ಮಂಗಳವಾರ, ಸೆಪ್ಟೆಂಬರ್ 21, 2021
29 °C

ಸಂಪಾದಕೀಯ | ಐಪಿಎಲ್‌ ಟೂರ್ನಿಗೆ ದಾರಿ ಸುಗಮ; ಕ್ರೀಡಾ ಸ್ಫೂರ್ತಿಯೇ ಮುಖ್ಯವಾಗಲಿ

ಸಂಪಾದಕೀಯ Updated:

ಅಕ್ಷರ ಗಾತ್ರ : | |

Prajavani

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌) ಟ್ವೆಂಟಿ–20 ಕ್ರಿಕೆಟ್ ಟೂರ್ನಿಯ 13ನೇ ಆವೃತ್ತಿ ನಡೆಯುವುದು ಖಚಿತವಾಗಿದೆ. ಯುನೈಟೆಡ್ ಅರಬ್ ಎಮಿರೇಟ್ಸ್‌ನ (ಯುಎಇ) ಮೂರು ಕ್ರೀಡಾಂಗಣಗಳಲ್ಲಿ ಹೆಚ್ಚು ಕಡಿಮೆ ಎರಡು ತಿಂಗಳವರೆಗೆ ಟೂರ್ನಿಯ ಪಂದ್ಯಗಳು ನಡೆಯಲಿವೆ. ಅಕ್ಟೋಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಬೇಕಿದ್ದ ಟ್ವೆಂಟಿ–20 ವಿಶ್ವಕಪ್ ಟೂರ್ನಿಯನ್ನು ಮುಂದೂಡಿದಾಗಲೇ ಐಪಿಎಲ್‌ನ ಹಾದಿ ಸುಗಮವಾಗಿತ್ತು. ಕೊರೊನಾ ಸೋಂಕಿನ ಸವಾಲುಗಳನ್ನು ಮೀರಿ ಟೂರ್ನಿಯನ್ನು ಯಶಸ್ವಿಯಾಗಿ ಸಂಘಟಿಸುವತ್ತ ಈಗ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಚಿತ್ತ ನೆಟ್ಟಿದೆ. ಸೋಂಕಿನ ಭಯವಿದ್ದರೂ ಜಗತ್ತಿನ ಹಲವೆಡೆ ಫ್ರಾಂಚೈಸಿ ಆಧಾರಿತ ಕ್ರೀಡಾ ಲೀಗ್‌ಗಳು ಯಾವುದೇ ಅಡೆತಡೆ ಇಲ್ಲದೆ ನಡೆದಿವೆ. ಇಂಗ್ಲೆಂಡ್ ಅಂತೂ ವೆಸ್ಟ್‌ ಇಂಡೀಸ್‌ ವಿರುದ್ಧ ಮೂರು ಟೆಸ್ಟ್‌ಗಳ ಸರಣಿ ಮತ್ತು ಐರ್ಲೆಂಡ್ ವಿರುದ್ಧ ಏಕದಿನ ಕ್ರಿಕೆಟ್ ಸರಣಿ ನಡೆಸಿ ಸೈ ಎನಿಸಿಕೊಂಡಿದೆ. ಕ್ರೀಡಾ ಚಟುವಟಿಕೆಗಳು ಎಲ್ಲೆಡೆ ಗರಿಗೆದರಲು ಇಂತಹ ಯಶಸ್ವಿ ಪ್ರಯತ್ನಗಳು ಪ್ರೋತ್ಸಾಹದಾಯಕ. ಆದರೆ, ಭಾರತದ ಬಹುತೇಕ ಮಹಾನಗರಗಳನ್ನು ಕೊರೊನಾ ಕಾಟ ಎಡೆಬಿಡದೆ ಕಾಡುತ್ತಿದೆ. ಹೀಗಾಗಿ ಸ್ವದೇಶದಲ್ಲಿ ಟೂರ್ನಿ ನಡೆಸುವ ಧೈರ್ಯವನ್ನು ತೋರದ ಬಿಸಿಸಿಐ, ಈಗ ಮಹತ್ವದ ಐಪಿಎಲ್‌ ಟೂರ್ನಿಯನ್ನು ವಿದೇಶಿ ನೆಲದಲ್ಲಿ ಸಂಘಟಿಸಲು ಮನಸ್ಸು ಮಾಡಿದೆ. ಸುಮಾರು ನಾಲ್ಕು ಸಾವಿರ ಕೋಟಿ ರೂಪಾಯಿ ಆದಾಯದ ಇಂತಹ ದೊಡ್ಡ ಟೂರ್ನಿಯನ್ನು ಯಾವ ಕ್ರೀಡಾ ಸಂಘಟನೆಯಾದರೂ ಅಷ್ಟು ಸುಲಭವಾಗಿ ಕೈಬಿಡಲಾರದು. ಈ ಹಿಂದೆ ದೇಶದಲ್ಲಿ ಸಾರ್ವತ್ರಿಕ ಚುನಾವಣೆಗಳು ನಡೆದ ಸಂದರ್ಭಗಳಲ್ಲೂ ಎರಡು ಬಾರಿ ಐಪಿಎಲ್‌ ಟೂರ್ನಿಯನ್ನು ದೇಶದಿಂದ ಹೊರಗೆ– ಒಮ್ಮೆ ದಕ್ಷಿಣ ಆಫ್ರಿಕಾದಲ್ಲಿ ಹಾಗೂ ಇನ್ನೊಮ್ಮೆ ಯುಎಇಯಲ್ಲಿ– ಸಂಘಟಿಸಲಾಗಿತ್ತು.

ಐಪಿಎಲ್‌ಗೆ ಚೀನಾದ ಕಂಪನಿಯೊಂದರಿಂದ ಪ್ರಾಯೋಜಕತ್ವ ಪಡೆದಿರುವ ವಿಷಯವಾಗಿ ಬಿಸಿಸಿಐ ಟೀಕೆಯನ್ನು ಎದುರಿಸುತ್ತಿದೆ. ಗಡಿಯಲ್ಲಿ ಚೀನಾ ಸೈನಿಕರ ಜತೆ ಸಂಘರ್ಷ ಉಂಟಾದ ಬಳಿಕ ಭಾರತ ಸರ್ಕಾರವು ಚೀನಾದ ಆ್ಯಪ್‌ಗಳ ಬಳಕೆಯ ಮೇಲೆ ನಿರ್ಬಂಧ ಹೇರಿದೆ. ಆದರೆ, ಐಪಿಎಲ್‌ಗೆ ಮುಖ್ಯ ಪ್ರಾಯೋಜಕತ್ವ ನೀಡುತ್ತಿರುವ ಮೊಬೈಲ್‌ ಕಂಪನಿಯು ಅದೇ ದೇಶದ್ದಾಗಿದೆ. ಬಿಸಿಸಿಐ ವಾರ್ಷಿಕವಾಗಿ ₹ 441 ಕೋಟಿ ಮೊತ್ತವನ್ನು ಆ ಕಂಪನಿಯಿಂದ ಪ್ರಾಯೋಜಕತ್ವದ ರೂಪದಲ್ಲಿ ಪಡೆಯುತ್ತಿದೆ. ಪ್ರಾಯೋಜಕತ್ವ ವಿವಾದ, ಕೋವಿಡ್‌ ಕಾಟದ ನಡುವೆಯೇ ಅಬುಧಾಬಿ, ಶಾರ್ಜಾ ಮತ್ತು ದುಬೈನಲ್ಲಿ ಕ್ರೀಡಾಂಗಣಗಳನ್ನು ಯುಎಇ ಸಿದ್ಧಪಡಿಸಿಕೊಳ್ಳುತ್ತಿದೆ. ಪಂದ್ಯಗಳನ್ನು ವೀಕ್ಷಿಸಲು ಕ್ರೀಡಾಂಗಣ ಸಾಮರ್ಥ್ಯದ ಶೇ 30ರಿಂದ 50ರಷ್ಟು ಪ್ರೇಕ್ಷಕರಿಗೆ ಅವಕಾಶ ನೀಡುವ ಬಗ್ಗೆಯೂ ಚಿಂತನೆ ನಡೆಸಲಾಗುತ್ತಿದೆ. ಈಗಿನ ಪರಿಸ್ಥಿತಿಯಲ್ಲಿ ಟಿ.ವಿಯಲ್ಲಿ ಐಪಿಎಲ್ ವೀಕ್ಷಿಸುವವರ ಸಂಖ್ಯೆ ದುಪ್ಪಟ್ಟಾಗುವ ನಿರೀಕ್ಷೆ ಇದೆ. ಇದರಿಂದ, ಅಧಿಕೃತ ಪ್ರಸಾರ ಸಂಸ್ಥೆಗೆ ಪ್ರಾಯೋಜಕತ್ವದ ಮಹಾಪೂರವೇ ಹರಿದುಬರುವ ಸಾಧ್ಯತೆ ಇದೆ. ಆರ್ಥಿಕ ನಷ್ಟ ಅನುಭವಿಸಿರುವ ಕಂಪನಿಗಳಿಗೆ ತಮ್ಮ ಬ್ರ್ಯಾಂಡ್‌ ಮೌಲ್ಯ ವೃದ್ಧಿಸಿಕೊಳ್ಳಲು ಈ ಟೂರ್ನಿ ವೇದಿಕೆಯಾಗಬಹುದು ಎಂದೂ ಎಣಿಸಲಾಗಿದೆ. ಹಣಕಾಸಿನ ವಿಷಯ ಏನೇ ಇದ್ದರೂ ಕ್ರೀಡಾ ಸ್ಫೂರ್ತಿಯೇ ಟೂರ್ನಿಯ ಜೀವಾಳ. ಕ್ರಿಕೆಟ್‌ ಅಭಿಮಾನಿಗಳು ಬಯಸುವುದು ಕೂಡ ಅದನ್ನೇ. ಅಂತಹ ಕ್ರೀಡಾಸ್ಫೂರ್ತಿಯನ್ನು ಆಟಗಾರರು ಮೆರೆದರೆ ಮಾತ್ರ, ಪಂದ್ಯಗಳಿಗೆ ಇದುವರೆಗೆ ಕಾತರದಿಂದ ಕಾದಿರುವ ಪ್ರೇಕ್ಷಕರು ಆಟದ ನೈಜ ಆನಂದವನ್ನು ಅನುಭವಿಸಲು ಸಾಧ್ಯ. ಆಟಗಾರರಿಗೆ ಕೊರೊನಾ ಸೋಂಕು ಅಂಟದಂತೆ ನೋಡಿಕೊಳ್ಳುವುದು ಎಷ್ಟು ಮುಖ್ಯವೋ ಬೆಟ್ಟಿಂಗ್, ಫಿಕ್ಸಿಂಗ್‌ ಮತ್ತಿತರ ಕಳಂಕಗಳಿಂದ ಮುಕ್ತವಾಗಿ ಐಪಿಎಲ್‌ ಟೂರ್ನಿಯನ್ನು ನಡೆಸಬೇಕಿರುವುದು ಕೂಡ ಅಷ್ಟೇ ಮುಖ್ಯ. ಈ ನಿಟ್ಟಿನಲ್ಲಿ ಬಿಸಿಸಿಐ ಹೊಣೆಗಾರಿಕೆಯು ಈಗ ಹಿಂದೆಂದಿಗಿಂತಲೂ ಹೆಚ್ಚಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು