ಬುಧವಾರ, ಜನವರಿ 29, 2020
30 °C

ಅತ್ಯಾಚಾರ| ಎರಡು ಅತಿರೇಕ: ಗಂಭೀರ ಆತ್ಮಾವಲೋಕನ ಅಗತ್ಯ

ಸಂಪಾದಕೀಯ Updated:

ಅಕ್ಷರ ಗಾತ್ರ : | |

Prajavani

ಉತ್ತರಪ್ರದೇಶದ ಉನ್ನಾವ್‍ನಲ್ಲಿ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿ, ಒಂದು ವರ್ಷದಿಂದ ನ್ಯಾಯಕ್ಕಾಗಿ ಕೋರ್ಟಿಗೆ ಅಲೆಯುತ್ತಿರುವ ಸಂತ್ರಸ್ತೆಯನ್ನು ಬೆಂಕಿ ಹಚ್ಚಿ ಕೊಲೆ ಮಾಡುವ ಪ್ರಯತ್ನ ನಡೆದಿರುವುದು ಖಂಡನೀಯ. ರಾಯ್‍ಬರೇಲಿ ನ್ಯಾಯಾಲಯಕ್ಕೆ ವಕೀಲರ ಜೊತೆ ಬರುತ್ತಿದ್ದ ಸಂತ್ರಸ್ತೆಯನ್ನು, ಜಾಮೀನಿನ ಮೇಲೆ ಹೊರಬಂದಿರುವ ಒಬ್ಬ ಆರೋಪಿ ಸಹಿತ ಐವರು ಬೆಂಕಿ ಹಚ್ಚಿ ಸಜೀವ ದಹನಕ್ಕೆ ಯತ್ನಿಸಿದ್ದಾರೆ. ಶೇ 90ರಷ್ಟು ಸುಟ್ಟಗಾಯಗಳಿಂದ ನರಳುತ್ತಿರುವ ಸಂತ್ರಸ್ತೆ, ದೆಹಲಿಯ ಆಸ್ಪತ್ರೆಯಲ್ಲಿ ಜೀವನ್ಮರಣದ ಸ್ಥಿತಿಯಲ್ಲಿದ್ದಾರೆ. ಆರೋಪಿಗಳಿಗೆ ಕಾನೂನಿನ ಭಯವಿಲ್ಲ ಎನ್ನುವುದರ ಜೊತೆಗೆ, ಸಂತ್ರಸ್ತ ಮಹಿಳೆಗೆ ರಕ್ಷಣೆ ನೀಡಲು ಪೊಲೀಸರು ವಿಫಲರಾಗಿರುವುದೂ ಇಲ್ಲಿ ಎದ್ದುಕಾಣುತ್ತಿದೆ. ಇದೇ ವೇಳೆ, ಹೈದರಾಬಾದ್‍ನಲ್ಲಿ ಕಳೆದ ವಾರ ಪಶುವೈದ್ಯೆಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ, ಬೆಂಕಿ ಹಚ್ಚಿ ಸುಟ್ಟ ನಾಲ್ವರು ಆರೋಪಿಗಳನ್ನು ಪೊಲೀಸರು ಎನ್‍ಕೌಂಟರ್ ಮಾಡಿ ಕೊಂದಿದ್ದಾರೆ. ಹೈದರಾಬಾದ್‍ನ ಅತ್ಯಾಚಾರ ಪ್ರಕರಣದ ಬಗ್ಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ದೇಶದಾದ್ಯಂತ ಹೆಣ್ಣುಮಕ್ಕಳ ಸುರಕ್ಷೆಯ ಬಗ್ಗೆ ಕಳವಳ ವ್ಯಕ್ತವಾಗಿದೆ. ಆರೋಪಿಗಳನ್ನು ಗುಂಡಿಟ್ಟು ಕೊಂದ ಪೊಲೀಸರ ಎನ್‍ಕೌಂಟರನ್ನು ಸಾಧನೆಯೆಂದು ಸಂಭ್ರಮಿಸಿ ಹಲವರು ಸಿಹಿ ಹಂಚಿದ್ದೂ ನಡೆದಿದೆ.

ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳನ್ನು ಯಾರೂ ಸಮರ್ಥಿಸಲು ಸಾಧ್ಯವಿಲ್ಲ. ಇಂತಹ ಕೃತ್ಯವೆಸಗುವ ದುಷ್ಕರ್ಮಿಗಳಿಗೆ ಅತ್ಯಂತ ಕಠಿಣ ಶಿಕ್ಷೆ ಆಗಲೇಬೇಕು. ಆದರೆ, ಈ ಶಿಕ್ಷೆಯನ್ನು ನೀಡಬೇಕಾದವರು ಪೊಲೀಸರಲ್ಲ, ನ್ಯಾಯಾಲಯ ಎನ್ನುವುದನ್ನೂ ನಾವು ಮರೆಯಬಾರದು. ಪೊಲೀಸರಿಗೆ ಸರ್ಕಾರವು ಶಸ್ತ್ರಾಸ್ತ್ರಗಳನ್ನು ಕೊಡುವುದು ತೊಂದರೆಗೆ ಒಳಗಾದವರಿಗೆ ರಕ್ಷಣೆ ಕೊಡಲೇ ಹೊರತು, ಆರೋಪಿಗಳನ್ನು ಕೊಂದು ಹಾಕುವುದಕ್ಕೆ ಅಲ್ಲ. ಆರೋಪಿಗಳನ್ನು ಕ್ಷಿಪ್ರವಾಗಿ ಬಂಧಿಸಿ, ಸೂಕ್ತ ತನಿಖೆ ನಡೆಸಿನ್ಯಾಯಾಲಯದಲ್ಲಿ ಅವರು ಶಿಕ್ಷೆಯಿಂದ ತಪ್ಪಿಸಿಕೊಳ್ಳದಂತೆ ದಕ್ಷತೆಯಿಂದ ಕರ್ತವ್ಯ ನಿರ್ವಹಿಸಬೇಕಾದುದು ಪೊಲೀಸರ ಜವಾಬ್ದಾರಿ. ಆ ಜವಾಬ್ದಾರಿ ನಿರ್ವಹಣೆಯಲ್ಲಿ ಅವರು ವಿಫಲರಾದರೆ ಉನ್ನಾವ್‍ನಲ್ಲಿ ನಡೆದಂತಹ ಘಟನೆಗಳು ಸಂಭವಿಸುತ್ತವೆ. ನಮ್ಮ ನ್ಯಾಯಾಂಗ ವ್ಯವಸ್ಥೆ ಈ ಎರಡೂ ಪ್ರಕರಣಗಳಿಂದ ಕಲಿಯಬೇಕಾದ ಪಾಠಗಳಿವೆ. ಅತ್ಯಾಚಾರ ಮಾಡಿ ಕೊಲ್ಲುವ ಹೀನಾತಿಹೀನ ಪ್ರಕರಣಗಳಲ್ಲಿ ಸಂತ್ರಸ್ತೆಯರಿಗೆ ನ್ಯಾಯ ದೊರಕಲು ಇಷ್ಟೊಂದು ವಿಳಂಬ ಏಕೆ ಆಗುತ್ತಿದೆ? ಉನ್ನಾವ್‍ನಲ್ಲಿ 2017ರಲ್ಲಿ ಶಾಸಕರೊಬ್ಬರು ಆರೋಪಿಯಾಗಿರುವ ಅತ್ಯಾಚಾರದ ಹಳೆಯ ಪ್ರಕರಣದಲ್ಲೂ ಸಂತ್ರಸ್ತೆಗೆ ಇನ್ನೂ ನ್ಯಾಯ ಸಿಕ್ಕಿಲ್ಲ. ಕೋರ್ಟ್‌ನಲ್ಲಿ ಆಕೆ ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿರುವಾಗಲೇ ಆಕೆಯ ತಂದೆ ಪೊಲೀಸ್‍ ಕಸ್ಟಡಿಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದರು. ಕೋರ್ಟಿಗೆ ತೆರಳುತ್ತಿದ್ದ ಆಕೆಯ ಕಾರಿನ ಮೇಲೆ ಲಾರಿಯೊಂದನ್ನು ಹತ್ತಿಸಿ ಕೊಲೆ ಮಾಡುವ ಪ್ರಯತ್ನ ನಡೆದು, ಅದರಲ್ಲಿ ಆಕೆಯ ಚಿಕ್ಕಮ್ಮ ಸಾವಿಗೀಡಾದರು. ಸುಪ್ರೀಂ ಕೋರ್ಟ್ ಮಧ್ಯಪ್ರವೇಶದಿಂದ ಆಕೆಗೆ ಈಗ ದೆಹಲಿಯಲ್ಲಿ ರಕ್ಷಣೆ ನೀಡಲಾಗಿದೆ. ಆ ಪ್ರಕರಣದ ತೀರ್ಪು ಇನ್ನಷ್ಟೇ ಬರಬೇಕಿದೆ. 2012ರಲ್ಲಿ ದೆಹಲಿಯಲ್ಲಿ ನಡೆದ ನಿರ್ಭಯಾ ಅತ್ಯಾಚಾರ ಮತ್ತು ಕೊಲೆಯ ಪ್ರಕರಣದಲ್ಲಿ ನಾಲ್ವರು ಆರೋಪಿಗಳಿಗೆ ನ್ಯಾಯಾಲಯವು ಗಲ್ಲುಶಿಕ್ಷೆ ಪ್ರಕಟಿಸಿದ್ದರೂ ಅದು ಇನ್ನೂ ಜಾರಿಯಾಗಿಲ್ಲ. ಅತ್ಯಾಚಾರದ ಪ್ರಕರಣಗಳಲ್ಲಿ ಶೀಘ್ರ ನ್ಯಾಯದಾನ ಒದಗಿಸಲು ನಮ್ಮ ನ್ಯಾಯಾಂಗ ವ್ಯವಸ್ಥೆ ವಿಫಲವಾಗಿದೆ ಎಂಬ ಭಾವನೆ ಸಮಾಜದ ಒಂದು ವರ್ಗದಲ್ಲಿದೆ. ಪೊಲೀಸರ ಎನ್‍ಕೌಂಟರ್‌ಗಳನ್ನು ಜನಸಾಮಾನ್ಯರು ಸಂಭ್ರಮಿಸಲು ಇದೂ ಒಂದು ಕಾರಣ ಆಗಿರಬಹುದು. ನ್ಯಾಯ ತಡವಾಗಿ ದೊರಕುವುದೆಂದರೆ ನ್ಯಾಯ ನಿರಾಕರಣೆ ಆದಂತೆಯೇ. ಈ ಹಿನ್ನೆಲೆಯಲ್ಲಿ, ಇತ್ತೀಚೆಗೆ ಉನ್ನಾವ್‍ ಮತ್ತು ಹೈದರಾಬಾದ್‍ನಲ್ಲಿ ನಡೆದ ಎರಡೂ ಪ್ರಕರಣಗಳನ್ನು ವಿಮರ್ಶೆಗೆ ಒಡ್ಡಬೇಕಿದೆ. ಅತ್ಯಾಚಾರ ಪ್ರಕರಣಗಳ ವಿಚಾರಣೆಗೆಂದೇ ತ್ವರಿತಗತಿಯ ನ್ಯಾಯಾಲಯಗಳನ್ನು ಸ್ಥಾಪಿಸಿ, ದುಷ್ಕರ್ಮಿಗಳಿಗೆ ಶೀಘ್ರ ಶಿಕ್ಷೆ ವಿಧಿಸದಿದ್ದರೆ ಜನರೇ ಗುಂಪುಗೂಡಿ ದುಷ್ಕರ್ಮಿಗಳನ್ನು ಕೊಲ್ಲುವಂತಹ ಪರಿಸ್ಥಿತಿಯೂ ಬರಬಹುದು. ಈ ಸಮಸ್ಯೆಗೆ ಪೊಲೀಸ್‍ ಎನ್‍ಕೌಂಟರ್ ಪರಿಹಾರವಲ್ಲ. ಶೀಘ್ರಗತಿಯಲ್ಲಿ ತನಿಖೆ ನಡೆಸಿ, ಶಿಕ್ಷೆ ವಿಧಿಸುವ ಸ್ವತಂತ್ರ ಮತ್ತು ದಕ್ಷ ನ್ಯಾಯಾಂಗ ವ್ಯವಸ್ಥೆಯೊಂದೇ ಇದಕ್ಕೆ ಪರಿಹಾರ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು