ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಜಿಗ್ನೇಶ್ ಮೆವಾನಿ ಬಂಧನ ಪ್ರಕರಣ: ಟೀಕಾಕಾರರ ಬಾಯಿ ಮುಚ್ಚಿಸುವ ಯತ್ನ

Last Updated 1 ಮೇ 2022, 19:30 IST
ಅಕ್ಷರ ಗಾತ್ರ

ಗುಜರಾತಿನ ಪಕ್ಷೇತರ ಶಾಸಕಜಿಗ್ನೇಶ್ ಮೆವಾನಿ ಅವರನ್ನು ಅಸ್ಸಾಂ ಪೊಲೀಸರು ಈಚೆಗೆ ಬಂಧಿಸಿದ್ದರು. ಕೇಂದ್ರ ಸರ್ಕಾರದ ಟೀಕಾಕಾರರ ವಿರುದ್ಧ ಹಗೆ ತೀರಿಸಿಕೊಳ್ಳುವ ರಾಜಕಾರಣಕ್ಕೆ ಇದೊಂದು ಹೊಸ ನಿದರ್ಶನ. ಪ್ರಧಾನಿ ನರೇಂದ್ರ ಮೋದಿ ಅವರ ಕುರಿತಾಗಿ ಕಟುವಾಗಿ ಒಂದು ಟ್ವೀಟ್ ಮಾಡಿದ್ದ ಆರೋಪದ ಅಡಿಯಲ್ಲಿ ಮೆವಾನಿ ಅವರನ್ನು ಬಂಧಿಸಲಾಗಿತ್ತು. ಕೊಕ್ರಜಾರ್‌ನ ನ್ಯಾಯಾಲಯವೊಂದು ಈ ಪ್ರಕರಣದಲ್ಲಿ ಮೆವಾನಿ ಅವರಿಗೆ ಜಾಮೀನು ಮಂಜೂರು ಮಾಡಿದ ತಕ್ಷಣದಲ್ಲಿ,ಅವರನ್ನು ಇನ್ನೊಂದು ಪ್ರಕರಣದ ಅಡಿಯಲ್ಲಿ ಪೊಲೀಸರು ಬಂಧಿಸಿದ್ದರು. ಈ ಪ್ರಕರಣವು ಪಕ್ಕದ ಬಾರ್ಪೆಟಾ ಜಿಲ್ಲೆಯಲ್ಲಿ ದಾಖಲಾಗಿದೆ. ಪೊಲೀಸ್ ಸಿಬ್ಬಂದಿ ಮೇಲೆ ಮೆವಾನಿ ಹಲ್ಲೆ ನಡೆಸಿದರು,ಅವರ ಜೊತೆ ಅನುಚಿತವಾಗಿ ನಡೆದುಕೊಂಡರು ಎಂಬ ಆರೋಪವನ್ನು ಅವರ ಮೇಲೆ ಹೊರಿಸಿ ಬಂಧಿಸಲಾಗಿತ್ತು. ಮೊದಲಿಗೆ ಬಂಧಿಸಿದ್ದ ಪ್ರಕರಣವು ಒಂದು ಟ್ವೀಟ್‌ ಕುರಿತಾದದ್ದು. ಅದರಲ್ಲಿ ಮೆವಾನಿ ಅವರು ಮೋದಿ ಅವರನ್ನು ‘ಗೋಡ್ಸೆ ಆರಾಧಕ’ ಎಂದು ಕರೆದಿದ್ದರು,ಕೋಮು ಘರ್ಷಣೆಗೆ ಸಾಕ್ಷಿಯಾದ ಗುಜರಾತ್‌ನ ಕೆಲವು ಪ್ರದೇಶಗಳಲ್ಲಿ ಶಾಂತಿ ಮರಳುವಂತೆ ನೋಡಿಕೊಳ್ಳಬೇಕು ಎಂದು ಪ್ರಧಾನಿಯವರನ್ನು ಆಗ್ರಹಿಸಿದ್ದರು ಎಂದು ವರದಿಯಾಗಿದೆ. ಮೆವಾನಿ ಅವರ ಟ್ವೀಟ್ ಮೋದಿ ಅವರ ವಿಚಾರವಾಗಿ ಕಟುವಾದ ಮಾತುಗಳನ್ನು ಆಡಿದೆ ಎಂಬುದು ನಿಜ. ಆದರೆ,ಅದು ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸುವಂಥದ್ದಾಗಿರಲಿಲ್ಲ. ಉದ್ರೇಕಕಾರಿ ಭಾಷಣ,ಶಾಂತಿಭಂಗ,ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವುದು,ಪಿತೂರಿ ಹಾಗೂ ಕಂಪ್ಯೂಟರ್ ಹ್ಯಾಕಿಂಗ್‌ಗೆ ಸಂಬಂಧಿಸಿದಂತೆ ಭಾರತೀಯ ದಂಡ ಸಂಹಿತೆ (ಐಪಿಸಿ)ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಮೆವಾನಿ ಅವರ ವಿರುದ್ಧ ಕೈಗೊಂಡ ಕ್ರಮಗಳಲ್ಲಿ ಬಹಳ ವಿಚಿತ್ರವಾದ ಹಾಗೂ ವಿವರಣೆಗಳಿಗೆ ನಿಲುಕದ ಆಯಾಮಗಳು ಇವೆ. ಅಸ್ಸಾಂನ ಕೊಕ್ರಜಾರ್ ಜಿಲ್ಲೆಯ ಬಿಜೆಪಿ ನಾಯಕರೊಬ್ಬರ ದೂರು ಆಧರಿಸಿ ಅಸ್ಸಾಂ ಪೊಲೀಸರು ಮೆವಾನಿ ಅವರನ್ನು ಗುಜರಾತ್‌ನಲ್ಲಿ ಬಂಧಿಸಿದರು. ಆ ಪ್ರಕರಣದಲ್ಲಿ ಜಾಮೀನು ಸಿಕ್ಕ ತಕ್ಷಣದಲ್ಲಿ ಮೆವಾನಿ ಅವರನ್ನು ಇನ್ನೊಂದು ಪ್ರಕರಣದ ಅಡಿಯಲ್ಲಿ ಪಕ್ಕದ ಜಿಲ್ಲೆಯಲ್ಲಿ ಬಂಧಿಸಲಾಯಿತು. ಮೆವಾನಿ ಅವರ ಟ್ವೀಟ್‌ಗೆ ಸಂಬಂಧಿಸಿದಂತೆ ಗುಜರಾತ್‌ನಲ್ಲಿ ದೂರು ದಾಖಲಾಗಿರುವ ಅಥವಾ ಗುಜರಾತ್ ಪೊಲೀಸರು ಮೆವಾನಿ ಅವರ ವಿರುದ್ಧ ಕ್ರಮ ಜರುಗಿಸಿದ ವರದಿಗಳು ಇಲ್ಲ. ಬದಲಿಗೆ,ಗುಜರಾತ್‌ನಿಂದ ದೂರದಲ್ಲಿ ಇರುವ ರಾಜ್ಯವೊಂದರಲ್ಲಿ ಅವರ ವಿರುದ್ಧ ದೂರು ದಾಖಲಾಯಿತು. ಮೆವಾನಿ ಟ್ವೀಟ್ ತಮ್ಮ ರಾಜ್ಯದ ಶಾಂತಿಗೆ ಭಂಗ ತರಬಹುದು ಎಂದು ಅಲ್ಲಿನ ಬಿಜೆಪಿ ಮುಖಂಡರೊಬ್ಬರಿಗೆ ಅನ್ನಿಸಿತು. ಆದರೆ,ಮೆವಾನಿ ಟ್ವೀಟ್‌ನಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಯಾವ ಅಂಶವೂ ಇರಲಿಲ್ಲ. ಸರ್ಕಾರದ ಟೀಕಾಕಾರ ಆಗಿರುವ ಮೆವಾನಿ ಅವರನ್ನು ಕಿರುಕುಳಕ್ಕೆ ಗುರಿಪಡಿಸುವ ಉದ್ದೇಶದಿಂದ ಮಾತ್ರವೇ ಅವರ ವಿರುದ್ಧ ಪ್ರಕರಣಗಳನ್ನು ದಾಖಲಿಸಿ,ಬಂಧಿಸಲಾಯಿತು ಎಂದು ಅರ್ಥ ಮಾಡಿಕೊಳ್ಳಬಹುದು. ಒಪ್ಪಲು ಸಾಧ್ಯವೇ ಇಲ್ಲದ ಹಾಗೂ ಸಮರ್ಥನೀಯವಲ್ಲದ ರೀತಿಯಲ್ಲಿ ಮೆವಾನಿ ಅವರನ್ನು ಬಂಧಿಸಲಾಗಿತ್ತು.

ಪ್ರಭುತ್ವವು ಹೇಗೆ ಮನಸೋಇಚ್ಛೆ ವರ್ತಿಸುತ್ತದೆ,ನಿಯಮಗಳು ಮತ್ತು ಕಾನೂನನ್ನು ಹೇಗೆ ಉಲ್ಲಂಘಿಸುತ್ತದೆ,ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲದ ಆರೋಪಗಳನ್ನು ಹೇಗೆ ವ್ಯಕ್ತಿಯೊಬ್ಬನ ವಿರುದ್ಧ ಹೊರಿಸುತ್ತದೆ ಎನ್ನುವುದನ್ನು ಮೆವಾನಿ ಪ್ರಕರಣ ತೋರಿಸುತ್ತಿದೆ. ಇಷ್ಟೂ ಕೆಲಸವನ್ನು ಯಾವ ಲಜ್ಜೆಯೂ ಇಲ್ಲದೆ,ತಮ್ಮನ್ನು ಯಾರಾದರೂ ಪ್ರಶ್ನಿಸಬಹುದು ಎಂಬ ಭಯವೂ ಇಲ್ಲದೆ ಮಾಡಲಾಗಿದೆ. ಪ್ರಭುತ್ವಕ್ಕೆ ಇಷ್ಟವಾಗದ ರೀತಿಯಲ್ಲಿ ಟ್ವೀಟ್ ಮಾಡಿದರೆ,ದೇಶದ ಯಾವುದೇ ರಾಜ್ಯದ ಪೊಲೀಸರು,ಯಾರನ್ನೇ ಬೇಕಾದರೂಯಾರದ್ದೋ ದೂರು ಆಧರಿಸಿ ಬಂಧಿಸಬಹುದು ಎಂಬುದನ್ನೂ ಈ ಪ್ರಕರಣವು ತೋರಿಸುತ್ತಿದೆ. ಟ್ವೀಟ್‌ಗೆ ಸಂಬಂಧಿಸಿದ ಪ್ರಕರಣದಲ್ಲಿ ಜಾಮೀನು ದೊರೆತ ನಂತರದಲ್ಲಿ ಮೆವಾನಿ ಅವರನ್ನು ಇನ್ನೊಂದು ಪ್ರಕರಣದಲ್ಲಿ ಪೊಲೀಸರು ಬಂಧಿಸಿದ ರೀತಿಯು,ಮೆವಾನಿ ಅವರನ್ನು ಹೇಗಾದರೂ ಮಾಡಿ ತಮ್ಮ ವಶದಲ್ಲಿ ಇರಿಸಿಕೊಳ್ಳಬೇಕು ಎಂದು ಪೊಲೀಸರು ಬಯಸಿದ್ದಿದ್ದನ್ನು ತೋರಿಸುತ್ತಿದೆ. ಈಗ ಈ ಪ್ರಕರಣದಲ್ಲಿಯೂ ಮೆವಾನಿ ಅವರಿಗೆ ಜಾಮೀನು ಸಿಕ್ಕಿದೆ. ಇದು ‘ಕಟ್ಟುಕತೆಯ ಪ್ರಕರಣ’ ಎಂದು ಪೊಲೀಸರ ವಿರುದ್ಧ ಕೋರ್ಟ್‌ ಆಕ್ರೋಶ ವ್ಯಕ್ತಪಡಿಸಿದೆ. ಕಷ್ಟಪಟ್ಟು ಗಳಿಸಿದ ಪ್ರಜಾತಂತ್ರ ವ್ಯವಸ್ಥೆಯನ್ನು ಪೊಲೀಸ್ ರಾಜ್ಯವನ್ನಾಗಿಸುವುದು ಕಲ್ಪಿಸಿಕೊಳ್ಳಲಿಕ್ಕೂ ಸಾಧ್ಯವಿಲ್ಲದ್ದು ಎಂದು ತೀಕ್ಷ್ಣವಾಗಿ ಹೇಳಿದೆ. ಹೀಗಿದ್ದರೂ,ಮೆವಾನಿ ಅವರನ್ನು ಎರಡು ಬಾರಿ ಬಂಧಿಸಿದ ವಿದ್ಯಮಾನವು ಎಲ್ಲಿಯೂಯಾರೂ ಸುರಕ್ಷಿತ ಅಲ್ಲ ಎಂಬ ಸಂದೇಶವನ್ನು ರವಾನಿಸುತ್ತಿದೆ. ಸರ್ಕಾರವು ತೆರೆಯ ಮೇಲೆ ಕಾಣಿಸಿಕೊಳ್ಳದೆಯೇ ನಾಗರಿಕರ ಹಕ್ಕುಗಳನ್ನು ಹತ್ತಿಕ್ಕಬಹುದು,ಪರೋಕ್ಷವಾಗಿ ಇಲ್ಲಿ ಇರುವುದು ರಾಜಕೀಯ ಮಾತ್ರ ಎನ್ನುವುದಕ್ಕೆ ಇಡೀ ಪ್ರಕರಣ ಒಂದು ನಿದರ್ಶನವಾಗಿ ನಿಲ್ಲುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT