ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ವರ್ಚಸ್ಸಿನಡಿ ಮತಯಾಚನೆ

ಬಿಜೆಪಿ ಅಭ್ಯರ್ಥಿ ನಂದಿನಿಗೌಡ ಬೆಂಬಲಿಗರೊಂದಿಗೆ ಕಾಲ್ನಡಿಗೆಯಲ್ಲಿ ತೆರಳಿ ನಾಮಪತ್ರ ಸಲ್ಲಿಕೆ
Last Updated 25 ಏಪ್ರಿಲ್ 2018, 12:38 IST
ಅಕ್ಷರ ಗಾತ್ರ

ಕನಕಪುರ: ಬಿಜೆಪಿ ಅಭ್ಯರ್ಥಿ ನಂದಿನಿಗೌಡ ತಮ್ಮ ಬೆಂಬಲಿಗರೊಂದಿಗೆ ಕಾಲ್ನಡಿಗೆಯಲ್ಲಿ ತಾಲ್ಲೂಕು ಕಚೇರಿಗೆ ತೆರಳಿ  ಉಮೇದುವಾರಿಕೆಯನ್ನು ಕೊನೆ ದಿನವಾದ ಮಂಗಳವಾರ ಸಲ್ಲಿಸಿದರು. ‌

ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿಗೆ ಅವಕಾಶ ನೀಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರನ್ನು ಜನರು ಬೆಂಬಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕ್ಷೇತ್ರದ ರಾಜಕೀಯಕ್ಕೆ ಹೊಸಬರಾದ ನಂದಿನಿಗೌಡ ಅವರು ಮೂಲತಃ ಬೂಹಳ್ಳಿ ಗ್ರಾಮದವರು. ಅವರು ರಾಜಕೀಯ ನೆಲೆ ಕಂಡುಕೊಳ್ಳಲು ಮೊದಲ ಬಾರಿಗೆ ಜೆಡಿಎಸ್‌ನಲ್ಲಿ ಗುರುತಿಸಿಕೊಂಡಿದ್ದರು. ಜೆಡಿಎಸ್‌ನಲ್ಲಿ ನಡೆದ ರಾಜಕೀಯ ಬೆಳವಣಿಗೆಯಿಂದ ಟಿಕೆಟ್‌ ಸಿಗುವುದಿಲ್ಲವೆಂದು ಖಾತ್ರಿಯಾಗುತ್ತಿದ್ದಂತೆ ಜೆಡಿಎಸ್‌ ತ್ಯಜಿಸಿ ಬಿಜೆಪಿ ಸೇರಿದ್ದರು.

ಬಿಜೆಪಿಯಲ್ಲೂ ಹಳಬರು ಮತ್ತು ಹೊಸಬರು ನಡುವೆ ತಿಕ್ಕಾಟ ನಡೆಯುತ್ತಲೇ ಇತ್ತು. ಪಕ್ಷದ ಬಹುತೇಕ ಹಳೆಯ ಮತ್ತು ಹೊಸ ಮುಖಂಡರು ನಂದಿನಿಗೌಡರಿಂದ ಅಂತರ ಕಾಯ್ದುಕೊಂಡು ದೂರ ಉಳಿದಿದ್ದರು. ಹಳೇ ಮುಖಂಡರಿಗೆ ಟಿಕೆಟ್‌ ನೀಡಿ ಪಕ್ಷ ಬಲಪಡಿಸಬೇಕೆಂಬ ಒತ್ತಡ ಇತ್ತು. ಕೊನೆ ಕ್ಷಣದವರೆಗೂ ಯಾರಿಗೂ ಟಿಕೇಟ್‌ ನೀಡದೆ ಮೌನವಹಿಸಿದ್ದ ಪಕ್ಷ ಅಂತಿಮವಾಗಿ ಸೋಮವಾರ ನಂದಿನಿಗೌಡ ಅವರಿಗೆ ಬಿ.ಫಾರಂ ನೀಡಿ ಎಲ್ಲ ಗೊಂದಲಗಳಿಗೂ ತೆರೆ ಎಳೆದಿದೆ.

ನಂದಿನಿ ಗೌಡರಿಗೆ ಟಿಕೆಟ್‌ ನೀಡುತ್ತಿದ್ದಂತೆ ಪಕ್ಷದ ಹಳೆ ಮುಖಂಡರು ಯಾವ ಪ್ರಕ್ರಿಯೆಯಲ್ಲೂ ಪಾಲ್ಗೊಳ್ಳದೆ ದೂರ ಉಳಿದು ಮೌನ ವಹಿಸಿದ್ದಾರೆ. ನಾಮಪತ್ರ ಸಲ್ಲಿಕೆಗೆ ಮಂಗಳವಾರ ಕೊನೆಯ ದಿನವಾದ್ದರಿಂದ ನಂದಿನಿಗೌಡ ತಮ್ಮ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದ ಬಿಜೆಪಿ ನಗರ ಮಂಡಲದ ಅಧ್ಯಕ್ಷ ಕೃಷ್ಣಪ್ಪ ಮತ್ತು ಕನಕಪುರ ವಿಧಾನಸಭಾ ಕ್ಷೇತ್ರ ಮಂಡಲ ಅಧ್ಯಕ್ಷ ಟಿ.ವಿ.ರಾಜು ಸೇರಿದಂತೆ ಹಲವು ಮುಖಂಡರ ಜತೆಗೂಡಿ ಮೊದಲಿಗೆ ಕಬ್ಬಾಳಮ್ಮ ದೇವಾಲಯ, ಕಲ್ಲಹಳ್ಳಿ ಶ್ರೀನಿವಾಸ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು.

ಬಳಿಕ ಪುತ್ರ ಹಾಗೂ ಸೊಸೆ, ಲಾಯರ್‌ ಶ್ರೀವಲ್ಲಿ ಅವರ ಜತೆಗೂಡಿ ನಗರದ ವಾಣಿ ಟಾಕೀಸ್‌ ಬಳಿ ಪಕ್ಷದ ಕಚೇರಿಯಲ್ಲಿ ಕಾರ್ಯಕರ್ತರು, ಮುಖಂಡರೊಂದಿಗೆ ಚರ್ಚೆ ನಡೆಸಿ ನಗರದ ಚನ್ನಬಸಪ್ಪ ವೃತ್ತದಿಂದ ಕಾಲ್ನಡಿಗೆ ಮೂಲಕ ಕುರುಪೇಟೆಯಲ್ಲಿನ ತಾಲ್ಲೂಕು ಕಚೇರಿಗೆ ತೆರಳಿ ಚುನಾವಣಾಧಿಕಾರಿ ಬಿ.ಜಿ.ಉಮೇಶ್‌ಗೆ ಎರಡು ನಾಮಪತ್ರ ಸಲ್ಲಿಸಿದರು.

ಬದಲಾವಣೆಗೆ ಮುಂದಾಗಲಿ

‘ಮಹಿಳೆಯಾದ ನನಗೆ ಬಿಜೆಪಿ ಕನಕಪುರದಂತಹ ದೊಡ್ಡ ಕ್ಷೇತ್ರದಲ್ಲಿ ಟಿಕೆಟ್‌ ನೀಡಿದೆ. ತಾಲ್ಲೂಕಿನ ಜನರು ಜೆಡಿಎಸ್‌ ಮತ್ತು ಕಾಂಗ್ರೆಸ್‌ ಎರಡು ಪಕ್ಷಗಳನ್ನು ನೋಡಿದ್ದಾರೆ.ಕಾಂಗ್ರೆಸ್‌, ಜೆಡಿಎಸ್‌ ಪಕ್ಷದ ಅವರ ನಡವಳಿಕೆಯಿಂದ ಬೇಸತ್ತಿದ್ದು, ಈ ಬಾರಿ ಗೆಲ್ಲಿಸುವ ಮೂಲಕ ಬಿಜೆಪಿಗೆ ಅವಕಾಶ ನೀಡಲಿದ್ದಾರೆ’ ಎಂದು ಪಕ್ಷದ ಅಭ್ಯರ್ಥಿ ನಂದಿನಿ ಗೌಡ ಅವರು ಈ ಸಂದರ್ಭದಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.

ಕನಕಪುರ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಎರಡೂ ಪಕ್ಷಗಳನ್ನು ದೂರವಿಟ್ಟು ಬಿಜೆಪಿಗೆ ಅವಕಾಶ ನೀಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬೆಂಬಲಿಸಲಿದ್ದಾರೆ ಎಂಬ ನಂಬಿಕೆ ಇದೆ. ಒಂದು ವೇಳೆ ಕ್ಷೇತ್ರದ ಜನರು ಬದಲಾವಣೆ ಮಾಡದಿದ್ದರೆ ಇನ್ನು 25 ವರ್ಷ ಇದೇ ಪರಿಸ್ಥಿತಿ ಕನಕಪುರದಲ್ಲಿ ಇರಲಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT