ಶುಕ್ರವಾರ, ಡಿಸೆಂಬರ್ 13, 2019
26 °C

ಐ.ಟಿ. ಹೊಸ ನೀತಿ ಅಗತ್ಯ ಉದ್ಯೋಗ ಮಾರುಕಟ್ಟೆ ಬಲಪಡಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರಿನಲ್ಲಿ ಮೂರು ದಿನಗಳ ಕಾಲ ನಡೆದ ತಂತ್ರಜ್ಞಾನ ಶೃಂಗಸಭೆಯು ರಾಜ್ಯದ ಕೈಗಾರಿಕಾ ಮುನ್ನಡೆಗೆ ಹೊಸ ದಿಕ್ಕು ತೋರಿಸುವಂತಿದೆ. ನವೋದ್ಯಮಗಳಿಗೆ ಪ್ರೋತ್ಸಾಹ ಕೊಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಮಾಹಿತಿ ತಂತ್ರಜ್ಞಾನ (ಐ.ಟಿ.) ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹೊಸ ನೀತಿಯನ್ನು ತರಲು ನಿರ್ಧರಿಸಿರುವುದು ಸ್ವಾಗತಾರ್ಹ. ರಾಜ್ಯವು ಈಗಾಗಲೇ ಹೊಂದಿರುವ ಐ.ಟಿ. ನೀತಿ ದಶಕದಷ್ಟು ಹಳೆಯದು. ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆಗೆ ಹಳೆಯ ನೀತಿ ಬಹಳಷ್ಟು ಕೊಡುಗೆ ನೀಡಿದೆ ಎನ್ನುವುದೇನೋ ನಿಜ. ಆದರೆ, ವೇಗವಾಗಿ  ಬದಲಾಗುತ್ತಿರುವ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಹೊಸ ಆವಿಷ್ಕಾರಗಳಿಗೆ ಪೂರಕವಾಗಿ ಹೊಸ ನೀತಿಯ ಅಗತ್ಯವಿದೆ.

ಐ.ಟಿ., ಬಿ.ಟಿ. ಕಂಪನಿಗಳಿಗೆ ದಶಕದ ಹಿಂದೆ ಹೊರಗುತ್ತಿಗೆಯೇ ಆದಾಯದ ದೊಡ್ಡ ಮೂಲವಾಗಿತ್ತು. ಈಗ ಕೃತಕ ಬುದ್ಧಿಮತ್ತೆ, ಸೈಬರ್‌ ಸುರಕ್ಷೆ, ಮಷಿನ್‌ ಲರ್ನಿಂಗ್‌, ಆಟೊಮೇಷನ್‌ ಮುಂತಾದ ಹೊಸ ಕ್ಷೇತ್ರಗಳಲ್ಲಿ ದೊಡ್ಡ ಹೂಡಿಕೆ ಮತ್ತು ಹೊಸ ಉದ್ಯೋಗ ಅವಕಾಶಗಳಿಗೆ ಹೆಬ್ಬಾಗಿಲು ಸೃಷ್ಟಿಯಾಗಿದೆ. ಭಾರತದ ಐ.ಟಿ., ಬಿ.ಟಿ. ರಾಜಧಾನಿಯಾಗಿರುವ ಬೆಂಗಳೂರು, ಸಹಜವಾಗಿಯೇ ಈ ಹೊಸ ಕ್ಷೇತ್ರಗಳಿಗೆ ಒತ್ತು ಕೊಟ್ಟು ಸಂಶೋಧನೆಯಲ್ಲಿ ಹೆಚ್ಚಿನ ಸಾಧನೆ ಮಾಡಬೇಕಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ‘ಕರ್ನಾಟಕ
ಇನೊವೇಟಿವ್ ಕೌನ್ಸಿಲ್‌’ ಅನ್ನು ಆರಂಭಿಸಿರುವುದು ಮಹತ್ವದ ಹೆಜ್ಜೆ. ಜಾಗತಿಕ ಮಟ್ಟದಲ್ಲಿ ಆರ್ಥಿಕ ಕುಸಿತದ ಪೆಡಂಭೂತ ಮತ್ತೆ ತಲೆಯೆತ್ತುವ ಮುನ್ಸೂಚನೆಯಿದ್ದು, ಉದ್ಯೋಗ ನಷ್ಟವನ್ನು ಸರಿದೂಗಿಸಲು ಐ.ಟಿ., ಬಿ.ಟಿ. ಕ್ಷೇತ್ರದಲ್ಲಿ ಹೊಸ ಉದ್ಯೋಗ
ಗಳನ್ನು ಸೃಷ್ಟಿಸುವ ಅಗತ್ಯ ಈಗ ಹಿಂದೆಂದಿಗಿಂತ ಹೆಚ್ಚಿದೆ. ಹೊಸ ನೀತಿಯ ಮೂಲಕ ಐ.ಟಿ., ಬಿ.ಟಿ. ಕ್ಷೇತ್ರದ ಸ್ಪರ್ಧೆಯ ಸವಾಲುಗಳನ್ನು ಎದುರಿಸುವ ಉದ್ಯಮಗಳಿಗೆ ಸರ್ಕಾರವು ಕ್ರಿಯಾತ್ಮಕವಾಗಿ ನೆರವಾಗಲು ಇದು ಸಕಾಲ.

ರಾಜ್ಯದಲ್ಲಿ 3,500ಕ್ಕೂ ಹೆಚ್ಚು ಐ.ಟಿ. ಕಂಪನಿಗಳಿದ್ದು, 12 ಲಕ್ಷ ಜನರಿಗೆ ನೇರ ಉದ್ಯೋಗ ಮತ್ತು 31 ಲಕ್ಷ ಜನರಿಗೆ ಪರೋಕ್ಷ ಉದ್ಯೋಗ ಒದಗಿಸಿವೆ. ರಾಜ್ಯದ ಐ.ಟಿ. ಉದ್ಯಮ ₹ 5 ಲಕ್ಷ ಕೋಟಿಗೂ ಹೆಚ್ಚು ವಾರ್ಷಿಕ ರಫ್ತು ಆದಾಯ ಹೊಂದಿದ್ದು, ರಾಜ್ಯದ ಒಟ್ಟು ಆಂತರಿಕ ಉತ್ಪಾದನೆಯ ಹೆಚ್ಚಳಕ್ಕೆ ಬಹುದೊಡ್ಡ ಕಾಣಿಕೆ ನೀಡುತ್ತಿದೆ. ದೇಶದಾದ್ಯಂತ ಎಂಜಿನಿಯರಿಂಗ್‌ ಕಾಲೇಜುಗಳಿಂದ ಹೊರಬರುತ್ತಿರುವ ಪದವೀಧರರಲ್ಲಿ ಕೌಶಲದ ಕೊರತೆ ಎದ್ದು ಕಾಣುತ್ತಿರುವ ಸಮಸ್ಯೆ. 535 ತಾಂತ್ರಿಕ ಸಂಸ್ಥೆಗಳು, 234 ಎಂಜಿನಿಯರಿಂಗ್‌ ಕಾಲೇಜುಗಳು ಮತ್ತು 299 ಪಾಲಿಟೆಕ್ನಿಕ್‌ಗಳನ್ನು ಹೊಂದಿರುವ ಕರ್ನಾಟಕವೂ ಕೌಶಲದ ಕೊರತೆಯ ಸಮಸ್ಯೆಯಿಂದ ಹೊರತಾಗಿಲ್ಲ. ಪದವೀಧರರಲ್ಲಿ ಕೌಶಲ ಮತ್ತು ವೃತ್ತಿಯ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು ಈಗ ಒತ್ತು ನೀಡಬೇಕಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಶೀಘ್ರವೇ ಪೂರ್ಣ ಪ್ರಮಾಣದ ಕೌಶಲ ಸಮಾವೇಶ ನಡೆಸಲು ಸರ್ಕಾರ ನಿರ್ಧರಿಸಿರುವುದು ಸ್ವಾಗತಾರ್ಹ ಕ್ರಮ.

ಐ.ಟಿ. ಉದ್ಯಮದ ಕೇಂದ್ರವಾಗಿರುವ ಬೆಂಗಳೂರು ನಗರದ ಧಾರಣಾಶಕ್ತಿಯ ಬಗ್ಗೆಯೂ ಸರ್ಕಾರ ಕಾಳಜಿ ವಹಿಸಬೇಕಿದೆ. ಬೆಂಗಳೂರಿನಿಂದ ಹೊರಗೆ ಎರಡನೇ ಮತ್ತು ಮೂರನೇ ಹಂತದ ನಗರಗಳಲ್ಲಿ ಐ.ಟಿ. ಉದ್ಯಮದ ವಿಸ್ತರಣೆಗೆ ಮೂಲ ಸೌಕರ್ಯಗಳನ್ನು ಹೆಚ್ಚಿಸುವ ಕೆಲಸ ಕ್ಷಿಪ್ರವಾಗಿ ಆಗಬೇಕಿದೆ. ಹುಬ್ಬಳ್ಳಿ, ಮಂಗಳೂರು, ಬೆಳಗಾವಿ, ಮೈಸೂರು ನಗರಗಳಲ್ಲಿ ಐ.ಟಿ. ಪಾರ್ಕ್‌ಗಳನ್ನು ನಿರ್ಮಿಸಿದ್ದರೂ, ಅವುಗಳ ಬೆಳವಣಿಗೆಯು ನಿರೀಕ್ಷಿಸಿದ ರೀತಿಯಲ್ಲಿ ಇಲ್ಲ ಎನ್ನುವುದು ವಾಸ್ತವ. ರಾಜ್ಯದಲ್ಲಿ ಸುಸಜ್ಜಿತ ವಿಮಾನ ನಿಲ್ದಾಣ ಮತ್ತು ದೇಶದ 9ನೇ ಅತಿದೊಡ್ಡ ಬಂದರು ಹೊಂದಿರುವ ಮಂಗಳೂರು ನಗರದಲ್ಲಿ ಐ.ಟಿ., ಬಿ.ಟಿ. ಕಂಪನಿಗಳ ವಿಸ್ತರಣೆಗೆ ಬಹಳಷ್ಟು ಅವಕಾಶವಿದೆ. ಎರಡನೇ ಹಂತದ ಐ.ಟಿ. ನಗರವಾಗಿ ಮೈಸೂರು ಗಮನಾರ್ಹ ಸಾಧನೆ ಮಾಡಿದ್ದರೂ ಬೆಂಗಳೂರು ಜೊತೆಗಿನ ರೈಲು ಸಂಪರ್ಕ ತೃಪ್ತಿಕರವಾಗಿಲ್ಲ. ಬೆಂಗಳೂರು– ಮೈಸೂರು ನಡುವಣ ಎಲ್ಲ ರೈಲುಗಳ ಪ್ರಯಾಣದ ಅವಧಿಯನ್ನು ಗಮನಾರ್ಹವಾಗಿ ಕಡಿತಗೊಳಿಸಬೇಕು. ಹಾಗೆಯೇ ಬೆಂಗಳೂರು– ಮೈಸೂರು ನಡುವಣ ಹೆದ್ದಾರಿಯ ಷಟ್ಪಥ ಕಾಮಗಾರಿಯನ್ನು ಕ್ಷಿಪ್ರ
ಗತಿಯಲ್ಲಿ ಪೂರ್ಣಗೊಳಿಸಬೇಕಿದೆ. ಐ.ಟಿ. ಕ್ಷೇತ್ರದ ಸಂಶೋಧನೆಗಳ ದೊಡ್ಡ ಮಟ್ಟದ ಲಾಭವನ್ನು ಕೃಷಿ ಕ್ಷೇತ್ರಕ್ಕೆ ಒದಗಿಸುವಲ್ಲಿಯೂ ಸರ್ಕಾರದ ಪಾತ್ರ ಮಹತ್ವದ್ದು. ಆ ಮೂಲಕ ಹುಬ್ಬಳ್ಳಿ ಮತ್ತು ಬೆಳಗಾವಿಯಲ್ಲಿ ಕೃಷಿ ಆಧಾರಿತ ಉದ್ಯಮಗಳಿಗೆ ಹೊಸ ಜೀವ ತುಂಬಬಹುದು. ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿ ಹೊಸ ನೀತಿಯನ್ನು ರೂಪಿಸುವಾಗ ಈ ಎಲ್ಲ ಅಂಶಗಳನ್ನು ಗಮನದಲ್ಲಿ
ಇಟ್ಟುಕೊಳ್ಳುವುದು ಒಳ್ಳೆಯದು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು