ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ‍ಂಪಾದಕೀಯ | ಜಮ್ಮು–ಕಾಶ್ಮೀರ: ವಿಶ್ವಾಸವೃದ್ಧಿಗೆ ಆದ್ಯತೆ ದೊರಕಲಿ

Last Updated 4 ಆಗಸ್ಟ್ 2020, 19:30 IST
ಅಕ್ಷರ ಗಾತ್ರ

ಜಗತ್ತಿನ ಅತ್ಯಂತ ಚಂದದ ಪ್ರದೇಶಗಳಲ್ಲಿ ಒಂದೆಂಬ ಹೆಗ್ಗಳಿಕೆಹೊತ್ತ ಜಮ್ಮು–ಕಾಶ್ಮೀರವು ಅಶಾಂತಿಯ ಬೇಗುದಿಯಲ್ಲಿ ಬೆಂದದ್ದೇ ಹೆಚ್ಚು. ಅಭಿವೃದ್ಧಿಯ ವಿಚಾರದಲ್ಲಿಯೂ ಈ ಪ್ರದೇಶದ್ದು ಹಿನ್ನಡೆಯ ಕತೆ. ಭಾರತದ ಜತೆ ವಿಲೀನದ ಸಂದರ್ಭದಲ್ಲಿ ಒಪ್ಪಿಕೊಳ್ಳಲಾಗಿದ್ದ ವಿಶೇಷ ಸ್ಥಾನಮಾನದ ಅವಕಾಶವೇ ಈ ರಾಜ್ಯದ ಇಂತಹ ಸ್ಥಿತಿಗೆ ಕಾರಣ, ಇದೊಂದು ‘ಚಾರಿತ್ರಿಕ ಪ್ರಮಾದ’ ಎಂಬುದು ಬಿಜೆ‍ಪಿಯ ಪ್ರತಿಪಾದನೆಯಾಗಿತ್ತು. ವಿಶೇಷ ಸ್ಥಾನಮಾನ ರದ್ದತಿಯು ಬಿಜೆಪಿಯ ದೀರ್ಘಕಾಲದ ಕಾರ್ಯಸೂಚಿಗಳಲ್ಲಿ ಒಂದಾಗಿತ್ತು. ನರೇಂದ್ರ ಮೋದಿ ನೇತೃತ್ವದ ಎರಡನೇ ಅವಧಿಯ ಎನ್‌ಡಿಎ ಸರ್ಕಾರವು ಜಮ್ಮು–ಕಾಶ್ಮೀರದ ವಿಶೇಷ ಸ್ಥಾನ ಮತ್ತು ರಾಜ್ಯದ ಸ್ಥಾನವನ್ನು ಕಿತ್ತುಹಾಕಿ ಈಗ ಒಂದು ವರ್ಷವಾಗಿದೆ. ಈಗ ಅಲ್ಲಿ ಜಮ್ಮು–ಕಾಶ್ಮೀರ ಮತ್ತು ಲಡಾಖ್‌ ಎಂಬ ಎರಡು ಕೇಂದ್ರಾಡಳಿತ ಪ್ರದೇಶಗಳಿವೆ. ಈ ಎರಡು ಕ್ರಮಗಳು ಆ ಪ್ರದೇಶದ ಚಿತ್ರಣವನ್ನೇ ಬದಲಿಸಲಿವೆ ಎಂದು ಒಂದು ವರ್ಷದ ಹಿಂದೆ ಕೇಂದ್ರ ಸರ್ಕಾರ ಹೇಳಿತ್ತು. ಆದರೆ ಈ ಅವಧಿಯಲ್ಲಿ ಜಮ್ಮು–ಕಾಶ್ಮೀರವು ಅಕ್ಷರಶಃ ಸ್ತಬ್ಧವಾಗಿತ್ತು. ಶಾಲೆ, ವಾಣಿಜ್ಯ ಚಟುವಟಿಕೆ, ಪ್ರವಾಸೋದ್ಯಮ, ಸಾರಿಗೆ ಹೀಗೆ ಯಾವುದೂ ಇರಲಿಲ್ಲ. ತುರ್ತು ವೈದ್ಯಕೀಯ ನೆರವಿಗೂ ತತ್ವಾರ ಉಂಟಾಗಿತ್ತು. ಪ್ರತಿಯೊಂದಕ್ಕೂ ನಾವು ನೆಚ್ಚಿಕೊಂಡಿರುವ ಮೊಬೈಲ್‌ ಮತ್ತು ಇಂಟರ್‌ನೆಟ್‌ ಸೌಲಭ್ಯವೂ ಅಲ್ಲಿ ಲಭ್ಯ ಇಲ್ಲ. ಒಂದು ಪ್ರದೇಶದ ಸಂಘರ್ಷಮಯ ಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಬಲಪ್ರಯೋಗ, ನಿರ್ಬಂಧಗಳು ಅನಿವಾರ್ಯ ಆಗಿರಬಹುದು. ಆದರೆ, ಅದುವೇ ಕಾಯಂ ಮಾರ್ಗ ಎಂದು ಸರ್ಕಾರವು ಭಾವಿಸಬಾರದು.

ವಿಶೇಷ ಸ್ಥಾನ ರದ್ದತಿಯಿಂದಾಗಿ ಜಮ್ಮು–ಕಾಶ್ಮೀರಕ್ಕೆ ಸಂಸತ್ತಿನ ಎಲ್ಲ ಕಾನೂನುಗಳು ಅನ್ವಯ ಆಗುತ್ತವೆ. ರಾಜ್ಯದ ಸ್ಥಾನ ರದ್ದು ಮಾಡಿರುವುದರಿಂದ ಈ ಪ್ರದೇಶವು ಈಗ ನೇರವಾಗಿ ಕೇಂದ್ರದ ಅಧೀನಕ್ಕೇ ಬಂದಿದೆ. ‘ಹೊಸ ಬೆಳಗು’, ‘ಸುಂದರ ನಾಳೆಗಳು’ ಉದಯವಾಗಲಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ್ದ ಟ್ವೀಟ್‌ಗೆ ಒಂದು ವರ್ಷವಾಗಿದೆ. ಆದರೆ, ಕಾಶ್ಮೀರದಲ್ಲಿ ಅಂತಹುದೇನೂ ಆಗಿಲ್ಲ.ಕಾಶ್ಮೀರಿಗರ ಚಲನೆ, ಸಂಘಟನೆ, ಸಂವಹನದ ಎಲ್ಲ ಹಕ್ಕುಗಳನ್ನೂ ಕಿತ್ತುಕೊಳ್ಳಲಾಗಿದೆ. ಅಷ್ಟೇ ಅಲ್ಲ, ಜೀವನೋಪಾಯವೇ ಇಲ್ಲದೆ ಅಲ್ಲಿನ ಜನರನ್ನು ಬದುಕುವ ಹಕ್ಕಿನಿಂದಲೂ ದೂರ ಇರಿಸಲಾಗಿದೆ. ಇವನ್ನೆಲ್ಲ ಪ್ರಶ್ನಿಸಿ ದೇಶದ ವಿವಿಧ ನ್ಯಾಯಾಲಯಗಳಿಗೆ ಸಲ್ಲಿಕೆಯಾಗಿರುವ ಅರ್ಜಿಗಳ ತ್ವರಿತ ವಿಚಾರಣೆಯೂ ನಡೆದಿಲ್ಲ. ಇಂತಹ ಸನ್ನಿವೇಶವು ಕಾಶ್ಮೀರಿಗರಲ್ಲಿ ಮೂಡಿಸಬಹುದಾದ ಭಾವವು ಯಾವುದು? ನೆರೆಯ ಪಾಕಿಸ್ತಾನ ಅಥವಾ ಚೀನಾದಂತೆ ಅಲ್ಲದೆ, ಭಾರತವು ಪ್ರಜಾಪ್ರಭುತ್ವ ಮೌಲ್ಯವನ್ನು ಎದೆಗಪ್ಪಿಕೊಂಡ ದೇಶ ಎಂಬ ಕಾರಣಕ್ಕಾಗಿಯಾದರೂ ಕಾಶ್ಮೀರದವರಿಗೆ ತಾವು ಭಾರತೀಯರು ಎನ್ನಲು ಹೆಮ್ಮೆ ಎನಿಸಬೇಕು. ಅದಕ್ಕೆ ಪೂರಕವಾದ ವಾತಾವರಣವನ್ನು ಸೃಷ್ಟಿಸುವುದು ಅಗತ್ಯ. ಕಾಶ್ಮೀರದ ರಾಜಕೀಯ ನಾಯಕರಲ್ಲಿ ಹೆಚ್ಚಿನವರನ್ನು ರಾಷ್ಟ್ರೀಯ ಸುರಕ್ಷಾ ಕಾಯ್ದೆ ಅಡಿಯಲ್ಲಿ ಬಂಧಿಸಲಾಗಿತ್ತು. ಈಗ ಅವರಲ್ಲಿ ಹಲವರು ಬಿಡುಗಡೆ ಆಗಿದ್ದಾರೆ; ಕೆಲವರು ಇನ್ನೂ ಬಂಧನದಲ್ಲಿಯೇ ಇದ್ದಾರೆ. ಜನನಾಯಕರನ್ನು ಹೀಗೆ ದೀರ್ಘ ಅವಧಿಗೆ ಬಂಧನದಲ್ಲಿರಿಸುವುದು, ಜನರ ಸಂವಹನ ಮಾರ್ಗಗಳೆಲ್ಲವನ್ನೂ ನಿರ್ಬಂಧಿಸುವುದು ಸರಿಯೇ ಎಂಬುದರ ಕುರಿತು ಅಧಿಕಾರಸ್ಥರು ಆತ್ಮಾವಲೋಕನ ಮಾಡಿಕೊಳ್ಳಬೇಕು. ನಿರ್ಬಂಧಗಳಿಂದಾಗಿ ಅಲ್ಲಿನ ಜನರಿಗೆ ಆಗಿರುವ ಆರ್ಥಿಕ ನಷ್ಟದ ಮೊತ್ತ ಸಾವಿರಾರು ಕೋಟಿ ರೂಪಾಯಿ. ಈ ನಷ್ಟಭರ್ತಿ ಹೇಗೆ ಎಂಬ ಬಗ್ಗೆ ಯಾವ ಸ್ಪಷ್ಟತೆಯೂ ಇಲ್ಲ. ಜಮ್ಮು–ಕಾಶ್ಮೀರದ ವಿಚಾರದಲ್ಲಿ ಹಿಂದಿನ ಸರ್ಕಾರಗಳು ‘ಚಾರಿತ್ರಿಕ ಪ್ರಮಾದ’ ಎಸಗಿವೆ ಎಂದಾದರೆ, ಅದನ್ನು ಸರಿಪಡಿಸುವ ದಿಸೆಯಲ್ಲಿ ಈಗಿನ ಕೇಂದ್ರ ಸರ್ಕಾರ ಕೆಲಸ ಮಾಡಬೇಕು. ಒಂದು ಪ್ರಮಾದವನ್ನು ಸರಿಪಡಿಸುವುದಕ್ಕಾಗಿ ಇನ್ನೊಂದು ಪ್ರಮಾದ ಎಸಗುವುದು ಪರಿಹಾರ ಆಗಲಾರದು. ಎಲ್ಲಕ್ಕೂ ಮೊದಲು, ಕಾಶ್ಮೀರಿಗರಿಗೆ ಸಾಂವಿಧಾನಿಕವಾದ ಎಲ್ಲ ಹಕ್ಕುಗಳು ದೊರೆಯುವಂತೆ ನೋಡಿಕೊಳ್ಳಬೇಕು. ಜನರ ಜೀವ, ಜೀವನೋಪಾಯಗಳನ್ನು ಜತನಗೊಳಿಸಿ, ಅವರ ವಿಶ್ವಾಸ ಗಳಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT