ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಥಿಕತೆಗೆ ಹೊಸ ಸವಾಲು ಸಮರ್ಥ ನಿರ್ವಹಣೆ ಅಗತ್ಯ

Last Updated 10 ಮಾರ್ಚ್ 2020, 19:31 IST
ಅಕ್ಷರ ಗಾತ್ರ

ವಿಶ್ವದ ಪ್ರಮುಖ ಷೇರುಪೇಟೆಗಳಲ್ಲಿ ವಹಿವಾಟು ಕುಸಿತದ ಭಾರಿ ಕಂಪನಗಳು ಕಂಡುಬಂದಿರುವುದು ಜಾಗತಿಕ ಅರ್ಥವ್ಯವಸ್ಥೆಯ ಪಾಲಿಗೆ ಹೊಸ ಕಂಟಕವಾಗಿ ಪರಿಣಮಿಸಿದೆ. ಮುಂಬೈ ಷೇರುಪೇಟೆಯ ಇತಿಹಾಸದಲ್ಲಿ ಸೋಮವಾರದ ವಹಿವಾಟಿನಲ್ಲಿನ ಮಹಾಕುಸಿತವು ಹೊಸ ದಾಖಲೆಯನ್ನೇ (1,941 ಅಂಶ) ಬರೆದಿದೆ. ಅರ್ಥವ್ಯವಸ್ಥೆಯ ಆರೋಗ್ಯದ ಸೂಚಕಗಳಲ್ಲಿ ಒಂದಾದ ಷೇರುಪೇಟೆಗಳಲ್ಲಿನ ಈ ತಲ್ಲಣವು ಜಾಗತಿಕ ಅರ್ಥವ್ಯವಸ್ಥೆಗೆ ಹೊಸ ಸವಾಲುಗಳನ್ನು ಒಡ್ಡಿದೆ.

ಸಂಕಷ್ಟಗಳು ಆರಂಭವಾದರೆ ಸರಣಿಯೋಪಾದಿಯಲ್ಲಿ ಎರಗುತ್ತವೆ ಎನ್ನುವ ಮಾತು ಸದ್ಯಕ್ಕೆ ನಿಜವಾದಂತಿದೆ. ದೇಶದಿಂದ ದೇಶಕ್ಕೆ ಕ್ಷಿಪ್ರವಾಗಿ ವ್ಯಾಪಿಸುತ್ತಿರುವ ಕೊರೊನಾ–2 ವೈರಸ್‌ ಸೋಂಕಿನಿಂದಾಗಿ ಆರ್ಥಿಕ ಚಟುವಟಿಕೆಗಳು ತತ್ತರಿಸಿವೆ. ಇದರ ಬೆನ್ನಿಗೇ ಆರಂಭವಾಗಿರುವ ಕಚ್ಚಾ ತೈಲ ದರ ಸಮರವು ಆರ್ಥಿಕತೆಗೆ ದೊಡ್ಡ ಪೆಟ್ಟು ನೀಡಲಿದೆ. ಇದರಿಂದಾಗಿ, ಷೇರುಪೇಟೆಗಳಲ್ಲಿ ಅಲ್ಲೋಲಕಲ್ಲೋಲ ಉಂಟಾಗಿ ವಹಿವಾಟು ಮುಗ್ಗರಿಸಿದೆ.

ತೈಲ ಕಂಪನಿಗಳು ಮತ್ತು ಬ್ಯಾಂಕ್‌ಗಳ ಷೇರು ಬೆಲೆ ಭಾರಿ ಕುಸಿತ ಕಂಡಿದೆ. ಯೆಸ್‌ ಬ್ಯಾಂಕ್‌ ಹಗರಣವು ದೇಶಿ ಬ್ಯಾಂಕಿಂಗ್‌ ಮತ್ತು ಹಣಕಾಸು ವಲಯದ ಸ್ಥಿರತೆ ಬಗ್ಗೆ ವಿದೇಶಿ ಹೂಡಿಕೆದಾರರಲ್ಲಿ ಆತಂಕ ಸೃಷ್ಟಿಸಿದೆ. ವಿದೇಶಿ ಬಂಡವಾಳವು ನಿರಂತರವಾಗಿ ಹೊರಗೆ ಹರಿಯುತ್ತಿದೆ. ತೈಲ ದರ ರಾಜಕೀಯವು ಇಂಧನ ಕ್ಷೇತ್ರದ ದೈತ್ಯ ಸಂಸ್ಥೆಗಳ ಷೇರುಗಳ ಬೆಲೆಯು ಗಮನಾರ್ಹವಾಗಿ ಕುಸಿಯಲು ಕಾರಣವಾಗಿದೆ.

ತೈಲ ರಫ್ತು ಮಾಡುವ ಪ್ರಮುಖ ದೇಶಗಳು ಉತ್ಪಾದನೆ ಕುರಿತು ಸಹಮತಕ್ಕೆ ಬರಲು ವಿಫಲಗೊಂಡಿರುವುದರಿಂದ ಹೊಸ ಬಿಕ್ಕಟ್ಟು ಉದ್ಭವಿಸಿದೆ. ರಷ್ಯಾದ ಜತೆ ಸೌದಿ ಅರೇಬಿಯಾವು ದರ ಸಮರಕ್ಕೆ ಇಳಿದಿರುವುದು ಜಾಗತಿಕ ಅರ್ಥವ್ಯವಸ್ಥೆಯಲ್ಲಿ ಕಂಪನದ ಅಲೆಗಳನ್ನು ಎಬ್ಬಿಸಿದೆ. ಬೇಡಿಕೆ ಕುಸಿತ, ಉತ್ಪಾದನೆ ಹೆಚ್ಚಳ ಹಾಗೂ ದರ ಇಳಿಕೆಯಿಂದಾಗಿ ಅನಿರೀಕ್ಷಿತ ತೊಡಕುಗಳು ಎದುರಾಗಲಿವೆ.

ತೈಲ ದರ ಕುಸಿತವು ಭಾರತಕ್ಕೆ ಒಂದು ಅರ್ಥದಲ್ಲಿ ವರದಾನ. ಕಚ್ಚಾ ತೈಲ ಖರೀದಿಗೆ ದೇಶ ವಿನಿಯೋಗಿಸುವ ಮೊತ್ತದಲ್ಲಿ ತೀವ್ರ ಇಳಿಕೆ ಆಗಲಿದೆ. ಇದರಿಂದಾಗಿ, ಆಮದು ವೆಚ್ಚ ಕಡಿಮೆಯಾಗಲಿದೆ. ಚಾಲ್ತಿ ಖಾತೆ ಕೊರತೆಯಲ್ಲಿ ಸಮತೋಲನ ಕಂಡು ಬರುವ ಸಾಧ್ಯತೆ ಇದೆ. ಹಣದುಬ್ಬರದಲ್ಲಿ ಸುಧಾರಣೆ ಕಾಣಬಹುದು. ಆದರೆ, ಇದರ ಪ್ರತಿಕೂಲ ಪರಿಣಾಮಗಳನ್ನೂ ನಿರ್ಲಕ್ಷಿಸುವಂತಿಲ್ಲ. ತೈಲ ವಹಿವಾಟಿನ ದೈತ್ಯ ಕಂಪನಿಗಳಿಗೆ ಇದು ಕೆಟ್ಟ ಕಾಲಘಟ್ಟವಾಗಿಯೂ ಪರಿಣಮಿಸಬಹುದು.

ಬಾಂಡ್‌ ಮಾರುಕಟ್ಟೆಯಲ್ಲಿ ಅವು ಸುಸ್ತಿದಾರ ಆಗಲಿವೆ. ಇದರಿಂದ, ಹಣಕಾಸು ಪೇಟೆಯಲ್ಲಿ ಮಂಕು ಕವಿಯುವ ಅಪಾಯ ಇದೆ. ಕೊರೊನಾ ವೈರಸ್‌ನಿಂದಾಗಿ ಚೀನಾ, ಇಟಲಿಯಲ್ಲಿ ಆರ್ಥಿಕ ಚಟುವಟಿಕೆಗಳ ಮೇಲೆ ಕಾರ್ಮೋಡ ಆವರಿಸಿದೆ. ಜಾಗತಿಕ ವ್ಯಾಪಾರ– ವಹಿವಾಟಿನ ಮೇಲೆಯೂ ಅದರ ಪರಿಣಾಮ ಆಗಲಿದೆ. ಈ ಎಲ್ಲ ವಿದ್ಯಮಾನಗಳ ಪರಿಣಾಮವು ಭಾರತದ ಮೇಲೂ ಇರುತ್ತದೆ.

ಮಂದಗತಿಯ ಆರ್ಥಿಕ ಚಟುವಟಿಕೆಗಳು ಇನ್ನಷ್ಟು ಮಂಕಾಗಬಹುದು. ಅರ್ಥವ್ಯವಸ್ಥೆಯನ್ನು ನಿರ್ವಹಿಸುವುದು ಇನ್ನಷ್ಟು ಕಠಿಣವಾಗಬಹುದು. ಈ ಸವಾಲುಗಳನ್ನುಸಮರ್ಥವಾಗಿ ಎದುರಿಸುವುದು ಸದ್ಯದ ಅಗತ್ಯ. ಬ್ಯಾಂಕಿಂಗ್‌ ಮತ್ತುಹಣಕಾಸು
ವ್ಯವಸ್ಥೆಯಲ್ಲಿ ಸಾರ್ವಜನಿಕರ ಮತ್ತು ಹೂಡಿಕೆದಾರರ ವಿಶ್ವಾಸ ಹೆಚ್ಚಿಸಲು ತುರ್ತು ಕ್ರಮಗಳನ್ನು ಕೈಗೊಳ್ಳ ಬೇಕಾಗಿದೆ.

ಕೆಲವು ಬಿಕ್ಕಟ್ಟುಗಳು ಒಂದಷ್ಟು ಅವಕಾಶಗಳನ್ನು ಕೂಡ ಸೃಷ್ಟಿಸಬಲ್ಲವು ಎಂಬ ಮಾತಿದೆ. ಆ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಳ್ಳುವ ಕಾರ್ಯತಂತ್ರ ರೂಪಿಸಬೇಕು. ಕೊರೊನಾ ಕಾರಣದಿಂದ ಸಾರ್ವಜನಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ಬಿಕ್ಕಟ್ಟು ಸೃಷ್ಟಿಯಾಗದಂತೆ ನೋಡಿಕೊಳ್ಳುವುದರ ಜತೆಗೆ ಅರ್ಥವ್ಯವಸ್ಥೆಯ ಆರೋಗ್ಯ ಕಾಪಾಡಿಕೊಳ್ಳುವ ಗುರುತರ ಹೊಣೆಯೂ ಸರ್ಕಾರದ ಮೇಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT