ತಿಕ್ಕುವುದಕ್ಕೆ ಪ್ರಭುತ್ವಕ್ಕೆ ನೀಡುವ ಹಕ್ಕುಗಳಿಗಿಂತ ಹೆಚ್ಚಿನ ಪ್ರಾಧಾನ್ಯ ಕೊಡಲು ಅವರ ಒಲವು ಇತ್ತು. ಹಿಜಾಬ್ ಧರಿಸುವುದು ಅತ್ಯಗತ್ಯವಾದ ಧಾರ್ಮಿಕ ಆಚರಣೆ ಅಲ್ಲ ಎಂದು ಹೈಕೋರ್ಟ್‌ ತೀರ್ಮಾನ ಮಾಡುವುದಕ್ಕೆ ಅಗತ್ಯ ಆಧಾರಗಳು ಇದ್ದಿರಬಹುದು.

ಹೀಗಿದ್ದರೂ, ಆ ಆಧಾರಗಳನ್ನು ಸಾಂವಿಧಾನಿಕತೆಯ ಒರೆಗಲ್ಲಿಗೆ ಹಾಕಿ ನೋಡಬೇಕಿತ್ತು. ಸಾಂಸ್ಥಿಕ ಸಮವಸ್ತ್ರದಲ್ಲಿ ಹಿಜಾಬ್‌ ಧರಿಸಲು ಅವಕಾಶ ನೀಡಲು ಏನೆಲ್ಲ ಅಗತ್ಯವಿದೆಯೋ ಅವೆಲ್ಲವನ್ನೂ ದೇಶದ ಸಂವಿಧಾನವು ನೀಡಿದೆ– ಧಾರ್ಮಿಕ ಆಚರಣೆಗಳ ಹಕ್ಕು, ಅಭಿವ್ಯಕ್ತಿ ಸ್ವಾತಂತ್ರ್ಯ, ಖಾಸಗಿತನದ ಹಕ್ಕು, ಶಿಕ್ಷಣದ ಹಕ್ಕು... ಇವೆಲ್ಲ ಸಂವಿಧಾನದ ಭಾಗ. ಈ ಹಕ್ಕುಗಳನ್ನು ಸೀಮಿತ ದೃಷ್ಟಿಕೋನದಿಂದ ಅರ್ಥೈಸಿದಾಗ ಮಾತ್ರ ‘ಸಕಾರಣವಾದ ಅವಕಾಶ’ಗಳನ್ನು ನಿರಾಕರಿಸಲು ಸಾಧ್ಯ.

ಹೀಗೆ ನಿರಾಕರಿಸುವ ಮೂಲಕ, ನ್ಯಾಯಾಲಯವು ಇತರ ಧರ್ಮಗಳಿಗೆ ಸೇರಿದ ಸಂಕೇತಗಳನ್ನು ಹಾಗೂ ಗುರುತುಗಳನ್ನು ನಿರ್ಲಕ್ಷಿಸಿದಂತಿದೆ. ಇವೆಲ್ಲವನ್ನೂ ಈಗ ತರಗತಿಗಳಿಂದ ನಿರ್ಬಂಧಿಸಲಾಗುತ್ತದೆಯೇ? ನಿರ್ಬಂಧಿಸದೇ ಇದ್ದರೆ ಅದು ತಾರತಮ್ಯ ಆಗುತ್ತದೆ, ಸಂವಿಧಾನಕ್ಕೆ ವಿರುದ್ಧವಾಗುತ್ತದೆ. ನಿರ್ಬಂಧ ಹೇರಿದರೆ ಪ್ರತಿಯೊಬ್ಬರೂ ಒಂದೇ ರೀತಿಯಲ್ಲಿ ಕಾಣಿಸಿಕೊಳ್ಳಬೇಕು ಎನ್ನುವತ್ತ ಹೊರಳಿಕೊಂಡಂತೆ ಆಗುತ್ತದೆ. ವೈವಿಧ್ಯದಲ್ಲಿ ಏಕತೆ, ನಾವೆಲ್ಲರೂ ಭಿನ್ನರಾಗಿದ್ದರೂ ಒಂದಾಗಿ ಇರಬಹುದು ಎಂಬ ಆದರ್ಶ, ಭ್ರಾತೃತ್ವದ ಮೂಲ ಆಶಯ ಮರೆಯಾಗುತ್ತವೆ.

ಸಮವಸ್ತ್ರ ಕಡ್ಡಾಯಗೊಳಿಸುವ, ಹಿಜಾಬ್ ನಿರ್ಬಂಧಿಸುವ, ಕಾನೂನು ರೂಪಿಸುವ ಅವಕಾಶ ಸರ್ಕಾರಕ್ಕೆ ಇದೆ ಎಂದು ನ್ಯಾಯಾಲಯ ಹೇಳಿರುವುದು ಸರಿ ಇರಬಹುದು. ಆದರೆ, ಇಂತಹ ಕಾನೂನುಗಳನ್ನು ರೂಪಿಸಲು ಸಾಧ್ಯವಿರುವುದು ಒಂದು ವಿಚಾರವಾದರೆ, ಅಂತಹ ಕಾನೂನುಗಳನ್ನು ಸಂಕುಚಿತ ದೃಷ್ಟಿಯಿಂದ, ರಾಜಕೀಯಪ್ರೇರಿತವಾಗಿ ರೂಪಿಸುವುದು ಬೇರೆಯದೇ ವಿಚಾರ. ಕರ್ನಾಟಕ ಶಿಕ್ಷಣ ಕಾಯ್ದೆ – 1983ರ ಅಡಿಯಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಸಮವಸ್ತ್ರ ನಿಗದಿ ಮಾಡಿಲ್ಲ. ಸಂಸ್ಥೆಗಳಿಗೆ ತಮ್ಮ ವ್ಯಾಪ್ತಿಯಲ್ಲಿ ದಿರಿಸುಗಳ ಮೇಲೆ ಹಾಗೂ ವಿದ್ಯಾರ್ಥಿಗಳ ನಡವಳಿಕೆಗಳ ಮೇಲೆ ಸಕಾರಣದ ನಿರ್ಬಂಧ ಹೇರುವ ಅಧಿಕಾರ ಇರಬೇಕು.

ಧಾರ್ಮಿಕ ಹಕ್ಕುಗಳ ಮೇಲೆ ಸಾರ್ವಜನಿಕ ಸುವ್ಯವಸ್ಥೆ, ಸಾರ್ವಜನಿಕ ನೈತಿಕತೆಯಂತಹ ಕಾರಣಗಳ ಅಡಿಯಲ್ಲಿ ನಿರ್ಬಂಧ ವಿಧಿಸಬಹುದು. ಆದರೆ ಹಿಜಾಬ್ ಧರಿಸುವುದರಿಂದ ಸಾರ್ವಜನಿಕ ಸುವ್ಯವಸ್ಥೆಗೆ, ನೈತಿಕತೆಗೆ ಧಕ್ಕೆ ಹೇಗೆ ಎದುರಾಗುತ್ತದೆ? ಸಮವಸ್ತ್ರವನ್ನುಕಡ್ಡಾಯಗೊಳಿಸುವ ವಿಚಾರದಲ್ಲಿ ಸಂಸ್ಥೆಗಳು ಹೊಂದಿರುವ ಹಕ್ಕನ್ನು, ಸಂವಿಧಾನದ ಅಡಿಯಲ್ಲಿ ವ್ಯಕ್ತಿಯ ಪಾಲಿಗೆ ಅದಕ್ಕಿಂತ ಹೆಚ್ಚು ಮೂಲಭೂತವಾಗಿರುವ ಶಿಕ್ಷಣದಂತಹ ಹಕ್ಕುಗಳಿಗೆ ಎದುರಾಗಿ ನಿಲ್ಲಿಸಬಾರದು.

ಮುಸ್ಲಿಂ ವಿದ್ಯಾರ್ಥಿನಿಯರ ಮನವಿಯು ಬಹಳ ಸರಳವಾಗಿತ್ತು. ಸಮವಸ್ತ್ರದ ಭಾಗವಾಗಿ ದುಪಟ್ಟಾವನ್ನು ಧರಿಸಲಾಗುತ್ತಿದೆ, ತಮಗೆ ಹಿಜಾಬ್ ಧರಿಸುವುದಕ್ಕೆ ಅವಕಾಶ ಕೊಡಬೇಕು ಎಂಬುದು ಅವರ ಮನವಿಯಾಗಿತ್ತು. ಅಷ್ಟಕ್ಕೆ ಅವಕಾಶ ಕೊಡಬಹುದಿತ್ತು. ಈ ವಿಚಾರವನ್ನು ವಿದ್ಯಾರ್ಥಿಗಳು ಹಾಗೂ ಅವರ ಪಾಲಕರು ಮತ್ತು ಕಾಲೇಜು ಆಡಳಿತ ಮಂಡಳಿಗಳ ನಡುವೆ ಇತ್ಯರ್ಥಪಡಿಸಬಹುದಿತ್ತು.

ಈ ವಿಚಾರವಾಗಿ ಹುಟ್ಟಿಕೊಂಡ ರಾಜಕೀಯ ವಿವಾದದ ಬೆಂಕಿಗೆ ಉದ್ದೇಶಪೂರ್ವಕವಾಗಿ ತುಪ್ಪ ಸುರಿಯಲಾಯಿತು. ಹೀಗೆ ಮಾಡಿರುವುದರ ಹಿಂದೆ ‘ಕಾಣದ ಕೈಗಳು’ ಇವೆ ಎಂದು ನ್ಯಾಯಾಲಯವು ಬೇಸರ ವ್ಯಕ್ತಪಡಿಸಿದೆ. ಸರ್ಕಾರ, ಆಡಳಿತ ಪಕ್ಷ ಮತ್ತು ಕೆಲವು ಮೂಲಭೂತವಾದಿ ಸಂಘಟನೆಗಳ ಗೋಚರಿಸುವ ಕೈಗಳು ಈ ವಿವಾದಕ್ಕೆ ಹೆಚ್ಚಿನ ಹೊಣೆ ಹೊರಬೇಕು. ಸಹಸ್ರಾರು ವಿದ್ಯಾರ್ಥಿಗಳಿಗೆ ಕೇಸರಿ ಶಾಲು ವಿತರಣೆ ಮಾಡುವ ಮೂಲಕ ಆ ವಿದ್ಯಾರ್ಥಿಗಳನ್ನು ದೊಡ್ಡ ರಾಜಕೀಯ ಆಟದ
ಭಾಗವಾಗಿಸಲಾಯಿತು.

ನ್ಯಾಯಾಲಯವು ಎರಡೂ ಬಗೆಯ– ಹಿಜಾಬ್ ಮತ್ತು ಕೇಸರಿ ಶಾಲು – ಧಾರ್ಮಿಕ ಗುರುತುಗಳನ್ನು ನಿರ್ಬಂಧಿಸಿದೆ. ಇದು ಧರ್ಮನಿರಪೇಕ್ಷ ಪ್ರಭುತ್ವಕ್ಕೆ ತಕ್ಕುದಾದ ಆದೇಶದಂತೆ ಇದೆ ಎಂಬ ರೀತಿಯಲ್ಲಿ ಕಾಣಿಸುವಂತಿದೆ. ಆದರೆ, ಹಣೆಯ ಮೇಲೆ ಹಚ್ಚಿಕೊಳ್ಳುವ ಭಸ್ಮ, ನಾಮ, ಇರಿಸಿಕೊಳ್ಳುವ ಕುಂಕುಮ ಅಥವಾ ಬಿಂದಿ, ಧರಿಸುವ ಮಂಗಳಸೂತ್ರ, ಸಿಖ್ಖರು ಧರಿಸುವ ಪೇಟಾ ವಿಚಾರದಲ್ಲಿ ಯಾವ ತೀರ್ಮಾನ ಕೈಗೊಳ್ಳಬೇಕು? ಇಂತಹ ಪ್ರಶ್ನೆಗಳಿಗೆ ನ್ಯಾಯಾಲಯ ಉತ್ತರಿಸಿಲ್ಲ. ಇತರ ಹೈಕೋರ್ಟ್‌ಗಳು ಈ ವಿಚಾರವಾಗಿ ನೀಡಿರುವ ಬೇರೆ ರೀತಿಯ ಆದೇಶಗಳು ತನ್ನೆದುರಿನ ಪ್ರಕರಣಕ್ಕೆ ಸಂಬಂಧಿಸಿದ್ದಲ್ಲ ಎಂದು ಹೇಳಿದ ಕರ್ನಾಟಕ ಹೈಕೋರ್ಟ್‌, ಅವುಗಳನ್ನು ಪರಿಗಣಿಸಿಲ್ಲ. ಕೇಂದ್ರ ಸರ್ಕಾರ ರೂಪಿಸಿರುವ ನಿಯಮಗಳ ಅನ್ವಯ ಕೇಂದ್ರೀಯ ವಿದ್ಯಾಲಯಗಳಲ್ಲಿ ಹಿಜಾಬ್ ಧರಿಸಲು ಅವಕಾಶ ಇದೆ. ಇದನ್ನು ಕರ್ನಾಟಕದಲ್ಲಿಯೂ ಅಳವಡಿಸಿಕೊಳ್ಳಬಹುದು ಎಂಬ ವಾದವನ್ನೂ ಹೈಕೋರ್ಟ್ ಒಪ್ಪಿಲ್ಲ. ಈಗ ಹಿಜಾಬ್‌ ವಿವಾದವು ಸುಪ್ರೀಂ ಕೋರ್ಟ್‌ ಅಂಗಳ ತಲುಪಿದೆ. ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್‌ ಎತ್ತಿಹಿಡಿದರೂ, ಅದು ನಿಗದಿತ ವಸ್ತ್ರಸಂಹಿತೆಯನ್ನು ಹೊಂದಿರುವ ಸರ್ಕಾರಿ ಕಾಲೇಜುಗಳಿಗೆ ಮಾತ್ರ ಅನ್ವಯವಾಗುತ್ತದೆ.

ಈ ಆದೇಶದ ವ್ಯಾಪ್ತಿ ಬಹಳ ಸೀಮಿತ. ಹೀಗಿರುವಾಗ, ಈ ಪ್ರಕರಣದಲ್ಲಿ ಸರ್ಕಾರದ ಮಧ್ಯಪ್ರವೇಶ ಅಗತ್ಯವಿತ್ತೇ? ಸರ್ಕಾರವು ಈಗ ಈ ಆದೇಶದ ಪರಿಣಾಮದ ಬಗ್ಗೆ ಚಿಂತಿಸಬೇಕು. ಮುಸ್ಲಿಂ ಹೆಣ್ಣುಮಕ್ಕಳ ಶಿಕ್ಷಣದ ಮೇಲೆ ಆಗುವ ಪರಿಣಾಮಗಳು ಏನಿರುತ್ತವೆ ಎಂಬುದನ್ನು ಅವಲೋಕಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT