ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಹ: ಪರಿಹಾರ ಎಲ್ಲಿ? ವಿಳಂಬ ಸುತರಾಂ ಸಲ್ಲದು

Last Updated 2 ಅಕ್ಟೋಬರ್ 2019, 19:45 IST
ಅಕ್ಷರ ಗಾತ್ರ

ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷದ ಸರ್ಕಾರ ಇದ್ದರೆ, ಜನರ ಬವಣೆ ನಿವಾರಣೆಗೆ ಉತ್ತಮ ಸ್ಪಂದನ ದೊರೆಯುತ್ತದೆ, ಕೇಂದ್ರದಿಂದ ರಾಜ್ಯಕ್ಕೆ ಅನುದಾನ ಹೇರಳವಾಗಿ ಹರಿದುಬರುತ್ತದೆ, ಅದರಿಂದ ಜನರ ಬದುಕು ಹಸನಾಗುತ್ತದೆ ಎಂಬರ್ಥದ ಸಂಕಥನಗಳು ಚುನಾವಣೆ ವೇಳೆ ರೆಕ್ಕೆಪುಕ್ಕ ಪಡೆಯುತ್ತವೆ. ಜನಸಾಮಾನ್ಯರ ಮನದಲ್ಲಿ ಅಂತಹದೊಂದು ಭಾವನೆಯನ್ನು ಗಟ್ಟಿಗೊಳಿಸುವ ಪ್ರಯತ್ನಗಳನ್ನು ರಾಷ್ಟ್ರೀಯ ಪಕ್ಷಗಳು ಮಾಡುತ್ತಲೇ ಬಂದಿವೆ. ಆ ಪ್ರಯತ್ನದಲ್ಲಿ ಸ್ವಲ್ಪಮಟ್ಟಿಗೆ ಯಶಸ್ಸನ್ನೂ ಸಾಧಿಸಿವೆ. ಆದರೆ, ಪ್ರವಾಹ ಪರಿಹಾರದ ವಿಷಯದಲ್ಲಿ ಕೇಂದ್ರ ಸರ್ಕಾರ ಸ್ಪಂದಿಸುತ್ತಿರುವ ಪರಿ, ಅಂತಹ ನಂಬಿಕೆಯ ಬೇರುಗಳನ್ನು ಅಲುಗಾಡಿಸಿದೆ. ಕರ್ನಾಟಕದಲ್ಲಿ ಪ್ರವಾಹ ಅಪ್ಪಳಿಸಿ ಎರಡು ತಿಂಗಳಾಗಿದೆ. ಅದರಿಂದಾಗಿ, 22 ಜಿಲ್ಲೆಗಳ ಲಕ್ಷಾಂತರ ಜನರ ಬದುಕಿನ ಬುಡ ಶಿಥಿಲಗೊಂಡಿದೆ. ವಾಸದ ಮನೆ, ದವಸ–ಧಾನ್ಯ, ದನಕರುಗಳ ಕೊಟ್ಟಿಗೆ, ಒಣಮೇವು, ಪಚ್ಚೆಪೈರಿನ ಜತೆಗೆ ಭವಿಷ್ಯದ ಕನಸುಗಳೂ ಕೊಚ್ಚಿಕೊಂಡು ಹೋಗಿವೆ. ನಷ್ಟದ ಪ್ರಮಾಣವನ್ನು ₹ 35 ಸಾವಿರ ಕೋಟಿ ಎಂದು ಅಂದಾಜಿಸಲಾಗಿದೆ. ಇಂತಹ ಕಡುಕಷ್ಟದ ಕಾಲದಲ್ಲಿ ಕೈಹಿಡಿಯಬೇಕಿದ್ದ ಕೇಂದ್ರ ಸರ್ಕಾರವು ವಿಳಂಬ ಧೋರಣೆ ಅನುಸರಿಸುತ್ತಿದೆ. ರಾಜ್ಯ ಸರ್ಕಾರ ತನ್ನ ಇತಿಮಿತಿಯಲ್ಲಿ ಪರಿಹಾರದ ಮೊತ್ತವನ್ನು ಬಿಡುಗಡೆ ಮಾಡಿದೆ. ಆದರೆ, ಆಗಿರುವ ನಷ್ಟ ಅದರ ಸಾಮರ್ಥ್ಯವನ್ನು ಮೀರಿದ್ದು. ನೆರವಿಗಾಗಿ ತಮ್ಮದೇ ಪಕ್ಷದ ನೇತೃತ್ವದ ಕೇಂದ್ರ ಸರ್ಕಾರದತ್ತ ದೈನ್ಯದಿಂದ ನೋಡುತ್ತಿದೆ. ‘ಇಗೋ ಬಂತು, ಅಗೋ ಬಂತು’ ಎಂದು ಮುಖ್ಯಮಂತ್ರಿಯಿಂದ ಹಿಡಿದು, ಆಡಳಿತಾರೂಢ ಪಕ್ಷದ ವಿವಿಧ ಹಂತದ ಮುಖಂಡರವರೆಗೂ ಹೇಳುತ್ತಿದ್ದಾರೆ. ಆದರೆ, ಕೇಂದ್ರದಿಂದ ಬಿಡಿಗಾಸು ನೆರವೂ ದೊರೆತಿಲ್ಲ. ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹಾಗೂ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಬಂದು ವೈಮಾನಿಕ ಸಮೀಕ್ಷೆ ನಡೆಸಿದರು. ಕೇಂದ್ರದಿಂದ ತಂಡ ಬಂದು ಸಮೀಕ್ಷೆ ನಡೆಸಿ, ವರದಿ ಕೊಟ್ಟಿದೆ. ತುರ್ತು ನೆರವಿಗಾಗಿ ರಾಜ್ಯ ಸರ್ಕಾರ ಬೇಡಿಕೆ ಇಟ್ಟಿದೆ, ಮನವಿ ಮಾಡಿದೆ. ಆದರೆ, ಇವು ಕೇಂದ್ರದಿಂದ ಈವರೆಗೆ ನೆರವು ದೊರಕಿಸಿಕೊಟ್ಟಿಲ್ಲ ಎಂಬುದು ಅತ್ಯಂತ ನೋವಿನ ಸಂಗತಿ. ಪರಿಹಾರ ನೀಡುವುದಕ್ಕೆ ತಾಂತ್ರಿಕ ಅಂಶಗಳು, ಮಾರ್ಗಸೂಚಿಗಳು ಕೆಲವೊಮ್ಮೆ ತೊಡಕಾಗಿ ಪರಿಣಮಿಸುತ್ತವೆ. ಆದರೆ, ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಅಂತಹವುಗಳನ್ನೆಲ್ಲ ಬದಿಗೆ ಸರಿಸಿ ಸ್ಪಂದಿಸಬೇಕಾದುದು ಮಾನವೀಯ ಧರ್ಮ. ಅದನ್ನು ಅರಿಯುವಲ್ಲಿ ಕೇಂದ್ರ ಸರ್ಕಾರ ಸೋತಿದೆ ಎಂಬುದು ಗೋಡೆ ಮೇಲಿನ ಬರಹದಷ್ಟೇ ಸ್ಪಷ್ಟ.ಕೇಂದ್ರದ ಈ ನಿಲುವು ಆಡಳಿತಾರೂಢ ಬಿಜೆಪಿಯ ಕೆಲವು ನಾಯಕರಲ್ಲೇ ಕಿರಿಕಿರಿ ಮೂಡಿಸಿರುವುದು ಇದನ್ನು ಮತ್ತಷ್ಟು ದೃಢಪಡಿಸುತ್ತದೆ.

ಕೇಂದ್ರದಿಂದ ನೆರವು ಸಿಕ್ಕಿಲ್ಲ ಎಂಬ ಅಸಮಾಧಾನವು ಪ್ರಧಾನಿ ನರೇಂದ್ರ ಮೋದಿ ಅವರ ಟ್ವೀಟ್‌ವೊಂದರ ಕಾರಣದಿಂದ ಈಗ ಕಟ್ಟೆ ಒಡೆದಿದೆ. ‘ಬಿಹಾರದ ಪ್ರವಾಹ ಪರಿಹಾರ ಕಾರ್ಯಕ್ಕೆ ಅಗತ್ಯವಿರುವ ಎಲ್ಲ ನೆರವು ನೀಡುತ್ತೇವೆ’ ಎಂಬ ಅವರ ಟ್ವೀಟ್‌ ಸಂದೇಶವು ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಚರ್ಚೆಯನ್ನೇ ಹುಟ್ಟುಹಾಕಿದೆ. ಬಿಹಾರದ ಸಂತ್ರಸ್ತರ ನೋವಿಗೆ ಮಿಡಿದಿರುವ ಪ್ರಧಾನಿಯವರಿಗೆ ಕರ್ನಾಟಕದ ಸಂತ್ರಸ್ತರ ನೋವು ಕಂಡಿಲ್ಲವೇ, ಸಾಂತ್ವನದ ಒಂದು ಮಾತೂ ಹೇಳಿಲ್ಲ ಏಕೆ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ. ಇದಕ್ಕೆ ರಾಜ್ಯದ ಬಿಜೆಪಿ ಶಾಸಕರೊಬ್ಬರು ದನಿಗೂಡಿಸಿರುವುದು ಕುತೂಹಲದ ಬೆಳವಣಿಗೆ. ಅಷ್ಟೇ ಅಲ್ಲ, ಪ್ರಧಾನಿಯವರ ಮೌನವನ್ನು ಬಿಜೆಪಿ ಪರ ಅನುಕಂಪ ಹೊಂದಿರುವ ಹಲವರು ಪ್ರಶ್ನಿಸಿದ್ದಾರೆ ಎನ್ನುವುದೂ ಪರಿಗಣನೆಗೆ ಒಳಗಾಗುವಂತಹ ವಿಷಯ. ಪ್ರಧಾನಿಯವರು ಟ್ವಿಟರ್‌ನಲ್ಲಿ ಸಕ್ರಿಯರಾಗಿದ್ದಾರೆ. ದಿನಬೆಳಗಾದರೆ ಹತ್ತು ಹಲವು ವಿಷಯಗಳಿಗೆ ಸ್ಪಂದಿಸುತ್ತಾರೆ. ಹೀಗಾಗಿ, ಪ್ರವಾಹದಿಂದ ತತ್ತರಿಸಿರುವ ಜನರಿಗೆ ಸಾಂತ್ವನ ಹೇಳಬೇಕಿತ್ತು ಎಂದು ಜನ ಬಯಸಿದರೆ ಅದರಲ್ಲಿ ತಪ್ಪು ಹುಡುಕಲಾಗದು. ಟ್ವೀಟ್‌ ಮೂಲಕ ಸಾಂತ್ವನ ಹೇಳುವುದು ಪ್ರಧಾನಿ ಕಚೇರಿಗೆ ಕಷ್ಟದ ಕೆಲಸವೂ ಅಲ್ಲ. ಆಗಿದ್ದು ಆಗಿಹೋಗಿದೆ. ಇಷ್ಟೆಲ್ಲ ಆದಮೇಲೆ ಈಗ ಸಾಂತ್ವನ ಹೇಳಿದರೆ, ಅದರಿಂದ ಹಿತಾನುಭವವೂ ಸಿಗುವುದಿಲ್ಲ. ಆದರೆ, ಕೇಂದ್ರದ ನಡೆಯಿಂದ ರಾಜ್ಯದ ಜನರಿಗೆ ನೋವು ಆಗಿರುವುದು ನಿಜ. ಲೋಕಸಭಾ ಚುನಾವಣೆ ವೇಳೆ, ಹಲವು ಬಾರಿ ರಾಜ್ಯಕ್ಕೆ ಭೇಟಿ ನೀಡಿದ್ದ ಪ್ರಧಾನಿಯವರು, ಈ ಕಷ್ಟಕಾಲದಲ್ಲಿ ವೈಮಾನಿಕ ಸಮೀಕ್ಷೆ ಮೂಲಕವಾದರೂ ಪ್ರವಾಹದ ತೀವ್ರತೆಯನ್ನು ಖುದ್ದು ನೋಡಬಹುದಿತ್ತು. ಲೋಕಸಭಾ ಚುನಾವಣೆಯಲ್ಲಿ ರಾಜ್ಯದಿಂದ ಬಿಜೆಪಿಯ 25 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಹೀಗಿದ್ದರೂ ಈ ಭೀಮಬಲವು ಕೇಂದ್ರದಿಂದ ತ್ವರಿತವಾಗಿ ನೆರವು ದೊರಕಿಸಿಕೊಡುವಲ್ಲಿ ನೆರವಿಗೆ ಬಂದಿಲ್ಲ. ಕೇಂದ್ರ ಸರ್ಕಾರವು ಕರ್ನಾಟಕವನ್ನು ಕಡೆಗಣಿಸಿದೆ ಎಂಬ ಭಾವನೆ ಇನ್ನಷ್ಟು ಬಲಗೊಳ್ಳುವುದಕ್ಕೆ ಅವಕಾಶ ನೀಡಬಾರದು. ಸಂತ್ರಸ್ತರು ಬದುಕು ಕಟ್ಟಿಕೊಳ್ಳಲು ತಕ್ಷಣ ಸ್ಪಂದಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT