ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾರ್ಖಂಡ್‌ ಚುನಾವಣೆ: ಹಲವು ಪಾಠಗಳಿರುವ ಫಲಿತಾಂಶ

Last Updated 24 ಡಿಸೆಂಬರ್ 2019, 20:30 IST
ಅಕ್ಷರ ಗಾತ್ರ

ಬುಡಕಟ್ಟು ಜನರ ಪ್ರಾಬಲ್ಯವಿರುವ ಜಾರ್ಖಂಡ್‌ನ ಮತದಾರರು ವಿಧಾನಸಭೆ ಚುನಾವಣೆಯಲ್ಲಿ ಸ್ಪಷ್ಟವಾದ ಜನಾದೇಶ ನೀಡಿದ್ದಾರೆ. ಹೇಮಂತ್‌ ಸೊರೇನ್‌ ಅವರ ಜಾರ್ಖಂಡ್‌ ಮುಕ್ತಿ ಮೋರ್ಚಾ (ಜೆಎಂಎಂ) ನೇತೃತ್ವದ ಕಾಂಗ್ರೆಸ್‌–ಆರ್‌ಜೆಡಿ ಮೈತ್ರಿಕೂಟವು 81 ಸದಸ್ಯ ಬಲದ ವಿಧಾನಸಭೆಯಲ್ಲಿ 47 ಸ್ಥಾನಗಳನ್ನು ಗೆದ್ದಿದೆ. ಐದು ವರ್ಷ ಆಳ್ವಿಕೆ ನಡೆಸಿದ ಬಿಜೆಪಿ ಸೋತಿದೆ. ಮುಖ್ಯಮಂತ್ರಿಯಾಗಿದ್ದ ರಘುವರ ದಾಸ್‌ ಅವರೂ ಜಮ್‌ಶೆಡ್‌ಪುರ ಪೂರ್ವ ಕ್ಷೇತ್ರದಲ್ಲಿ ಸೋತಿದ್ದಾರೆ. ದಾಸ್‌ ಸಂಪುಟದಲ್ಲಿ ಸಚಿವರಾಗಿದ್ದ ಸರಯೂ ರಾಯ್‌ ಅವರಿಗೆ ಬಿಜೆಪಿಯು ಟಿಕೆಟ್‌ ನಿರಾಕರಿಸಿತ್ತು. ಈ ಸಿಟ್ಟಿಗೆ ಅವರು ಮುಖ್ಯಮಂತ್ರಿ ಪ್ರತಿನಿಧಿಸಿದ್ದ ಕ್ಷೇತ್ರದಲ್ಲಿ ಪಕ್ಷೇತರರಾಗಿಸ್ಪರ್ಧಿಸಿ ಗೆದ್ದಿದ್ದಾರೆ.

ಜಾರ್ಖಂಡ್‌ನ ಬಿಜೆಪಿ ಘಟಕದಲ್ಲಿ ಎಲ್ಲವೂ ಸರಿ ಇಲ್ಲ ಎಂಬುದಕ್ಕೆ ಈ ಸ್ಪರ್ಧೆ ಸೂಚನೆಯಾಗಿತ್ತು. ದಾಸ್‌ ಅವರ ಆಡಳಿತವು ಜನರ ನಿರೀಕ್ಷೆಗೆ ತಕ್ಕಂತೆ ಇರಲಿಲ್ಲ ಎಂಬ ಮಾತುಗಳು ಕೇಳಿಬಂದಿದ್ದವು. ಇದರ ಜತೆಗೆ, ಸ್ಥಳೀಯ ವಿಷಯಗಳನ್ನು ಪಕ್ಷವು ಕಡೆಗಣಿಸಿತ್ತು. ಬಿಜೆಪಿಯ ಉನ್ನತ ನಾಯಕರಾದ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ರಾಜ್ಯದಲ್ಲಿ ಬಿರುಸಿನ ಪ್ರಚಾರ ನಡೆಸಿದ್ದರು. ಅಲ್ಲಿನ ಜನರನ್ನು ಕಾಡಿದ ವಿಚಾರಗಳನ್ನು ಅವರು ಪ್ರಮುಖವಾಗಿ ಪ್ರಸ್ತಾಪಿಸಲಿಲ್ಲ. ಕಾಶ್ಮೀರದ ವಿಶೇಷಾಧಿಕಾರ ರದ್ದತಿ, ಅಯೋಧ್ಯೆಯ ರಾಮ ಮಂದಿರ, ಪೌರತ್ವ (ತಿದ್ದುಪಡಿ) ಕಾಯ್ದೆಯೇ ಮುಖ್ಯ ಎಂಬಂತೆ ಮಾತನಾಡಿದ್ದರು. ಪ್ರಭಾವಿ ಸಮುದಾಯಗಳನ್ನು ನಿರ್ಲಕ್ಷಿಸಿ ಸಣ್ಣ ಸಣ್ಣ ಸಮುದಾಯಗಳನ್ನು ಒಗ್ಗೂಡಿಸುವ ರಾಜಕೀಯ ಕಾರ್ಯತಂತ್ರದಿಂದ ಬಿಜೆಪಿಗೆ ಮುಳುವಾಗುತ್ತಿದೆ ಎಂಬುದಕ್ಕೆ ಮತ್ತೊಂದು ಉದಾಹರಣೆ ಈ ಫಲಿತಾಂಶ.

ಮಹಾರಾಷ್ಟ್ರದಲ್ಲಿ ಮರಾಠಾ, ಜಾರ್ಖಂಡ್‌ನಲ್ಲಿ ಬುಡಕಟ್ಟು, ಹರಿಯಾಣದಲ್ಲಿ ಜಾಟ್‌ ಸಮುದಾಯವನ್ನು ಬಿಜೆಪಿ ಕಡೆಗಣಿಸಿದೆ ಎಂಬ ಆರೋಪಗಳಿವೆ. ಈ ಮೂರೂ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆ ಆಗಿದೆ.ವಿಸ್ತೀರ್ಣ ಮತ್ತು ಜನಸಂಖ್ಯೆಯಲ್ಲಿ ಸಣ್ಣದಾದರೂ ಜಾರ್ಖಂಡ್‌ನ ಫಲಿತಾಂಶದಲ್ಲಿ ಎಲ್ಲ ರಾಜಕೀಯ ಪಕ್ಷಗಳಿಗೆ ಹಲವು ಪಾಠಗಳಿವೆ. 2014ರ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಏರಿದ ಬಿಜೆಪಿ, ನಂತರ ರಾಜ್ಯಗಳ ಚುನಾವಣೆಯಲ್ಲಿ ಪ್ರಾಬಲ್ಯ ಮೆರೆದಿತ್ತು. ಆದರೆ, ಸುಮಾರು ಎರಡು ವರ್ಷಗಳಿಂದ ರಾಜ್ಯಗಳ ಮಟ್ಟದಲ್ಲಿ ಬಿಜೆಪಿ ಪ್ರಭಾವ ಕುಗ್ಗುತ್ತಿದೆ. ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಯಲ್ಲಿ ಜನರು ಭಿನ್ನವಾಗಿ ಮತ ಚಲಾಯಿಸುತ್ತಿದ್ದಾರೆ.

ಆರೇ ತಿಂಗಳ ಹಿಂದೆ ಜಾರ್ಖಂಡ್‌ನ 14 ಲೋಕಸಭಾ ಕ್ಷೇತ್ರಗಳ ಪೈಕಿ 11ರಲ್ಲಿ ಬಿಜೆಪಿ ಗೆದ್ದಿತ್ತು. ಕೇಂದ್ರದಲ್ಲಿ ಅಧಿಕಾರದಲ್ಲಿ ಇರುವ ಪಕ್ಷವು ರಾಜ್ಯ ಮಟ್ಟದ ಜನನಾಯಕರ ಪ್ರಾಮುಖ್ಯ ಕಡೆಗಣಿಸುವುದು ಹೊಸದೇನೂ ಅಲ್ಲ. ಇಂತಹ ನಿರಂಕುಶ ಮನೋಭಾವಕ್ಕೆ ಕಾಂಗ್ರೆಸ್‌ ಪಕ್ಷವು ಭಾರಿ ಬೆಲೆ ತೆತ್ತಿದೆ. ಅದೇ ಹಾದಿಯಲ್ಲಿ ಬಿಜೆಪಿ ಈಗ ಸಾಗುತ್ತಿದೆ. ರಾಷ್ಟ್ರ ಮಟ್ಟದಲ್ಲಿ ಪ್ರಭಾವಿಯಾದ ಒಬ್ಬಿಬ್ಬರು ನಾಯಕರೇ‍ಎಲ್ಲೆಡೆಯೂ ಪಕ್ಷವನ್ನು ಅಧಿಕಾರಕ್ಕೆ ತರಬಲ್ಲರು ಎಂಬ ವಿಶ್ವಾಸವನ್ನು ಜಾರ್ಖಂಡ್‌ ಫಲಿತಾಂಶ ಮತ್ತೊಮ್ಮೆ ಸುಳ್ಳಾಗಿಸಿದೆ. ಮೋದಿ ಅಥವಾ ಶಾ ಅವರ ಜನಪ್ರಿಯತೆ ದೇಶದಲ್ಲಿ ಕುಗ್ಗಿದೆ ಎಂಬುದು ಇದರ ಅರ್ಥವಲ್ಲ. 2018ರ ಬಳಿಕ ಬಿಜೆಪಿ ಕಳೆದುಕೊಂಡ ಐದನೇ ರಾಜ್ಯ ಜಾರ್ಖಂಡ್‌. ಈಗ, ಬಿಜೆಪಿ ಏಕಾಂಗಿಯಾಗಿ ಮತ್ತು ಮೈತ್ರಿಕೂಟದ ಮೂಲಕ ಅಧಿಕಾರದಲ್ಲಿ ಇರುವ ರಾಜ್ಯಗಳ ಸಂಖ್ಯೆ ಕಡಿಮೆಯಾಗಿದೆ. ಅದು ಕೇಂದ್ರದ ನೀತಿಯ ಮೇಲೂ ಪರಿಣಾಮ ಬೀರಬಹುದು.

ಪೌರತ್ವ (ತಿದ್ದುಪಡಿ) ಕಾಯ್ದೆ, ರಾಷ್ಟ್ರೀಯ ಪೌರತ್ವ ನೋಂದಣಿಗೆ ಭಾರಿ ವಿರೋಧ ವ್ಯಕ್ತವಾಗುತ್ತಿರುವ ಈ ಹೊತ್ತಿನಲ್ಲಿ ಇಂತಹ ಫಲಿತಾಂಶ ಕೇಂದ್ರಕ್ಕೆ ಅನುಕೂಲಕರ ಅಲ್ಲ. ಈ ಕಾಯ್ದೆಗೆ ವಿರೋಧ ವ್ಯಕ್ತಪಡಿಸಿರುವ ರಾಜ್ಯಗಳ ಸಂಖ್ಯೆ ಹತ್ತಕ್ಕೂ ಹೆಚ್ಚಾಗಿದೆ. ಹಾಗೆಯೇ, ಎನ್‌ಡಿಎಯಲ್ಲಿ ಇರುವ ಪಕ್ಷಗಳನ್ನು ಬಿಜೆಪಿ ಗಣನೆಗೆ ತೆಗೆದುಕೊಳ್ಳುತ್ತಿಲ್ಲ ಎಂಬ ಆರೋಪ ಕೇಳಿಸುತ್ತಿದೆ. ಒಂದೇ ಸಿದ್ಧಾಂತದ, ಬಹುಕಾಲದ ಮಿತ್ರಪಕ್ಷ ಶಿವಸೇನಾವನ್ನು ಕಳೆದುಕೊಂಡ ಬಿಜೆಪಿ, ಜಾರ್ಖಂಡ್‌ನಲ್ಲಿಯೂ ಮಿತ್ರ ಪಕ್ಷಗಳನ್ನು ಕೈಬಿಟ್ಟು ಏಕಾಂಗಿಯಾಗಿ ಸ್ಪರ್ಧಿಸಿತ್ತು.ಎನ್‌ಡಿಎಯಲ್ಲಿ ಇರುವ ಪಕ್ಷಗಳು ಬಿಜೆಪಿಯ ನಿಲುವಿಗೆ ವಿರೋಧ ವ್ಯಕ್ತಪಡಿಸುವುದಕ್ಕೆ ಹಿಂದೇಟು ಹಾಕದಿರಲು ಇದು ಕೂಡ ಕಾರಣ ಆಗಿರಬಹುದು. ಕೇಂದ್ರದ ನೀತಿಗೆ ರಾಜ್ಯಗಳ ಪ್ರತಿರೋಧ ಹೆಚ್ಚುತ್ತಾ ಹೋದರೆ, ಪರಿಣಾಮಕಾರಿ ಆಳ್ವಿಕೆ ನಡೆಸುವುದು ಕೇಂದ್ರಕ್ಕೆ ಸುಲಭವಲ್ಲ. ಜತೆಗೆ, 2020ರಲ್ಲಿ ದೆಹಲಿ ಮತ್ತು ಬಿಹಾರದಲ್ಲಿ ಚುನಾವಣೆ ನಡೆಯಲಿದೆ. ರಾಜ್ಯಗಳು ಸತತವಾಗಿ ಬಿಜೆಪಿಯ ಕೈತಪ್ಪುತ್ತಾ ಹೋಗುವುದು ಈ ಚುನಾವಣೆಗಳ ಮೇಲೆಯೂ ಪರಿಣಾಮ ಬೀರಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT