ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾತಂತ್ರ್ಯದ ಸುವರ್ಣ ಸಂಭ್ರಮದಲ್ಲಿ ಭಾರತ–ಬಾಂಗ್ಲಾ ಬಂಧ ಇನ್ನೂ ಗಟ್ಟಿಯಾಗಲಿ

Last Updated 28 ಮಾರ್ಚ್ 2021, 19:31 IST
ಅಕ್ಷರ ಗಾತ್ರ

ಬಾಂಗ್ಲಾದೇಶದ ಸ್ವಾತಂತ್ರ್ಯದ ಸುವರ್ಣ ಮಹೋತ್ಸವವು ಆ ದೇಶಕ್ಕೆ ಮಾತ್ರವಲ್ಲ ಭಾರತಕ್ಕೂ ಸಂಭ್ರಮದ ವಿಚಾರ. ‍ಪಾಕಿಸ್ತಾನದ ಭಾಗವಾಗಿದ್ದ ಪೂರ್ವ ಪಾಕಿಸ್ತಾನದ ವಿಮೋಚನೆ ಹೋರಾಟದಲ್ಲಿ ಭಾರತದ ಪಾತ್ರ ನಿರ್ಣಾಯಕವೇ ಆಗಿತ್ತು. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಪೂರ್ವ ಪಾಕಿಸ್ತಾನದ ‘ಮುಕ್ತಿವಾಹಿನಿ’ ಗೆರಿಲ್ಲಾ ಪಡೆಗೆ ಭಾರತದಲ್ಲಿ ತರಬೇತಿ ನೀಡಲಾಗಿತ್ತು. ಪಾಕಿಸ್ತಾನದ ಜತೆಗೆ ನಡೆದ ಯುದ್ಧದಲ್ಲಿ ಭಾರತಕ್ಕೆ ಭಾರಿ ಜಯ ಲಭಿಸಿದರೂ 3,900 ಸೈನಿಕರು ಹುತಾತ್ಮರಾಗಿ ದ್ದರು; ಸುಮಾರು 10 ಸಾವಿರ ಸೈನಿಕರು ಗಾಯಗೊಂಡಿದ್ದರು. 1971ರ ಮಾರ್ಚ್‌ 26ರಂದು ಸ್ವಾತಂತ್ರ್ಯ ಘೋಷಿಸಿಕೊಂಡ ಪೂರ್ವ ಪಾಕಿಸ್ತಾನದ ದೇಶಭ್ರಷ್ಟ ಸರ್ಕಾರದ ಕೇಂದ್ರವು ಕೋಲ್ಕತ್ತದಲ್ಲಿ ಸ್ಥಾಪನೆಯಾಗಿತ್ತು. 1971ರಲ್ಲಿ ಪೂರ್ವ ಪಾಕಿಸ್ತಾನದಲ್ಲಿ ಪಾಕಿಸ್ತಾನದ ಸೇನೆಯು ನಡೆಸಿದ ನರಮೇಧದ ಸಂದರ್ಭದಲ್ಲಿ ಸುಮಾರು ಒಂದು ಕೋಟಿ ಜನರಿಗೆ ಭಾರತ ಆಶ್ರಯ ನೀಡಿತ್ತು. ಪೂರ್ವ ಪಾಕಿಸ್ತಾನದಲ್ಲಿ ನಡೆಯುತ್ತಿದ್ದ ಅಕ್ರಮಗಳ ವಿರುದ್ಧ ಜಾಗತಿಕ ಗಮನ ಸೆಳೆಯಲು ಆಗಿನ ಪ್ರಧಾನಿ ಇಂದಿರಾ ಗಾಂಧಿ ಅವರು ನಡೆಸಿದ ಪ್ರಯತ್ನವು ಶ್ಲಾಘನೀಯವಾಗಿತ್ತು. ಹೀಗೆ, ಭಾರತ ಮತ್ತು ಬಾಂಗ್ಲಾದೇಶವನ್ನು ಚರಿತ್ರೆಯು ಬಿಗಿಯಾಗಿ ಬೆಸೆದಿದೆ. ಎರಡೂ ದೇಶಗಳ ನಡುವೆ ತ್ಯಾಗ, ಬಲಿದಾನ ಮತ್ತು ಮಾನವೀಯ ಸಹಕಾರದ ಬಾಂಧವ್ಯ ಇದೆ. ಹಾಗಾಗಿ ಆ ದೇಶದ ಸ್ವಾತಂತ್ರ್ಯದ 50ನೇ ವರ್ಷಾಚರಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯ ಅತಿಥಿಯಾಗಿರುವುದು ಚಾರಿತ್ರಿಕ ಅನಿವಾರ್ಯ ಎಂದೇ ಹೇಳಬಹುದು. ಆ ದೇಶದ ಸ್ಥಾಪಕ ಶೇಖ್‌ ಮುಜೀಬುರ್‌ ರಹಮಾನ್‌ ಅವರ ಜನ್ಮ ಶತಮಾನೋತ್ಸವವನ್ನು ಈ ವರ್ಷವೇ ಆಚರಿಸುತ್ತಿರುವುದು ಅಲ್ಲಿನ ಜನರ ಸಂಭ್ರಮವನ್ನು ದುಪ್ಪಟ್ಟಾಗಿಸಿದೆ. ಅದರ ಜತೆಗೆ, ಎರಡೂ ದೇಶಗಳ ನಡುವಣ ದ್ವಿಪಕ್ಷೀಯ ಸಂಬಂಧದ 50ನೇ ವರ್ಷವಾಗಿಯೂ ಈ ಸಂದರ್ಭವು ದಾಖಲಾಗುತ್ತದೆ.

ಬಾಂಗ್ಲಾದೇಶಕ್ಕೆ ಮಾನ್ಯತೆ ಕೊಟ್ಟ ಮೊದಲ ದೇಶಗಳಲ್ಲಿ ಭಾರತವೂ ಒಂದು. ಆದರೆ, ಒಂದೇ ಸಂಸ್ಕೃತಿ, ಭಾಷೆಯನ್ನು ಹಂಚಿಕೊಂಡಿರುವ ಈ ದೇಶಗಳ ನಡುವೆ ಉದ್ದಕ್ಕೂ ಉತ್ತಮ ಸಂಬಂಧ ಇರಲಿಲ್ಲ ಎಂಬುದು ವಿಷಾದಕರ ಸತ್ಯ. 1975ರಲ್ಲಿ ಮುಜೀಬುರ್‌ ರಹಮಾನ್‌ ಅವರ ಹತ್ಯೆಯೊಂದಿಗೆ ಬಾಂಗ್ಲಾದೇಶದ ಚುಕ್ಕಾಣಿಯು ಸೇನೆ ಮತ್ತು ಮುಸ್ಲಿಂ ಮೂಲಭೂತವಾದಿಗಳ ಕೈಗೆ ಹೋಯಿತು. ಭಾರತದ ಜತೆಗೆ ಉತ್ತಮ ಬಾಂಧವ್ಯ ಸಾಧ್ಯವೇ ಇಲ್ಲ ಎಂಬ ಸ್ಥಿತಿ ಆಗ ನಿರ್ಮಾಣ ಆಗಿತ್ತು. 2001ರಿಂದ 2006ರ ನಡುವೆ ಆಡಳಿತ ನಡೆಸಿದ ಬಾಂಗ್ಲಾದೇಶ ನ್ಯಾಷನಲಿಸ್ಟ್‌ ಪಾರ್ಟಿ ಮತ್ತು ಜಮಾತ್‌ ಎ ಇಸ್ಲಾಮಿ ಮೈತ್ರಿಕೂಟ ಸರ್ಕಾರವು ಭಾರತ ವಿರೋಧಿ ಮನಃಸ್ಥಿತಿಯನ್ನು ಜನರಲ್ಲಿ ಬಿತ್ತುವ ಯತ್ನವನ್ನೂ ಮಾಡಿತ್ತು. ಈಶಾನ್ಯ ರಾಜ್ಯಗಳಲ್ಲಿ ಗಲಭೆ ನಡೆಯಲು ಈ ಸರ್ಕಾರವು ಕುಮ್ಮಕ್ಕು ಮತ್ತು ನೆರವು ನೀಡಿತ್ತು ಎಂಬ ಆರೋಪವೂ ಇದೆ. ಎರಡೂ ದೇಶಗಳ ಸಂಬಂಧವು ಪಾತಾಳಕ್ಕೆ ಕುಸಿದ ದಿನಗಳವು. ಆದರೆ, ಕಳೆದ 12 ವರ್ಷಗಳಿಂದ ಅಧಿಕಾರದಲ್ಲಿರುವ ಶೇಖ್‌ ಹಸೀನಾ ಅವರು ಸಂಬಂಧಕ್ಕೆ ಮತ್ತೆ ಮಾಧುರ್ಯ ತುಂಬುವಲ್ಲಿ ಯಶಸ್ವಿಯಾಗಿದ್ದಾರೆ. ಭಾರತ ವಿರೋಧಿ ಚಟುವಟಿಕೆಗಳನ್ನು ದಮನ ಮಾಡಿ ಭಾರತದ ವಿಶ್ವಾಸ ಗಳಿಸಿದ್ದಾರೆ. ಭಾರತವು ಈ ದೇಶದ ಜತೆಗೆ ಅತ್ಯಂತ ಉದ್ದದ ಅಂದರೆ 4,097 ಕಿ.ಮೀ. ಗಡಿಯನ್ನು ಹಂಚಿಕೊಂಡಿದೆ. ಈ ಪ್ರದೇಶದಲ್ಲಿ ಅತ್ಯಂತ ಶಾಂತವಾಗಿರುವ ಗಡಿ ಇದು ಎಂಬ ಹೆಗ್ಗಳಿಕೆಯು ಎರಡೂ ದೇಶಗಳ ನಡುವೆ ಇರುವ ಸಹಕಾರದ ದ್ಯೋತಕವಾಗಿದೆ. 2015ರ ಭೂಗಡಿ ಒಪ್ಪಂದದ ಮೂಲಕ ಗಡಿಯಲ್ಲಿನ ವಿವಾದಾತ್ಮಕವಾದ ಪ್ರದೇಶಗಳನ್ನು ಪರಸ್ಪರ ರಿಗೆ ಬಿಟ್ಟು ಕೊಟ್ಟು ಅಲ್ಲಿನ ಜನರು ಯಾವುದೇ ದೇಶದ ‌ಪೌರತ್ವ ಸ್ವೀಕರಿಸಬಹುದು ಎಂಬ ನಿರ್ಧಾರಕ್ಕೆ ಬಂದದ್ದು ಐತಿಹಾಸಿಕ. ತೀಸ್ತಾ ನದಿ ನೀರು ಹಂಚಿಕೆ, ಗಡಿಯಲ್ಲಿ ನುಸುಳುವ ಜನರನ್ನು ತಡೆಯಲು ಭಾರತದ ಗಡಿ ರಕ್ಷಣಾ ಪಡೆಯ ಯೋಧರು ನಡೆಸುವ ಕಾರ್ಯಾಚರಣೆ ವಿಚಾರಗಳಲ್ಲಿ ಸ್ವಲ್ಪಮಟ್ಟಿನ ಅಸಮಾಧಾನ ಇದೆ ಎಂಬುದು ನಿಜ. ಆದರೆ, ಇಂತಹ ಸಮಸ್ಯೆಗಳು ಬಿಕ್ಕಟ್ಟುಗಳಾಗಿ ಬೆಳೆಯದಂತೆ ಹಸೀನಾ ಅವರು ನೋಡಿಕೊಂಡಿದ್ದಾರೆ. ಸಹೋದರ ಬಾಂಧವ್ಯದ ಎರಡು ದೇಶಗಳು ಇನ್ನೂ ನಿಕಟವಾಗಿ, ದ್ವಿಪಕ್ಷೀಯ ಸಂಬಂಧಕ್ಕೆ ಮಾದರಿಯಾಗಿ ನಿಲ್ಲುವುದಕ್ಕೆ ಎಲ್ಲ ಅವಕಾಶಗಳೂ ಇವೆ. ಇದು ಭಾರತ–ಬಾಂಗ್ಲಾ ಮಾತ್ರವಲ್ಲ, ಏಷ್ಯಾದ ಶಾಂತಿ ಮತ್ತು ಪ್ರಗತಿಗೆ ಅಗತ್ಯವೂ ಹೌದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT