‘ರಾಯಲ್ ಚಾಲೆಂಜರ್ಸ್ ಬೆಂಗಳೂರು’ ತಂಡದ ಗೆಲುವಿನೊಂದಿಗೆ ಕೊನೆಗೊಂಡಿರುವ ‘ಇಂಡಿಯನ್ ಪ್ರೀಮಿಯರ್ ಲೀಗ್’ (ಐಪಿಎಲ್) ಟಿ20 ಕ್ರಿಕೆಟ್ನ 19ನೇ ಆವೃತ್ತಿಯು ಚುಟುಕು ಕ್ರಿಕೆಟ್ ಹೊಸ ಎತ್ತರಕ್ಕೆ ಜಿಗಿದಿರುವುದನ್ನು ಸೂಚಿಸುವಂತಿದೆ. ಕಿರುತೆರೆ ಮತ್ತು ಡಿಜಿಟಲ್ ವೇದಿಕೆಗಳಲ್ಲಿ ಸುಮಾರು 100 ಕೋಟಿ ವೀಕ್ಷಕರು ಪಂದ್ಯಾವಳಿ ವೀಕ್ಷಿಸಿದ್ದು, ಫೈನಲ್ ಪಂದ್ಯವು ಐಪಿಎಲ್ ಮಾತ್ರವಲ್ಲದೆ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತ್ಯಧಿಕ ವೀಕ್ಷಣೆ ಪಡೆದ ಪಂದ್ಯಗಳಲ್ಲಿ ಒಂದಾಗಿದೆ ಎನ್ನಲಾಗುತ್ತಿದೆ. ಈ ಜನಪ್ರಿಯತೆ, ‘ಐಪಿಎಲ್’ ಆಟವಾಗಿ ಹಾಗೂ ವಾಣಿಜ್ಯ ಲೆಕ್ಕಾಚಾರದಲ್ಲಿ ತನ್ನ ಯಶಸ್ಸನ್ನು ವರ್ಷದಿಂದ ವರ್ಷಕ್ಕೆ ಹೆಚ್ಚಿಸಿ ಕೊಳ್ಳುತ್ತಿರುವುದರ ಸಂಕೇತವಾಗಿದೆ. ಈ ಬಾರಿಯ ಐಪಿಎಲ್ ಆವೃತ್ತಿ ಕರ್ನಾಟಕದ ಕ್ರಿಕೆಟ್ ಪ್ರಿಯರಿಗೆ ಸ್ಮರಣೀಯವಾದುದು. ಅಹಮದಾಬಾದಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಆರ್ಸಿಬಿಯು ಸತತ ಎರಡನೇ ವರ್ಷವೂ ಐಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಲೀಗ್ ಇತಿಹಾಸದಲ್ಲಿ ಈ ಸಾಧನೆ ಮಾಡಿದ ಮೂರನೇ ತಂಡ ಎನ್ನುವ ಹೆಗ್ಗಳಿಕೆ ರಜತ್ ಪಾಟೀದಾರ್ ನಾಯಕತ್ವದ ಬಳಗದ್ದು. ಸತತ 17 ಆವೃತ್ತಿಗಳಲ್ಲಿ ಸೋಲು ಕಂಡಿದ್ದ ತಂಡ, ಕಳೆದ ವರ್ಷದ 18ನೇ ಆವೃತ್ತಿಯಲ್ಲಿ ಜಯಗಳಿಸಿತ್ತು. ಆ ಗೆಲುವು ಆಕಸ್ಮಿಕವಲ್ಲ ಎನ್ನುವುದನ್ನು ಮತ್ತೆ ಚಾಂಪಿಯನ್ ಆಗುವ ಮೂಲಕ ಆರ್ಸಿಬಿ ಸಾಬೀತುಪಡಿಸಿದೆ. ಆತಿಥೇಯ ‘ಗುಜರಾತ್ ಟೈಟನ್ಸ್’ ವಿರುದ್ಧದ ಫೈನಲ್ನಲ್ಲಿ ಆರ್ಸಿಬಿಯ ಸಂಘಟಿತ ಪ್ರಯತ್ನ, ಯೋಜನಾಬದ್ಧ ಆಟ ಹಾಗೂ ವೃತ್ತಿಪರತೆಗೆ ಜಯ ಒಲಿದಿದೆ. ಯುವ ಮತ್ತು ಅನುಭವಿ ಆಟಗಾರರ ಹದವಾದ ಸಮೀಕರಣ ತಂಡದಲ್ಲಿತ್ತು. ವಿರಾಟ್ ಕೊಹ್ಲಿ, ಕನ್ನಡಿಗ ದೇವದತ್ತ ಪಡಿಕ್ಕಲ್, ವೆಂಕಟೇಶ್ ಅಯ್ಯರ್, ವೇಗಿಗಳಾದ ಭುವನೇಶ್ವರ್ ಕುಮಾರ್, ಜೋಶ್ ಹೇಝಲ್ವುಡ್, ರಸಿಕ್ ಸಲಾಮ್ ದಾರ್, ಆಲ್ರೌಂಡರ್ ಕೃಣಾಲ್ ಪಾಂಡ್ಯ, ಟಿಮ್ ಡೇವಿಡ್, ವಿಕೆಟ್ಕೀಪರ್ ಜಿತೇಶ್ ಶರ್ಮಾ ಅವರು ತಮ್ಮ ಹೊಣೆಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ತಂಡದ ಯಶಸ್ಸಿನಲ್ಲಿ ರಜತ್ ಪಾಟೀದಾರ್ ಅವರ ನಾಯಕತ್ವ ವಿಶೇಷ ಉಲ್ಲೇಖಕ್ಕೆ ಅರ್ಹವಾದುದು.

ಕೆಲವು ಹೊಸ ಪ್ರತಿಭೆಗಳನ್ನು ಬೆಳಕಿಗೆ ತಂದಿರುವುದನ್ನು ಈ ಐಪಿಎಲ್ ಟೂರ್ನಿಯ ಯಶಸ್ಸಿನ ರೂಪದಲ್ಲಿ ಗಮನಿಸಬೇಕು. ರಾಜಸ್ಥಾನ ರಾಯಲ್ಸ್ ತಂಡವನ್ನು ಪ್ರತಿನಿಧಿಸಿದ 15 ವರ್ಷದ ವೈಭವ್ ಸೂರ್ಯವಂಶಿ ಘಟಾನುಘಟಿ ಬೌಲರ್ಗಳನ್ನು ದಂಡಿಸಿದ ಪರಿ ನೋಡುಗರನ್ನು ನಿಬ್ಬೆರಗಾಗಿಸಿತು. 776 ರನ್ಗಳನ್ನು ಕಲೆಹಾಕಿದ ಈ ಬಿಹಾರಿ ಹುಡುಗ ಭವಿಷ್ಯದಲ್ಲಿಯೂ ದೊಡ್ಡ ಇನಿಂಗ್ಸ್ ಆಡುವ ಆಶಾಭಾವ ಮೂಡಿಸಿದ್ದಾರೆ. ಯುವಪ್ರತಿಭೆಗಳಾದ ಆಯುಷ್ ಮ್ಹಾತ್ರೆ, ಪ್ರಿಯಾಂಶ್ ಆರ್ಯ, ಸಾಯಿ ಸುದರ್ಶನ್, ಅಭಿಷೇಕ್ ಶರ್ಮಾ, ಇಶಾನ್ ಕಿಶನ್ ಅವರ ಬ್ಯಾಟಿಂಗ್ ಕೂಡ ಗಮನಾರ್ಹವಾಗಿತ್ತು. ಬೌಲರ್ಗಳಾದ ಪ್ರಫುಲ್ ಹಿಂಗೆ, ಸಕೀಬ್ ಹಸನ್, ಭುವನೇಶ್ವರ್ ಕುಮಾರ್, ಕಗಿಸೊ ರಬಾಡ, ಜೇಸನ್ ಹೋಲ್ಡರ್, ಲುಂಗಿ ಎನ್ಗಿಡಿ, ತುಷಾರ್ ದೇಶಪಾಂಡೆ, ಪ್ರಿನ್ಸ್ ಯಾದವ್ ಅವರ ಉತ್ತಮ ಪ್ರದರ್ಶನದ ನಡುವೆಯೂ, ಆವೃತ್ತಿಯಿಂದ ಆವೃತ್ತಿಗೆ ಐಪಿಎಲ್ ಬ್ಯಾಟರ್ಗಳ ಪಕ್ಷಪಾತಿ ಆಗುತ್ತಿರುವುದು ಸ್ಪಷ್ಟವಾಗಿದೆ. ಮನರಂಜನೆ ಹಾಗೂ ವಾಣಿಜ್ಯದ ದೃಷ್ಟಿಯಿಂದ ಈ ಬೆಳವಣಿಗೆಯನ್ನು ಸಮರ್ಥಿಸಬಹುದಾದರೂ, ಆಟದ ಒಟ್ಟಾರೆ ಸೌಂದರ್ಯಕ್ಕೆ ಧಕ್ಕೆ ಉಂಟಾಗುತ್ತಿರುವುದನ್ನು ನಿರ್ಲಕ್ಷಿಸುವುದು ಸಾಧ್ಯವಿಲ್ಲ. ಬೌಲರ್ ಹಾಗೂ ಬ್ಯಾಟರ್ಗಳಿಗೆ ಸಮ ಪ್ರಮಾಣದಲ್ಲಿ ಪಿಚ್ಗಳು ಸಹಕರಿಸದೆ ಹೋದರೆ, ಕ್ರಿಕೆಟ್ನ ಕಲಾತ್ಮಕ ಸೌಂದರ್ಯ ನೇಪಥ್ಯಕ್ಕೆ ಸರಿದು, ಬ್ಯಾಟರ್ಗಳ ಬಾಹುಬಲ ಪ್ರದರ್ಶನವೇ ಆಟ ಎಂದಾಗಿಬಿಡುತ್ತದೆ.

ಬೆಂಗಳೂರಿನಲ್ಲಿ ನಡೆಯುವ ಪಂದ್ಯಗಳಿಗೆ ಉಚಿತ ಟಿಕೆಟ್ಗಳಿಗಾಗಿ ಕರ್ನಾಟಕದ ಶಾಸಕರು ಒತ್ತಾಯಿಸಿದ್ದು ದೇಶದಾದ್ಯಂತ ಸುದ್ದಿಯಾಯಿತು. ಬೆಂಗಳೂರಿಗೆ ಫೈನಲ್ ಪಂದ್ಯದ ಆತಿಥ್ಯ ಕೈತಪ್ಪಲು ಜನಪ್ರತಿನಿಧಿಗಳ ಆಸೆಬುರುಕತನವೂ ಒಂದು ಕಾರಣವಾಯಿತು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ದುಷ್ಕರ್ಮಿಗಳು ನಿಷ್ಕ್ರಿಯಗೊಳಿಸಿದ ಪ್ರಕರಣವೂ ನಡೆಯಿತು. ಆಟದ ಘನತೆಗೆ ತಕ್ಕುದಲ್ಲದ ಈ ಘಟನೆಗಳನ್ನು ಮರೆಸುವಂತೆ ಆರ್ಸಿಬಿ ತಂಡ ಗೆಲುವು ಸಾಧಿಸಿದೆ. ಈ ಯಶಸ್ಸಿನ ಸಂದರ್ಭದಲ್ಲಿ, ಕಳೆದ ವರ್ಷದ ವಿಜಯೋತ್ಸವ ಸಂದರ್ಭದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 11 ಅಭಿಮಾನಿಗಳು ದುರ್ಮರಣಕ್ಕೀಡಾದುದನ್ನು ನೆನಪಿಸಿಕೊಳ್ಳಬೇಕು. ಗೆಲುವಿನ ಸಂಭ್ರಮದಲ್ಲಿ ವಿವೇಕ ಮಸುಕಾಗಬಾರದು ಎನ್ನುವುದನ್ನು ಆ ದುರಂತ ನಮಗೆ ಹೇಳುವಂತಿದೆ. ಆರ್ಸಿಬಿ ಗೆಲುವು ಮನರಂಜನೆಯ ಸಾಧ್ಯತೆಯಾಗಿಯಷ್ಟೇ ಉಳಿಯದೆ, ಕರ್ನಾಟಕದ ಕ್ರಿಕೆಟ್ ಬೆಳವಣಿಗೆಗೆ ಪೂರಕವಾಗಿ ಒದಗಬೇಕಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.