ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದಿ ಸವಾರಿ ಕೊನೆಗೊಳ್ಳಲಿ ‘ಭಾಷಾ ಬಹುತ್ವ’ ಮೆರೆಯಲಿ

Last Updated 4 ಜೂನ್ 2019, 18:58 IST
ಅಕ್ಷರ ಗಾತ್ರ

ಹಿಂದಿಯೇತರ ರಾಜ್ಯಗಳ ಮೇಲೆ ಶಿಕ್ಷಣದ ಹೆಸರಿನಲ್ಲಿ ಹಿಂದಿಯನ್ನು ಹೇರುವ ಪ್ರಯತ್ನವನ್ನು ಕೇಂದ್ರ ಸರ್ಕಾರ ಕೈಬಿಟ್ಟಿರುವುದು ಸ್ವಾಗತಾರ್ಹ. ಈ ನಿರ್ಧಾರ, ‘ಭಾಷಾ ಬಹುತ್ವ’ ಕೇಂದ್ರಿತವಾದ ಭಾರತೀಯ ಒಕ್ಕೂಟ ವ್ಯವಸ್ಥೆಯ ಹಿತಾಸಕ್ತಿಯನ್ನು ಕಾಪಾಡುವ ದೃಷ್ಟಿಯಿಂದ ಅನಿವಾರ್ಯವಾಗಿತ್ತು. ಹಿಂದಿಯೇತರ ರಾಜ್ಯಗಳ ವಿದ್ಯಾರ್ಥಿಗಳು ಪ್ರಾಥಮಿಕ ಹಂತದಿಂದಲೇ ಹಿಂದಿಯನ್ನು ಕಡ್ಡಾಯವಾಗಿ ಕಲಿಯಬೇಕೆನ್ನುವ ರಾಷ್ಟ್ರೀಯ ಶಿಕ್ಷಣ ನೀತಿಯ ಕರಡು ಪ್ರತಿಗೆ ದಕ್ಷಿಣದ ರಾಜ್ಯಗಳಲ್ಲಿ ವ್ಯಾಪಕವಾದ ವಿರೋಧ ವ್ಯಕ್ತವಾಗಿತ್ತು. ಈ ವಿರೋಧಕ್ಕೆ ಮಣಿದ ಕೇಂದ್ರ ಸರ್ಕಾರ, ವಿವಾದಾತ್ಮಕ ಅಂಶವನ್ನು ಕೈಬಿಟ್ಟು ಕರಡನ್ನು ಪರಿಷ್ಕರಿಸಿ ಪ್ರಕಟಿಸಿದೆ. ವಿರೋಧಕ್ಕೆ ಕಾರಣವಾದ ಅಂಶ ಕರಡು ಪ್ರತಿಯಲ್ಲಿ ತಪ್ಪಾಗಿ ನುಸುಳಿದೆ ಎಂದು ಸರ್ಕಾರ ಹೇಳಿದೆ. ಆಗಾಗ ‘ಹಿಂದಿ ಗುಮ್ಮ’ನನ್ನು ತೋರಿಸಿ ಆಟವಾಡುವುದು ಕೇಂದ್ರ ಸರ್ಕಾರದ ಚಾಳಿ. ಈ ಹಿನ್ನೆಲೆಯಲ್ಲಿ, ಸರ್ಕಾರದ ಹೇಳಿಕೆಯನ್ನು ನಂಬುವುದು ಕಷ್ಟ ಹಾಗೂ ಮಹತ್ವದ ಕರಡು ಪ್ರತಿಯಲ್ಲಿ ತಪ್ಪು ನುಸುಳಿದೆ ಎಂದು ಹೇಳಿರುವುದು ಹೊಣೆಗೇಡಿತನವೇ ಸರಿ. ಹಿಂದಿಯೇತರ ರಾಜ್ಯಗಳ ಮೇಲೆ ಹಿಂದಿಯನ್ನು ಬಲವಂತವಾಗಿ ಹೇರುವ ಪ್ರಯತ್ನ ಇದು ಮೊದಲೇನಲ್ಲ. ಹಿಂಬಾಗಿಲಿನಿಂದ ಹಿಂದಿಯನ್ನು ಹೇರುವ ಪ್ರಯತ್ನ ಪದೇ ಪದೇ ನಡೆಯುತ್ತಲೇ ಇದೆ. ಹಿಂದಿ ಶ್ರೇಷ್ಠತೆಯ ವ್ಯಸನಕ್ಕೆ ಬಿದ್ದಿರುವ ಉತ್ತರ ಭಾರತದ ರಾಜಕಾರಣಿಗಳು, ಭಾರತದ ಸುಮಾರು ಇಪ್ಪತ್ತು ರಾಜ್ಯಗಳಲ್ಲಿ ಹಿಂದಿಯು ಜನಬಳಕೆಯ ಮುಖ್ಯ ಭಾಷೆಯಲ್ಲ ಎನ್ನುವ ಸಂಗತಿಗೆ ಜಾಣ ಕುರುಡರಾಗಿದ್ದಾರೆ. ಭಾಷಾ ಬಹುತ್ವದ ಜೇನುಗೂಡಿಗೆ ಕಲ್ಲು ಹಾಕುವ ಕಿಡಿಗೇಡಿತನ ನಡೆದಾಗಲೆಲ್ಲ ದಕ್ಷಿಣದ ರಾಜ್ಯಗಳು, ವಿಶೇಷವಾಗಿ ತಮಿಳುನಾಡು ಗಟ್ಟಿಧ್ವನಿ ಎತ್ತುತ್ತಿರುವುದು ಗಮನಾರ್ಹ.

ಮಕ್ಕಳು ಹೆಚ್ಚು ಹೆಚ್ಚು ಭಾಷೆಗಳನ್ನು ಕಲಿಯಬೇಕೆಂದು ಅಪೇಕ್ಷಿಸುವ ‘ರಾಷ್ಟ್ರೀಯ ಶಿಕ್ಷಣ ನೀತಿ’ಯ ಪ್ರಾಯೋಗಿಕ ಅನುಷ್ಠಾನದ ಬಗ್ಗೆ ಕೂಡ ವಸ್ತುನಿಷ್ಠವಾಗಿ ಯೋಚಿಸಬೇಕಾಗಿದೆ. 10 ಲಕ್ಷಕ್ಕೂ ಹೆಚ್ಚು ಶಿಕ್ಷಕರ ಕೊರತೆ ದೇಶದಲ್ಲಿದೆ. ಎಷ್ಟೋ ಶಾಲೆಗಳಲ್ಲಿ ಭಾಷಾ ಶಿಕ್ಷಕರೇ ಗಣಿತ–ವಿಜ್ಞಾನಗಳನ್ನೂ ಕಲಿಸುತ್ತಿದ್ದಾರೆ. ವಾಸ್ತವ ಹೀಗಿರುವಾಗ, ಶಿಕ್ಷಕರ ಸಂಖ್ಯೆಯನ್ನು ಹೆಚ್ಚಿಸುವ ಬದಲು ಮಕ್ಕಳ ಕಲಿಕೆಯ ವಿಷಯಗಳನ್ನು ಹೆಚ್ಚಿಸಲು ಹೊರಡುವ ಪ್ರಯತ್ನಗಳಲ್ಲಿ ಮಕ್ಕಳ ಹಿತಾಸಕ್ತಿಗಿಂತಲೂ ಭಾಷಾ ರಾಜಕಾರಣದ ಸೋಗು ಎದ್ದುಕಾಣುತ್ತದೆ. ತ್ರಿಭಾಷಾ ಸೂತ್ರ ಕರ್ನಾಟಕಕ್ಕೆ ಹೊಸತೇನೂ ಅಲ್ಲ. ಆರು ದಶಕಗಳಷ್ಟು ಹಿಂದಿನಿಂದಲೇ ನಮ್ಮಲ್ಲಿ ತ್ರಿಭಾಷಾ ಸೂತ್ರ ಇದೆ. ಸರ್ಕಾರಿ ಶಾಲೆಗಳಲ್ಲಿ ಆರನೇ ತರಗತಿಯಿಂದ ಹಿಂದಿ ಕಲಿಸಲಾಗುತ್ತಿದೆ. ಕೆಲವು ಖಾಸಗಿ ಶಾಲೆಗಳು ಒಂದನೇ ತರಗತಿಯಿಂದಲೇ ಹಿಂದಿಯನ್ನು ಒಂದು ಭಾಷೆಯನ್ನಾಗಿ ಕಲಿಸುತ್ತವೆ. ಹಿಂದಿ ಸಿನಿಮಾಗಳನ್ನಂತೂ ಕನ್ನಡಿಗರೂ ಸೇರಿದಂತೆ ದೇಶದ ಎಲ್ಲ ಭಾಷಿಕರೂ ಮುಕ್ತಮನಸ್ಸಿನಿಂದ ಒಪ್ಪಿಕೊಂಡಿದ್ದಾರೆ. ಇವೆಲ್ಲವೂ ಹಿಂದಿಯನ್ನು ಒಂದು ಭಾಷೆಯಾಗಿ ಜನರು ಪ್ರೀತಿಯಿಂದ ಒಪ್ಪಿಕೊಂಡಿರುವುದಕ್ಕೆ ನಿದರ್ಶನಗಳು. ವಾಸ್ತವ ಹೀಗಿದ್ದರೂ ಕಡ್ಡಾಯ ಕಲಿಕೆಯ ರೂಪದಲ್ಲಿ ಒಂದನೇ ತರಗತಿಯಿಂದಲೇ ಹಿಂದಿಯನ್ನು ಹೇರಲು ಪ್ರಯತ್ನಿಸುವುದು ದಕ್ಷಿಣದ ಭಾಷೆಗಳ ಅಸ್ಮಿತೆಯ ಬಗ್ಗೆ ಉತ್ತರದವರು ಹೊಂದಿರುವ ಉಪೇಕ್ಷೆಯೆಂದೇ ಹೇಳಬೇಕು. ಇಂಥ ನಿರ್ಲಕ್ಷ್ಯ, ಭಾರತೀಯ ಗಣತಂತ್ರಕ್ಕೆ ಮಾರಕವಾದುದು. ‌ಯಾವುದೇ ರಾಜ್ಯದಲ್ಲಿ ಅಲ್ಲಿನ ಸ್ಥಳೀಯ ನುಡಿಯೇ ಸಾರ್ವಭೌಮ, ಉಳಿದವೆಲ್ಲವೂ ಆಯ್ಕೆಯ ಭಾಷೆಗಳು ಮಾತ್ರ ಎನ್ನುವುದನ್ನು ಕೇಂದ್ರ ಸರ್ಕಾರ ಅರ್ಥ ಮಾಡಿಕೊಳ್ಳಬೇಕು. ಭಾಷೆಯ ವಿಷಯ ಮಾತ್ರವಲ್ಲದೆ, ಅಭಿವೃದ್ಧಿಯ ವಿಷಯದಲ್ಲೂ ಉತ್ತರದ ರಾಜ್ಯಗಳಿಗೆ ಹೆಚ್ಚಿನ ಹಣ ಹೋಗುವುದನ್ನೂ ಇಲ್ಲಿ ನೆನಪಿಸಿಕೊಳ್ಳಬಹುದು. ಯಾವುದೇ ವಿಷಯಕ್ಕೆ ಸಂಬಂಧಿಸಿದ ತಾರತಮ್ಯ ಧೋರಣೆ ಖಂಡನೀಯ. ‘ಹಿಂದಿ ಹೇರಿಕೆಯ ಪ್ರಶ್ನೆಯೇ ಇಲ್ಲ. ಪ್ರಾದೇಶಿಕ ಭಾಷೆಗಳಿಗೆ ಆದ್ಯತೆ ನೀಡುವುದು ನಮ್ಮ ಸರ್ಕಾರದ ಕಾರ್ಯಸೂಚಿ’ ಎಂದು ಕೇಂದ್ರ ಸಚಿವರು ಹೇಳಿದ್ದಾರೆ. ಅದು ಬೀಸುಮಾತಾಗಿ ಉಳಿಯದೆ, ನೈತಿಕ ಬದ್ಧತೆಯ ನುಡಿಯನ್ನಾಗಿಸಲಿಕ್ಕೆ ಅವರು ಪ್ರಯತ್ನಿಸಬೇಕು. ಆಗಷ್ಟೇ ಕೇಂದ್ರ ಸರ್ಕಾರಕ್ಕೆ ಅಂಟಿಕೊಂಡಿರುವ ‘ಹಿಂದಿ ಪಕ್ಷಪಾತಿ’ ಎನ್ನುವ ಹಣೆಪಟ್ಟಿ ಸಡಿಲವಾಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT