ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಸರ್ವರ್‌ ಸಮಸ್ಯೆ ನಿವಾರಿಸಿ: ಆಸ್ತಿ ನೋಂದಣಿ ಪ್ರಕ್ರಿಯೆಗೆ ವೇಗ ತುಂಬಿ

Last Updated 11 ಮಾರ್ಚ್ 2021, 19:30 IST
ಅಕ್ಷರ ಗಾತ್ರ

‘ಸರ್ವರ್‌ ಡೌನ್‌’ ಮತ್ತು ತಾಂತ್ರಿಕ ಸಮಸ್ಯೆಗಳು ರಾಜ್ಯದ ನೋಂದಣಿ ಮತ್ತು ಮುದ್ರಾಂಕ ಇಲಾಖೆಯನ್ನು ಇತ್ತೀಚಿನ ದಿನಗಳಲ್ಲಿ ಪದೇ ಪದೇ ಕಾಡತೊಡಗಿವೆ. ಫೆಬ್ರುವರಿ ತಿಂಗಳ ಮೊದಲ ವಾರ ಕೆಲವು ದಿನಗಳ ಕಾಲ ಸರ್ವರ್ ಅಡಚಣೆಯಿಂದ ನೋಂದಣಿ ಪ್ರಕ್ರಿಯೆ ಸ್ಥಗಿತಗೊಂಡಿತ್ತು. ಮಾರ್ಚ್‌ ತಿಂಗಳಿನಲ್ಲೂ ಅದೇ ಪರಿಸ್ಥಿತಿ ಎದುರಾಗಿದೆ.

ಸರ್ವರ್‌ ಡೌನ್‌ ಹಾಗೂ ಇತರ ತಾಂತ್ರಿಕ ಅಡಚಣೆಗಳ ಕಾರಣದಿಂದ ಸೋಮವಾರ ಮತ್ತು ಮಂಗಳವಾರ ರಾಜ್ಯದ ಬಹುಪಾಲು ಉಪನೋಂದಣಿ ಕಚೇರಿಗಳಲ್ಲಿ ಯಾವುದೇ ರೀತಿಯ ನೋಂದಣಿ ಪ್ರಕ್ರಿಯೆ ನಡೆದಿಲ್ಲ. ಇದರಿಂದಾಗಿ ಜನರು ತೀವ್ರ ಸಂಕಷ್ಟ ಅನುಭವಿಸಬೇಕಾಯಿತು. ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಆಗಾಗ ಇಂತಹ ಸಮಸ್ಯೆ ಮರುಕಳಿಸುತ್ತಲೇ ಇದೆ. ಲಾಕ್‌ಡೌನ್‌ನಿಂದ ಕುಸಿತ ಕಂಡು ಈಗಷ್ಟೇ ಚೇತರಿಕೆಯ ಹಾದಿಯಲ್ಲಿರುವ ಆಸ್ತಿ ನೋಂದಣಿ ಪ್ರಕ್ರಿಯೆಗೆ ಈಗ ‘ಸರ್ವರ್‌ ಡೌನ್‌’ ಸಮಸ್ಯೆ ಕಾಡತೊಡಗಿದೆ. ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ಮಧ್ಯವರ್ತಿಗಳ ಹಾವಳಿ, ಭ್ರಷ್ಟಾಚಾರ, ವಿಳಂಬ ಧೋರಣೆ ತಡೆಗಾಗಿ ತಂತ್ರಾಂಶ ಆಧಾರಿತ ಪೂರ್ವ ಮಾಹಿತಿ ದಾಖಲೀಕರಣ ವ್ಯವಸ್ಥೆ (ಪಿಡಿಇಎಸ್‌) ಹಾಗೂ ಕಾವೇರಿ ತಂತ್ರಾಂಶದ ಮೂಲಕವೇ ಅರ್ಜಿದಾರರ ನೋಂದಣಿಯ ಸಮಯ ನಿಗದಿ ವ್ಯವಸ್ಥೆಯನ್ನು ವರ್ಷದ ಹಿಂದೆಯೇ ಪರಿಚಯಿಸಲಾಗಿದೆ.

ಈ ಪ್ರಕ್ರಿಯೆಯಲ್ಲಿ ಆಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ಸಂಗ್ರಹಿಸುವುದನ್ನು ಸುಲಲಿತಗೊಳಿಸುವ ಉದ್ದೇಶದಿಂದ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ‘ಕಾವೇರಿ’ ತಂತ್ರಾಂಶದ ಜತೆಗೆ ಕಂದಾಯ ಇಲಾಖೆಯ ‘ಭೂಮಿ’, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಇ–ಸ್ವತ್ತು, ನಗರಾಭಿವೃದ್ಧಿ ಇಲಾಖೆಯ ನಗರ ಆಸ್ತಿಗಳ ಮಾಲೀಕತ್ವ ಹಕ್ಕುಗಳ ದಾಖಲೆ (ಯುಪಿಒಆರ್‌) ವೆಬ್‌ ಪೋರ್ಟಲ್‌ಗಳನ್ನು ಜೋಡಿಸಲಾಗಿದೆ.

ಹೊಸ ವ್ಯವಸ್ಥೆಯಲ್ಲಿ ಆಸ್ತಿ ನೋಂದಣಿ ಮಾಡಿಸುವವರು ಋಣಭಾರ ಪ್ರಮಾಣಪತ್ರ (ಇಸಿ), ಇ– ಸ್ವತ್ತು ಅಥವಾ ಯುಪಿಒಆರ್‌ ಎಲ್ಲವನ್ನೂ ಆನ್‌ಲೈನ್‌ ಮೂಲಕವೇ ಅರ್ಜಿ ಸಲ್ಲಿಸಿ, ಪಡೆಯಬೇಕಿದೆ. ಒಂದು ಬಾರಿಯ ಪಾಸ್‌ವರ್ಡ್‌ (ಒಟಿಪಿ) ಆಧಾರದಲ್ಲಿ ಈ ದಾಖಲೆಗಳನ್ನು ಆನ್‌ಲೈನ್‌ ಮೂಲಕವೇ ಅರ್ಜಿದಾರರ ಪರವಾಗಿ ನೋಂದಣಿ ಇಲಾಖೆಗೆ ವರ್ಗಾಯಿಸುವ ವ್ಯವಸ್ಥೆ ಇದೆ. ಆದರೆ, ಸರ್ವರ್‌ ಸಮಸ್ಯೆಯಿಂದಾಗಿ ಅರ್ಜಿದಾರರ ಮೊಬೈಲ್‌ ಸಂಖ್ಯೆಗೆ ಒಟಿಪಿ ಬಾರದೆ ಇಡೀ ನೋಂದಣಿ ಇಲಾಖೆಯ ಕೆಲಸವೇ ಸ್ಥಗಿತಗೊಳ್ಳುತ್ತಿದೆ.

ಸರ್ಕಾರಿ ಇಲಾಖೆಗಳಲ್ಲಿ ತಂತ್ರಾಂಶಗಳ ಬಳಕೆಯು ವಿಳಂಬ ಧೋರಣೆ, ಭ್ರಷ್ಟಾಚಾರ ಮತ್ತು ದಲ್ಲಾಳಿಗಳ ಹಾವಳಿಗೆ ಕಡಿವಾಣ ಹಾಕಲು ಪೂರಕವಾಗಿರಬೇಕು. ಆದರೆ, ನೋಂದಣಿ ಇಲಾಖೆಯಲ್ಲಿ ಉದ್ಭವವಾಗುತ್ತಿರುವ ಪರಿಸ್ಥಿತಿಯು ಇಲಾಖೆಯನ್ನು ಮತ್ತಷ್ಟು ಅಧ್ವಾನದ ಸ್ಥಿತಿಗೆ ತಳ್ಳುವ ಮುನ್ಸೂಚನೆಗಳು ಕಾಣಿಸುತ್ತಿವೆ. ಸರ್ವರ್‌ ಮತ್ತು ತಂತ್ರಾಂಶ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡ ದಲ್ಲಾಳಿಗಳು ಜನರಿಂದ ಹಣ ದೋಚುತ್ತಿದ್ದಾರೆ ಎಂಬ ಆರೋಪ ಇದಕ್ಕೆ ಪುಷ್ಟಿ ನೀಡುತ್ತದೆ. ನೋಂದಣಿ ಮತ್ತು ಮುದ್ರಾಂಕ ಇಲಾಖೆಯು ರಾಜ್ಯ ಸರ್ಕಾರದ ಪ್ರಮುಖ ವರಮಾನ ಮೂಲಗಳಲ್ಲಿ ಒಂದು. ಈ ದಿಸೆಯಲ್ಲೂ ಸರ್ಕಾರ ಗಂಭೀರವಾಗಿ ಯೋಚಿಸಬೇಕಾದ ಅಗತ್ಯವಿದೆ.

ಹೊಸ ವ್ಯವಸ್ಥೆಯನ್ನು ಜಾರಿಗೆ ತಂದು ವರ್ಷ ಕಳೆದರೂ ತಾಂತ್ರಿಕ ಸಮಸ್ಯೆಗಳ ಮೂಲವನ್ನು ಪತ್ತೆಮಾಡಿ, ಪರಿಹಾರ ಕಂಡುಕೊಂಡಿಲ್ಲ ಎಂಬುದು ಒಪ್ಪತಕ್ಕ ಸಂಗತಿಯಲ್ಲ. ತಂತ್ರಾಂಶ ನಿರ್ವಹಣೆಯ ಗುತ್ತಿಗೆಯನ್ನು ಕೇಂದ್ರದ ಸಚಿವರೊಬ್ಬರ ಆಪ್ತರಿಗೆ ನೀಡಿದ್ದು, ಗುತ್ತಿಗೆದಾರರು ಸಮರ್ಪಕವಾಗಿ ಕೆಲಸ ಮಾಡದಿದ್ದರೂ ರಾಜಕೀಯ ನಂಟಿನ ಕಾರಣದಿಂದ ಬದಲಾವಣೆಗೆ ಮುಂದಾಗುತ್ತಿಲ್ಲ ಎಂಬ ಆರೋಪವೂ ಕೇಳಿಬಂದಿದೆ.

ಅದು ನಿಜವೇ ಆಗಿದ್ದಲ್ಲಿ, ರಾಜಕೀಯ ಪ್ರಭಾವಕ್ಕೆ ಮಣಿದು ಇಡೀ ರಾಜ್ಯದ ಜನರನ್ನು ಸಮಸ್ಯೆಯ ಸುಳಿಗೆ ನೂಕುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಜಗತ್ತಿನ ಹಲವು ರಾಷ್ಟ್ರಗಳಿಗೆ ತಂತ್ರಾಂಶ ಒದಗಿಸುತ್ತಿರುವ ರಾಜ್ಯದ ಮಾಹಿತಿ ತಂತ್ರಜ್ಞಾನ ಉದ್ಯಮದಿಂದಲೇ ‘ಕಾವೇರಿ’ ತಂತ್ರಾಂಶದ ಸಮಸ್ಯೆಗೂ ಪರಿಹಾರ ದೊರಕುವುದರಲ್ಲಿ ಅನುಮಾನಗಳಿಲ್ಲ. ಇಲಾಖೆಯ ಹೊಣೆ ಹೊತ್ತಿರುವವರು ತಕ್ಷಣವೇ ಮಧ್ಯ ಪ್ರವೇಶಿಸಿ ನೋಂದಣಿ ಇಲಾಖೆಯನ್ನು ಕಾಡುತ್ತಿರುವ ತಾಂತ್ರಿಕ ಸಮಸ್ಯೆಗಳ ಪರಿಹಾರಕ್ಕೆ ನುರಿತ ತಜ್ಞರ ಸೇವೆಯನ್ನು ಪಡೆಯಲು ಕ್ರಮ ವಹಿಸಬೇಕು. ತಾಂತ್ರಿಕ ಅಡಚಣೆಯ ನೆಪದಲ್ಲಿ ಜನರು ಆಸ್ತಿ ಮತ್ತು ಇತರ ದಾಖಲೆಗಳ ನೋಂದಣಿಗಾಗಿ ದಿನಗಟ್ಟಲೆ ಕಾಯುವುದನ್ನು ತಪ್ಪಿಸಲು ಕಂದಾಯ, ಇ–ಸ್ವತ್ತು, ಯುಪಿಒಆರ್‌ ಸೇರಿದಂತೆ ಇತರ ವೆಬ್‌ ಪೋರ್ಟಲ್‌ಗಳಲ್ಲಿರುವ ತೊಡಕು ನಿವಾರಣೆಗೂ ಸಂಬಂಧಿಸಿದ ಇಲಾಖೆಗಳು ಸಮನ್ವಯದಿಂದ ಕೆಲಸ ಮಾಡುವ ಅಗತ್ಯವೂ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT