ಕೋಚಿಂಗ್‌: ವಿದ್ಯಾರ್ಥಿಗಳ ಮೇಲೆ ವಿಪರೀತ ಹೊರೆ ಹೇರುವುದು ಬೇಡ

ಮಂಗಳವಾರ, ಜೂನ್ 18, 2019
28 °C

ಕೋಚಿಂಗ್‌: ವಿದ್ಯಾರ್ಥಿಗಳ ಮೇಲೆ ವಿಪರೀತ ಹೊರೆ ಹೇರುವುದು ಬೇಡ

Published:
Updated:
Prajavani

ದ್ವಿತೀಯ ಪಿಯು, ವಿದ್ಯಾರ್ಥಿ ದೆಸೆಯ ಮಹತ್ವದ ಘಟ್ಟ. ವಿದ್ಯಾರ್ಥಿಯ ಭವಿಷ್ಯ ರೂಪಿಸುವಲ್ಲಿ ಈ ಹಂತದಲ್ಲಿ ತೆಗೆದುಕೊಳ್ಳುವ ನಿರ್ಧಾರವೇ ನಿರ್ಣಾಯಕ. ಹೀಗಾಗಿ ಯಶಸ್ಸು ಎಂಬ ಶಿಖರವನ್ನು ಕಣ್ಣ ಮುಂದೆ ಸೃಷ್ಟಿಸಿ, ಅದನ್ನು ಏರಲು ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವ ಕೋಚಿಂಗ್ ಸಂಸ್ಥೆಗಳು ಅಣಬೆಗಳಂತೆ ಗಲ್ಲಿ–ಗಲ್ಲಿಯಲ್ಲೂ ಹುಟ್ಟಿಕೊಂಡಿವೆ. ಪ್ರತಿಷ್ಠಿತ ಸಂಸ್ಥೆಗಳಲ್ಲಿ ಎಂಜಿನಿಯರಿಂಗ್‌, ಮೆಡಿಕಲ್‌ ಕೋರ್ಸ್‌ಗಳಿಗೆ ಸೀಟು ಗಿಟ್ಟಿಸಬೇಕಾದರೆ ಐಐಟಿ– ಜೆಇಇ, ನೀಟ್‌, ಸಿಇಟಿ ಮತ್ತಿತರ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ರ್‍ಯಾಂಕಿಂಗ್‌ ಪಡೆಯಲೇಬೇಕು. ಇದಕ್ಕೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವ ಕೋಚಿಂಗ್‌ ವ್ಯವಸ್ಥೆಯು ಬಹುಕೋಟಿ ಉದ್ಯಮವಾಗಿ ಬೆಳೆದಿದೆ. ಬೆಂಗಳೂರು, ದೆಹಲಿ, ಚೆನ್ನೈ, ಮುಂಬೈನಂತಹ ಮಹಾನಗರಗಳು ಮಾತ್ರವಲ್ಲ, ಸಣ್ಣಪುಟ್ಟ ಪಟ್ಟಣಗಳಿಗೂ ಇದು  ವ್ಯಾಪಿಸಿದೆ. ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ತಮ್ಮ ಮಕ್ಕಳು ಶಿಕ್ಷಣ ಪಡೆದರಷ್ಟೇ ಸಾಲದು; ಪ್ರತಿಷ್ಠಿತ ಕೋಚಿಂಗ್‌ ಅಖಾಡದಲ್ಲಿ ಅವರನ್ನು ಸಿದ್ಧಗೊಳಿಸಿದರಷ್ಟೇ ಐಐಟಿ, ಐಸರ್‌, ಪ್ರಖ್ಯಾತ ಎಂಜಿನಿಯರಿಂಗ್‌ ಕಾಲೇಜು ಮತ್ತು ಮೆಡಿಕಲ್‌ ಕಾಲೇಜುಗಳಲ್ಲಿ ಸೀಟು ಗಿಟ್ಟಿಸಬಹುದು ಎಂಬುದು ಬಹುಪಾಲು ಪೋಷಕರ ಗಟ್ಟಿ ನಂಬಿಕೆ.

ಒಂದು ಕಾಲಕ್ಕೆ ಕೋಚಿಂಗ್‌ ಸಂಸ್ಥೆಗಳು ಪಿಯು ಕಾಲೇಜುಗಳ ಕ್ಯಾಂಪಸ್‌ಗಳಿಂದ ದೂರ ಇದ್ದವು. ಆಸಕ್ತರು, ಹಣವಂತರು ಮಾತ್ರ ಅಲ್ಲಿ ತಮ್ಮ ಮಕ್ಕಳನ್ನು ಸೇರಿಸುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಕೋಚಿಂಗ್‌ ಸಂಸ್ಥೆಗಳ ಮಧ್ಯೆಯೇ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿದೆ. ಉತ್ತರ ಭಾರತ ಮತ್ತು ನೆರೆಯ ರಾಜ್ಯಗಳ ಪ್ರಮುಖ ಕೋಚಿಂಗ್‌ ಸಂಸ್ಥೆಗಳೂ ರಾಜ್ಯಕ್ಕೆ ದಾಂಗುಡಿ ಇಟ್ಟಿವೆ. ಅದಕ್ಕೆ ಪೂರಕವಾಗಿ ಕೋಚಿಂಗ್‌ ಸಂಸ್ಥೆಗಳು ನಾನಾ ಬಗೆಯ ಮಾರ್ಕೆಟಿಂಗ್‌ ತಂತ್ರಗಳನ್ನೂ ಅಳವಡಿಸಿಕೊಂಡಿವೆ. ವಿದ್ಯಾರ್ಥಿಗಳು ಮತ್ತು ಪೋಷಕರನ್ನು ಸೆಳೆಯಲು ಆಮಿಷಗಳನ್ನು ಒಡ್ಡುತ್ತಿವೆ. ಪಿಯು ಕೋಚಿಂಗ್‌ಗಾಗಿ ಹತ್ತನೇ ತರಗತಿಯಲ್ಲೇ ಪ್ರವೇಶ ಪ್ರಕ್ರಿಯೆ ಪೂರ್ಣಗೊಳಿಸುತ್ತವೆ. ಮಾರುಕಟ್ಟೆ ತಂತ್ರಗಾರಿಕೆ ಭಾಗವಾಗಿ, ಖಾಸಗಿ ಮತ್ತು ಅನುದಾನಿತ ಪಿಯು ಕಾಲೇಜುಗಳ ಜತೆ ಸೇರಿ ಸಂಯೋಜಿತ (ಇಂಟಿಗ್ರೇಟೆಡ್‌) ಕೋಚಿಂಗ್‌ ಹೆಸರಿನಡಿ ಒಪ್ಪಂದ ಮಾಡಿಕೊಂಡಿವೆ. ಕೆಲವು ಕೋಚಿಂಗ್‌ ಸಂಸ್ಥೆಗಳು ವಿದ್ಯಾರ್ಥಿಗಳನ್ನು ಕಾಲೇಜು ತರಗತಿಗೇ ಹೋಗಲು ಬಿಡುವುದಿಲ್ಲ. ಬದಲಿಗೆ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಹಾಜರಿ ನೀಡುವ ಒಪ್ಪಿತ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಕೋಚಿಂಗ್‌ಗೆ ಪ್ರತಿ ವಿದ್ಯಾರ್ಥಿಯಿಂದಲೂ ಎರಡು ವರ್ಷಗಳಿಗೆ ಸೇರಿ ₹1.50 ಲಕ್ಷದಿಂದ ₹ 3 ಲಕ್ಷದವರೆಗೆ ವಸೂಲಿ ಮಾಡಲಾಗುತ್ತದೆ. ಕೆಲವು ಸಂಸ್ಥೆಗಳು ಬೆಳಿಗ್ಗೆ 6ರಿಂದ ರಾತ್ರಿ 8ರವರೆಗೆ ಉರು ಹೊಡೆಸುವ ಕೆಲಸವನ್ನೇ ಮಾಡುತ್ತವೆ. ಕೆಲವು ಸಂಸ್ಥೆಗಳು ತೀರಾ ಅಮಾನವೀಯ ರೀತಿಯಲ್ಲಿ ಮುಂಜಾನೆಯಿಂದ ರಾತ್ರಿವರೆಗೆ ಕೂಡಿ ಹಾಕಿ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವ ಕೆಲಸದಲ್ಲಿ ತೊಡಗಿವೆ. ಈ ಯಾಂತ್ರಿಕ ಕ್ರಿಯೆ, ವಿದ್ಯಾರ್ಥಿಗಳ ಮೇಲೆ ವಿಪರೀತ ಒತ್ತಡ ಸೃಷ್ಟಿಸುತ್ತದೆ. ಈ ಬಗ್ಗೆ ಪದವಿಪೂರ್ವ ಶಿಕ್ಷಣ ಇಲಾಖೆಗೆ ದೂರುಗಳು ಬಂದಿವೆ. ಅದಕ್ಕಾಗಿ, ಇದೇ ಶೈಕ್ಷಣಿಕ ವರ್ಷದಿಂದ ಪದವಿಪೂರ್ವ ಕಾಲೇಜುಗಳಲ್ಲಿ ಪಿಯು ಕೋರ್ಸ್‌ಗಳ ಜತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಯೋಜಿತ ಕೋಚಿಂಗ್‌ ನಡೆಸುವುದನ್ನು ನಿಷೇಧಿಸುವುದಾಗಿ ಇಲಾಖೆ ಹೇಳಿದೆ. ಈ ಸಂಬಂಧ ಮಾರ್ಗಸೂಚಿಯನ್ನೂ ಬಿಡುಗಡೆ ಮಾಡಿದೆ. ಪದವಿ ಪೂರ್ವ ಕಾಲೇಜುಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕೋಚಿಂಗ್‌ ತರಗತಿಗಳನ್ನು ನಡೆಸಿದರೆ ಅಂತಹ ಕಾಲೇಜುಗಳ ಮಾನ್ಯತೆ ರದ್ದುಪಡಿಸಲಾಗುವುದು ಎಂದು ಎಚ್ಚರಿಕೆ ಕೊಟ್ಟಿದೆ. ಸರ್ಕಾರವು ನಿಗದಿ ಮಾಡದ ಪಠ್ಯವನ್ನು ಬಳಸಿ ಸ್ಪರ್ಧಾತ್ಮಕ ಪರೀಕ್ಷೆಗೆ ವಿದ್ಯಾರ್ಥಿಗಳನ್ನು ಅಣಿಗೊಳಿಸುವಂತಿಲ್ಲ,  ಸಂಯೋಜಿತ ತರಗತಿನಡೆಸುವಂತಿಲ್ಲ, ಎಲೆಕ್ಟ್ರಾನಿಕ್‌ ಮಾಧ್ಯಮ ಬಳಸಿ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವಂತಿಲ್ಲ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ಅಣಿಗೊಳಿಸುವುದು ಈಗಿನ ಪರಿಸ್ಥಿತಿಯಲ್ಲಿ ಅನಿವಾರ್ಯ. ಆದರೆ, ಅದು ವಿದ್ಯಾರ್ಥಿಗಳಿಗೆ ಹಿಂಸೆ ಎನಿಸಬಾರದು. ಪೋಷಕರನ್ನು ಸುಲಿಗೆ ಮಾಡುವ ದಂಧೆಯಾಗಿ ಪರಿವರ್ತನೆಯಾಗಬಾರದು. ಇದಕ್ಕೆ ಕಡಿವಾಣ ಹಾಕುವ ಯಾವುದೇ ಪ್ರಯತ್ನ ಸ್ವಾಗತಾರ್ಹ. ಆದರೆ, ನಿಯಂತ್ರಣದ ಪ್ರಯತ್ನವು ಕಾಟಾಚಾರದ ಮಟ್ಟದಲ್ಲಿ ಅಷ್ಟೇ ಇದ್ದರೆ ಅದರಿಂದ ಯಾವುದೇ ಪ್ರಯೋಜನ ಆಗದು. ಪೋಷಕರಲ್ಲಿ ಜಾಗೃತಿ ಮೂಡಿಸುವ ಕೆಲಸವೂ ಆಗಬೇಕು. ಶಿಕ್ಷಣ ಇಲಾಖೆಯು ಕಳೆದ ವರ್ಷ ಕೂಡ ಇದೇ ರೀತಿ ಮಾರ್ಗಸೂಚಿ ಹೊರಡಿಸಿತ್ತು. ಆದರೆ, ಸಂಯೋಜಿತ ಕೋಚಿಂಗ್‌ ನಡೆಸಬಾರದು ಎಂಬ ನಿರ್ದಿಷ್ಟ ನಿಯಮ ಇಲ್ಲದ ಕಾರಣ ಅದು ಅಬಾಧಿತವಾಗಿ ಮುಂದುವರಿಯಿತು. ಸರ್ಕಾರ ಸ್ಪಷ್ಟ ನಿಯಮ ರೂಪಿಸಿದರೆ, ಆ ಪ್ರಕಾರ ನಡೆದುಕೊಳ್ಳುವುದಾಗಿ ಕಾಲೇಜುಗಳು ಹೇಳಿವೆ. ಸರ್ಕಾರವು ಈ ನಿಟ್ಟಿನಲ್ಲಿ ಯೋಚಿಸಿ, ದೃಢ ನಿಲುವು ತಳೆಯಲಿ. 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 7

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !