ಶನಿವಾರ, ಆಗಸ್ಟ್ 13, 2022
27 °C

ಶುದ್ಧ ಕುಡಿಯುವ ನೀರಿನ ಯೋಜನೆಯಲ್ಲಿ ಅಕ್ರಮ ಆರೋಪ: ತಪ್ಪಿತಸ್ಥರಿಗೆ ಶಿಕ್ಷೆ ಆಗಲಿ

ಸಂಪಾದಕೀಯ Updated:

ಅಕ್ಷರ ಗಾತ್ರ : | |

Prajavani

ವಿಶ್ವಸಂಸ್ಥೆಯ 2010ರ ಸಾಮಾನ್ಯ ಸಭೆಯಲ್ಲಿ, ಕುಡಿಯುವ ನೀರು ಮತ್ತು ನೈರ್ಮಲ್ಯ ವ್ಯವಸ್ಥೆಯು ಮಾನವ ಹಕ್ಕುಗಳ ಭಾಗ ಎಂದು ಗುರುತಿಸಲಾಗಿದೆ. ಸುರಕ್ಷಿತವಾದ ನೀರನ್ನು ಕೈಗೆಟುಕುವ ದರದಲ್ಲಿ ಸಾರ್ವತ್ರಿಕವಾಗಿ ಮತ್ತು ಸಮಾನವಾಗಿ ದೊರೆಯುವಂತೆ ಮಾಡುವುದು ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳಲ್ಲಿ ಒಂದು. ಕಾಲರಾ, ಭೇದಿ, ಹೆಪಟೈಟಿಸ್‌–ಬಿ, ಟೈಫಾಯಿಡ್‌ ಮತ್ತು ಪೋಲಿಯೊದಂತಹ ರೋಗಗಳಿಗೆ ಮಲಿನ ನೀರು ಕಾರಣವಾಗಬಹುದು. ಪ್ರತಿವರ್ಷ ಜಗತ್ತಿನಾದ್ಯಂತ ಲಕ್ಷಾಂತರ ಜನರು ಮಲಿನ ನೀರು ಕುಡಿದು ಇಂತಹ ರೋಗಗಳಿಗೆ ತುತ್ತಾಗುತ್ತಾರೆ. ನಗರ ಅಥವಾ ಗ್ರಾಮೀಣ ಎಂಬ ಭೇದವಿಲ್ಲದೆ 2025ರ ಹೊತ್ತಿಗೆ ಜಗತ್ತಿನ ಅರ್ಧದಷ್ಟು ಜನರು ಕುಡಿಯುವ ನೀರಿನ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಅಂದಾಜಿಸಲಾಗಿದೆ. ನಮ್ಮ ರಾಜ್ಯದಲ್ಲಿಯೂ ನೀರಿನ ಸಮಸ್ಯೆ ಗಂಭೀರವಾಗಿಯೇ ಇದೆ. ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳು ಮತ್ತು ಬೆಂಗಳೂರು ಸುತ್ತಲಿನ ಜಿಲ್ಲೆಗಳ ಅಂತರ್ಜಲದಲ್ಲಿ ಫ್ಲೋರೈಡ್‌ ಅಂಶ ಅಪಾಯಕಾರಿ ಪ್ರಮಾಣದಲ್ಲಿದೆ. ಫ್ಲೋರೈಡ್‌ನಿಂದ ಕೂಡಿದ ನೀರನ್ನು ಕುಡಿದರೆ ಮೂಳೆಗಳ ಗಂಭೀರ ಸಮಸ್ಯೆ, ಹಲ್ಲು ಪಾಚಿಕಟ್ಟುವಿಕೆ ಅಂತಹ ಬಾಧೆಗಳಿಗೆ ಒಳಗಾಗಬೇಕಾಗುತ್ತದೆ. ನಮ್ಮಲ್ಲಿ ಕೈಗಾರಿಕಾ ತ್ಯಾಜ್ಯಗಳು ಕೂಡ ನೇರವಾಗಿ ಜಲಮೂಲಗಳನ್ನು ಸೇರುವುದು ಹೊಸ ವಿಚಾರ ಏನಲ್ಲ. ಈ ತ್ಯಾಜ್ಯದಲ್ಲಿ ಇರುವ ವಿಷಕಾರಿ ಅಂಶಗಳು ಕುಡಿಯುವ ನೀರಿನ ಭಾಗವಾಗುತ್ತವೆ. ಕೃಷಿಯಲ್ಲಿ ಬಳಸುವ ರಸಗೊಬ್ಬರ, ರಾಸಾಯನಿಕ ಮತ್ತು ಸಾವಯವ ಗೊಬ್ಬರದ ಅಂಶಗಳು ಅಂತರ್ಜಲ ಸೇರುತ್ತವೆ. ಇದರಿಂದಾಗಿ ನೀರಿನಲ್ಲಿ ನೈಟ್ರೇಟ್‌ ಪ್ರಮಾಣ ಹೆಚ್ಚಾಗಿದೆ. ಇಂತಹ ನೀರು ಕುಡಿದರೆ ಕ್ಯಾನ್ಸರ್, ಉಸಿರಾಟದ ಸಮಸ್ಯೆ, ಹುಟ್ಟುವಾಗಲೇ ಮಕ್ಕಳಲ್ಲಿ ವಿವಿಧ ಸಮಸ್ಯೆಗಳು ಕಾಣಿಸಿಕೊಳ್ಳಬಹುದು ಎಂಬುದನ್ನು ಅಧ್ಯಯನಗಳು ಹೇಳಿವೆ.

ಶುದ್ಧವಾದ ಕುಡಿಯುವ ನೀರು ಮನುಷ್ಯನ ಮೂಲಭೂತ ಅಗತ್ಯ ಮತ್ತು ಹಕ್ಕು. ಹಾಗಾಗಿಯೇ ನಮ್ಮ ದೇಶದಲ್ಲಿ ಮತ್ತು ರಾಜ್ಯದಲ್ಲಿ ಕುಡಿಯುವ ನೀರು ಪೂರೈಸುವುದಕ್ಕಾಗಿ ಹಲವು ಯೋಜನೆಗಳು ಜಾರಿಗೆ ಬಂದಿವೆ. ಈ ಹಿಂದೆ ಅಧಿಕಾರದಲ್ಲಿದ್ದ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸುವುದಕ್ಕಾಗಿ ನೀರು ಶುದ್ಧೀಕರಣ ಘಟಕಗಳನ್ನು ಅಳವಡಿಸುವ ಯೋಜನೆಯನ್ನು ರೂಪಿಸಿತ್ತು. ಈ ಯೋಜನೆಯ ಅನುಷ್ಠಾನ ಮತ್ತು ನಿರ್ವಹಣೆಯಲ್ಲಿ ಲೋಪ ಆಗಿದೆ ಎಂಬುದು ಈಗ ಕೇಳಿಬರುತ್ತಿರುವ ಆರೋಪ. ಈ ಆರೋಪದ ಬಗ್ಗೆ ಜಂಟಿ ಸದನ ಸಮಿತಿಯಿಂದ ತನಿಖೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಸದನಕ್ಕೆ ತಿಳಿಸಿದ್ದಾರೆ. ರಾಜ್ಯದಾದ್ಯಂತ ಸುಮಾರು 18,500 ನೀರು ಶುದ್ಧೀಕರಣ ಘಟಕಗಳನ್ನು ಸ್ಥಾಪಿಸಲಾಗಿದೆ. ಇವುಗಳ ಪೈಕಿ ಕೆಲವು ಸ್ಥಗಿತಗೊಂಡಿವೆ ಎಂಬ ಆರೋಪ ಇದೆ. ನೀರಿನಲ್ಲಿ ಫ್ಲೋರೈಡ್‌ ಅಂಶ ಹೆಚ್ಚಾಗಿರುವ ಉತ್ತರ ಕರ್ನಾಟಕದ ವಿವಿಧೆಡೆ ಸ್ಥಾಪಿಸಲಾದ ಕೆಲವು ಘಟಕಗಳು ಕೆಲಸ ಮಾಡುತ್ತಿಲ್ಲ ಎಂದು ಅಲ್ಲಿನ ಜನರೇ ಹೇಳಿದ್ದಾರೆ. ದೇಶೀಯವಾಗಿ ಅಭಿವೃದ್ಧಿಪಡಿಸಿದ, ಹೆಚ್ಚು ಪರಿಣಾಮಕಾರಿ ಮತ್ತು ಮಿತವ್ಯಯದ ತಂತ್ರಜ್ಞಾನ–ಉಪಕರಣಗಳು ಲಭ್ಯ ಇದ್ದರೂ ಚೀನಾ ದೇಶದ ತಂತ್ರಜ್ಞಾನ ಅಳವಡಿಸಿಕೊಂಡಿರುವ ಶುದ್ಧೀಕರಣ ಯಂತ್ರಗಳನ್ನು ದುಬಾರಿ ಬೆಲೆಗೆ ಖರೀದಿಸಲಾಗಿದೆ ಎಂಬ ಆಪಾದನೆ ಇದೆ. ಶುದ್ಧ ಕುಡಿಯುವ ನೀರಿನ ಕೊರತೆಯೇ ಇಲ್ಲದ ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿಯೂ ಘಟಕಗಳನ್ನು ಅಳವಡಿಸುವ ಮೂಲಕ ತೆರಿಗೆದಾರರ ಹಣವನ್ನು ಪೋಲು ಮಾಡಿದ ಕುಚೋದ್ಯವೂ ಈ ಯೋಜನೆ ಅನುಷ್ಠಾನದಲ್ಲಿ ನಡೆದಿದೆ ಎನ್ನಲಾಗಿದೆ. ವೈಜ್ಞಾನಿಕವಾಗಿ, ತಾಂತ್ರಿಕವಾಗಿ ಪ್ರಗತಿ ಸಾಧಿಸಿರುವ ಕರ್ನಾಟಕ ರಾಜ್ಯದ ಸರ್ಕಾರವು ಜನರಿಗೆ ಶುದ್ಧ ಕುಡಿಯುವ ನೀರು ಪೂರೈಸಲು ಸಾಧ್ಯವಾಗಿಲ್ಲ ಎಂಬುದು ಅವಮಾನಕರ. ಇಂತಹ ಯೋಜನೆಯ ಅನುಷ್ಠಾನದಲ್ಲಿಯೂ ಅಕ್ರಮ ನುಸುಳಿದ್ದರೆ, ಅದಕ್ಷತೆ ಕಾಣಿಸಿದ್ದರೆ ಅದು ಅಕ್ಷಮ್ಯ. ಯೋಜನೆಯಲ್ಲಿ ಲೋಪಗಳಾಗಿದ್ದರೆ ಜಂಟಿ ಸದನ ಸಮಿತಿಯು ಅದನ್ನು ಗುರುತಿಸಬೇಕು. ಅಂಥವರಿಗೆ ಶಿಕ್ಷೆ ಆಗುವಂತೆ ಕಾನೂನು ಕ್ರಮಗಳನ್ನು ಸರ್ಕಾರ ಕೈಗೊಳ್ಳಬೇಕು. ಅದರ ಜತೆಯಲ್ಲಿಯೇ, ಕುಡಿಯುವ ನೀರಿನ ಘಟಕಗಳನ್ನು ತಕ್ಷಣವೇ ದುರಸ್ತಿಗೊಳಿಸಿ, ಜನರ ಕಷ್ಟ ನೀಗಿಸಬೇಕು. ಈ ವಿಚಾರವು ಆಡಳಿತ–ವಿರೋಧ ಪಕ್ಷಗಳ ನಡುವೆ ಆರೋಪ–ಪ್ರತ್ಯಾರೋಪಕ್ಕೆ ಕಾರಣ ಆಗಬಾರದು. ಎಲ್ಲ ಪಕ್ಷಗಳೂ ಜನರ ಸಮಸ್ಯೆ ಪರಿಹರಿಸಲು ಕೈಜೋಡಿಸಬೇಕು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು