‘ಉತ್ತಮ ಕಲಿಕೆ ಉಜ್ವಲ ಭವಿಷ್ಯ’ ಎನ್ನುವ ಘೋಷವಾಕ್ಯದೊಂದಿಗೆ ಕರ್ನಾಟಕ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ 2026–27ನೇ ಸಾಲಿನ ಶೈಕ್ಷಣಿಕ ವರ್ಷ ಇಂದಿನಿಂದ (ಜೂನ್ 1) ಅಧಿಕೃತವಾಗಿ ಆರಂಭಗೊಂಡಿದೆ. ಬೇಸಿಗೆ ರಜೆಯ ಅವಧಿಯಲ್ಲಿ ಮಕ್ಕಳಿಲ್ಲದೆ ಮೌನ ಆವರಿಸಿಕೊಂಡಿದ್ದ ಶಾಲಾ ಪರಿಸರ, ಲಕ್ಷಾಂತರ ಮಕ್ಕಳ ಕಲರವ, ಕನಸುಗಳೊಂದಿಗೆ ಜೀವ ಪಡೆದುಕೊಳ್ಳಲಿದೆ. ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ದಾಖಲೆಯ ಫಲಿತಾಂಶ ಸಾಧಿಸಿರುವ ಸಂಭ್ರಮದಲ್ಲಿರುವ ಇಲಾಖೆ, ಆ ಯಶಸ್ಸನ್ನು ಮುಂದುವರಿಸುವ ಹುಮ್ಮಸ್ಸಿನಲ್ಲಿದೆ. ‘ಕರ್ನಾಟಕ ಪಬ್ಲಿಕ್ ಸ್ಕೂಲ್’ಗಳು ಸೇರಿದಂತೆ ಶಾಲಾ ಶಿಕ್ಷಣಕ್ಕೆ ಸಂಬಂಧಿಸಿದಂತೆ ಹಲವು ಯೋಜನೆಗಳನ್ನು ಹಮ್ಮಿಕೊಳ್ಳುವ ಮೂಲಕ ಸರ್ಕಾರಿ ಶಾಲೆಗಳಿಗೆ ಹೊಸ ಸ್ವರೂಪ ನೀಡಲು ಇಲಾಖೆ ಪ್ರಯತ್ನಿಸುತ್ತಿದೆ. ಶೈಕ್ಷಣಿಕ ವರ್ಷದ ಆರಂಭದಲ್ಲೇ ಅತಿಥಿ ಶಿಕ್ಷಕರ ನೇಮಕ ಮಾಡಿಕೊಳ್ಳುವ ಮೂಲಕ ಶಿಕ್ಷಕರ ಕೊರತೆ ಎದುರಾಗದಂತೆ ಇತ್ತೀಚಿನ ವರ್ಷಗಳಲ್ಲಿ ಎಚ್ಚರ ವಹಿಸಲಾಗುತ್ತಿದೆ. ಈ ವರ್ಷ, ಶಾಲೆ ಆರಂಭಗೊಳ್ಳುವುದಕ್ಕೆ ಮೊದಲೇ ಶಾಲೆಗಳಲ್ಲಿನ ಮೂಲಸೌಕರ್ಯ ಮತ್ತು ಸುರಕ್ಷತಾ ಸ್ಥಿತಿಯ ಕುರಿತು ಪರಿಶೀಲನೆ ನಡೆಸಲು ಇಲಾಖೆಯು ಅಧಿಕಾರಿಗಳಿಗೆ ನಿರ್ದೇಶಿಸಿತ್ತು. ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಶಾಲಾ ಕಟ್ಟಡಗಳ ಸುರಕ್ಷತೆ, ಕುಡಿಯುವ ನೀರು, ಶೌಚಾಲಯಗಳು ಹಾಗೂ ಇತರೆ ಸೌಲಭ್ಯಗಳನ್ನು ಪರಿಶೀಲಿಸಿ ವರದಿ ಸಲ್ಲಿಸಲು ಆದೇಶಿಸಲಾಗಿತ್ತು. ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳನ್ನು ತಕ್ಷಣವೇ ದುರಸ್ತಿಗೊಳಿಸಲು ಇಲ್ಲವೇ ಬಳಕೆಯಿಂದ ದೂರವಿಡಲು ತಿಳಿಸಲಾಗಿತ್ತು. ಈ ಉಪಕ್ರಮಗಳಿಂದಾಗಿ ಮಕ್ಕಳ ಹೊಸ ಶೈಕ್ಷಣಿಕ ವರ್ಷದ ಕಲಿಕೆ ಸುರಕ್ಷಿತ ಪರಿಸರದಲ್ಲಿ ಸಾಗುತ್ತದೆಂದು ಆಶಿಸಬಹುದಾಗಿದೆ. ಪಠ್ಯಪುಸ್ತಕಗಳು ಸಕಾಲದಲ್ಲಿ ದೊರೆಯದಿರುವುದು ಪ್ರತಿ ಶೈಕ್ಷಣಿಕ ವರ್ಷದ ದೂರು. ಶಾಲೆಯ ಮೊದಲ ದಿನವೇ ಮಕ್ಕಳಿಗೆ ಪಠ್ಯಪುಸ್ತಕ ದೊರೆಯುವಂತೆ ಮಾಡುವ ಮೂಲಕ ಬೋಧನೆ ಹಾಗೂ ಕಲಿಕೆ ಸುಸೂತ್ರವಾಗಿ ಸಾಗುವಂತಾಗಬೇಕು.ಸಮವಸ್ತ್ರ ವಿತರಣೆಯೂ ವಿಳಂಬವಿಲ್ಲದೆ ನಡೆಯಬೇಕು. ಸರ್ಕಾರಿ ಶಾಲೆಗಳ ವರ್ಚಸ್ಸು ಹೆಚ್ಚಾಗುವಲ್ಲಿ ಶಿಸ್ತಿನ ಪಾಲನೆ ಮುಖ್ಯವಾದುದು.

ಗುಣಮಟ್ಟದ ಕಲಿಕೆಗೂ ಉತ್ತಮ ಭವಿಷ್ಯಕ್ಕೂ ಇರುವ ಸಂಬಂಧವನ್ನು ಶಿಕ್ಷಣ ಇಲಾಖೆ ಸರಿಯಾಗಿಯೇ ಗುರ್ತಿಸಿದೆ. ಈ ನಿಟ್ಟಿನಲ್ಲಿ ಮೂಲಸೌಕರ್ಯಗಳನ್ನು ಉತ್ತಮಗೊಳಿಸುವ ಪ್ರಯತ್ನಗಳನ್ನೂ ನಡೆಸಿದೆ. ಆದರೆ, ಶಿಕ್ಷಕರ ಪೂರ್ಣ ಸಾಮರ್ಥ್ಯ ಶಾಲೆಗೆ ಮತ್ತು ಮಕ್ಕಳಿಗೆ ದೊರೆಯದೆ ಹೋದರೆ ಉತ್ತಮ ಕಲಿಕೆಯ ಆಶಯ ಘೋಷಣೆಯಾಗಿಯಷ್ಟೇ ಉಳಿಯುತ್ತದೆ. ಶಾಲಾರಂಭದ ಸಮಯದಲ್ಲಿಯೇ ‘ವಿಶೇಷ ಸಮಗ್ರ ಪರಿಷ್ಕರಣೆ’ (ಎಸ್ಐಆರ್) ಪ್ರಕ್ರಿಯೆಯ ಹೊಣೆ ಶಿಕ್ಷಕರ ಹೆಗಲಿಗೇರಿದೆ. ‘ಗ್ರೇಟರ್ ಬೆಂಗಳೂರು ಪ್ರಾಧಿಕಾರ’ದ ಪಾಲಿಕೆಗಳಿಗೆ ನಡೆಯಬೇಕಾದ ಚುನಾವಣೆಗಳು ಸೇರಿದಂತೆ ಶಾಲಾ ಚಟುವಟಿಕೆಗಳಿಗೆ ಹೊರತಾದ ಮಹತ್ವದ ಕಾರ್ಯಭಾರಗಳನ್ನು ಶಿಕ್ಷಕರು ಅನಿವಾರ್ಯವಾಗಿ ನಿರ್ವಹಿಸಬೇಕಾಗಿದೆ. ಕಳೆದ ಕೆಲವು ವರ್ಷಗಳಿಂದಂತೂ, ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಉತ್ತರದಾಯಿ ಆಗಿರಬೇಕಾದ ಶಿಕ್ಷಕರ ಮೇಲೆ, ಬೇರೆ ಇಲಾಖೆಯ ಅಧಿಕಾರಿಗಳೇ ಹೆಚ್ಚಿನ ಅಧಿಕಾರ ಚಲಾಯಿಸುತ್ತಿರುವ ಸಂದರ್ಭ ಸೃಷ್ಟಿಯಾಗಿದೆ. ಶಿಕ್ಷಣೇತರ ಕಡ್ಡಾಯ ಕರ್ತವ್ಯಗಳ ನಡುವೆ ಸಿಲುಕಿಕೊಂಡಿರುವ ಶಿಕ್ಷಕರನ್ನು ವಿದ್ಯಾರ್ಥಿಗಳಿಗೆ ಪೂರ್ಣ ಪ್ರಮಾಣದಲ್ಲಿ ದೊರಕಿಸಿ ಕೊಡಲು ಸಾಧ್ಯವಾಗದಿರುವುದು ಸರ್ಕಾರಿ ಶಾಲೆಗಳಲ್ಲಿನ ಬೋಧನಾ ಚಟುವಟಿಕೆಗಳ ಹಿನ್ನಡೆಗೆ ಮುಖ್ಯ ಕಾರಣಗಳಲ್ಲೊಂದಾಗಿದೆ. ವಿದ್ಯಾರ್ಥಿಗಳಿಗಷ್ಟೇ ಅಲ್ಲ, ಶಿಕ್ಷಕರಿಗೂ ಸುರಕ್ಷಿತ ಹಾಗೂ ಉಲ್ಲಾಸದಾಯಕ ಶೈಕ್ಷಣಿಕ ವಾತಾವರಣ ಅಗತ್ಯ. ಅನಗತ್ಯ ಒತ್ತಡಗಳಿಂದ ಶಿಕ್ಷಕರು ಮುಕ್ತರಾಗುವುದು ‘ಉತ್ತಮ ಕಲಿಕೆ’ ಆಶಯ ಸಾಕಾರಗೊಳ್ಳುವುದಕ್ಕೆ ಅಗತ್ಯ. ವಿದ್ಯಾರ್ಥಿಗಳ ಕಲಿಕಾಮಟ್ಟದ ಕುಸಿತಕ್ಕೂ ಶಿಕ್ಷಕರ ಮೇಲಿನ ಹೊರೆಗಳಿಗೂ ನೇರ ಸಂಬಂಧವಿದೆ.

ಕೊರೊನಾ ಸಾಂಕ್ರಾಮಿಕದ ನಂತರ ಸರ್ಕಾರಿ ಶಾಲೆಗಳಲ್ಲಿನ ವಿದ್ಯಾರ್ಥಿಗಳ ದಾಖಲಾತಿ ಪ್ರಮಾಣ ನಿರೀಕ್ಷಿಸಿದಷ್ಟು ಪ್ರಮಾಣದಲ್ಲಿಲ್ಲ. ಆ ಸಮಸ್ಯೆ ಈ ಬಾರಿಯೂ ಮುಂದುವರಿಯಬಹುದು. ಎಲ್ ನಿನೊ ಪರಿಣಾಮದಿಂದಾಗಿ ಮುಂಗಾರು ನಿರೀಕ್ಷೆಯಂತೆ ಇರುವುದಿಲ್ಲ ಎಂದು ಹವಾಮಾನ ಇಲಾಖೆ ಅಂದಾಜು ಮಾಡಿದೆ. ಮಳೆಯ ಕೊರತೆ ಎದುರಾದಾಗ, ಉದ್ಯೋಗಗಳನ್ನು ಹುಡುಕಿಕೊಂಡು ವಲಸೆ ಹೋಗುವವರ ಸಂಖ್ಯೆ ಸಹಜವಾಗಿಯೇ ಹೆಚ್ಚಾಗಲಿದೆ ಹಾಗೂ ಗಣನೀಯ ಸಂಖ್ಯೆಯ ಮಕ್ಕಳು ಶಾಲೆಯಿಂದ ಹೊರಗುಳಿಯುವ ಸಾಧ್ಯತೆಯಿದೆ. ವಲಸೆ ಕಾರ್ಮಿಕರ ಮಕ್ಕಳನ್ನು ಗುರ್ತಿಸಿ, ಅವರು ಸಮೀಪದ ಶಾಲೆಗಳಲ್ಲಿ ಕಲಿಯಲು ಅವಕಾಶ ಕಲ್ಪಿಸುವ ಪ್ರಕ್ರಿಯೆಯನ್ನು ಶಿಕ್ಷಣ ಇಲಾಖೆ ಆಂದೋಲನದ ರೀತಿಯಲ್ಲಿ ನಡೆಸಬೇಕಾಗಿದೆ. ಮಕ್ಕಳ ವ್ಯಕ್ತಿತ್ವ ಮತ್ತು ಸಾಮರ್ಥ್ಯವನ್ನು ವೃದ್ಧಿಸುವ ಹಾಗೂ ಸಮಾನ ಅವಕಾಶಗಳನ್ನು ಸೃಷ್ಟಿಸುವ ನಿಟ್ಟಿನಲ್ಲಿ ಶಾಲಾ ಶಿಕ್ಷಣವನ್ನು ಬಲಗೊಳಿಸುವ ಸಂಕಲ್ಪ, ಇಚ್ಛಾಶಕ್ತಿ ಸರ್ಕಾರಕ್ಕೆ ಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.