ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ರಾಜ್ಯದ ಅಪಾಯಕಾರಿ ರಸ್ತೆಗಳು; ಸಿಎಜಿ ವರದಿ ಕಣ್ತೆರೆದು ನೋಡಿ

Last Updated 18 ಮಾರ್ಚ್ 2022, 21:12 IST
ಅಕ್ಷರ ಗಾತ್ರ

‘ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯ ರಸ್ತೆಗಳು ಅತ್ಯಂತ ಅಪಾಯಕಾರಿ’ ಎಂಬ ಅಂಶವನ್ನು ವಿಧಾನಮಂಡಲದಲ್ಲಿ ಮೊನ್ನೆಯಷ್ಟೇ ಮಂಡಿಸಲಾದ ಮಹಾಲೇಖಪಾಲರ (ಸಿಎಜಿ) ವರದಿಯಲ್ಲಿ ಎತ್ತಿ ತೋರಲಾಗಿದೆ. ರಾಜ್ಯದ ಕೆಲವು ಹೆದ್ದಾರಿಗಳು, ಪ್ರಮುಖ ಜಿಲ್ಲಾ ರಸ್ತೆಗಳ ಸ್ಥಿತಿ ಕೂಡ ಇದಕ್ಕಿಂತ ಭಿನ್ನವಾಗಿಯೇನೂ ಇಲ್ಲ ಎನ್ನುವುದು ವರದಿಯ ಮೇಲೆ ಕಣ್ಣಾಡಿಸಿದಾಗ ಗೊತ್ತಾಗುತ್ತದೆ. ‘ಅಂಗೈ ಹುಣ್ಣಿಗೆ ಕನ್ನಡಿ ಬೇಕೇ’ ಎನ್ನುವಂತೆ ರಾಜಧಾನಿಯ ಜನರಿಗೆ ಇಲ್ಲಿನ ರಸ್ತೆಗಳ ದುಃಸ್ಥಿತಿ ಕುರಿತು ಚೆನ್ನಾಗಿಯೇ ತಿಳಿದಿದೆ. ರಸ್ತೆ ಗುಂಡಿಗಳ ಕಾರಣದಿಂದ ಕಳೆದ ಏಳು ತಿಂಗಳುಗಳಲ್ಲಿ ಸಂಭವಿಸಿರುವ ದುರ್ಘಟನೆಗಳಲ್ಲಿ ಐವರು ತಮ್ಮ ಅಮೂಲ್ಯ ಜೀವವನ್ನು ಕಳೆದುಕೊಂಡಿದ್ದಾರೆ. ಕಳೆದ ವಾರವಷ್ಟೇ 27ರ ಹರೆಯದ ಯುವಕನೊಬ್ಬ ರಸ್ತೆಗುಂಡಿಗೆ ಬಲಿಯಾದ ಸುದ್ದಿ ಇನ್ನೂ ಕಾಡುತ್ತಿದೆ. ಯುವಕನ ಈ ದುರಂತದ ಸಾವಿಗಾಗಿ ಹೈಕೋರ್ಟ್‌ ಸಹ ಸಂತಾಪ ವ್ಯಕ್ತಪಡಿಸಿದೆ. ಹಾಗೆ ನೋಡಿದರೆ, ರಸ್ತೆಗಳ ದುಃಸ್ಥಿತಿ ವಿಷಯದಲ್ಲಿ ಜನರ ಕೊರಳ ಧ್ವನಿಯಾಗಿ ನಿಂತಿರುವ ಹೈಕೋರ್ಟ್‌, ಬಿಬಿಎಂಪಿಯನ್ನು ಮೇಲಿಂದ ಮೇಲೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದೆ. ಆದರೆ, ದಪ್ಪಚರ್ಮದ ಆಡಳಿತ ವ್ಯವಸ್ಥೆಗೆ ಅದು ತಾಗಿಯೇ ಇಲ್ಲ. ಪಟ್ಟುಬಿಡದ ಕೋರ್ಟ್‌, ಬಿಬಿಎಂಪಿ ಮುಖ್ಯ ಎಂಜಿನಿಯರ್‌ (ರಸ್ತೆ ಮೂಲಸೌಕರ್ಯ) ಬಿ.ಎಸ್‌. ಪ್ರಹ್ಲಾದ್‌ ಅವರನ್ನು ಉದ್ದೇಶಿಸಿ, ‘ಈಗಿಂದೀಗಲೇ ನಿಮ್ಮನ್ನು ಸೇವೆಯಿಂದ ಅಮಾನತು ಮಾಡಿ ಜೈಲಿಗೆ ಅಟ್ಟುವಂತೆ ಆದೇಶಿಸಬೇಕಾಗುತ್ತದೆ’ ಎಂದು ಕಡು ಕೋಪದಿಂದ ಎಚ್ಚರಿಕೆಯನ್ನೂ ನೀಡಿದೆ. ರಸ್ತೆಗುಂಡಿ ಗಳ ಕುರಿತು ಎರಡೇ ವಾರಗಳಲ್ಲಿ ಸಮೀಕ್ಷೆ ನಡೆಸಿ ವರದಿ ನೀಡಬೇಕು, ದುರಸ್ತಿಗೆ ಕ್ರಮವನ್ನೂ ಕೈಗೊಳ್ಳಬೇಕು ಎಂದು ಕೂಡ ತಾಕೀತು ಮಾಡಿದೆ. ರಸ್ತೆಗುಂಡಿಗಳನ್ನು ಸಮರೋಪಾದಿಯಲ್ಲಿ ಮುಚ್ಚುವಂತೆ ಮುಖ್ಯಮಂತ್ರಿ, ಸಚಿವರಿಂದ ಆಗಾಗ ಆದೇಶ ಪಡೆಯುವುದು, ಗಡುವನ್ನು ಮುಂದಕ್ಕೆ ಹಾಕುತ್ತಾ ಹೋಗುವುದು ಬಿಬಿಎಂಪಿ ಅಧಿಕಾರಿಗಳ ಪಾಲಿಗೆ ಒಂದು ರೀತಿಯಲ್ಲಿ ಚಾಳಿಯಾಗಿಬಿಟ್ಟಿದೆ.

ರಸ್ತೆ ವಿನ್ಯಾಸದಲ್ಲಿನ ದೋಷಗಳು, ಕಣ್ಣಿಗೆ ರಾಚುವ ಫಲಕಗಳು ಮತ್ತು ಎಲ್ಲೆಂದರಲ್ಲಿ ಅಳವಡಿಸಿರುವ ವೇಗ ನಿಯಂತ್ರಕಗಳು ರಾಜ್ಯದ ವಿವಿಧ ರಸ್ತೆಗಳಲ್ಲಿ ಅಪಘಾತಕ್ಕೆ ಕಾರಣವಾಗುತ್ತಿವೆ. ಗುಂಡಿ ಗಳ ಸೃಷ್ಟಿ ಮತ್ತು ಅವ್ಯವಸ್ಥೆಯಿಂದ ಕೂಡಿರುವ ಪಾದಚಾರಿ ಮಾರ್ಗ, ಅಸಮರ್ಪಕ ಒಳಚರಂಡಿ ವ್ಯವಸ್ಥೆ– ಇವು ರಸ್ತೆಗಳ ದುಃಸ್ಥಿತಿಗೆ ಕಾರಣವಾಗಿವೆ ಎಂದೂ ಸಿಎಜಿ ವರದಿ ಹೇಳಿದೆ. ಬೆಂಗಳೂರಿನಲ್ಲಿ 1,400 ಕಿ.ಮೀ. ಉದ್ದದ ಮುಖ್ಯ ರಸ್ತೆಗಳಿದ್ದು, ಅದರಲ್ಲಿ ಶೇ 43ರಷ್ಟು ರಸ್ತೆಗಳಲ್ಲಿ ಸರಿಯಾದ ಪಾದಚಾರಿ ಮಾರ್ಗಗಳೇ ಇಲ್ಲ ಎನ್ನುವುದರತ್ತಲೂ ವರದಿ ಬೊಟ್ಟುಮಾಡಿ ತೋರಿದೆ. ಈ ಪಾದಚಾರಿ ಮಾರ್ಗಗಳನ್ನು ಅಂಗಡಿಗಳು, ಹೋಟೆಲ್‌ಗಳು, ಪಾರ್ಕಿಂಗ್‌ ತಾಣಗಳು, ತ್ಯಾಜ್ಯ ಸಂಗ್ರಹ ತೊಟ್ಟಿಗಳು ಹಾಗೂ ವಿದ್ಯುತ್‌ ಪರಿವರ್ತಕಗಳ ಕಂಬಗಳು ಆಕ್ರಮಿಸಿರುವು ದನ್ನು ಪತ್ತೆ ಮಾಡಲು ಯಾವ ದುರ್ಬೀನೂ ಬೇಕಾಗಿಲ್ಲ. ಅವುಗಳನ್ನು ತೆರವುಗೊಳಿಸಿ, ಪಾದಚಾರಿ ಮಾರ್ಗಗಳನ್ನು ಅಡೆತಡೆ ಮುಕ್ತವಾಗಿಸಲು ಅಧಿಕಾರಿಗಳಿಗೆ ಮನಸ್ಸಿಲ್ಲ ಅಷ್ಟೆ.

ಕಡತಗಳಲ್ಲಿ ಮಾತ್ರ ರಸ್ತೆ ‘ಸುಧಾರಣೆ’ಯಾದ ಹಲವು ಹಗರಣಗಳನ್ನು ಲೋಕಾಯುಕ್ತ ತನಿಖೆಗಳು, ಸಿಎಜಿ ವರದಿಗಳು ಈ ಹಿಂದೆ ಹಲವು ಬಾರಿ ಬಯಲು ಮಾಡಿವೆ. ಬೆಂಗಳೂರಿನ ರಸ್ತೆಗಳಿಗೆ ಕಳೆದ ಹತ್ತು ವರ್ಷಗಳಲ್ಲಿ ಮಾಡಿರುವ ಖರ್ಚಿನ ಲೆಕ್ಕ ನೋಡಿದರೆ ಅವುಗಳ ಮೇಲ್ಮೈ ನುಣ್ಣಗಾಗಿ ಫಳಫಳ ಹೊಳೆಯಬೇಕಿತ್ತು. ಆದರೆ, ಅವು ಗುಂಡಿಮಯವಾಗಿರುವುದು ಎಲ್ಲ ಕಥೆಯನ್ನು ಹೇಳುತ್ತವೆ. ಗುತ್ತಿಗೆ ನಿರ್ವಹಣೆ ಅವಧಿಯಲ್ಲಿ ಮತ್ತೆ ಗುಂಡಿ ಕಾಣಿಸಿಕೊಂಡರೆ ಗುತ್ತಿಗೆದಾರರಿಂದಲೇ ಅದನ್ನು ದುರಸ್ತಿ ಮಾಡಿಸಬೇಕು. ಆದರೆ, ಗುತ್ತಿಗೆದಾರರ ಜತೆ ಎಂಜಿನಿಯರ್‌ಗಳದ್ದು ಎಂತಹ ‘ಮೈತ್ರಿ’ ಎಂದರೆ, ಗುಂಡಿ ಬಿದ್ದಾಗ ಅವರಿಂದ ದುರಸ್ತಿ ಮಾಡಿಸುವ ಗೋಜಿಗೇ ಹೋಗುವುದಿಲ್ಲ. ಸಾರ್ವಜನಿಕ ಒತ್ತಡ ತೀರಾ ಹೆಚ್ಚಾದಾಗ ಸರ್ಕಾರವೇ ಬಿಡುಗಡೆ ಮಾಡುವ ದುಡ್ಡಿನಿಂದ ದುರಸ್ತಿ ಕೆಲಸ ನಡೆಯುತ್ತದೆ. ಗುತ್ತಿಗೆದಾರರು ಹೊಣೆಯಿಂದ ನುಣುಚಿಕೊಳ್ಳಲು ಇದರಿಂದ ಆಸ್ಪದ ಮಾಡಿಕೊಟ್ಟಂತಾಗುತ್ತದೆ. ರಸ್ತೆಗಳ ಅವ್ಯವಸ್ಥೆಗೆ ಸಂಬಂಧಿಸಿದಂತೆ ಶಾಶ್ವತವಾದ ಪರಿಹಾರ ಕಂಡುಕೊಳ್ಳಲು ‘ರಸ್ತೆ ಇತಿಹಾಸ’ ನಿರ್ವಹಣೆ ವ್ಯವಸ್ಥೆಯೊಂದನ್ನು ಈ ಹಿಂದೆ ರೂಪಿಸಲಾಗಿತ್ತು. ಆದರೆ, ಕಾರ್ಪೊರೇಟರ್‌ಗಳು ಅದನ್ನು ಜಾರಿಗೊಳಿಸಲು ಬಿಟ್ಟಿರಲಿಲ್ಲ. ಮುಂದೆ ಜಾರಿಗೆ ಬಂತಾದರೂ ಅದು ಸಮರ್ಪಕವಾಗಿರಲಿಲ್ಲ. ‘ರಸ್ತೆ ಇತಿಹಾಸ’ ನಿರ್ವಹಣೆ ವ್ಯವಸ್ಥೆ ಸರಿಯಾಗಿ ಅನುಷ್ಠಾನಕ್ಕೆ ಬಂದಿದ್ದರೆ ಯಾವ ರಸ್ತೆ ಯಾವಾಗ ದುರಸ್ತಿಯಾಗಿದೆ, ಅದನ್ನು ನಿರ್ವಹಣೆ ಮಾಡಬೇಕಾದವರು ಯಾರು, ಗುಂಡಿಗಳು ಎಷ್ಟಿವೆ, ಅವುಗಳನ್ನು ಯಾವಾಗ ಮುಚ್ಚಲಾಗಿದೆ, ಯಾವ ಎಂಜಿನಿಯರ್‌ ಆ ರಸ್ತೆಯ ಉಸ್ತುವಾರಿಯಲ್ಲಿದ್ದಾರೆ ಎಂಬೆಲ್ಲ ವಿವರಗಳು ಭೌಗೋಳಿಕ ಮಾಹಿತಿ ವ್ಯವಸ್ಥೆಯ (ಜಿಐಎಸ್‌) ಮೂಲಕ ದಾಖಲಾಗುತ್ತಿದ್ದವು. ಆಗ ಹೊಣೆಯಿಂದ ನುಣುಚಿಕೊಳ್ಳಲು ಯಾರಿಗೂ ಅವಕಾಶವೇ ಇರುತ್ತಿರಲಿಲ್ಲ. ಪ್ರತಿಯೊಂದು ರಸ್ತೆಯ ಇತಿಹಾಸವನ್ನೂ ನಿರ್ವಹಣೆ ಮಾಡು ವಂತೆ‌ ನೋಡಿಕೊಳ್ಳುವುದು ಮುಖ್ಯಮಂತ್ರಿಯವರ ಹೊಣೆ. ಬೆಂಗಳೂರು ನಗರದ ರಸ್ತೆಗಳು ಮಾತ್ರ ವಲ್ಲದೆ ರಾಜ್ಯದ ಎಲ್ಲ ರಸ್ತೆಗಳು ಸದಾ ಸುಸ್ಥಿತಿಯಲ್ಲಿ ಇರುವಂತೆ ಎಚ್ಚರವನ್ನೂ ವಹಿಸಬೇಕು. ಪ್ರತೀ ರಸ್ತೆಯ ದುಃಸ್ಥಿತಿಗೆ ಸಂಬಂಧಿಸಿದಂತೆ ನಿರ್ದಿಷ್ಟ ಅಧಿಕಾರಿಯನ್ನು ಹೊಣೆಯಾಗಿಸಬೇಕು. ಗುತ್ತಿಗೆ ಅವಧಿ ಯಲ್ಲಿ ರಸ್ತೆಯನ್ನು ಸರಿಯಾಗಿ ನಿರ್ವಹಿಸದ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಂಡು, ಠೇವಣಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ಇಂತಹ ಕಠಿಣ ಕ್ರಮಗಳಿಗೆ ಮುಂದಾಗದಿದ್ದರೆ ರಸ್ತೆಗುಂಡಿಗಳಿಂದ ಆಗುವ ಅನಾಹುತಗಳಿಗೆ ಕೊನೆ ಎಂಬುದೇ ಇರುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT