ವಿಶ್ವವಿದ್ಯಾಲಯಗಳ ಗೌರವ ಡಾಕ್ಟರೇಟ್ಗಳು ಅರ್ಹತೆಯ ಬದಲಾಗಿ ಪ್ರಭಾವಕ್ಕೆ ದೊರೆಯುತ್ತವೆ ಎನ್ನುವ ಪರಿಸ್ಥಿತಿಯು ವಿ.ವಿ.ಗಳ ಬೌದ್ಧಿಕ ಹಾಗೂ ನೈತಿಕ ದಾರಿದ್ರ್ಯದ ಸಂಕೇತ.

ಹಾವೇರಿ ವಿಶ್ವವಿದ್ಯಾಲಯ ಪ್ರಕಟಿಸಿದ್ದ ಗೌರವ ಡಾಕ್ಟರೇಟ್ ಅನ್ನು ಸ್ವೀಕರಿಸಲು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಿರಾಕರಿಸಿರುವುದು, ವಿರಳವಾಗುತ್ತಿರುವ ಶೈಕ್ಷಣಿಕ ಮೌಲ್ಯಗಳನ್ನು ನೆನಪಿಸುವ ಪ್ರಯತ್ನವಾಗಿದೆ. ಸಾರ್ವಜನಿಕ ಸೇವೆಯು ಪ್ರದರ್ಶನಕ್ಕೆ ಯೋಗ್ಯವಾದ ಪ್ರಮಾಣಪತ್ರವಲ್ಲ; ನಿರ್ದಿಷ್ಟ ಕ್ಷೇತ್ರಗಳಲ್ಲಿ ಅಸಾಧಾರಣ ಸೇವೆ ಸಲ್ಲಿಸಿದ ಸಾಧಕರ ಜೀವಮಾನ ಸಾಧನೆಯನ್ನು ಗೌರವಿಸಲು ಗೌರವ ಡಾಕ್ಟರೇಟ್ ಮೀಸಲಾಗಿರಬೇಕು ಎಂದು ತಮ್ಮ ನಿರಾಕರಣೆಗೆ ಬೊಮ್ಮಾಯಿ ಅವರು ನೀಡಿರುವ ಕಾರಣ ಸರಿಯಾಗಿದೆ. ಕಳೆದ ವರ್ಷ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ (ಕೆಎಸ್ಒಯು) ನೀಡಲು ಮುಂದಾಗಿದ್ದ ಗೌರವ ಡಾಕ್ಟರೇಟ್ ಅನ್ನು ಸಚಿವ ಸತೀಶ ಜಾರಕಿಹೊಳಿ ನಿರಾಕರಿಸಿದ್ದರು. ಇಬ್ಬರು ರಾಜಕಾರಣಿಗಳ ಈ ನಿಲುವು ಉಳಿದ ರಾಜಕೀಯ ನಾಯಕರಿಗೆ ಮಾದರಿ ಆಗಬೇಕಾಗಿದೆ ಹಾಗೂ ವಿಶ್ವವಿದ್ಯಾಲಯಗಳಿಗೆ ಪಾಠ ಆಗಬೇಕಾಗಿದೆ. ದುರದೃಷ್ಟವಶಾತ್, ರಾಜ್ಯದ ವಿಶ್ವವಿದ್ಯಾಲಯಗಳು ಇತ್ತೀಚಿನ ವರ್ಷಗಳಲ್ಲಿ ಶೈಕ್ಷಣಿಕ ಬದ್ಧತೆಯಿಂದ ದೂರ ಸರಿಯುತ್ತಿವೆ. ಇದರ ಪರಿಣಾಮವಾಗಿ ಗೌರವ ಡಾಕ್ಟರೇಟ್ಗಳ ‘ಹಂಚಿಕೆ’ ನಡೆಯುತ್ತಿದೆ. ಜ್ಞಾನಕೇಂದ್ರಗಳಾಗಿ ಗುರ್ತಿಸಿಕೊಳ್ಳಬೇಕಾಗಿದ್ದ ವಿಶ್ವವಿದ್ಯಾಲಯಗಳು, ನೈಜ ಪ್ರತಿಭೆ ಹಾಗೂ ಸಾಧನೆಯನ್ನು ಗುರ್ತಿಸುವ ಬದಲಾಗಿ ಪ್ರಭಾವ, ಓಲೈಕೆಗೆ ಮಣೆ ಹಾಕುತ್ತಿವೆ. ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಕಾಯ್ದೆಯು ಈ ಪದವಿಗಳನ್ನು ಅಸಾಧಾರಣ ಸಂದರ್ಭ ಗಳಲ್ಲಿ ಪ್ರತಿಷ್ಠಿತ ಸಾಧನೆಗಾಗಿ ಅಥವಾ ಗಮನಾರ್ಹ ಸೇವೆಗಾಗಿ ಮಾತ್ರ ನೀಡಲು ಅನುಮತಿಸುತ್ತದೆ. ಆದರೆ, ಇತ್ತೀಚಿನ ವರ್ಷಗಳ ಬಹುತೇಕ ಆಯ್ಕೆಗಳು ಕಾಯ್ದೆಗೆ ಅನುಗುಣವಾಗಿಲ್ಲ, ವಿಶ್ವವಿದ್ಯಾಲಯಗಳ ಉನ್ನತ ಪರಂಪರೆಗೆ ಅನುಗುಣ ವಾಗಿಯೂ ಇಲ್ಲ.

ಕೆಎಸ್ಒಯು ಕುಲಪತಿ, ಏಕಪಕ್ಷೀಯವಾಗಿ ಎಂಟು ಹೆಸರುಗಳನ್ನು ಅಂತಿಮಗೊಳಿಸಿದ ಹಿನ್ನೆಲೆಯಲ್ಲಿ ನಿರ್ವಹಣಾ ಮಂಡಳಿಯ ಕೆಲವು ಸದಸ್ಯರು ಗೌರವ ಡಾಕ್ಟರೇಟ್ ಪ್ರದಾನ ಸಮಾರಂಭವನ್ನು ಬಹಿಷ್ಕರಿಸಿದ್ದರು. ಸಿಂಡಿಕೇಟ್ ಅನ್ನು ಬದಿಗಿಟ್ಟು, ಹೆಚ್ಚುವರಿ ಹೆಸರುಗಳನ್ನು ಒಳಗೊಂಡ ಪಟ್ಟಿಯನ್ನು ಕುಲಾಧಿಪತಿಗೆ ಕಳುಹಿಸಿದ ಘಟನೆ ಮಂಗಳೂರು ವಿಶ್ವವಿದ್ಯಾಲಯದಲ್ಲಿ ನಡೆದಿದೆ. ಗೌರವ ಡಾಕ್ಟರೇಟ್ಗಳನ್ನು ಸಿನಿಮಾ ತಾರೆಯರು, ಉದ್ಯಮಿಗಳು, ಮಠಾಧಿಪತಿಗಳು ಹಾಗೂ ರಾಜಕಾರಣಿ ಗಳಿಗೆ ವಿವೇಚನೆಯಿಲ್ಲದೆ ನೀಡುವ ಪ್ರವೃತ್ತಿ ಇತ್ತೀಚೆಗೆ ಹೆಚ್ಚಾಗುತ್ತಿದೆ. ಇದರಿಂದಾಗಿ ವಿಶ್ವವಿದ್ಯಾಲಯಗಳು ‘ಡಾಕ್ಟರೇಟ್ ಕಾರ್ಖಾನೆ’ಗಳ ಸ್ವರೂಪ ಪಡೆದುಕೊಂಡಿವೆ; ‘ಗೌರವ’ದ ಅರ್ಥ ಹಾಗೂ ಮೌಲ್ಯ ಕ್ಷೀಣಗೊಂಡು ಹಣಬಲ, ಅಧಿಕಾರಬಲ ಹೊಂದಿದ ಯಾರು ಬೇಕಾದರೂ ಗೌರವ ಡಾಕ್ಟರೇಟ್ ಪಡೆಯಬಹುದು ಎನ್ನುವ ಸ್ಥಿತಿ ಸೃಷ್ಟಿಯಾಗಿದೆ. ಕುಲಪತಿಗಳು ಅಧಿಕಾರ ಕೇಂದ್ರಗಳಿಗೆ ಹತ್ತಿರವಾಗಲು ಗೌರವ ಪದವಿಗಳನ್ನು ಬಳಸಿಕೊಂಡಿರುವ ಉದಾಹರಣೆಗಳೂ ಇವೆ. ಗೌರವ ಡಾಕ್ಟರೇಟ್ ಪದವಿಗಳನ್ನು ಸಗಟಾಗಿ ನೀಡುವ ಬೆಳವಣಿಗೆಯು, ವರ್ಷಗಳ ಕಾಲದ ಶ್ರಮ, ಬೌದ್ಧಿಕ ಅನುಸಂಧಾನ ಹಾಗೂ ಸಂಶೋಧನೆಯ ಮೂಲಕ ಡಾಕ್ಟರೇಟ್ ಪಡೆದವರನ್ನು ಅವಮಾನಿಸುವಂತಿದೆ. ‘ಡಾ’ ಎನ್ನುವ ಉಪಾಧಿಯ ಬಗೆಗೆ ಸಮಾಜದಲ್ಲಿ ಇರುವ ಆಕರ್ಷಣೆಯು ಗೌರವ ಡಾಕ್ಟರೇಟ್ಗಳ ಅಪಮೌಲ್ಯಕ್ಕೆ ಕಾರಣವಾಗಿದೆ. ಈ ಗೌರವ ಪದವಿಗಳಿಗೆ ಸಂಬಂಧಿಸಿದಂತೆ ದೇಶದಲ್ಲಿ ಸ್ಪಷ್ಟವಾದ ಕಾನೂನು ನಿರ್ಬಂಧಗಳಿಲ್ಲ. ಆದರೆ, ಇದು ಪ್ರಶಂಸೆಗೆ ಅರ್ಹವಾದ ಗೌರವವೇ ಹೊರತು ಶೈಕ್ಷಣಿಕ ಅರ್ಹತೆಯಲ್ಲ ಎಂದು ‘ವಿಶ್ವವಿದ್ಯಾಲಯ ಅನುದಾನ ಆಯೋಗ’ (ಯುಜಿಸಿ) ಸ್ಪಷ್ಟಪಡಿಸಿದೆ. ಅಮೆರಿಕ ಮತ್ತು ಇಂಗ್ಲೆಂಡ್ಗಳಲ್ಲಿ ಗೌರವ ಪದವಿಗಳನ್ನು ವೃತ್ತಿಪರ ಚಟುವಟಿಕೆಗಳಲ್ಲಿ ಬಳಸುವುದಿಲ್ಲ.

ರಾಜ್ಯಪಾಲರೂ, ರಾಜ್ಯದ ವಿಶ್ವವಿದ್ಯಾಲಯಗಳ ಕುಲಾಧಿಪತಿಯೂ ಆದ ಥಾವರಚಂದ್ ಗೆಹಲೋತ್ ಅವರು ಗೌರವ ಡಾಕ್ಟರೇಟ್ಗಳಿಗೆ ಸಂಬಂಧಿಸಿದಂತೆ ಅಂತಿಮ ನಿರ್ಣಯ ಕೈಗೊಳ್ಳುವ ಪರಮಾಧಿಕಾರ ಹೊಂದಿದ್ದಾರೆ. ಅಪರೂಪಕ್ಕೆ ಅವರು ಪ್ರತಿರೋಧ ವ್ಯಕ್ತಪಡಿಸಿದ್ದರೂ, ವ್ಯವಸ್ಥೆಯಲ್ಲಿ ಸುಧಾರಣೆಗೆ ಸಂಬಂಧಿಸಿದಂತೆ ಹೆಚ್ಚಿನ ಮೇಲ್ವಿಚಾರಣೆಯ ಅಗತ್ಯವಿದೆ. ಎಲ್ಲ ವಿಶ್ವವಿದ್ಯಾಲಯಗಳಿಗೆ ಹೊಂದುವಂತೆ ಏಕರೂಪದ ಮಾರ್ಗಸೂಚಿ ರೂಪಿಸಲು ತಜ್ಞರ ಸಮಿತಿಯೊಂದನ್ನು ರಚಿಸುವುದಾಗಿ ಉನ್ನತ ಶಿಕ್ಷಣ ಸಚಿವ ಎಂ.ಸಿ. ಸುಧಾಕರ್ ಹೇಳಿದ್ದಾರೆ. ಅವರ ಪ್ರಸ್ತಾವ ಸಕಾಲಿಕ ಹಾಗೂ ಸ್ವಾಗತಾರ್ಹ. ಏಕರೂಪದ ಮಾನದಂಡಗಳು, ಮೌಲ್ಯಮಾಪನದಲ್ಲಿನ ಪಾರದರ್ಶಕತೆ ಹಾಗೂ ಸ್ವತಂತ್ರ ಪರಿಶೀಲನೆಯು ಈ ವ್ಯವಸ್ಥೆಗೆ ಕಳೆದುಹೋಗಿರುವ ವಿಶ್ವಾಸಾರ್ಹತೆಯನ್ನು ಮತ್ತೆ ತಂದುಕೊಡಬಹುದು. ಡಾಕ್ಟರೇಟ್ ಎನ್ನುವುದು ಕಠಿಣ ಬೌದ್ಧಿಕ ಶ್ರಮಕ್ಕೆ ಅಥವಾ ನಿಸ್ವಾರ್ಥ ಸೇವೆಯ ಜೀವಮಾನ ಸಾಧನೆಗೆ ಸಲ್ಲುವ ಗೌರವ ಆಗಿರಬೇಕೇ ಹೊರತು, ಪ್ರಭಾವಿಗಳಿಗ ಅಲಂಕಾರ ಆಗಬಾರದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.