ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ| ಅಕ್ರಮ ಕಲ್ಲು ಗಣಿಗಾರಿಕೆ ನಿಯಂತ್ರಣಕ್ಕೆ ಬಿಗಿ ಕ್ರಮ ಅಗತ್ಯ

Last Updated 29 ಜನವರಿ 2021, 19:57 IST
ಅಕ್ಷರ ಗಾತ್ರ

ಶಿವಮೊಗ್ಗ ಜಿಲ್ಲೆಯ ಅಬ್ಬಲಗೆರೆ–ಹುಣಸೋಡು ಸಮೀಪದ ಜಲ್ಲಿ ಕ್ರಷರ್‌ ಬಳಿ ಈ ತಿಂಗಳ 22ರಂದು ನಡೆದಿರುವ ಭೀಕರ ಸ್ಫೋಟವು ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆಯ ಅಟ್ಟಹಾಸವನ್ನು ಬಯಲುಗೊಳಿಸಿದೆ. ನಗರೀಕರಣ, ಹೆಚ್ಚುತ್ತಿರುವ ಕಟ್ಟಡಗಳ ನಿರ್ಮಾಣ, ರಸ್ತೆ, ಸೇತುವೆ ಮತ್ತಿತರ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳ ಕಾರಣದಿಂದ ಕಟ್ಟಡ ಕಲ್ಲು, ಜಲ್ಲಿ, ಎಂ. ಸ್ಯಾಂಡ್‌, ಗ್ರಾನೈಟ್‌ಗೆ ಬೇಡಿಕೆ ಕ್ರಮೇಣ ಹೆಚ್ಚುತ್ತಿದೆ. ಇತ್ತೀಚಿನ ದಿನಗಳಲ್ಲಿ ಕಟ್ಟಡ ಕಲ್ಲು, ಜಲ್ಲಿ ಮತ್ತು ಎಂ. ಸ್ಯಾಂಡ್‌ ಬಳಕೆಯಂತೂ ಏರುಗತಿಯಲ್ಲಿ ಸಾಗುತ್ತಿದ್ದು, ಪರವಾನಗಿ ಹೊಂದಿರುವ ಕ್ವಾರಿಗಳ ಮೂಲಕ ಬೇಡಿಕೆ ಪೂರೈಸಲು ಸಾಧ್ಯವೇ ಇಲ್ಲ ಎಂಬುದು ಸತ್ಯ ಸಂಗತಿ. ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಕಟ್ಟಡ ಕಲ್ಲಿನ ಅಕ್ರಮ ಗಣಿಗಾರಿಕೆ ಎಗ್ಗಿಲ್ಲದೇ ನಡೆಯುತ್ತಿದೆ ಎಂಬುದನ್ನು ಹುಣಸೋಡು ಸ್ಫೋಟದ ಬಳಿಕ ಹೊರಬರುತ್ತಿರುವ ಮಾಹಿತಿಗಳು ದೃಢಪಡಿಸುತ್ತಿವೆ. ರಾಜ್ಯದಲ್ಲಿ 2,000ಕ್ಕೂ ಹೆಚ್ಚು ಅಕ್ರಮ ಕಲ್ಲು ಕ್ವಾರಿಗಳಿವೆ ಎಂಬ ಮಾಹಿತಿಯು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳಿಂದಲೇ ಹೊರಬಿದ್ದಿದೆ. ಎಂ. ಸ್ಯಾಂಡ್‌ ಬಳಕೆಗೆ ಉತ್ತೇಜನ ನೀಡುತ್ತಿರುವುದು ಮತ್ತು ಕ್ರಷರ್‌ಗಳ ಸ್ಥಾಪನೆಗೆ ಪರವಾನಗಿ ನೀಡುವಾಗ ಗುತ್ತಿಗೆ ನೀಡಲಾಗಿರುವ ಕ್ವಾರಿಗಳಲ್ಲಿನ ಕಲ್ಲಿನ ಲಭ್ಯತೆಯನ್ನು ಗಣನೆಗೆ ತೆಗೆದುಕೊಳ್ಳದೇ ನಿರ್ಧಾರ ಕೈಗೊಂಡಿರುವುದು ಸಮಸ್ಯೆಗೆ ಮೂಲ ಕಾರಣ. ಎಂ. ಸ್ಯಾಂಡ್‌ ಘಟಕಗಳು ಮತ್ತು ಕ್ರಷರ್‌ಗಳ ಮಾಲೀಕರ ದುರಾಸೆಯಿಂದ ಎಲ್ಲೆಂದರಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಯಾವ ನಿಯಮವನ್ನೂ ಪಾಲಿಸದೆ ನಿಸರ್ಗದ ಒಡಲು ಬಗೆಯಲಾಗುತ್ತಿದೆ. ನಿಷೇಧಿತ ಸ್ಫೋಟಕಗಳನ್ನೂ ಬಳಸಿ ಬಂಡೆಗಳನ್ನು ಒಡೆಯಲಾಗುತ್ತಿದೆ ಎಂಬುದು ಹುಣಸೋಡು ಘಟನೆ ಬಳಿಕ ಹಲವು ಜಿಲ್ಲೆಗಳಲ್ಲಿ ನಡೆದಿರುವ ತಪಾಸಣೆಯಿಂದ ದೃಢಪಟ್ಟಿದೆ. ಅಕ್ರಮ ಕಲ್ಲು ಗಣಿಗಾರಿಕೆಗೆ ಮಿತಿಮೀರಿದ ಸ್ಫೋಟಕಗಳನ್ನು ಬಳಸುತ್ತಿರುವುದರಿಂದ ರಾಜ್ಯದ ಕೆಲವು ಜಲಾಶಯಗಳು, ಪ್ರಮುಖ ಕಟ್ಟಡಗಳು, ಜನವಸತಿ ಪ್ರದೇಶಗಳು, ಪರಿಸರ ಸೂಕ್ಷ್ಮ ವಲಯಗಳೂ ಅಪಾಯ ಎದುರಿಸುವಂತಾಗಿದೆ. ವರ್ಷಕ್ಕೆ ಹತ್ತಾರು ಸಾವಿರ ಕೋಟಿ ರೂಪಾಯಿ ವಹಿವಾಟು ನಡೆಯುತ್ತಿರುವ ಕಲ್ಲು ಗಣಿ ಉದ್ಯಮದಲ್ಲಿ ಅಕ್ರಮ ಚಟುವಟಿಕೆಯೇ ಹೆಚ್ಚಿರುವುದರಿಂದ ಸರ್ಕಾರದ ಬೊಕ್ಕಸಕ್ಕೆ ಬರುವ ರಾಜಧನವೂ ದೊಡ್ಡ ಪ್ರಮಾಣದಲ್ಲಿ ಸೋರಿಕೆ ಆಗುತ್ತಿದೆ.

ಉಪ ಖನಿಜಗಳ ವ್ಯಾಪ್ತಿಗೆ ಸೇರುವ ಕಲ್ಲು ಗಣಿಗಾರಿಕೆಯ ನಿಯಂತ್ರಣಕ್ಕೆ ಸರ್ಕಾರದ ಬಳಿ ನಾನಾ ಅಸ್ತ್ರಗಳಿವೆ. ಗಣಿ ಮತ್ತು ಖನಿಜ ಕಾಯ್ದೆ, ಉಪ ಖನಿಜ ನಿಯಮಗಳು, ಪರಿಸರ ಸಂರಕ್ಷಣಾ ಕಾಯ್ದೆ, ಅರಣ್ಯ ಸಂರಕ್ಷಣಾ ಕಾಯ್ದೆ ಸೇರಿದಂತೆ ಹಲವು ಕಾನೂನುಗಳ ಮೂಲಕ ಕಲ್ಲು ಗಣಿಗಾರಿಕೆಯನ್ನು ನಿಯಂತ್ರಿಸುವ ಅವಕಾಶಗಳಿವೆ. ಗಣಿ ಮತ್ತು ಭೂ ವಿಜ್ಞಾನ, ಕಂದಾಯ, ಅರಣ್ಯ, ಪೊಲೀಸ್ ಇಲಾಖೆಗಳು, ಮಾಲಿನ್ಯ ನಿಯಂತ್ರಣ ಮಂಡಳಿ ಸೇರಿದಂತೆ ಹಲವು ಸಂಸ್ಥೆಗಳು ಕಲ್ಲು ಗಣಿಗಳ ಮೇಲೆ ಅಧಿಕಾರ ವ್ಯಾಪ್ತಿಯನ್ನು ಹೊಂದಿವೆ. ಆದರೆ, ಅಕ್ರಮ ಕಲ್ಲು ಗಣಿಗಾರಿಕೆ ಮತ್ತು ನಿಷೇಧಿತ ಸ್ಫೋಟಕಗಳ ಬಳಕೆ ನಿಯಂತ್ರಿಸುವ ವಿಚಾರದಲ್ಲಿ ಎಲ್ಲವೂ ವಿಫಲವಾಗಿವೆ ಎಂಬುದನ್ನು ಹುಣಸೋಡು ಸ್ಫೋಟ ಸಾಬೀತುಪಡಿಸಿದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯನ್ನು ಒಂದೆಡೆ ಸಿಬ್ಬಂದಿ ಕೊರತೆ ಕಾಡುತ್ತಿದೆ. ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಯು ಅಕ್ರಮ ಗಣಿಗಾರಿಕೆ ನಡೆಸುತ್ತಿರುವವರ ಜತೆ ಶಾಮೀಲಾಗಿರುವುದು ಇನ್ನೊಂದು ಸಮಸ್ಯೆ. ರಾಜ್ಯದ ಬಹುತೇಕ ಕಡೆಗಳಲ್ಲಿ ಪ್ರಭಾವಿ ರಾಜಕಾರಣಿಗಳೇ ಇಂತಹ ಅಕ್ರಮ ಚಟುವಟಿಕೆಗೆ ನೆರಳಾಗಿದ್ದಾರೆ ಎಂಬ ಆರೋಪದಲ್ಲಿ ಹುರುಳಿಲ್ಲ ಎಂದು ಹೇಳಲಾಗದು. ಅಕ್ರಮ ಗಣಿಗಾರಿಕೆ ಪತ್ತೆಯಾದರೂ ಸರಿಯಾಗಿ ಪ್ರಕರಣ ದಾಖಲಿಸದೇ ಇರುವುದು ಮತ್ತು ಕಾನೂನು ಉಲ್ಲಂಘಿಸಿದವರನ್ನು ಶಿಕ್ಷೆಗೆ ಗುರಿಪಡಿಸಲು ಅಗತ್ಯ ಕ್ರಮ ಕೈಗೊಳ್ಳುವ ವಿಚಾರದಲ್ಲಿ ವಿವಿಧ ಇಲಾಖೆಗಳ ನಡುವೆ ಸಮನ್ವಯದ ಕೊರತೆ ಇರುವುದು ಎದ್ದು ಕಾಣುತ್ತಿದೆ. ಅಕ್ರಮ ಕಲ್ಲು ಗಣಿಗಾರಿಕೆ ರಾಜ್ಯದಾದ್ಯಂತ ನಡೆಯುತ್ತಿರುವ ಮಾಹಿತಿ ಇದ್ದರೂ ಸರ್ಕಾರ ಕೈಕಟ್ಟಿ ಕೂರುವುದು ತರವಲ್ಲ. ಪರಿಸರ, ಜನ, ಜಾನುವಾರುಗಳಿಗೆ ಕಂಟಕವಾಗಿ ಹಬ್ಬುತ್ತಿರುವ ‘ಕಲ್ಲು ಗಣಿ ಮಾಫಿಯಾ’ವನ್ನು ಹತ್ತಿಕ್ಕಲು ರಾಜ್ಯ ಸರ್ಕಾರ ಬಿಗಿ ಕ್ರಮ ಕೈಗೊಳ್ಳಬೇಕು. ಕೆಳಹಂತದಿಂದ ರಾಜ್ಯಮಟ್ಟದವರೆಗೆ ಅಧಿಕಾರಿಗಳಿಗೆ ಹೊಣೆಗಾರಿಕೆ ನಿಗದಿ ಮಾಡಬೇಕು. ರಾಜ್ಯವ್ಯಾಪಿ ಕಲ್ಲು ಗಣಿ, ಕ್ರಷರ್‌ ಮತ್ತು ಎಂ. ಸ್ಯಾಂಡ್‌ ಘಟಕಗಳ ಮೇಲೆ ನಿರಂತರ ನಿಗಾ ಇಡುವ ವ್ಯವಸ್ಥೆಯನ್ನು ರೂಪಿಸುವ ಮೂಲಕ ಅಕ್ರಮ ಕಲ್ಲು ಗಣಿಗಾರಿಕೆಯನ್ನು ಮಟ್ಟಹಾಕಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT