ಕರ್ನಾಟಕ ರಾಜ್ಯವು ಬಯಲು ಬಹಿರ್ದೆಸೆಮುಕ್ತ ರಾಜ್ಯವಾಗಿದೆ, ಇತರ ರಾಜ್ಯಗಳಿಗೆ ಮಾದರಿಯಾಗಿದೆ ಎಂದು ಹೇಳಿಕೊಳ್ಳುತ್ತಿದೆ. ಆದರೆ ತಳಮಟ್ಟದಲ್ಲಿ ಪರಿಸ್ಥಿತಿ ಬೇರೆಯೇ ಇದೆ. ಆ್ಯಕ್ಷನ್ ಏಡ್ ಕರ್ನಾಟಕ ಸಂಸ್ಥೆಯು ಇತ್ತೀಚೆಗೆ ನಡೆಸಿದ ಸಮೀಕ್ಷೆಯೊಂದು ಈ ವಿರೋಧಾಭಾಸವನ್ನು ಬಯಲಾಗಿಸಿದೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನಲ್ಲಿ ಸಮೀಕ್ಷೆ ಮಾಡಲಾದ ಪರಿಶಿಷ್ಟ ಜಾತಿಗೆ (ಎಸ್ಸಿ) ಸೇರಿದ ಶೇ 50ಕ್ಕೂ ಹೆಚ್ಚು ಮನೆಗಳಲ್ಲಿ ಶೌಚಾಲಯ ಇಲ್ಲ. ಆದರೆ ಈ ಜಿಲ್ಲೆಯು ಬಯಲು ಬಹಿರ್ದೆಸೆ ಮುಕ್ತ ಎಂದು ಏಳು ವರ್ಷಗಳ ಹಿಂದೆಯೇ ಘೋಷಿಸಲಾಗಿದೆ. ಹಲವು ಗ್ರಾಮಗಳಲ್ಲಿ ಸಮುದಾಯ ಶೌಚಾಲಯಗಳು ಕೂಡ ಇಲ್ಲ. ಮಹಿಳೆಯರು ಬಯಲಿನಲ್ಲಿಯೇ ಬಹಿರ್ದೆಸೆಗೆ ಹೋಗಬೇಕಾದ ಶೋಚನೀಯ ಸ್ಥಿತಿ ಇದೆ. ಇದು ಮಹಿಳೆಯರ ಘನತೆಗೆ ಕುತ್ತು ತರುವುದರ ಜೊತೆಗೆ ಅವರನ್ನು ಅಪಾಯಕ್ಕೂ ಒಡ್ಡುತ್ತಿದೆ. ಇದು ಮೂಲಸೌಕರ್ಯ ಅಭಿವೃದ್ಧಿಯ ವೈಫಲ್ಯ ಮಾತ್ರವೆಂದು ನೋಡಲಾಗದು. ಸರಾಸರಿ ಯಶಸ್ಸಿನ ಲೆಕ್ಕಾಚಾರವು ನಮ್ಮ ವ್ಯವಸ್ಥೆಯಲ್ಲಿ ಹಾಸುಹೊಕ್ಕಾಗಿರುವ ಅಸಮಾನತೆಯನ್ನು ಹೇಗೆ ಮುಚ್ಚಿಡುತ್ತದೆ ಎಂಬುದರ ಉದಾಹರಣೆಯೂ ಹೌದು. ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಸೇರಿದವರು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಶೋಷಣೆಗೆ ಒಳಗಾದವರು. ಈಗ ಬಯಲು ಬಹಿರ್ದೆಸೆ ಮುಕ್ತ ಯೋಜನೆಯ ಸೌಲಭ್ಯ ಪಡೆದುಕೊಳ್ಳುವಲ್ಲಿಯೂ ಹಿಂದೆ ಬಿದ್ದಿದ್ದಾರೆ. ಈ ಸಮುದಾಯದಲ್ಲಿ ಬಯಲು ಬಹಿರ್ದೆಸೆ ಸಮಸ್ಯೆ ಈಗಲೂ ಇರುವುದು ಯೋಜನೆಯ ಅನುಷ್ಠಾನದ ಲೋಪ ಅಷ್ಟೇ ಅಲ್ಲ. ಯೋಜನೆ ಅನುಷ್ಠಾನ ಮಾಡುವಲ್ಲಿ ಇದ್ದ ಸಮಸ್ಯೆಗಳನ್ನು ಗಣನೆಗೆ ತೆಗೆದುಕೊಳ್ಳುವಲ್ಲಿ ಸರ್ಕಾರ ವಿಫಲವಾಗಿದೆ ಎಂಬುದನ್ನೂ ಇದು ಸೂಚಿಸುತ್ತದೆ. ಒತ್ತೊತ್ತಾಗಿರುವ ಮನೆಗಳು, ನೀರು ಪೂರೈಕೆಯಲ್ಲಿ ಸಮಸ್ಯೆ, ಸೌಲಭ್ಯಗಳ ಕುರಿತು ಜನರಿಗೆ ಅರಿವು ಇಲ್ಲ ಎಂಬುದರತ್ತ ಸರ್ಕಾರವು ಗಮನವನ್ನೇ ಹರಿಸಿಲ್ಲ ಎಂಬುದು ಈಗ ಬಯಲಾಗಿದೆ.

ಈಗ, ರಾಜ್ಯವು ಶೇಕಡ ನೂರರಷ್ಟು ಬಯಲು ಬಹಿರ್ದೆಸೆ ಮುಕ್ತವಾಗಿದೆ ಎಂಬ ಘೋಷಣೆಯನ್ನು ಸಂದೇಹದಿಂದಲೇ ನೋಡಬೇಕಾಗಿದೆ. ಇಂತಹ ಘೋಷಣೆಗಳು ಮುಖ್ಯವಾಗಿ ಆಡಳಿತಾತ್ಮಕ ವರದಿಗಳು ಮತ್ತು ಸ್ವಯಂಘೋಷಣೆಯ ಮೇಲೆ ಅವಲಂಬಿತವಾಗಿರುತ್ತವೆ. ಕಟ್ಟುನಿಟ್ಟಾದ ಮತ್ತು ಸ್ವತಂತ್ರವಾದ ಮರುಪರಿಶೀಲನಾ ವ್ಯವಸ್ಥೆ ಅಲ್ಲಿ ಸಾಮಾನ್ಯವಾಗಿ ಇರುವುದೇ ಇಲ್ಲ. ಶೋಷಿತ ಸಮುದಾಯಗಳಿಗೆ ಸೇರಿದ ಜನರ ಶೇಕಡ 50ರಷ್ಟು ಮನೆಗಳಲ್ಲಿ ಶೌಚಾಲಯ ಇಲ್ಲ ಎಂಬುದು ಸರ್ಕಾರ ನೀಡುವ ಅಂಕಿ ಸಂಖ್ಯೆಗಳನ್ನು ಪ್ರಶ್ನಿಸುವಂತೆ ಮಾಡುತ್ತದೆ. ಯೋಜನೆಯ ಅನುಷ್ಠಾನದಲ್ಲಿ ಇಂತಹ ಲೋಪ ಆಗಿರುವ ಪ್ರದೇಶ ಕೂಡ ಬಹಳಷ್ಟನ್ನು ಹೇಳುತ್ತದೆ. ಬೆಳಗಾವಿಯು ರಾಜ್ಯದ ಅತ್ಯಂತ ದೊಡ್ಡ ಜಿಲ್ಲೆ ಮತ್ತು ರಾಜಕೀಯವಾಗಿ ಪ್ರಭಾವಿಯಾಗಿರುವ ಜಿಲ್ಲೆ. ಜಾರಕಿಹೊಳಿ, ಕತ್ತಿ, ಹೆಬ್ಬಾಳಕರ, ಜೊಲ್ಲೆ, ಕೋರೆ ಮತ್ತು ಸವದಿಯಂತಹ ರಾಜಕೀಯ ಕುಟುಂಬಗಳ ಪ್ರಾಬಲ್ಯ ಇಲ್ಲಿ ಇದೆ. ಯಾವುದೇ ಪಕ್ಷ ಅಧಿಕಾರದಲ್ಲಿರುವಾಗಲೂ ಈ ಕುಟುಂಬಗಳ ಕೆಲವರು ಅಧಿಕಾರ ಸ್ಥಾನಗಳಲ್ಲಿ ಇರುತ್ತಾರೆ. ರಾಜಕೀಯವಾಗಿ ಇಷ್ಟೊಂದು ಪ್ರಾಬಲ್ಯ ಹೊಂದಿರುವ ಜಿಲ್ಲೆಯಲ್ಲಿ ಯೋಜನೆ ಅನುಷ್ಠಾನದಲ್ಲಿ ಆಗಿರುವ ಲೋಪವು ರಾಜಕೀಯ ಪ್ರಭಾವ ಮತ್ತು ಸಮಾನ ಅಭಿವೃದ್ಧಿಯ ನಡುವೆ ಪರಸ್ಪರ ಸಂಪರ್ಕ ಇಲ್ಲ ಎಂಬುದನ್ನು ತೋರಿಸಿಕೊಟ್ಟಿದೆ. ರಾಜಕೀಯವಾಗಿ ಹೆಚ್ಚು ಪ್ರಭಾವಿಯಲ್ಲದ, ಹೆಚ್ಚು ಹಿಂದುಳಿದಿರುವ ಜಿಲ್ಲೆಗಳಲ್ಲಿ ಯೋಜನೆಯ ಅನುಷ್ಠಾನ ಕಳಪೆಯಾಗಿರಬಹುದು ಎಂಬ ಪ್ರಶ್ನೆ ಈಗ ಮೂಡುತ್ತದೆ. ಒಟ್ಟು ಆಂತರಿಕ ಉತ್ಪನ್ನ ಮತ್ತು ತಲಾ ಆದಾಯದಲ್ಲಿ ಮುಂದೆ ಇದ್ದೇವೆ ಎಂದು ಹೇಳಿಕೊಳ್ಳುವ ರಾಜ್ಯದಲ್ಲಿ ಇರುವ ಇಂತಹ ಸ್ಥಿತಿಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ.

ಈ ವಾಸ್ತವವನ್ನು ಬದಲಿಸಲು ಕೇವಲ ಗುರಿಗಳನ್ನು ಪುನರುಚ್ಚರಿಸಿದರೆ ಸಾಲದು. ಮೊದಲಿಗೆ ಬಯಲು ಶೌಚ ಮುಕ್ತ ಘೋಷಣೆಗಳ ಕುರಿತಾಗಿ ಸಮುದಾಯಗಳ ನಡುವಣ ಅಸಮಾನತೆಯನ್ನು ಕೇಂದ್ರವಾಗಿರಿಸಿಕೊಂಡು ಸ್ವತಂತ್ರ ಮತ್ತು ವಿಶ್ವಾಸಾರ್ಹವಾದ ಲೆಕ್ಕಪರಿಶೋಧನೆ ನಡೆಸಬೇಕು. ಎರಡನೆಯದಾಗಿ ಸ್ವಚ್ಛತೆ ಎಂಬುದನ್ನು ಶೌಚಾಲಯಗಳ ನಿರ್ಮಾಣಕ್ಕೆ ಸೀಮಿತಗೊಳಿಸದೆ, ನೀರಿನ ನಿರಂತರ ಪೂರೈಕೆ, ಸಣ್ಣ ಮನೆಗಳಿಗೂ ಹೊಂದುವಂತಹ ಸಣ್ಣ ಶೌಚಾಲಯಗಳ ವಿನ್ಯಾಸ, ಸಮುದಾಯ ಶೌಚಾಲಯಗಳ ಸ್ವಚ್ಛತೆಯನ್ನು ಖಚಿತಪಡಿಸುವ ಮೂಲಕ ಅವುಗಳ ಬಳಕೆಯನ್ನು ಸಾಧ್ಯವಾಗಿಸಬೇಕು. ಮೂರನೆಯದಾಗಿ ಶೌಚಾಲಯ ನಿರ್ಮಾಣಕ್ಕಾಗಿ ಲಭ್ಯವಿರುವ ಸಹಾಯಧನ ಮತ್ತು ಯೋಜನೆಗಳ ಕುರಿತಾಗಿ ಇರುವ ಅರಿವಿನ ಕೊರತೆಯನ್ನು ನೀಗಿಸಲು, ಮುಖ್ಯವಾಗಿ ಶೋಷಿತ ಸಮುದಾಯಗಳಲ್ಲಿ ಜಾಗೃತಿ ಮೂಡಿಸಲು ಅಭಿಯಾನವನ್ನು ನಡೆಸಬೇಕು. ಕಡೆಯದಾಗಿ ಕೊನೆಯ ವ್ಯಕ್ತಿಗೂ ಈ ಸವಲತ್ತು ತಲುಪುವಂತೆ ಮಾಡುವಲ್ಲಿ ಸ್ಥಳೀಯ ಮಟ್ಟದಲ್ಲಿ, ಅಂದರೆ ಪಂಚಾಯಿತಿ ಮತ್ತು ಸಮುದಾಯ–ಸಂಘಟನೆಗಳ ಮಟ್ಟದಲ್ಲಿ ಹೊಣೆಗಾರಿಕೆಯನ್ನು ನಿಗದಿಪಡಿಸಬೇಕು. ಶೌಚಾಲಯ ಸವಲತ್ತಿನಿಂದ ಹಲವರು ಹೊರಗುಳಿದಿರುವ ಸಂದರ್ಭದಲ್ಲಿ ಬಯಲು ಶೌಚ ಮುಕ್ತ ಎಂದು ಘೋಷಿಸಲಾಗದು. ಕಟ್ಟಕಡೆಯ ದುರ್ಬಲ ಕುಟುಂಬಕ್ಕೂ ಶೌಚಾಲಯ ದೊರೆಯದ ಹೊರತು ‘ಬಯಲು ಶೌಚ ಮುಕ್ತ’ ಎಂಬುದು ಕೇವಲ ದತ್ತಾಂಶವಷ್ಟೇ, ವಾಸ್ತವವಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.