ಭಾರತ – ಅಮೆರಿಕ ಸಹಕಾರ ಹೊಸ ಭರವಸೆ: ಎಚ್ಚರವೂ ಇರಲಿ

7

ಭಾರತ – ಅಮೆರಿಕ ಸಹಕಾರ ಹೊಸ ಭರವಸೆ: ಎಚ್ಚರವೂ ಇರಲಿ

Published:
Updated:
Deccan Herald

ಭಾರತ ಹಾಗೂ ಅಮೆರಿಕ ವಿದೇಶಾಂಗ ಹಾಗೂ ರಕ್ಷಣಾ ಸಚಿವರ ಮಧ್ಯೆ 2+2 ಮಾತುಕತೆ ಕಳೆದ ವಾರ ನಡೆದಿದೆ. ಈ ವರ್ಷ ಎರಡು ಬಾರಿ ಈ ಮಾತುಕತೆ ನಡೆಯುವ ದಿನಾಂಕಗಳನ್ನು ರದ್ದುಪಡಿಸಿದ ನಂತರ ಅಂತೂ ಈ 2+2 ಸಚಿವ ಮಟ್ಟದ ಮಾತುಕತೆ ನಡೆಯಿತು ಎಂಬುದು ಸಕಾರಾತ್ಮಕ. ವ್ಯೂಹಾತ್ಮಕ ಸಮಾಲೋಚನೆಗಳನ್ನು ಹೊಸ ಎತ್ತರಕ್ಕೆ ಒಯ್ಯುವ ಈ ಹೊಸಬಗೆಯ ಸಚಿವ ಮಟ್ಟದ ಮಾತುಕತೆ ಆರಂಭಿಸುವ ವಿಚಾರವನ್ನು 2017ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಅಮೆರಿಕದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಭೇಟಿ ಮಾಡಿದ ಸಂದರ್ಭದಲ್ಲಿ ಪ್ರಕಟಿಸಲಾಗಿತ್ತು. ಅನೇಕ ತಿಂಗಳುಗಳ ಎಳೆದಾಟ ಹಾಗೂ ಆಗಾಗ್ಗೆ ಸಣ್ಣಪುಟ್ಟ ಅಪಶ್ರುತಿಗಳ ನಂತರ ನಡೆದ ಮಾತುಕತೆ ವೇಳೆ, ಭಾರತೀಯ ಸೇನೆಗೆ ರಕ್ಷಣಾ ತಂತ್ರಜ್ಞಾನ ಒದಗಿಸುವ ಮಹತ್ವದ ಒಪ್ಪಂದಕ್ಕೆ ಅಮೆರಿಕ ಸಹಿ ಹಾಕಿದೆ. ಗಡಿಯಾಚೆಗಿನ ಭಯೋತ್ಪಾದನೆ, ಪರಮಾಣು ಸರಬರಾಜುದಾರ ಗುಂಪಿಗೆ (ಎನ್‌ಎಸ್‌ಜಿ) ಭಾರತದ ಸದಸ್ಯತ್ವ, ಎಚ್‌1ಬಿ ವೀಸಾ ಹಾಗೂ ಭಾರತ–ಪೆಸಿಫಿಕ್ ವಲಯದಲ್ಲಿ ಸಹಕಾರ ಹೆಚ್ಚಿಸುವ ಮಾರ್ಗಗಳ ವಿಚಾರಗಳೂ ಈ ಮಾತುಕತೆ ವೇಳೆ ಚರ್ಚೆಯಾಗಿವೆ. ಉಭಯ ದೇಶಗಳ ನಡುವೆ ಸಂವಹನ ಸಮನ್ವಯ ಹಾಗೂ ಭದ್ರತಾ ಒಪ್ಪಂದಕ್ಕೆ (ಕಮ್ಯುನಿಕೇಷನ್ಸ್ ಕಂಪ್ಯಾಟಿಬಿಲಿಟಿ ಅಂಡ್ ಸೆಕ್ಯುರಿಟಿ ಅಗ್ರಿಮೆಂಟ್) ಸಹಿ ಬಿದ್ದಿರುವುದು ಮುಖ್ಯವಾದದ್ದು. ಎಂದರೆ ಈಗ ಭಾರತ, ಅಮೆರಿಕದ ಬಹು ಪ್ರಮುಖ ಮಿಲಿಟರಿ (ರಾಜಕೀಯ) ಪಾಲುದಾರ ರಾಷ್ಟ್ರವಾದಂತಾಗಿದೆ. ಇದರಿಂದ ಭಾರತ ಮತ್ತು ಅಮೆರಿಕ ಮಿಲಿಟರಿ ಹಾಗೂ ಭದ್ರತಾ ಸಹಕಾರ ಹೊಸ ಎತ್ತರ ತಲುಪಲಿದೆ. ಅಮೆರಿಕದ ಅತ್ಯಾಧುನಿಕ ರಕ್ಷಣಾ ವ್ಯವಸ್ಥೆ ಹಾಗೂ ಸೌಲಭ್ಯಗಳನ್ನು ಭಾರತ ಬಳಸಿಕೊಳ್ಳುವುದು ಸಾಧ್ಯವಾಗಲಿದೆ. ಎರಡೂ ರಾಷ್ಟ್ರಗಳ ವಿದೇಶಾಂಗ ಹಾಗೂ ರಕ್ಷಣಾ ಸಚಿವರ ಮಧ್ಯೆ ಹಾಟ್‌ಲೈನ್ ಹಾಗೂ ಎರಡೂ ರಾಷ್ಟ್ರಗಳ ಮಧ್ಯೆ ಮೊದಲ ತ್ರಿಸೇವಾ ಮಿಲಿಟರಿ ಕಸರತ್ತುಗಳನ್ನು ಆರಂಭಿಸಲೂ ನಿರ್ಧರಿಸಲಾಗಿದೆ. ಮುಂದಿನ ವರ್ಷ (2019) ಭಾರತದ ಪೂರ್ವ ಕರಾವಳಿಯಲ್ಲಿ ಜಂಟಿ ಸೇನಾ ಕಸರತ್ತು ನಡೆಯಲಿದೆ.

ವ್ಯಾಪಾರ ವಿಚಾರಗಳನ್ನೂ ಈ ಮಾತುಕತೆಯ ವೇಳೆ ಪ್ರಸ್ತಾಪಿಸಲಾಗಿದೆ. ಭಾರತದಿಂದ ಅಮೆರಿಕದ ತೈಲ, ಅನಿಲ ಮತ್ತು ವಿಮಾನಗಳ ಆಮದು ಹೆಚ್ಚಳವನ್ನು ನಿರೀಕ್ಷಿಸುವುದಾಗಿ ಅಮೆರಿಕ ಈ ಸಂವಾದದ ವೇಳೆ ಭಾರತಕ್ಕೆ ಹೇಳಿದೆ. ಭಾರತಕ್ಕೆ ಲಭ್ಯವಾಗುತ್ತಿರುವ ವ್ಯಾಪಾರ ಉಳಿತಾಯ (ಟ್ರೇಡ್ ಸರ್‌ಪ್ಲಸ್‌) ಹಿನ್ನೆಲೆಯಲ್ಲಿ ವ್ಯಾಪಾರ ಸಮತೋಲನ ತರುವುದಕ್ಕಾಗಿ ಇದು ಅಗತ್ಯ ಎಂದು ಹೇಳಲಾಗಿದೆ. ಅಮೆರಿಕದಿಂದ ಭಾರತ ಮಾಡಿಕೊಳ್ಳುವ ಆಮದಿನ ವೆಚ್ಚಕ್ಕಿಂತ ಅಮೆರಿಕಕ್ಕೆ ಭಾರತ ಮಾಡುವ ರಫ್ತಿನಿಂದ ಗಳಿಕೆ ಹೆಚ್ಚಿದೆ. ಈ ವ್ಯಾಪಾರ ಅಸಮತೋಲನ ಸರಿಪಡಿಸಬೇಕೆಂಬುದು ಅಮೆರಿಕ ವಾದ. ಆದರೆ, ಈ ಮುಕ್ತ ಮಾರುಕಟ್ಟೆ ವಿರೋಧಿ ಬೇಡಿಕೆಗೆ ಕೇಂದ್ರ ಸರ್ಕಾರ ಮಣಿದಿದೆಯೇ ಎಂಬುದು ಸ್ಪಷ್ಟವಿಲ್ಲ. ಇರಾನ್‌ನಿಂದ ತೈಲವನ್ನು ಭಾರತ ಆಮದು ಮಾಡಿಕೊಳ್ಳುತ್ತಿದೆ. ಇದು ಮುಂದೆ ಸಮಸ್ಯೆಯಾಗಲಿದೆಯೇ ಎಂಬ ಪ್ರಶ್ನೆಗೂ ನಿಖರ ಉತ್ತರ ಸಿಕ್ಕಿಲ್ಲ. ಇರಾನ್‍ನಿಂದ ತೈಲ ಆಮದನ್ನು ಕಡಿಮೆ ಮಾಡುತ್ತಾ ನವೆಂಬರ್ 4ರೊಳಗೆ ಶೂನ್ಯಕ್ಕಿಳಿಸಬೇಕೆಂಬುದನ್ನು ಭಾರತ ಸೇರಿದಂತೆ ಎಲ್ಲಾ ರಾಷ್ಟ್ರಗಳಿಗೂ ಹೇಳಲಾಗಿದೆ ಎಂಬುದನ್ನು ಅಮೆರಿಕ ಹೇಳುತ್ತಲೇ ಇದೆ. ಆದರೆ ಡಾಲರ್ ಬಲಗೊಂಡು ಇಂಧನ ಬೆಲೆಗಳು ಏರುತ್ತಿರುವ ಪ್ರಸಕ್ತ ಸಂದರ್ಭದಲ್ಲಿ ವೆಚ್ಚದ ಕಾರಣದಿಂದ ಮಾತ್ರವಲ್ಲ, ಇರಾನ್‍ ಜೊತೆಗೆ ನಮಗಿರುವ ಗಟ್ಟಿ ಬಾಂಧವ್ಯದ ಹಿನ್ನೆಲೆಯಿಂದಲೂ ಭಾರತದ ಮೇಲೆ ಈ ಷರತ್ತು ಕೆಟ್ಟ ಪರಿಣಾಮ ಬೀರಲಿದೆ. ನವೆಂಬರ್ 4ರಂದು ಅಮೆರಿಕದಿಂದ ಪೂರ್ಣ ಆರ್ಥಿಕ ನಿರ್ಬಂಧಗಳು ಶುರುವಾದ ನಂತರ, ಇರಾನ್‌ನ ಚಬಹಾರ್ ಬಂದರಿನಲ್ಲಿ ಭಾರತದ ಹೂಡಿಕೆಗೆ ಅಮೆರಿಕ ಏನು ಕ್ರಮ ಕೈಗೊಳ್ಳಬಹುದು ಎಂಬ ಬಗ್ಗೆಯೂ ಈ ಮಾತುಕತೆ ನಂತರ ಯಾವುದೇ ಸ್ಪಷ್ಟತೆ ಮೂಡಿಲ್ಲ. ರಷ್ಯದಿಂದ ಎಸ್-400 ಕ್ಷಿಪಣಿ ವ್ಯವಸ್ಥೆಯ ಖರೀದಿಗೆ ಭಾರತ ಮುಂದಾಗಿದೆ. ಇದಕ್ಕೆ ಸಂಬಂಧಿಸಿದಂತೆ ಭಾರತ– ರಷ್ಯಾ ಮಧ್ಯದ ಸುದೀರ್ಘ ಮಿಲಿಟರಿ ಸಹಕಾರವನ್ನು ಅರ್ಥ ಮಾಡಿಕೊಳ್ಳುವುದಾಗಿ ಅಮೆರಿಕ ಹೇಳಿದುದಾಗಿ ವರದಿಯಾಗಿದೆ. 2+2 ಸಂವಾದದ ಲಾಭಗಳು ಅಮೆರಿಕಕ್ಕಷ್ಟೇ ಅನುಕೂಲಕರವಾಗಿರಬಾರದು. ಭಾರತವೂ ತನ್ನ ಹಿತಾಸಕ್ತಿಗಳನ್ನು ಕಾಪಾಡಿಕೊಂಡು ಮುಂದುವರಿಯುವುದು ಅಗತ್ಯವಾಗುತ್ತದೆ. ಹೀಗಾಗಿ ಮುಂದಿನ ದಿನಗಳಲ್ಲಿ ಈ ಬಗ್ಗೆ ಭಾರತ ಸಾಕಷ್ಟು ಪ್ರಯತ್ನಗಳನ್ನು ನಡೆಸಬೇಕು. ಅಮೆರಿಕದೊಂದಿಗಿನ ಬಾಂಧವ್ಯದಲ್ಲಿ ರಾಷ್ಟ್ರದ ಸ್ವಾಯತ್ತ ನೆಲೆಯನ್ನು ಪ್ರತಿಪಾದಿಸಿಕೊಳ್ಳುವುದೂ ನಮಗೆ ಮುಖ್ಯವಾಗುತ್ತದೆ.

ಬರಹ ಇಷ್ಟವಾಯಿತೆ?

 • 12

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !