ಬುಧವಾರ, ನವೆಂಬರ್ 25, 2020
19 °C

ಸಂಪಾದಕೀಯ | ಉಳಿತಾಯಕ್ಕೆ ತೊಡಕಾಗುವ ಹಣದುಬ್ಬರ, ಅಗತ್ಯ ವಸ್ತುಗಳ ಪೂರೈಕೆ ಆಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಣದುಬ್ಬರ ಪ್ರಮಾಣವು ಅಕ್ಟೋಬರ್‌ ತಿಂಗಳಿನಲ್ಲಿ ಶೇಕಡ 7.61ರ ಮಟ್ಟ ತಲುಪಿದೆ. ಇದು ಸರಿಸುಮಾರು ಆರು ವರ್ಷಗಳ ಅವಧಿಯಲ್ಲಿನ ಗರಿಷ್ಠ ಪ್ರಮಾಣವೂ ಹೌದು. ಹಣದುಬ್ಬರವು ಏಪ್ರಿಲ್‌ ತಿಂಗಳಿನಿಂದಲೂ ಹೆಚ್ಚಿನ ಪ್ರಮಾಣದಲ್ಲೇ ಇದೆ. ಮಾರ್ಚ್‌ ಕೊನೆಯ ವಾರದಲ್ಲಿ ದೇಶದಲ್ಲಿ ಲಾಕ್‌ಡೌನ್‌ ಜಾರಿಗೆ ಬಂತು. ಮೊದಲೇ ಬಸವಳಿದಿದ್ದ ಅರ್ಥವ್ಯವಸ್ಥೆಯು ಲಾಕ್‌ಡೌನ್‌ ಜಾರಿಯಾದ ನಂತರ ಇನ್ನಷ್ಟು ದುರ್ಬಲಗೊಳ್ಳಲು ಆರಂಭಿಸಿತು. ಏಪ್ರಿಲ್‌ ತಿಂಗಳ ನಂತರ ದೇಶದ ಅರ್ಥವ್ಯವಸ್ಥೆಯ ವಿವಿಧ ವಲಯಗಳಿಂದ ಉದ್ಯೋಗ ನಷ್ಟ, ಆದಾಯ ಕಡಿತದ ವರದಿಗಳು ಬರ ತೊಡಗಿದವು. ಉದ್ಯೋಗ ನಷ್ಟ, ಆದಾಯ ಕಡಿತ ಅಂದರೆ ಜನರ ಕೈಯಲ್ಲಿ ಹಣದ ಚಲಾವಣೆ ಕಡಿಮೆ ಆಗುತ್ತದೆ. ಆದರೆ, ಉದ್ಯೋಗ ಹಾಗೂ ಆದಾಯ ನಷ್ಟ ತೀವ್ರವಾಗಿರುವ ಹೊತ್ತಿನಲ್ಲೇ ದೇಶದಲ್ಲಿ ಹಣದುಬ್ಬರ ದರವೂ ಹೆಚ್ಚಿನ ಪ್ರಮಾಣದಲ್ಲೇ ಇದೆ. ಜೇಬು ಬರಿದಾದ ಸಂದರ್ಭದಲ್ಲೇ ಅಗತ್ಯ ವಸ್ತುಗಳ ಬೆಲೆಯಲ್ಲಿ ಹೆಚ್ಚಳ ಆಗುತ್ತಿರುವ ಅಪರೂಪದ, ವಿಚಿತ್ರವಾದ ಹಾಗೂ ದೌರ್ಭಾಗ್ಯದ ಸನ್ನಿವೇಶವನ್ನು ದೇಶ ಕಾಣುತ್ತಿದೆ. ಬಹುಜನರ ಬದುಕಿಗೆ ತೀರಾ ಅವಶ್ಯಕವಾದ ಮಾಂಸ ಮತ್ತು ಮೀನು (ಶೇಕಡ 18.70ರಷ್ಟು ಬೆಲೆ ಹೆಚ್ಚಳ), ಮೊಟ್ಟೆ (ಶೇಕಡ 21.81ರಷ್ಟು), ಖಾದ್ಯ ತೈಲ(ಶೇಕಡ 15.17ರಷ್ಟು), ತರಕಾರಿ (ಶೇಕಡ 22.51ರಷ್ಟು), ದ್ವಿದಳ ಧಾನ್ಯ ಮತ್ತು ಅವುಗಳ ಉತ್ಪನ್ನಗಳ (ಶೇಕಡ 18.34ರಷ್ಟು) ಬೆಲೆಯಲ್ಲಿ ಭಾರಿ ಏರಿಕೆ ಅಕ್ಟೋಬರ್‌ ತಿಂಗಳಿನಲ್ಲಿ ದಾಖಲಾಗಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ನಿಯಂತ್ರಿಸಲು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ಹೇಳುತ್ತಿದ್ದರೂ ಆ ‘ಕ್ರಮಗಳು’ ಜನರ ದಿನನಿತ್ಯದ ಬದುಕನ್ನು ಹಗುರವಾಗಿಸುತ್ತಿರುವಂತೆ ಕಾಣುತ್ತಿಲ್ಲ. ಆ ಕ್ರಮಗಳು ಈವರೆಗೆ ಎಷ್ಟರಮಟ್ಟಿಗೆ ಉಪಯೋಗಕ್ಕೆ ಬಂದಿವೆ ಎಂಬುದನ್ನು ವಸ್ತುಗಳ ಬೆಲೆ ಏರಿಕೆ ಪ್ರಮಾಣವೇ ವಿವರಿಸುತ್ತಿದೆ.

ಚಿಲ್ಲರೆ ಹಣದುಬ್ಬರದ ಪ್ರಮಾಣವನ್ನು ಶೇಕಡ 4ಕ್ಕೆ ಮಿತಿಗೊಳಿಸಬೇಕು (ಇದರಲ್ಲಿ ಶೇಕಡ 2ರಷ್ಟು ಹೆಚ್ಚು ಅಥವಾ ಕಡಿಮೆ ಆಗಲು ಅವಕಾಶ ನೀಡಲಾಗಿದೆ) ಎಂದು ಕೇಂದ್ರ ಸರ್ಕಾರವು ಭಾರತೀಯ ರಿಸರ್ವ್‌ ಬ್ಯಾಂಕ್‌ಗೆ (ಆರ್‌ಬಿಐ) ಸೂಚಿಸಿತ್ತು. ಆದರೆ, ಏಪ್ರಿಲ್‌ ತಿಂಗಳ ನಂತರ ಹಣದುಬ್ಬರವು ಸರ್ಕಾರ ನಿಗದಿ ಮಾಡಿದ್ದ ಮಿತಿಗಿಂತ ಹೆಚ್ಚಿನ ಮಟ್ಟದಲ್ಲಿಯೇ ಉಳಿದುಕೊಂಡಿದೆ. ಈ ಪ್ರಮಾಣದ ಹಣದುಬ್ಬರವು ಇನ್ನೊಂದು ಸಮಸ್ಯೆ ಯನ್ನೂ ಸೃಷ್ಟಿಸುತ್ತಿದೆ. ಬ್ಯಾಂಕ್‌ನಲ್ಲಿ ಠೇವಣಿ ರೂಪದಲ್ಲಿ ಜನ ಇರಿಸುವ ಹಣಕ್ಕೆ ಸಿಗುವ ಬಡ್ಡಿಯು ಚಿಲ್ಲರೆ ಹಣದುಬ್ಬರ ಪ್ರಮಾಣಕ್ಕಿಂತ ಕಡಿಮೆ ಇದೆ. ಅಂದರೆ, ಈ ಪರಿಯ ಹಣದುಬ್ಬರವು ಉಳಿತಾಯವನ್ನು ಉತ್ತೇಜಿಸುವಂತೆ ಇಲ್ಲ. ಹಣದುಬ್ಬರ ಹೆಚ್ಚಿನ ಪ್ರಮಾಣದಲ್ಲೇ ಮುಂದುವರಿಯುವುದು ದೀರ್ಘಾವಧಿಯಲ್ಲಿ ಉಳಿತಾಯ ಪ್ರವೃತ್ತಿಯನ್ನು ಚಿವುಟಬಹುದು. ಈಕ್ವಿಟಿ ಹೂಡಿಕೆಯು ಹಣದುಬ್ಬರದ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದ ಲಾಭವನ್ನು ತಂದುಕೊಡುವ ಶಕ್ತಿ ಹೊಂದಿರುವುದು ನಿಜವಾದರೂ, ಭಾರತದಲ್ಲಿ ಷೇರುಗಳ ಮೇಲಿನ ಹೂಡಿಕೆಯು ಕಡಿಮೆ ಪ್ರಮಾಣದಲ್ಲಿಯೇ ಇದೆ ಎಂಬುದು ನೀತಿ ನಿರೂಪಕರಿಗೆ ಗೊತ್ತಿಲ್ಲದ ವಿಚಾರವಲ್ಲ. ಅಲ್ಲದೆ, ಷೇರು–ಈಕ್ವಿಟಿ ಹೂಡಿಕೆಯ ಬಗ್ಗೆ ಮಧ್ಯಮ, ಮೇಲ್ಮಧ್ಯಮ ವರ್ಗದ ಜನರಲ್ಲಿ ಕೂಡ ಒಂದಿಷ್ಟು ಭೀತಿ ಇದೆ. ಹಾಗಾಗಿ, ಬ್ಯಾಂಕ್‌ಗಳ ಮೂಲಕ ಮಾಡುವ ಉಳಿತಾಯವನ್ನು ನಿರುತ್ತೇಜಿಸುವ ಮಟ್ಟದಲ್ಲಿ ಹಣದುಬ್ಬರ ಇರುವುದು ಅಲ್ಪಾವಧಿಯಲ್ಲೂ ದೀರ್ಘಾವಧಿಯಲ್ಲೂ ಒಳಿತಲ್ಲ. ಈಗಿನ ಹಣದುಬ್ಬರದ ಮಟ್ಟವು ಆರ್‌ಬಿಐಗೆ ರೆಪೊ ದರ ತಗ್ಗಿಸಲು ಅನುವು ಮಾಡಿಕೊಡುವಂತೆ ಇಲ್ಲ ಎಂಬ ಮಾತನ್ನು ಆರ್ಥಿಕ ತಜ್ಞರು ಆಡಿದ್ದಾರೆ. ರೆಪೊ ದರ ತಗ್ಗಿಸಿ, ಕಡಿಮೆ ದರಕ್ಕೆ ಸಾಲ ವಿತರಿಸಿ, ಮಾರುಕಟ್ಟೆಯಲ್ಲಿ ಹಣದ ಚಲಾವಣೆ ಹೆಚ್ಚುವಂತೆ ಮಾಡುವುದು ವ್ಯಾಪಕವಾಗಿ ಚಾಲ್ತಿಯಲ್ಲಿರುವ ಆರ್ಥಿಕ ಉತ್ತೇಜನಾ ಕ್ರಮ ಹೌದಾದರೂ, ಈಗಿನ ಸಂದರ್ಭದಲ್ಲಿ ಆರ್‌ಬಿಐ ರೆಪೊ ದರ ಹೆಚ್ಚಿಸಿ ಠೇವಣಿಗಳ ಮೇಲಿನ ಬಡ್ಡಿ ದರ ಹೆಚ್ಚಿಸುವ ಬಗ್ಗೆಯೂ ಆಲೋಚಿಸಬಹುದು. ಇದರ ಜೊತೆಯಲ್ಲೇ, ತೀವ್ರ ಪ್ರಮಾಣದ ಬೆಲೆ ಏರಿಕೆ ಕಾಣುತ್ತಿರುವ ಅಗತ್ಯ ವಸ್ತುಗಳ ಪೂರೈಕೆಯನ್ನು ಮಾರುಕಟ್ಟೆಯಲ್ಲಿ ಹೆಚ್ಚಿಸಿ, ಅವುಗಳ ಬೆಲೆ ತಗ್ಗುವಂತೆ ಮಾಡುವ ಹೊಣೆಯು ಆಳುವವರ ಮೇಲೆ ಇದೆ ಎಂಬುದನ್ನು ಮರೆಯುವಂತಿಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು