ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಸಂಸದರಿಂದ ಮಹಿಳೆಗೆ ಅವಮಾನ: ಈ ಮೌನ ಸರಿಯೇ?

Last Updated 13 ಮಾರ್ಚ್ 2023, 22:39 IST
ಅಕ್ಷರ ಗಾತ್ರ

ಹಣೆಗೆ ಬೊಟ್ಟು ಇಟ್ಟುಕೊಳ್ಳದ ಮಹಿಳೆಯೊಬ್ಬರನ್ನು ಸಾರ್ವಜನಿಕವಾಗಿ ತರಾಟೆಗೆ ತೆಗೆದುಕೊಂಡ ಕೋಲಾರದ ಸಂಸದ, ಬಿಜೆಪಿಯ ಎಸ್‌. ಮುನಿಸ್ವಾಮಿ ಅವರ ವರ್ತನೆ, ಇಡೀ ಮಹಿಳಾ ಸಮುದಾಯಕ್ಕೆ ಎಸಗಿರುವ ಅವಮಾನ. ನೈತಿಕತೆಯ ಹೆಸರಿನಲ್ಲಿ ಅನೈತಿಕ ಕೃತ್ಯವನ್ನೆಸಗಿರುವ ಸಂಸದರ ಮಾತುಗಳು ಸಂವಿಧಾನಕ್ಕೆ ತೋರಿರುವ ಅಗೌರವವೂ ಹೌದು. ಮುನಿಸ್ವಾಮಿ ಅವರ ಮಾತು, ಮಹಿಳೆಯರನ್ನು ಸಂಕೇತಗಳಲ್ಲಿ ಬಂದಿಯಾಗಿರಿಸುವ ಪುರುಷ ಮನಃಸ್ಥಿತಿಯಿಂದ ಕೂಡಿರುವಂತಹದ್ದು; ಮಹಿಳೆಯರ ಸ್ವಂತಿಕೆ ಮತ್ತು ಸ್ವಾಭಿಮಾನವನ್ನು ಅವಮಾನಿಸುವಂತಹದ್ದು. ಜಿಲ್ಲಾಡಳಿತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಏರ್ಪಡಿಸಿದ್ದ ‘ಮಹಿಳಾ ದಿನಾಚರಣೆ’ ಸಂದರ್ಭದಲ್ಲಿ ಭಾಗವಹಿಸಿದ್ದ ಅವರು, ಕಾರ್ಯಕ್ರಮ ನಡೆದ ರಂಗಮಂದಿರದ ಆವರಣದಲ್ಲಿ ಮಳಿಗೆ ಹಾಕಿಕೊಂಡಿದ್ದ ಮಹಿಳೆಯ ಹಣೆಯನ್ನು ಕಂಡು ಕೂಗಾಡಿದ್ದರು. ‘ಹಣೆಗೆ ಏಕೆ ಬೊಟ್ಟು ಇಟ್ಟುಕೊಂಡಿಲ್ಲ? ಅಂಗಡಿಗೆ ವೈಷ್ಣವಿ ಎಂದು ಹೆಸರು ಇಟ್ಟಿರುವುದೇಕೆ’ ಎಂದು ಪ್ರಶ್ನಿಸಿದ್ದರು. ‘ನಿನ್ನ ಗಂಡ ಬದುಕಿದ್ದಾನೆ ತಾನೆ’ ಎಂದೂ ಪ್ರಶ್ನಿಸಿದ ಅವರು, ‘ನಿನಗೆ ಕಾಮನ್‌ಸೆನ್ಸ್‌ ಇಲ್ಲವಾ? ಯಾರೋ ದುಡ್ಡು ಕೊಡುತ್ತಾರೆಂದು ಮತಾಂತರ ಆಗಿಬಿಡುತ್ತೀರಾ?’ ಎಂದು ಸಾರ್ವಜನಿಕವಾಗಿ ಹರಿಹಾಯ್ದಿದ್ದರು. ಮಹಿಳಾ ದಿನಾಚರಣೆ ಸಂದರ್ಭದಲ್ಲಿಯೇ ಮಹಿಳೆಯೊಬ್ಬರ ಮೇಲೆ ಹರಿಹಾಯ್ದ ಘಟನೆಗೆ ಸಂಬಂಧಿಸಿದಂತೆ ಸಂಸದರು ಉತ್ತರಿಸಬೇಕಾದ ಕೆಲವು ಪ್ರಶ್ನೆಗಳಿವೆ. ಬರಿಹಣೆಯ ಹೆಣ್ಣುಮಕ್ಕಳಿಗೆ ಕುಂಕುಮ ಇಡಿಸುವ ಜವಾಬ್ದಾರಿಯನ್ನು ಅವರಿಗೆ ನೀಡಿದವರು ಯಾರು? ಗಂಡ ಬದುಕಿರುವುದಕ್ಕೂ ಬೊಟ್ಟಿಗೂ ಯಾವ ಸಂಬಂಧ? ತಮ್ಮ ಅಂಗಡಿಗೆ ತಮಗೆ ಬೇಕಾದ ಹೆಸರಿಡಲು ಜನಸಾಮಾನ್ಯರಿಗೆ ಹಕ್ಕಿಲ್ಲವೇ? ಈ ಪ್ರಶ್ನೆಗಳಿಗೆ ಉತ್ತರಿಸುವುದರ ಜೊತೆಗೆ, ಅಸಹಾಯಕ ಮಹಿಳೆಯನ್ನು ‘ಕಾಮನ್‌ಸೆನ್ಸ್‌ ಇಲ್ಲವಾ’ ಎಂದು ಪ್ರಶ್ನಿಸಿರುವ ನಡವಳಿಕೆಯಲ್ಲಿ ಯಾವ ರೀತಿಯ ಸಜ್ಜನಿಕೆಯಿದೆ ಎನ್ನುವುದನ್ನು ಸಂಸದರು ಹಾಗೂ ಅವರು ಪ್ರತಿನಿಧಿಸುವ ಪಕ್ಷವೇ ಜನರಿಗೆ ಸ್ಪಷ್ಟಪಡಿಸಬೇಕಾಗಿದೆ.

ಸಂಸದರ ಮಾತು ದುಡಿಯುವ ಮಹಿಳೆಯ ಆತ್ಮವಿಶ್ವಾಸವನ್ನು ಕಸಿಯುವಂತಹದ್ದು. ಸಂಸದರ ವರ್ತನೆಯ ಬಗ್ಗೆ ನಾಡಿನ ಒಂದಷ್ಟು ಪ್ರಜ್ಞಾವಂತ ಮಹಿಳೆಯರು ಸಹಜವಾಗಿಯೇ ಪ್ರತಿಭಟಿಸಿದ್ದಾರೆ. ಆದರೆ, ಘಟನೆಯ ನೈತಿಕ ಹೊಣೆ ಹೊರಬೇಕಿದ್ದ ಆಡಳಿತಾರೂಢ ಪಕ್ಷ ಏನೊಂದೂ ಪ್ರತಿಕ್ರಿಯೆ ನೀಡದೆ ಮೌನವಾಗಿದೆ. ಈ ಮೌನವನ್ನು ನೋಡಿದರೆ, ಮಾತಿನ ದಾಳಿಯಿಂದ ಮಹಿಳೆಯ ಮನಸ್ಸಿನ ಮೇಲೆ ಆಗಿರಬಹುದಾದ ಪರಿಣಾಮವನ್ನು ಕಲ್ಪಿಸಿಕೊಳ್ಳುವಷ್ಟು ಸಂವೇದನೆಯನ್ನೂ ಆಡಳಿತ ಪಕ್ಷದವರು ಉಳಿಸಿಕೊಂಡಿಲ್ಲ ಎಂದೇ ಭಾವಿಸಬೇಕಾಗುತ್ತದೆ. ತನ್ನ ಪಕ್ಷದ ಮುಖಂಡರು ನಾಲಿಗೆ ಹರಿಬಿಟ್ಟಾಗ ಅವರಿಗೆ ತಿಳಿಹೇಳುವ ಕೆಲಸವನ್ನು ಬಿಜೆಪಿ ಇತ್ತೀಚಿನ ದಿನಗಳಲ್ಲಿ ಮಾಡಿರುವುದು ಕಡಿಮೆ. ಹೀಗೆ ಮೌನವಾಗಿರುವುದನ್ನು ಸಮ್ಮತಿ ಎಂದು ರಾಜ್ಯದ ಜನ ತಿಳಿಯಬೇಕೆ ಅಥವಾ ಶಾಸಕರು ಮತ್ತು ಸಂಸದರ ಮೇಲಿನನಿಯಂತ್ರಣವನ್ನು ಪಕ್ಷ ಕಳೆದುಕೊಂಡಿದೆಯೇ ಎನ್ನುವುದನ್ನು ಬಿಜೆಪಿ ಸ್ಪಷ್ಟಪಡಿಸಬೇಕಾಗಿದೆ. ಜನಸಾಮಾನ್ಯರ ಸಂಕಟ–ಅವಮಾನಗಳು ಸರ್ಕಾರಕ್ಕೆ ಮುಖ್ಯವಲ್ಲವೆನ್ನುವುದು ಕೋಲಾರದ ಘಟನೆಯಿಂದ ಮತ್ತೆ ರುಜುವಾತಾಗಿದೆ. ಮಹಿಳೆಯರ ಮೇಲೆ ದೌರ್ಜನ್ಯ ನಡೆದ ಸಂದರ್ಭಗಳಲ್ಲಿ ಮಧ್ಯಪ್ರವೇಶಿಸಬೇಕಾಗಿದ್ದ ಮಹಿಳಾ ಆಯೋಗವು ಮುನಿಸ್ವಾಮಿ ಅವರ ವಿಷಯದಲ್ಲಿ ನಿಷ್ಕ್ರಿಯವಾಗಿದೆ. ನೆರವಿಗೆ ಧಾವಿಸಬೇಕಾದವರೇ ಕೈಕಟ್ಟಿ ಕುಳಿತರೆ, ಅಸಹಾಯಕರ ಅಳಲಿಗೆ ಸ್ಪಂದಿಸುವವರಾದರೂ ಯಾರು?

ಮುನಿಸ್ವಾಮಿ ಅವರ ಮಾತುಗಳನ್ನು ರಾಜಕೀಯ ತಂತ್ರಗಾರಿಕೆ ರೂಪದಲ್ಲಿಯೂ ನೋಡಬೇಕಾಗಿದೆ. ಮತ ಓಲೈಕೆಯ ರಾಜಕಾರಣದ ರೂಪದಲ್ಲಿ ಕೆಲವು ಜನಪ್ರತಿನಿಧಿಗಳು ಇತ್ತೀಚಿನ ದಿನಗಳಲ್ಲಿ ಬಾಯಿಬಡುಕರಾಗಿದ್ದಾರೆ. ಎದುರಾಳಿಯನ್ನು ಬೈಯುವ ಹಾಗೂ ಅವಮಾನಿಸುವ ಮೂಲಕ ತಮ್ಮ ರಾಜಕೀಯ ಅಸ್ತಿತ್ವ ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಮಾತಿನ ಭರದಲ್ಲಿ ಸಂವಿಧಾನದ ಎಲ್ಲೆಯನ್ನೂ ಮೀರುತ್ತಿದ್ದಾರೆ. ಸಮುದಾಯಗಳ ನಡುವೆ ಒಡಕುಂಟು ಮಾಡುವ ದ್ವೇಷ ಭಾಷಣಗಳನ್ನು ಮಾಡುವುದರಲ್ಲಿ ಪೈಪೋಟಿಯೇ ನಡೆಯುತ್ತಿದೆ. ಮತ್ತೊಂದು ಪಕ್ಷದ ನಾಯಕರ ಸಾವನ್ನು ಬಯಸಿದ ಉದಾಹರಣೆಗಳೂ ವರದಿಯಾಗಿವೆ. ವಿಧಾನಸಭೆ ಚುನಾವಣೆ ಸನ್ನಿಹಿತವಾಗಿರುವ ಸಂದರ್ಭದಲ್ಲಿ ರಾಜಕೀಯ ಮುಖಂಡರು ನಾಲಿಗೆ ಮೇಲಿನ ನಿಯಂತ್ರಣವನ್ನೇ ಕಳೆದುಕೊಂಡು ತಾವು ಪ್ರತಿನಿಧಿಸುವ ಸ್ಥಾನಗಳ ಘನತೆಯನ್ನು ಬೀದಿಗೆ ತಂದಿದ್ದಾರೆ. ಸಾರ್ವಜನಿಕ ಸಭ್ಯತೆ ಈ ಮಟ್ಟಿಗೆ ಹಗುರವಾದುದನ್ನು ರಾಜ್ಯ ಹಿಂದೆಂದೂ ಕಂಡಿರಲಿಲ್ಲ. ಅಧಿಕಾರದಲ್ಲಿ ಇರುವವರು ಕನಿಷ್ಠ ಲಜ್ಜೆಯನ್ನಾದರೂ ಉಳಿಸಿಕೊಳ್ಳದಿರುವುದು ಪ್ರಜಾಪ್ರಭುತ್ವದ ಆರೋಗ್ಯಕ್ಕೆ ಒಳ್ಳೆಯದಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT