ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ರಂಗಮಂದಿರಗಳ ಬಾಡಿಗೆ ಹೆಚ್ಚಳ – ವ್ಯಾಪಾರಿ ಮನೋಭಾವ ಸರಿಯಲ್ಲ

Last Updated 8 ಏಪ್ರಿಲ್ 2022, 19:30 IST
ಅಕ್ಷರ ಗಾತ್ರ

ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ, ನಯನ ಸಭಾಂಗಣ, ಕಲಾಗ್ರಾಮದ ಸಮುಚ್ಚಯ ಸೇರಿದಂತೆ ಸರ್ಕಾರಿ ರಂಗಮಂದಿರಗಳ ಬಾಡಿಗೆ ಹೆಚ್ಚಿಸಿರುವ ಸರ್ಕಾರದ ನಿರ್ಧಾರ, ರಂಗಭೂಮಿ ಹಾಗೂ ವಿವಿಧ ಕಲಾ ಪ್ರಕಾರಗಳ ಹಿತಾಸಕ್ತಿಗೆ ಪೆಟ್ಟು ನೀಡುವಂತಹದ್ದು. ನಾಡಿನ ಸಾಂಸ್ಕೃತಿಕ ಜೀವಂತಿಕೆಯ ರೂಪವಾಗಿ ಜನಮಾನಸದಲ್ಲಿ ಗುರುತಿಸಿಕೊಂಡಿರುವ ರಂಗಮಂದಿರಗಳ ಬಾಡಿಗೆ ಮತ್ತು ಸುರಕ್ಷತಾ ಠೇವಣಿಯನ್ನು ಹೆಚ್ಚಿಸುವ ಮೂಲಕ ನಾಡು ನುಡಿಗೆ ಸಂಬಂಧಿಸಿದ ಸೃಜನಶೀಲ ಚಟುವಟಿಕೆಗಳನ್ನು ದುಬಾರಿ ಬಾಬತ್ತಾಗಿಸಲು ಸರ್ಕಾರ ಹೊರಟಿದೆ. ಕೊರೊನಾ ಕಾರಣದಿಂದಾಗಿ ಎರಡು ವರ್ಷಗಳಿಂದ ರಂಗಭೂಮಿ ಹೆಚ್ಚೂಕಡಿಮೆ ನಿಷ್ಕ್ರಿಯವಾಗಿತ್ತು. ನಾಟಕ ಪ್ರದರ್ಶನಗಳನ್ನೇ ನೆಚ್ಚಿಕೊಂಡಿದ್ದ ಕಲಾವಿದರು, ತಂತ್ರಜ್ಞರು ಮತ್ತು ಕಾರ್ಮಿಕರು ಸಂಕಷ್ಟಕ್ಕೆ ಒಳಗಾಗಿದ್ದರು. ಕೊರೊನಾ ಸೋಂಕಿನ ಆತಂಕ ಕಡಿಮೆಯಾಗಿರುವ ಸಂದರ್ಭದಲ್ಲಿ ರಂಗಚಟುವಟಿಕೆಗಳು ನಿಧಾನಕ್ಕೆ ಆರಂಭವಾಗುತ್ತಿದ್ದು, ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ರಂಗಮಂದಿರಗಳ ಬಾಡಿಗೆಯನ್ನು ದುಬಾರಿಯಾಗಿಸಿರುವುದು ಸರಿಯಾದ ನಡೆಯಲ್ಲ. ಬಿಕ್ಕಟ್ಟಿನ ಸಂದರ್ಭದಲ್ಲಿ ಕಲಾವಿದರ ಬೆಂಬಲಕ್ಕೆ ನಿಂತು, ರಂಗಭೂಮಿ ಸೇರಿದಂತೆ ವಿವಿಧ ಕಲಾಪ್ರಕಾರಗಳ ಪುನಶ್ಚೇತನಕ್ಕೆ ಸರ್ಕಾರ ನೆರವು ನೀಡಬೇಕಾಗಿತ್ತು. ಅದರ ಬದಲಾಗಿ ಸರ್ಕಾರ ಕೈಗೊಂಡಿರುವ ಬಾಡಿಗೆ ಏರಿಕೆಯ ನಿರ್ಧಾರವು ಈಗಾಗಲೇ ಸಂಕಷ್ಟದಲ್ಲಿರುವ ಕಲಾಪ್ರಕಾರಗಳನ್ನು ಮತ್ತಷ್ಟು ದುರ್ಬಲಗೊಳಿಸಲಿದೆ. ದುಬಾರಿ ಮೊತ್ತವನ್ನು ಭರಿಸಿ ಕಾರ್ಯಕ್ರಮ ನಡೆಸುವುದು ಹವ್ಯಾಸಿ ಸಂಸ್ಥೆಗಳ ಪಾಲಿಗೆ ಸುಲಭವಲ್ಲ. ಸ್ವಚ್ಛತೆ, ನಿರ್ವಹಣೆಯ ಖರ್ಚು ಹೆಚ್ಚಾಗಿರುವುದನ್ನುರಂಗಮಂದಿರಗಳ ಬಾಡಿಗೆ ಏರಿಸಲಿಕ್ಕೆ ಕಾರಣವನ್ನಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರು ನೀಡಿದ್ದಾರೆ. ಸಾಂಸ್ಕೃತಿಕ ಚಟುವಟಿಕೆಗಳು ಲಾಭಕರ ಹಾಗೂ ರಂಗಮಂದಿರಗಳ ಮೂಲಕ ಸರ್ಕಾರ ಲಾಭ ಮಾಡಲು ಬಯಸುತ್ತಿದೆ ಎನ್ನುವ ಅರ್ಥವು ಸಚಿವರ ಮಾತುಗಳಲ್ಲಿ ಇದ್ದಂತಿದೆ. ಈ ವ್ಯಾಪಾರಿ ಧೋರಣೆಯನ್ನು ಒಪ್ಪಲಾಗದು. ಯಾವ ಚಟುವಟಿಕೆಯನ್ನು ವ್ಯಾಪಾರಿ ದೃಷ್ಟಿಯಿಂದ ನೋಡಬೇಕು ಹಾಗೂ ಯಾವುದನ್ನು ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ನೋಡಬೇಕು ಎನ್ನುವ ವಿವೇಚನೆ ಸರ್ಕಾರಕ್ಕೆ ಅಗತ್ಯ.

ಸರ್ಕಾರ ನಿರ್ವಹಿಸುವ ರಂಗಮಂದಿರಗಳು, ಸಭಾಂಗಣಗಳಲ್ಲಿ ನಾಟಕ ಹಾಗೂ ಯಕ್ಷಗಾನ ಪ್ರದರ್ಶನಗಳ ಜೊತೆಗೆ ಪುಸ್ತಕ ಬಿಡುಗಡೆ, ವಿಚಾರ ಸಂಕಿರಣ, ಕಾರ್ಯಾಗಾರ, ಗೌರವ ಸಮರ್ಪಣೆ, ಸಂಗೀತ ಕಾರ್ಯಕ್ರಮಗಳಂತಹ ಸಾಂಸ್ಕೃತಿಕ ಚಟುವಟಿಕೆಗಳು ನಡೆಯುತ್ತವೆ. ಸಾಂಸ್ಕೃತಿಕ ಪ್ರೀತಿಯ ಹಾಗೂ ಲಾಭದ ನಿರೀಕ್ಷೆಯಿಲ್ಲದ ಇಂಥ ಚಟುವಟಿಕೆಗಳನ್ನು ಯಾವುದೇ ಜನಪರ ಸರ್ಕಾರ ಉತ್ತೇಜಿಸಬೇಕು. ಸರ್ಕಾರಕ್ಕೆ ಸ್ಪಷ್ಟವಾದ ಸಾಂಸ್ಕೃತಿಕ ನೀತಿ ಇಲ್ಲದೇ ಹೋದಾಗ, ಸೃಜನಶೀಲ ಚಟುವಟಿಕೆಗಳು ಕೂಡ ವ್ಯಾಪಾರದ ಚೌಕಟ್ಟಿನಲ್ಲಿ ಕಾಣಿಸುತ್ತವೆ. ಸಿನಿಮಾಕ್ಕೆ ಸಂಬಂಧಿಸಿದಂತೆಯೂ ಸರ್ಕಾರದ ಇತ್ತೀಚಿನ ವರ್ಷಗಳ ನಡವಳಿಕೆಗೆ ಸಾಂಸ್ಕೃತಿಕ ನೆಲೆಗಟ್ಟಿಲ್ಲ. ಇನ್ನೂರು ಕನ್ನಡ ಸಿನಿಮಾಗಳಿಗೆ ಸಹಾಯಧನ ನೀಡುವುದಾಗಿ ಸರ್ಕಾರ ಬಜೆಟ್‌ನಲ್ಲಿ ಘೋಷಿಸಿದೆ. ಸಿನಿಮಾ ಸಂಸ್ಕೃತಿಗೆ ಉಪಯೋಗವಿಲ್ಲದ ಈ ಯೋಜನೆಯಿಂದ ಸಾರ್ವಜನಿಕ ಹಣದ ಅಪಬಳಕೆಯಾಗುತ್ತದೆಯೇ ಹೊರತು, ಗುಣಾತ್ಮಕ ಸಿನಿಮಾಕ್ಕೆ ಯಾವುದೇ ಪ್ರಯೋಜನವಿಲ್ಲ. ಸರ್ಕಾರದ ಉತ್ತೇಜನ ಬೇಕಾಗಿರುವುದು ಸಿನಿಮಾ ಮಾಧ್ಯಮವನ್ನು ಕಲೆಯನ್ನಾಗಿ ದುಡಿಸಿಕೊಳ್ಳುತ್ತಿರುವ ನಿರ್ಮಾತೃಗಳಿಗೇ ಹೊರತು, ದೃಶ್ಯಮಾಧ್ಯಮವನ್ನು ಸರಕಾಗಿ ಬಳಸಿಕೊಳ್ಳುತ್ತಿರುವವರಿಗೆ ಅಲ್ಲ. ಸಿನಿಮಾ ಉದ್ಯಮದ ಬಗ್ಗೆ ಸರ್ಕಾರಕ್ಕೆ ನಿಜವಾದ ಕಾಳಜಿಯಿದ್ದಲ್ಲಿ ಸಹಾಯಧನ ಹಾಗೂ ಪ್ರಶಸ್ತಿಗಳು ಆಯಾ ವರ್ಷವೇ ದೊರೆಯುವಂತೆ ಮಾಡಬೇಕು. ಕಳೆದ ಐದು ವರ್ಷಗಳಿಂದ ಚಲನಚಿತ್ರ ಪ್ರಶಸ್ತಿಗಳ ಪ್ರದಾನ ಕಾರ್ಯಕ್ರಮಕ್ಕೆ ಗರ ಬಡಿದಂತಿದೆ. 2017 ಮತ್ತು 2018ರ ಸಾಲಿನ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದ್ದರೂ, ಪ್ರಶಸ್ತಿ ‍ಪ್ರದಾನ ಕಾರ್ಯಕ್ರಮ ನಡೆದಿಲ್ಲ. 2019, 2020 ಹಾಗೂ 2021ರ ಸಾಲಿನ ಪ್ರಶಸ್ತಿಗಳ ಆಯ್ಕೆ ಪ್ರಕ್ರಿಯೆ ಇನ್ನೂ ಶುರುವಾಗಿಲ್ಲ. ಡಾ. ರಾಜ್‌ಕುಮಾರ್‌ ಅವರ ಹುಟ್ಟುಹಬ್ಬವಾದ ಏಪ್ರಿಲ್‌ 24ರಂದು ಪ್ರತಿವರ್ಷ ಚಲನಚಿತ್ರ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಿದ್ದರಾಮಯ್ಯ ಅವರು ಮುಖ್ಯ ಮಂತ್ರಿಯಾಗಿದ್ದಾಗ ಘೋಷಿಸಲಾಗಿತ್ತು. ಒಂದೆರಡು ವರ್ಷಗಳ ಕಾಲ ನಿಯಮಿತವಾಗಿ ನಡೆದ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಂತರ ಅನಿಯಮಿತವಾಯಿತು. ಸಮಯಕ್ಕೆ ಸರಿಯಾಗಿ ನೀಡಿದಾಗಲಷ್ಟೇ ನೆರವು ಹಾಗೂ ಪ್ರೋತ್ಸಾಹಕ್ಕೆ ಬೆಲೆ–ಗೌರವ ಎನ್ನುವುದನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕು. ಸಾಂಸ್ಕೃತಿಕ ನೀತಿಗೆ ಸಂಬಂಧಿಸಿದಂತೆ ನನೆಗುದಿಗೆ ಬಿದ್ದಿರುವ ಬರಗೂರು ರಾಮಚಂದ್ರಪ್ಪ ವರದಿಯನ್ನು ಸರ್ಕಾರ ಆದಷ್ಟು ಬೇಗ ಅನುಷ್ಠಾನಕ್ಕೆ ತರಬೇಕು. ಅದಕ್ಕೆ ಮುನ್ನುಡಿಯಾಗಿ, ರಂಗಮಂದಿರಗಳ ಬಾಡಿಗೆ ಹೆಚ್ಚಳದ ನಿರ್ಧಾರವನ್ನು ಹಿಂದಕ್ಕೆ ಪಡೆಯಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT