ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುರಸಭೆ ಕರಡು ಮಸೂದೆ ಕೂಡಲೇ ಗಮನಹರಿಸಿ

Last Updated 27 ಡಿಸೆಂಬರ್ 2019, 20:30 IST
ಅಕ್ಷರ ಗಾತ್ರ

ಕಾನೂನುಗಳು ಹೆಚ್ಚು ಸ್ಪಷ್ಟ ಮತ್ತು ಪಾರದರ್ಶಕವಾಗಿದ್ದರೆ ಆಡಳಿತ ಸುಧಾರಣೆಯ ದಾರಿ ಸುಗಮವಾಗುತ್ತದೆ. ಸುಗಮ ಆಡಳಿತದ ದೃಷ್ಟಿಯಿಂದ ಸರ್ಕಾರಗಳು ಕಾಲಕ್ಕೆ ತಕ್ಕಂತೆ ಸೂಕ್ತ ಕಾನೂನುಗಳನ್ನು ರೂಪಿಸುತ್ತವೆ. ಕಾಯ್ದೆಯೊಂದರ ಲೋಪ ಗಮನಕ್ಕೆ ಬಂದರೆ ಅದಕ್ಕೆ ತಿದ್ದುಪಡಿ ತರುವುದೂ ಆಡಳಿತ ಸುಧಾರಣೆಯ ಪ್ರಕ್ರಿಯೆಗಳಲ್ಲಿ ಒಂದು. ಒಂದೇ ವಿಷಯಕ್ಕೆ ಸಂಬಂಧಿಸಿ ಹಲವು ಕಾಯ್ದೆಗಳು ಇದ್ದಾಗ ಅವುಗಳನ್ನು ಕ್ರೋಡೀಕರಿಸುವ ಅಗತ್ಯವೂ ಉಂಟಾಗುವುದಿದೆ.

ಪುರಸಭೆಗಳು ಸಂಗ್ರಹಿಸುವ ತೆರಿಗೆ, ನಿಯಮ ಮತ್ತು ನಿಯಂತ್ರಣಗಳಿಗೆ ಸಂಬಂಧಿಸಿದ ಕಾಯ್ದೆಗಳಲ್ಲಿ ಏಕರೂಪ ಇಲ್ಲ. ಇದರ ಪರಿಣಾಮವಾಗಿ ನಗರ, ಪಟ್ಟಣಗಳು ಸೊರಗುತ್ತಿವೆ. ಈ ಹಿನ್ನೆಲೆಯಲ್ಲೇ ಪುರಸಭೆಗಳ ಆಡಳಿತ ಸುಧಾರಣೆಗೆ ಸಂಬಂಧಿಸಿ, ಹಿಂದಿನ ಸರ್ಕಾರವು ನ್ಯಾಷನಲ್‌ ಲಾ ಸ್ಕೂಲ್‌ ಆಫ್‌ ಇಂಡಿಯಾ ಯೂನಿವರ್ಸಿಟಿ (ಎನ್‌ಎಲ್‌ಎಸ್‌ಐಯು) ಜೊತೆಗೆ ಒಪ್ಪಂದವೊಂದಕ್ಕೆ ಸಹಿ ಹಾಕಿತ್ತು. ನಗರ ಯೋಜನೆ ಮತ್ತು ಅಭಿವೃದ್ಧಿಗೆ ಸಂಬಂಧಿಸಿದ ಕಾನೂನುಗಳನ್ನು ಒಂದೇ ಸಂಹಿತೆಯ ರೂಪಕ್ಕೆ ಅಳವಡಿಸುವುದು, ಕಾನೂನಿನಲ್ಲಿ ಸುಧಾರಣೆ ತರುವುದು ಈ ಒಪ್ಪಂದದ ಮುಖ್ಯ ಉದ್ದೇಶವಾಗಿತ್ತು.

ಎರಡು ವರ್ಷಗಳ ಅಧ್ಯಯನದ ಬಳಿಕ, ಎನ್‌ಎಲ್‌ಎಸ್‌ ಐಯು ‘ಕರ್ನಾಟಕ ಮುನ್ಸಿಪಾಲಿಟಿಗಳ ಮಸೂದೆ– 2019’ರ ಕರಡನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಿದೆ. ಈ ಕರಡುವಿನಲ್ಲಿ ಪುರಸಭೆಗಳ ವ್ಯಾಪ್ತಿಯ ಮರುವಾಖ್ಯಾನ, ಅವುಗಳ ಆಡಳಿತವನ್ನು ಇನ್ನಷ್ಟು ಹೆಚ್ಚು ಪರಿಣಾಮಕಾರಿಯಾಗಿಸುವುದು ಸೇರಿದಂತೆ ದೂರಗಾಮಿ ಪರಿಣಾಮಗಳನ್ನು ತರಬಲ್ಲ ಕೆಲವು ಪ್ರಸ್ತಾವಗಳಿವೆ. ಕರಡು ಮಸೂದೆಯನ್ನು ಸರ್ಕಾರಕ್ಕೆ ಸಲ್ಲಿಸಿ ಈಗಾಗಲೇ ಮೂರು ತಿಂಗಳಾಗಿದೆ. ಆದರೆ ಈ ಮಸೂದೆಯ ವಿಚಾರವಾಗಿ ಮುಂದಿನ ಕ್ರಮ ಕೈಗೊಳ್ಳುವ ದಿಸೆಯಲ್ಲಿ ಸರ್ಕಾರವು ಆಸಕ್ತಿ ತೋರಿಸಿದಂತೆ ಕಾಣುತ್ತಿಲ್ಲ.

ಎನ್‌ಎಲ್‌ಎಸ್‌ಐಯು ಸಿದ್ಧಪಡಿಸಿರುವ ಕರಡು ಮಸೂದೆಯ ಪ್ರಸ್ತಾವಗಳಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಆಡಳಿತ ಸುಧಾರಣೆಯಲ್ಲಿ ಮಹತ್ವದ ಪಾತ್ರ ವಹಿಸುವಂತಹ ಹಲವು ಅಂಶಗಳಿವೆ. ಮೇಯರ್‌ ಹುದ್ದೆಯ ಅವಧಿಯನ್ನು ಐದು ವರ್ಷಗಳಿಗೆ ನಿಗದಿಪಡಿಸುವುದು, ಮಹಾನಗರ–ಪಟ್ಟಣಗಳೆನ್ನದೆ ಎಲ್ಲ ಆಡಳಿತ ಘಟಕಗಳ ಚಟುವಟಿಕೆಗಳನ್ನು ಒಂದೇ ಕಡೆ ತರುವುದು ಮುಂತಾಗಿ ಹಲವು ಶಿಫಾರಸುಗಳು ಆಡಳಿತ ಸುಧಾರಣೆಯ ದೃಷ್ಟಿಯಿಂದ ಉತ್ತಮವಾದವು. ನಗರ ಮತ್ತು ಪಟ್ಟಣಗಳ ಅಭಿವೃದ್ಧಿ ಚಟುವಟಿಕೆಗಳ ವಿಚಾರದಲ್ಲಿ ವಿವಿಧ ಸಂಸ್ಥೆಗಳ ನಡುವೆ ಸಮನ್ವಯ ಇಲ್ಲ. ಎಲ್ಲ ಚಟುವಟಿಕೆಗಳನ್ನು ಒಂದೇ ಕಡೆ ತರುವ ವ್ಯವಸ್ಥೆಯನ್ನು ಅಳವಡಿಸಿಕೊಂಡರೆ ಈ ಸಮಸ್ಯೆ ನಿವಾರಣೆ ಆಗಬಹುದು.

ಈ ಕರಡು ಮಸೂದೆಯು ಕಾನೂನಾಗಿ ಜಾರಿಗೆ ಬಂದರೆ ಪುರಸಭೆಗಳು ಹೆಚ್ಚು ಉತ್ತರದಾಯಿ ಆಗುತ್ತವೆ. ಈ ಅಂಶವು ಕೆಲವು ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಹಿತಾಸಕ್ತಿಗೆ ಕುಂದು ಉಂಟುಮಾಡಬಹುದು ಎನ್ನುವ ಭಯ ಏನಾದರೂ ಸರ್ಕಾರಕ್ಕೆ ಇದೆಯೇ? ಸರ್ಕಾರದ ನಿರಾಸಕ್ತಿಯನ್ನು ಗಮನಿಸಿದರೆ ಇಂತಹ ಅನುಮಾನ ಮೂಡುವುದು ಸಹಜ. ಮೇಯರ್‌ ಮತ್ತು ಪುರಸಭೆ ಅಧ್ಯಕ್ಷರ ಚುನಾವಣೆಗಳಲ್ಲಿ ಶಾಸಕರು, ಸಂಸದರಿಗೆ ಮತದಾನದ ಹಕ್ಕು ನೀಡುವ ಅಗತ್ಯವೇನಿದೆ? ಅಸಂಖ್ಯ ರಾಜಕಾರಣಿಗಳ ಅನಗತ್ಯ ಹಸ್ತಕ್ಷೇಪವೇ ನಮ್ಮ ನಗರ, ಪಟ್ಟಣ, ಮಹಾನಗರಗಳ ಆಡಳಿತವನ್ನು ಸೊರಗಿಸಿದೆ ಎನ್ನುವುದು ಸ್ಪಷ್ಟ. ಯಾವುದೇ ಅಭಿವೃದ್ಧಿ ಕೆಲಸವನ್ನೂ ಶಿಸ್ತುಬದ್ಧವಾಗಿ ಮಾಡಲಾಗುತ್ತಿಲ್ಲ. ರಾಜ್ಯ ಸರ್ಕಾರವು ನಗರದ ನಾಗರಿಕರ ಜನಜೀವನವನ್ನು ಸಹ್ಯಗೊಳಿಸುವ ಕುರಿತು ಯೋಚಿಸಬೇಕು.

ಈ ಕರಡು ಮಸೂದೆ ಕುರಿತು ತ್ವರಿತವಾಗಿ ತೀರ್ಮಾನ ಕೈಗೊಳ್ಳಬೇಕು. ತಕ್ಷಣದ ರಾಜಕೀಯ ಲಾಭಗಳನ್ನು ಗಣನೆಗೆ ತೆಗೆದುಕೊಳ್ಳುವುದು ಬಿಟ್ಟು, ಆಡಳಿತದಲ್ಲಿ ದೀರ್ಘಾವಧಿಯಲ್ಲಿ ಒಳಿತು ಮಾಡುವ ಅಂಶಗಳ ಕುರಿತು ಸರ್ಕಾರ ಯೋಚಿಸಬೇಕು. ಸರ್ಕಾರಕ್ಕೆ ರಾಜಕಾರಣಿಗಳು ಹಾಗೂ ಅಧಿಕಾರಿಗಳ ಹಿತಕ್ಕಿಂತ ಪ್ರಜೆಗಳ ಹಿತವೇ ಮುಖ್ಯವಾಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT