ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನಸಿಕ ಒತ್ತಡಕ್ಕೆ ಕಡಿವಾಣ ತುರ್ತು ಕಾರ್ಯಕ್ರಮ ಅಗತ್ಯ

Last Updated 26 ಡಿಸೆಂಬರ್ 2019, 20:30 IST
ಅಕ್ಷರ ಗಾತ್ರ

ಭಾರತದಲ್ಲಿ ಮನೋರೋಗಿಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿದೆ ಎನ್ನುವ ಅಧ್ಯಯನ ವರದಿ ‘ಲ್ಯಾನ್ಸೆಟ್‌ ಸೈಕಿಯಾಟ್ರಿ’ ನಿಯತಕಾಲಿಕದಲ್ಲಿ ಪ್ರಕಟಗೊಂಡಿದೆ. ಈ ವರದಿಯು, ಒತ್ತಡದಿಂದ ಕೂಡಿದ ಆಧುನಿಕ ಜೀವನಶೈಲಿಯನ್ನು ಸೂಚಿಸುವುದರ ಜೊತೆಗೆ, ಮಾನಸಿಕ ಸಮಸ್ಯೆಗಳ ಬಗ್ಗೆ ನಮ್ಮ ಸಮಾಜದಲ್ಲಿರುವ ಅವಜ್ಞೆಯನ್ನೂ ಸಂಕೇತಿಸುವಂತಿದೆ. ದೇಶದಲ್ಲಿನ ಪ್ರತಿ ಏಳು ಜನರಲ್ಲಿ ಒಬ್ಬರು ಒಂದಲ್ಲ ಒಂದು ಬಗೆಯ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಾರೆ; ಖಿನ್ನತೆ, ಭಾವೋದ್ವೇಗಕ್ಕೆ ಒಳಗಾಗುವವರ ಸಂಖ್ಯೆ ಹೆಚ್ಚುತ್ತಲೇ ಇದೆ ಎನ್ನುವುದನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ ಹಾಗೂ ಭಾರತೀಯ ಸಾರ್ವಜನಿಕ ಆರೋಗ್ಯ ಪ್ರತಿಷ್ಠಾನದ ಸಹಯೋಗದಲ್ಲಿ ‘ಇಂಡಿಯಾ ಸ್ಟೇಟ್‌ ಲೆವೆಲ್ ಡಿಸೀಸ್‌ ಬರ್ಡನ್‌ ಇನಿಷಿಯೇಟಿವ್‌’ ನಡೆಸಿರುವ ಈ ಅಧ್ಯಯನ ವರದಿ ಗುರುತಿಸಿದೆ.

ಭಾರತದ ಎಲ್ಲ ರಾಜ್ಯಗಳಲ್ಲಿ ನಡೆದಿರುವ ಈ ಅಧ್ಯಯನವು 1990ರಿಂದ 2017ರ ನಡುವಿನ ಅವಧಿಯಲ್ಲಿ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವವರ ಸಂಖ್ಯೆ ದುಪ್ಪಟ್ಟಾಗಿರುವುದಾಗಿ ಹೇಳಿದೆ. ಖಿನ್ನತೆ, ಭಾವೋದ್ವೇಗ, ಉನ್ಮಾದಗಳೊಂದಿಗೆ ಸ್ಕಿಜೊಫ್ರೇನಿಯಾ, ಆಟಿಸಂ ರೀತಿಯ ಗಂಭೀರ ಸಮಸ್ಯೆಗಳಿಂದ ಕೋಟ್ಯಂತರ ಭಾರತೀಯರು ಬಳಲುತ್ತಿದ್ದಾರೆ. 2017ರಲ್ಲಿ ದೇಶದಲ್ಲಿ 19.7 ಕೋಟಿ ನಾಗರಿಕರು ವಿವಿಧ ಬಗೆಯ ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿದ್ದರು. ಅವರಲ್ಲಿ ಖಿನ್ನತೆಗೆ ಒಳಗಾದವರ ಸಂಖ್ಯೆ 4.6 ಕೋಟಿಯಷ್ಟು. ದಕ್ಷಿಣದ ರಾಜ್ಯಗಳಲ್ಲಿ ಮಾನಸಿಕ ಸಮಸ್ಯೆ ಹೆಚ್ಚಿನ ಪ್ರಮಾಣದಲ್ಲಿದ್ದರೆ, ಮಕ್ಕಳ ಬೌದ್ಧಿಕ ಬೆಳವಣಿಗೆಗೆ ಸಂಬಂಧಿಸಿದ ತೊಡಕುಗಳು ಉತ್ತರ ಭಾರತದ ರಾಜ್ಯಗಳಲ್ಲಿ ಹೆಚ್ಚಾಗಿವೆ.

ಖಿನ್ನತೆಯಿಂದ ಬಳಲುತ್ತಿರುವವರಲ್ಲಿ ಮಹಿಳೆಯರ ಪ್ರಮಾಣವೇ ಹೆಚ್ಚು ಎನ್ನುವುದು ಎಲ್ಲೆಡೆಯ ಸಾಮಾನ್ಯ ಅಂಶ. ದೇಶದಲ್ಲಿ ಹೆಚ್ಚುತ್ತಿರುವ ಆತ್ಮಹತ್ಯೆಗಳಿಗೆ ಖಿನ್ನತೆಯೂ ಒಂದು ಪ್ರಮುಖ ಕಾರಣವಾಗಿದೆ ಎಂದು ಅಧ್ಯಯನ ಅಭಿ‍ಪ್ರಾಯಪಟ್ಟಿದೆ. ಮಾನಸಿಕ ಅಸ್ವಸ್ಥತೆಯ ಹತ್ತು ವಿಭಾಗಗಳ ಪೈಕಿ ಆರರಲ್ಲಿ, ದೇಶದ ಸರಾಸರಿ ಪ್ರಮಾಣಕ್ಕಿಂತ ಹೆಚ್ಚು ರೋಗಿಗಳನ್ನು ಕರ್ನಾಟಕ ಹೊಂದಿದೆ ಎನ್ನುವುದು ಅಧ್ಯಯನದ ಮತ್ತೊಂದು ಆಘಾತಕಾರಿ ಅಂಶ.

ವಿಶ್ವದ ಪ್ರಬಲ ಶಕ್ತಿಗಳಲ್ಲೊಂದಾಗಿ ಬೆಳೆಯುವ ಪ್ರಯತ್ನದಲ್ಲಿರುವ ದೇಶದಲ್ಲಿ, ಯುವ ತಲೆಮಾರು ಮಾನಸಿಕ ಸಮಸ್ಯೆಗಳಿಂದ ಬಳಲುವುದು ಆತಂಕದ ಸಂಗತಿ. ಮಾನಸಿಕ ಆರೋಗ್ಯದ ಬಗ್ಗೆ ಜನಸಾಮಾನ್ಯರಲ್ಲಿರುವ ತಪ್ಪುಕಲ್ಪನೆಗಳು ಮಾನಸಿಕ ಅಸ್ವಸ್ಥತೆಯ ಹೆಚ್ಚಳಕ್ಕೆ ಪ್ರಮುಖ ಕಾರಣ. ಮನಸ್ಸಿಗೆ ಸಂಬಂಧಿಸಿದ ಸಮಸ್ಯೆಗಳನ್ನೆಲ್ಲ ‘ಹುಚ್ಚು’ ಎಂದು ಪರಿಗಣಿಸುವ ಧೋರಣೆ ಸಮಾಜದಲ್ಲಿ ಇರುವುದರಿಂದ, ಅನೇಕರು ತಮ್ಮ ಮನೋವ್ಯಾಕುಲವನ್ನು ಹೇಳಿಕೊಳ್ಳಲು ಬಯಸುವುದಿಲ್ಲ. ಹುಚ್ಚೆನ್ನುವ ಹಣೆಪಟ್ಟಿಯ ಭೀತಿಯ ಕಾರಣದಿಂದಾಗಿ ಮಾನಸಿಕ ವೈದ್ಯರ ಬಳಿ ಹೋಗಲು ಹಿಂಜರಿಯುವವರ ಸಂಖ್ಯೆ ದೊಡ್ಡದು.

ಲಿಂಗಭೇದ, ಲೈಂಗಿಕ ದೌರ್ಜನ್ಯಗಳ ಕಾರಣದಿಂದಾಗಿ ಮಹಿಳೆಯರು ಚಿತ್ತ ಚಾಂಚಲ್ಯಕ್ಕೆ ಸುಲಭವಾಗಿ ತುತ್ತಾಗುತ್ತಾರೆ. ಮಕ್ಕಳ ಮೇಲೆ ಪರೀಕ್ಷೆಗಳ ಒತ್ತಡ, ಯುವಜನರಿಗೆ ನೌಕರಿಯ ಒತ್ತಡ, ಹಿರಿಯ ನಾಗರಿಕರಿಗೆ ಅಸುರಕ್ಷತೆಯ ಒತ್ತಡ– ಹೀಗೆ, ಎಲ್ಲ ವಯೋಮಾನಗಳ ಜನರೂ ಒಂದಲ್ಲ ಒಂದು ಬಗೆಯಲ್ಲಿ ಜರ್ಝರಿತರಾಗಿರುವ ಸಂದರ್ಭವಿದು. ಒತ್ತಡದಿಂದ ಪಾರಾಗಲು ಕೆಲವರು ಚಟಗಳ ದಾಸರಾಗಿ ದೈಹಿಕ ಆರೋಗ್ಯವನ್ನೂ ಹಾಳು ಮಾಡಿಕೊಳ್ಳುವುದಿದೆ. ಒಂದು ಕಡೆ ಮಾನಸಿಕ ರೋಗಿಗಳ ಸಂಖ್ಯೆ ತೀವ್ರಗತಿಯಲ್ಲಿ ಹೆಚ್ಚುತ್ತಿದ್ದರೂ, ಇನ್ನೊಂದೆಡೆ ಅವರನ್ನು ಉಪಚರಿಸಲಿಕ್ಕೆ ಅಗತ್ಯವಾದ ತಜ್ಞರ ಸಂಖ್ಯೆಯೇ ನಮ್ಮಲ್ಲಿಲ್ಲ. ಭಾರತದಲ್ಲಿರುವ ಪರಿಣತ ಮಾನಸಿಕ ತಜ್ಞರ ಸಂಖ್ಯೆ 4,000ಕ್ಕಿಂತಲೂ ಕಡಿಮೆ ಎನ್ನುವುದು ಆತಂಕ ಹುಟ್ಟಿಸುವ ಸಂಗತಿ.

ಈ ಕೊರತೆಯ ಕಾರಣದಿಂದಲೇ ಜಿಲ್ಲೆ–ತಾಲ್ಲೂಕು ಮಟ್ಟದಲ್ಲಿ ಮಾನಸಿಕ ತಜ್ಞರು ಹಾಗೂ ಆಪ್ತ ಸಮಾಲೋಚಕರ ಲಭ್ಯತೆ ತೀರಾ ಕಡಿಮೆ. ವಾಸ್ತವ ಹೀಗಿರುವಾಗ, ದೇಶದಲ್ಲಿ ಮಾನಸಿಕ ಸಮಸ್ಯೆ ಹೊಂದಿರುವವರ ಸಂಖ್ಯೆ ಹೆಚ್ಚದೆ ಇನ್ನೇನಾದೀತು? ಈ ಕೂಡಲೇ ಮಾನಸಿಕ ಚಿಕಿತ್ಸೆಯ ಸೌಲಭ್ಯಗಳು ವ್ಯಾಪಕವಾಗುವಂತೆ ಕೇಂದ್ರ–ರಾಜ್ಯ ಸರ್ಕಾರಗಳು ಜಂಟಿಯಾಗಿ ಕಾರ್ಯೋನ್ಮುಖವಾಗಬೇಕು. ಮನೋರೋಗಗಳ ಬಗ್ಗೆ ಸಮಾಜದಲ್ಲಿನ ಪೂರ್ವಗ್ರಹ ಧೋರಣೆಗಳನ್ನು ನಿವಾರಿಸುವ ಜಾಗೃತಿ ಕಾರ್ಯಕ್ರಮಗಳು ದೊಡ್ಡ ಪ್ರಮಾಣದಲ್ಲಿ ನಡೆಯಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT