ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಕರ ವರ್ಗಾವಣೆ ಗೊಂದಲ; ಸರಳ–ಶಾಶ್ವತ ನೀತಿ ಅಗತ್ಯ

Last Updated 16 ಆಗಸ್ಟ್ 2019, 14:17 IST
ಅಕ್ಷರ ಗಾತ್ರ

ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳ ಹಿತಾಸಕ್ತಿಗೆ ಕೊನೆಯ ಸ್ಥಾನ ಎನ್ನುವುದಕ್ಕೆ ಹೊಸ ಉದಾಹರಣೆ ಶಿಕ್ಷಕರ ವರ್ಗಾವಣೆಯಲ್ಲಿನ ಗೊಂದಲ. ಪ್ರಸಕ್ತ ಶೈಕ್ಷಣಿಕ ವರ್ಷದ ಮೊದಲ ಭಾಗ ಮುಗಿಯುತ್ತಾ ಬಂದಿದ್ದರೂ ವರ್ಗಾವಣೆ ಕಸರತ್ತು ಮುಂದುವರಿದೇ ಇದೆ. ಅಧಿಕಾರಿಗಳ ಬೇಕಾಬಿಟ್ಟಿ ಧೋರಣೆ ಹಾಗೂ ರಾಜಕಾರಣಿಗಳ ಹಸ್ತಕ್ಷೇಪದಿಂದಾಗಿ ಈ ಬಿಕ್ಕಟ್ಟು ತಲೆದೋರಿದೆ. ಸರ್ಕಾರ ಸೃಷ್ಟಿಸಿರುವ ಗೋಜಲಿನಿಂದ ಹೆಚ್ಚು ನಷ್ಟವಾಗುವುದು ವಿದ್ಯಾರ್ಥಿಗಳಿಗೆ. ಈಗಾಗಲೇ ಹಲವುಜವಾಬ್ದಾರಿಗಳನ್ನು ಹೆಗಲಿಗೇರಿಸಿಕೊಂಡಿರುವ ಶಿಕ್ಷಕರಿಗೆ ತರಗತಿಗಳು ಎರಡನೇ ಆದ್ಯತೆಯಾಗಿವೆ.

ಅದಕ್ಕೆ ವರ್ಗಾವಣೆಯ ಒತ್ತಡವೂ ಸೇರಿಕೊಂಡರೆ, ಅದರ ನೇರ ಪರಿಣಾಮ ಬೋಧನೆಯ ಮೇಲೆ ಉಂಟಾಗುತ್ತದೆ. ಈ ಬಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದಲ್ಲಿ 1,09,782 ಶಿಕ್ಷಕರು ವರ್ಗಾವಣೆ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಅವರಲ್ಲಿ 8,724 ಶಿಕ್ಷಕರಿಗಷ್ಟೇ ವರ್ಗಾವಣೆಯ ಭಾಗ್ಯ ದೊರೆತಿದೆ ಎನ್ನುವುದು ಇಡೀ ಪ್ರಕ್ರಿಯೆಯಲ್ಲಿ ಇರುವ ಒತ್ತಡವನ್ನು ಸೂಚಿಸುವಂತಿದೆ. ಈ ವರ್ಗಾವಣೆಗಳು ಕೂಡ ಘಟಕದೊಳಗೇ ನಡೆದಿವೆ. ಪರಸ್ಪರ ಕೋರಿಕೆಯ ವರ್ಗಾವಣೆಗಳೂ ನಡೆದಿಲ್ಲ. ಕಡ್ಡಾಯ ವರ್ಗಾವಣೆ ನೀತಿಯನ್ನು ಅಳ್ಳಕಗೊಳಿಸಿರುವುದೇ ಸಮಸ್ಯೆಯ ಮೂಲ. ನಗರ ಪ್ರದೇಶಗಳ ‘ಎ’ ವಲಯದಲ್ಲಿ 10 ವರ್ಷಗಳ ಸೇವೆ ಸಲ್ಲಿಸಿದವರನ್ನು ಗ್ರಾಮಾಂತರ ಪ್ರದೇಶ ಗಳಿಗೆ ಕಡ್ಡಾಯ ವರ್ಗಾವಣೆ ಮಾಡಬೇಕೆನ್ನುವ ಸರ್ಕಾರದ ಆದೇಶದ ಉದ್ದೇಶ ಒಳ್ಳೆಯದೇ. ದಶಕಗಳಿಂದ ಹಳ್ಳಿಗಳಲ್ಲೇ ಇರುವ ಶಿಕ್ಷಕರುಈ ಕಡ್ಡಾಯ ವರ್ಗಾ ವಣೆ ಕಾರಣದಿಂದಲಾದರೂ ನಗರದ ಶಾಲೆಗಳ ಕನಸು ಕಾಣುವಂತಾ ಗಿತ್ತು. ಆದರೆ, ಸಂಘಟನೆಗಳ ಹೆಸರಿನಲ್ಲಿ ನಗರಗಳಲ್ಲಿ ತಳವೂರಿರುವವರು ಹಾಗೂ ರಾಜಕಾರಣಿಗಳ ನಂಟುಳ್ಳ ಶಿಕ್ಷಕರು ಕಡ್ಡಾಯ ವರ್ಗಾವಣೆಯಿಂದ ತಪ್ಪಿಸಿಕೊಳ್ಳಲು ನೆಪ ಹುಡುಕುತ್ತಲೇ ಇದ್ದಾರೆ.

ವರ್ಗಾವಣೆ ‍ಚಟುವಟಿಕೆಗಳು ನಡೆಯುತ್ತಿರುವಾಗಲೇ ಗಂಡ–ಹೆಂಡತಿ ಇಬ್ಬರೂ ಸರ್ಕಾರಿ ಕೆಲಸದಲ್ಲಿದ್ದರೆ ಅಂಥವರಿಗೆ ಕಡ್ಡಾಯ ವರ್ಗಾವಣೆಯಿಂದ ವಿನಾಯಿತಿ ನೀಡಬಹುದೆಂದು ತಿದ್ದುಪಡಿ ಮಾಡಿದ್ದು ಕೂಡ ಗೊಂದಲಕ್ಕೆ ಕಾರಣವಾಯಿತು. ಈ ಬದಲಾ ವಣೆಯಿಂದಾಗಿ ಕಡ್ಡಾಯ ವರ್ಗಾವಣೆಯ ಮೂಲ ಉದ್ದೇಶವನ್ನೇ ಸಡಿಲಗೊಳಿಸಿದಂತಾಯಿತು. ದಂಪತಿ ಶಿಕ್ಷಕರೇ ವರ್ಗಾವಣೆಯ ಬಹುಪಾಲು ಫಲಾನುಭವಿಗಳಾದುದರಿಂದ ಉಳಿ ದವರಿಗೆ ಅನ್ಯಾಯವಾಗುತ್ತಿದೆ ಎಂದು ಶಿಕ್ಷಕರ ಗುಂಪೊಂದು ವಾದಿಸುತ್ತಿರುವುದರಲ್ಲಿ ಅರ್ಥವಿದೆ. ಅಂಗವಿಕಲರು, ವಿಧವೆಯರು, ಅವಿವಾಹಿತರ ಜೊತೆಗೆ ಪತಿ–ಪತ್ನಿ ಪ್ರಕರಣಗಳೂ ಸೇರಿಕೊಂಡರೆ, ಕೆಲವೇ ಕೆಲವು ಶಿಕ್ಷಕರಷ್ಟೇ ‘ಎ’ ವಲಯದಿಂದ ‘ಸಿ’ ವಲಯಕ್ಕೆ ಹೋಗಬೇಕಾಗುತ್ತದೆ.

ಗಂಡ–ಹೆಂಡತಿ ಇಬ್ಬರೂ ಸರ್ಕಾರಿ ಹುದ್ದೆಯಲ್ಲಿದ್ದ ಮಾತ್ರಕ್ಕೆ ವಿಶೇಷ ಸವಲತ್ತು ನೀಡುವುದಾದರೆ, ಎಲ್ಲರೂ ಸರ್ಕಾರಿ ಹುದ್ದೆಯಲ್ಲಿರುವವರನ್ನು ಮದುವೆಯಾಗಿ ಎನ್ನುವ ಕೆಟ್ಟ ಸಂದೇಶವನ್ನು ಸರ್ಕಾರ ನೀಡಿದಂತಾಗುತ್ತದೆ.ಕಡ್ಡಾಯ ವರ್ಗಾವಣೆಯ ವ್ಯಾಪ್ತಿಗೆ ಬರುವ ಶಿಕ್ಷಕರನ್ನು ಶೇ 20ಕ್ಕಿಂತಲೂ ಹೆಚ್ಚು ಖಾಲಿ ಹುದ್ದೆಗಳಿರುವ ತಾಲ್ಲೂಕುಗಳಿಗೆ ಮಾತ್ರ ವರ್ಗಾವಣೆ ಮಾಡಬೇಕೆನ್ನುವ ನಿಯಮ ಕೂಡ ಶಿಕ್ಷಕರ ವಿರೋಧಕ್ಕೆ ಕಾರಣವಾಗಿದೆ. ಪ್ರಭಾವಿ ಶಿಕ್ಷಕರಿಗೆ ಅನುಕೂಲಕರವಾಗಿರುವ ವರ್ಗಾವಣೆ ನೀತಿ, ಬಡಪಾಯಿ ಶಿಕ್ಷಕರು ಕುಗ್ರಾಮಗಳಲ್ಲಿಯೇ ಕೊಳೆಯಬೇಕೆನ್ನುವ ಭಾವನೆಗೆ ಕಾರಣವಾಗಿದೆ. ಶೇ 80ರಷ್ಟು ಶಿಕ್ಷಕರು ಗ್ರಾಮೀಣ ವಲಯದಲ್ಲಿಯೇ ಇದ್ದು, ಆ ದೊಡ್ಡ ವರ್ಗ ಸರ್ಕಾರಿ ಪ್ರಕ್ರಿಯೆಯ ಬಗ್ಗೆ ಅಪನಂಬಿಕೆ ಹೊಂದುವಂತಹ ಸ್ಥಿತಿ ಸೃಷ್ಟಿಯಾಗಬಾರದು. ಪ್ರಸಕ್ತ ಸಾಲಿನ ವರ್ಗಾವಣೆ ವೇಳಾಪಟ್ಟಿ ಅನೇಕ ಬಾರಿ ಮುಂದಕ್ಕೆ ಹೋಗಿರುವುದೂ ಇಡೀ ಪ್ರಕ್ರಿಯೆಯನ್ನು ಅನುಮಾನದಿಂದ ನೋಡುವಂತೆ ಮಾಡಿದೆ. ಶಿಕ್ಷಕರ ವರ್ಗಾವಣೆಗೆ ಸಂಬಂಧಿಸಿದಂತೆ ಪಾರದರ್ಶಕವಾದ ಶಾಶ್ವತ ನೀತಿಯೊಂದನ್ನು ಸರ್ಕಾರ ರೂಪಿಸುವುದು ಅಗತ್ಯ. ಬೇಸಿಗೆ ರಜೆಯಲ್ಲಿ ಕೌನ್ಸೆಲಿಂಗ್‌ ಚಟುವಟಿಕೆಗಳು ನಡೆದು, ಶೈಕ್ಷಣಿಕ ವರ್ಷ ಆರಂಭವಾಗುವುದ ರೊಳಗೆ ಶಿಕ್ಷಕರು ಹೊಸ ಶಾಲೆಗೆ ಬರುವಂತಾಗಬೇಕು. ಹಾಗಾದಲ್ಲಿ ಮಾತ್ರ ಬೋಧನೆ ಸರಾಗವಾಗಿ ನಡೆಯುವುದು ಸಾಧ್ಯವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT